ಅಮ್ಮನನ್ನು ರೇಗಿಸಬೇಡಿ ಎಂದಿದ್ದಕ್ಕೆ ನಿರುಪದ್ರವಿ ಯುವಕನ ಎದೆಗೆ ಚಾಕು ಇರಿದು ಅಮಾನುಷ ಕೊಲೆ

ವಿಜಯಪುರ ಗ್ರಾಮೀಣ ಭಾಗದ ಖತೀಜಾಪುರದಲ್ಲಿ ಯುವಕನೊಬ್ಬನ ಬರ್ಬರ ಕೊಲೆಯಾಗಿದೆ. ತನ್ನ ತಾಯಿಯನ್ನ ರೇಗಿಸಿದವನನ್ನ ಸಮಾಧಾನದಿಂದಲೇ ಪ್ರಶ್ನಿಸಿದ ಕಾರಣಕ್ಕೆ ಆತನನ್ನು ಚಾಕುವಿನಿಂದ ಇರಿದು ಹತ್ಯೆಗೈಯ್ಯಲಾಗಿದೆ.

ಕೊಲೆಯಾದ ಯುವಕನ ಕುಟುಂಬದವರ ಆಕ್ರಂದನ

ಕೊಲೆಯಾದ ಯುವಕನ ಕುಟುಂಬದವರ ಆಕ್ರಂದನ

  • Share this:
ವಿಜಯಪುರ: ಇದು ದೈವಿಭಕ್ತ ಯುವಕನೊಬ್ಬ ತಾಯಿಯ ಮಡಿಲಲ್ಲಿ ಉಸಿರು ಬಿಟ್ಟ ಸ್ಟೋರಿ. ತಂದೆಯ ಸ್ಥಾನದಲ್ಲಿಯೂ ನಿಂತು ಬೆಳೆಸಿದ ತಾಯಿಗೆ ಇಂಥ ಪರಿಸ್ಥಿತಿ ಬಂದಿದ್ದು ಮಾತ್ರ ವಿಧಿಯಾಟ. ತಾಯಿಯ ಬಗ್ಗೆ ಅವಾಚ್ಯವಾಗಿ ಮಾತನಾಡಿದ ಕಟುಕನನ್ನು ಯಾಕಪ್ಪ ಹೀಗೆ ಮಾತಾಡ್ತೀಯಾ ಅಂತ ಪ್ರೀತಿಯಿಂದಲೇ ಕೇಳಿದ ಯುವಕನಿಗೆ ಆ ಕಟುಕ ಕೋಳಿ ಕತ್ತರಿಸುವ ಚಾಕೂವಿನಿಂದ ಎದೆಯಲ್ಲಿ ಚುಚ್ಚಿ ಭೀಕರವಾಗಿ ಕೊಲೆ ಮಾಡಿದ್ದಾನೆ. ಬಳಿಕ ಗ್ರಾಮಸ್ಥರಿಂದ ಒದೆ ತಿಂದು ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆದರೆ, ಎಲ್ಲರಿಗೂ ಶಾಂತಿಯ ಸಂದೇಶ ಸಾರುತ್ತಿದ್ದ ಯುವಕನ ಮನೆಯವರು ಮಾತ್ರ ತಮ್ಮವನನ್ನು ಕಳೆದುಕೊಂಡು ಗೋಳಿಡುತ್ತಿದ್ದಾರೆ. ಕಟುಕನೊಬ್ಬ ಮಾಡಿದ ಕೃತ್ಯ ಇಡೀ ಗ್ರಾಮಸ್ಥರನ್ನು ಬೆಚ್ಚಿ ಬೀಳಿಸಿದೆ. ಎಂದೂ ಗಲಾಟೆ, ಗದ್ದಲವನ್ನೇ ಕಾಣದ ಗ್ರಾಮದಲ್ಲಿ ನಡೆದ ಈ ಘಟನೆ ಇಲ್ಲಿನ ಜನರಿಗೆ ಈ ಘಟನೆ ಬರ ಸಿಡಿಲು ಬಡಿದಂತಾಗಿದೆ. 

ವಿಜಯಪುರ ನಗರದಿಂದ ಖತೀಜಾಪುರಕ್ಕೆ ವಲಸೆ ಬಂದಿದ್ದ ಕಾಮುಕ 45 ವರ್ಷದ ಖಾಜಲ್ ಬೇಪಾರಿ ಅಲ್ಲಿಯೇ ಚಿಕನ್ ಶಾಪ್ ಇಟ್ಟುಕೊಂಡಿದ್ದ. ನಿನ್ನೆ ಹಸೀನಾ ಮುಲ್ಲಾ ಇತರ ಮೂರು ಜನ ಮಹಿಳೆಯರೊಂದಿಗೆ ಕಾರ್ಯಕ್ರಮವೊಂದರಲ್ಲಿ ಪಾಲ್ಗೋಂಡು ಎಲ್ಲರೂ ಹಾಸ್ಯ ಮಾಡುತ್ತ ಮನೆಗೆ ಬರುತ್ತಿದ್ದರು. ಆಗ ಖಾಜಲ್ ಬೇಪಾರಿ ಅವಳಿಗೆ ಅವಾಚ್ಯವಾಗಿ ಬೈದಿದ್ದಾನೆ. ಶನಿವಾರ ಬೆಳಗ್ಗೆ ಕೂಡ ಆಕೆಗೆ ಅಶ್ಲೀಲವಾಗಿ ನಿಂದಿಸಿದ್ದಾನೆ. ಈ ವಿಷಯ ತಿಳಿದ ಮಹಿಳೆಯ ಮಗ 22 ವರ್ಷದ ಇಸ್ಮಾಯಿಲ್ ಮುಲ್ಲಾ ಖಾಜಲ್ ಬೇಪಾರಿ ಕಡೆ ಹೋಗಿ ಯಾಕಣ್ಣ ಹೀಗೆ ಬೈತಿಯಾ. ಹಾಗೆ ಬೈಯ್ಯಬೇಡ ಎಂದು ವಿನಂತಿ ಮಾಡಿ ಅಲ್ಲಿಂದ ಸ್ವಲ್ಪ ದೂರ ತೆರಳಿದ್ದಾನೆ. ಆಗ ಮೊದಲೇ ಸಿಟ್ಟಾಗಿದ್ದ ಖಾಜಲ್ ಬೇಪಾರಿ ತನ್ನ ಕೈಯಲ್ಲಿ ಕೋಳಿ ಕೊಯ್ಯುವ ಚಾಕು ಹಿಡಿದುಕೊಂಡು ಬೆನ್ನತ್ತಿದ್ದಾನೆ.

ಈ ವಿಷಯ ತಿಳಿದ ಇಸ್ಮಾಯಿಲನ ಅಜ್ಜ ಡೋಂಗರಸಾಬ ಮೋದಿನಸಾಬ ಪಾರ್ಸನಳ್ಳಿ ಅವರು ಗ್ರಾಮದ ಬಸ್ ನಿಲ್ದಾಣದ ಬಳಿ ತೆರಳಿದ್ದಾನೆ. ಅಜ್ಜ ಅಲ್ಲಿಗೆ ಹೋಗುವಷ್ಟರಲ್ಲಿ ಇಸ್ಮಾಯಿಲ್ ಮುಲ್ಲಾ ಎದೆಗೆ ಬಲವಾಗಿ ಚಾಕೂವನ್ನು ಚುಚ್ಚಿದ ಖಾಜಲ್ ಬೇಪಾರಿ ಭೀಕರವಾಗಿ ಕೊಲೆ ಮಾಡಿದ್ದಾನೆ. ಅಷ್ಟರಲ್ಲಿ ಅಲ್ಲಿಗೆ ಯುವಕನ ತಾಯಿ ಹಸೀನಾ ಮುಲ್ಲಾ ಬಂದಿದ್ದಾರೆ. ಎದೆಯಿಂದ ರಕ್ತ ಸೋರುತ್ತಿದ್ದ ಮಗನನ್ನು ಹಿಡಿಯುವಷ್ಟರಲ್ಲಿ ಇಸ್ಮಾಯಿಲ್ ಮುಲ್ಲಾ ತಾಯಿಯ ಮಡಿಲಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ಕಂಕುಳಲ್ಲಿ ಆಡಿ ಬೆಳೆಸಿದ ಮಗ ಅದೇ ಮಡಿಲಲ್ಲಿ ಜೀವ ಬಿಟ್ಟ ಘಟನೆ ಆ ತಾಯಿಯನ್ನೂ ಮಾನಸಿಕವಾಗಿ ಕುಗ್ಗಿಸಿದೆ.

ಇದನ್ನೂ ಓದಿ: ಪೀಜ್ಜಾ, ಬರ್ಗರ್ ತಿನ್ನುವ ದಳ್ಳಾಳಿಗಳಿಂದ ಪ್ರತಿಭಟನೆ: ‘ರೈತ ಹೋರಾಟ’ಕ್ಕೆ ಸಂಸದ ಮುನಿಸ್ವಾಮಿ ವ್ಯಂಗ್ಯ

ಘಟನಾ ಸ್ಥಳಕ್ಕೆ ಬಂದ ಯುವಕನ ಅಜ್ಜ ಕೂಗಾಡಿ ಜನರನ್ನು ಸೇರಿಸಿದರೂ ಪ್ರಯೋಜನವಾಗಿಲ್ಲ. ಯುವಕ ಘಟನಾ ಸ್ಥಳದಲ್ಲಿಯೇ ಕೊನೆಯುಸಿರೆಳೆದಿದ್ದಾನೆ. ಈ ಘಟನೆಯ ಬಳಿಕ ಸ್ಥಳದಲ್ಲಿದ್ದ ಗ್ರಾಮಸ್ಥರು ಖಾಜಲ್ ಬೇಪಾರಿಯನ್ನು ಹಿಗ್ಗಾ ಮುಗ್ಗಾ ಥಳಿಸಿದ್ದಾರೆ.

ಕಟ್ಟಡ ಕಾರ್ಮಿಕನಾಗಿದ್ದ ಇಸ್ಮಾಯಿಲ್ ಮುಲ್ಲಾ, ಅಲ್ಲಾಹುವಿನ ಪರಮ ಆರಾಧಕನಾಗಿದ್ದ.  ಎಲ್ಲರಿಗೂ ಶಾಂತಿಯ ಬಗ್ಗೆ ಪಾಠ ಮಾಡುತ್ತಿದ್ದ.  ಎಂದೂ ಯಾರಿಗೂ ಬೈದವನಲ್ಲ. ಮೌಲಾನ ಎನಿಸಿಕೊಂಡಿದ್ದ.  ನಿನ್ನೆ ಶನಿವಾರ ಬೆಳಿಗ್ಗೆ ಆಸ್ಪತ್ರೆಗೆ ಹೋಗುವುದಾಗಿ ಹೇಳಿ ಹೋದವ ಮನೆಗೆ ಬಾರದೆ ದಾರಿಯಲ್ಲಿಯೇ ಕಟುಕನ ಏಟಿಗೆ ಬಲಿಯಾಗಿದ್ದಾನೆ.

ಈ ಕುರಿತು ನ್ಯೂಸ್ 18 ಕನ್ನಡದ ಎದುರು ಅಳಲು ತೋಡಿಕೊಂಡ ಇಸ್ಮಾಯಿಲ್ ಮುಲ್ಲಾನ ಅಜ್ಜ ಡೋಂಗ್ರಿಸಾಬ್ ಮೋದಿನಸಾಬ್ ಪಾರ್ಸನಳ್ಳಿ, ತನ್ನ ಮಗಳ ದುಃಖದ ಕಥೆಯನ್ನು ಬಿಚ್ಚಿಟ್ಟಿದ್ದಾರೆ. ಇಸ್ಮಾಯಿಲ್ ಮುಲ್ಲಾ ತಂದೆ ಇಂಡಿ ತಾಲೂಕಿನ ಲಾಳಸಂಗಿ ಗ್ರಾಮದವರು. ಕುಡುಕನಾಗಿದ್ದು ಸಂಸಾರವನ್ನು ಬಿಟ್ಟಿದ್ದ. ಈ ಹಿನ್ನೆಲೆಯಲ್ಲಿ ಮಗಳು ಹಸೀನಾಳ ಹಾಗೂ ಆಕೆಯ ನಾಲ್ಕು ಜನ ಮಕ್ಕಳಾದ ಇಸ್ಮಾಯಿಲ್, ಸಾಹೀಲ್, ಸೋಹೇಲ್ ಮತ್ತು ಮೈನುದ್ದೀನ್ ಅವರನ್ನು ತಂದು ಇಟ್ಟುಕೊಂಡಿದ್ದೆವು. ಈ ನಾಲ್ಕು ಜನರಿಗೆ ಅಜ್ಜ, ಅಜ್ಜಿ, ಇಬ್ಬರು ಮಾವಂದಿರು ನೋಡಿಕೊಂಡಿದ್ದೆವು.  ಅಲ್ಲಲ್ಲಿ ಕೂಲಿ ಕೆಲಸ ಮಾಡಿ ನಾಲ್ಕೂ ಜನ ಮೊಮ್ಮಕ್ಕಳನ್ನು ಸಾಕಿ ಬೆಳೆಸಿದ್ದೆವು. ಈಗ ಇಸ್ಮಾಯಿಲ್ ಮುಲ್ಲಾ ಕೊಲೆಯಾಗಿರುವುದು ದುರಂತವೇ ಸರಿ ಎಂದು ಕಣ್ಣೀರಿಟ್ಟಿದ್ದಾರೆ.

ಇಸ್ಮಾಯಿಲ್ ಮುಲ್ಲಾ ಅಜ್ಜಿ ರಿಯಾನಾ ಪಾರ್ಸನಳ್ಳಿ ಮತ್ತು ಚಿಕ್ಕಮ್ಮ ಬಸೀರಾ ಸಬರಾಗರ ಮಾತನಾಡಿ, ಖಾಜಲ್ ಬೇಪಾರಿ ಮಹಿಳೆಯರ ಜೊತೆಗೆ ಅಸಭ್ಯ ವರ್ತನೆ ಮಾಡುತ್ತಿದ್ದ. ಕಂಡ ಕಂಡವರ ಜೊತೆಗೆ ಜಗಳ ಮಾಡುತ್ತಿದ್ದ. ಮಹಿಳೆಯರು ಬಹಿರ್ದೇಸೆಗೆ ಹೋದಾಗ ಅವರನ್ನು ಹಿಂಬಾಲಿಸುತ್ತಿದ್ದ. ಈತನ ಇಂಥ ಕೃತ್ಯಗಳು ಖತಿಜಾಪುರ ಗ್ರಾಮದ ಮಹಿಳೆಯರಷ್ಟೇ ಅಲ್ಲ, ಪುರುಷರಿಗೂ ಅಸಹನೀಯವಾಗಿದ್ದರೂ ಸುಮ್ಮಿದ್ದರು. ಈಗ ನಮ್ಮಕ್ಕನ ಮಗನನ್ನು ಕೊಲೆ ಮಾಡಿದ್ದಾನೆ. ಆತನಿಗೆ ಗಲ್ಲು ಶಿಕ್ಷೆಯಾಗಬೇಕು. ಇಲ್ಲದಿದ್ದರೆ ಆತನನ್ನು ನಮಗೆ ಒಪ್ಪಿಸಿ ನಾವೇ ಕೊಲೆ ಮಾಡುತ್ತೇವೆ ಎಂದು ಆಕ್ರೋಶವಾಗಿ ಕಣ್ಣೀರು ಹಾಕಿದ್ದಾರೆ.

ಇದನ್ನೂ ಓದಿ: ನಕಲಿ ನೋಟು ಜಾಲ ಬಗೆದಷ್ಟು ಆಳ: ಮನೆಯಲ್ಲೇ ನಕಲಿ ನೋಟು ತಯಾರಿಸುತ್ತಿದ್ದ ಆರೋಪಿಗಳು ಅಂದರ್

ಇಸ್ಮಾಯಿಲ್ ಮುಲ್ಲಾನ ಮಾವ ಮಾತನಾಡಿ, “ಬೆಳಿಗ್ಗೆಯಷ್ಟೇ ಅಳಿಯ ನನ್ನನ್ನು ಭೇಟಿ ಮಾಡಿದ್ದ. ನಾನೂ ಕೂಡ ಕಟ್ಟಡ ಕಾರ್ಮಿಕನಾಗಿದ್ದೇನೆ. ಮನೆ ಕಟ್ಟಿ ಪತ್ರಾಸ್ ಮೇಲ್ಛಾವಣಿ ಹಾಕುವುದಾಗಿ ತಿಳಿಸಿದ್ದ. ಆದರೆ, ನಾನು ಪತ್ರಾಸ ಬೇಡ, ಕಾಂಕ್ರೀಟ್ ಸ್ಲ್ಯಾಬ್ ಹಾಕೋಣ. ಮನೆ ಕಟ್ಟಿದ ಮೇಲೆ ಮದುವೆ ಮಾಡುತ್ತೇನೆ ಎಂದು ಹೇಳಿ ಬಬಲೇಶ್ವರಕ್ಕೆ ಕೂಲಿ ಹಣ ತರಲು ಮತ್ತು ಮದುವೆ ಕಾರ್ಯಕ್ರಮವೊಂದರಲ್ಲಿ ಪಾಲ್ಗೋಳ್ಳಲು ತೆರಳಿದ್ದೆ. ಬಬಲೇಶ್ವರ ಮುಟ್ಟುವಷ್ಟರಲ್ಲಿ ಈ ಅನಾಹುತ ನಡೆದ ಸುದ್ದಿ ಬಂದಿದೆ” ಎಂದು ಅಳಿಯನ ಪರಿಸ್ಥಿತಿ ಕಂಡು ಕಣ್ಣೀರಿಟ್ಟಿದ್ದಾನೆ.

ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ವಿಜಯಪುರ ಗ್ರಾಮೀಣ ಠಾಣೆಯ ಪಿಎಸ್ಐ ಆನಂದ ಠಕ್ಕಣವರ ಮತ್ತು ಸಿಬ್ಬಂದಿ ಪರಿಶಿಲನೆ ನಡೆಸಿದ್ದಾರೆ. ಇಸ್ಮಾಯಿಲ್ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ವಿಜಯಪುರ ಜಿಲ್ಲಾಸ್ಪತ್ರೆಗೆ ರವಾನೆ ಮಾಡಿದ್ದಾರೆ. ಅಲ್ಲದೇ, ಸ್ಥಳಿಯರಿಂದ ಧರ್ಮದೇಟು ತಿಂದು ಬಿದ್ದಿದ್ದ ಆರೋಪಿ ಖಾಜಲ್ ಬೇಪಾರಿಯನ್ನು ಕೂಡ ವಿಜಯಪುರ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಈ ಹಿಂದೆ ನಾನಾ ಅಪರಾಧ ಪ್ರಕರಣಗಳಲ್ಲಿ ಈ ಆರೋಪಿ ಜೈಲಿಗೆ ಹೋಗಿ ಬಂದಿದ್ದಾನೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಕೊಲೆ ಆರೋಪಿಗೆ ಗಲ್ಲು ಶಿಕ್ಷೆ ನೀಡಿ. ಇಲ್ಲದಿದ್ದರೆ ನಮಗೆ ನೀಡಿ ನಾವೇ ಆತನಿಗೆ ಕಠಿಣ ಶಿಕ್ಷೆ ನೀಡುತ್ತೇವೆ ಎಂದು ಖತಿಜಾಪುರದ ಗ್ರಾಮದ ಮಹಿಳೆಯರು ಆಗ್ರಹಿಸಿದ್ದಾರೆ. ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ವರದಿ: ಮಹೇಶ ವಿ. ಶಟಗಾರ
Published by:Vijayasarthy SN
First published: