ಚಿಕ್ಕಬಳ್ಳಾಪುರ : ರಾಜ್ಯದಲ್ಲಿ ಕೊರೊನಾ 3ನೇ ಅಲೆ ಆತಂಕದ ಮಧ್ಯೆಯೂ ಸರ್ಕಾರ ಕೆಲವೊಂದಷ್ಟು ವಿನಾಯ್ತಿಗಳನ್ನು ಕೊಟ್ಟಿದೆ. ಅದನ್ನು ಕೆಲ ಕಿಡಿಗೇಡಿಗಳು ದುರುಪಯೋಗಪಡಿಸಿಕೊಂಡು ಪ್ರವಾಸಿ ತಾಣಗಳಲ್ಲಿ ಪುಂಡಾಟ ನಡೆಸಿದ್ದಾರೆ. ವಿಶ್ವವಿಖ್ಯಾತ ನಂದಿ ಗಿರಿಧಾಮದತ್ತ ಬೆಳ್ಳಂಬೆಳಿಗ್ಗೆ ಸಾವಿರಾರು ಮಂದಿ ಪ್ರವಾಸಿಗರು ಆಗಮಿಸಿದ್ದು, ಕೊರೊನಾ ನಿಯಮಗಳನ್ನ ಗಾಳಿಗೆ ತೂರಿದ್ದು ಮಾತ್ರವಲ್ಲದೆ, ಕೆಲ ಯುವಕರು ಹಾಡಹಗಲೇ ರಾಜಾರೋಷವಾಗಿ ಸಾರ್ವಜನಿಕ ಸ್ಥಳದಲ್ಲೇ ಹುಕ್ಕಾ ಸೇವನೆ ಮಾಡಿದ್ದಾರೆ. ನೂರಾರು ಮಂದಿ ಸಾರ್ವಜನಿಕರ ಸಮ್ಮುಖದಲ್ಲೇ ಚಾಪೆ ಹಾಕಿ ಮ್ಯೂಸಿಕ್ ಹಾಕಿಕೊಂಡು ಹುಕ್ಕಾ ಸೇವನೆ ಮಾಡುತ್ತಾ ಮೋಜು ಮಸ್ತಿ ಮಾಡಿದ್ದಾರೆ.
ಕೊರೊನಾ ನಿಯಮಗಳನ್ನ ಬ್ರೇಕ್ ಮಾಡೋದು ಒಂದೆಡೆಯಾದ್ರೆ ಮತ್ತೊಂದೆಡೆ ಈ ರೀತಿ ಹುಕ್ಕಾ ಸೇವನೆ, ಮದ್ಯಪಾನ ಮಾಡುವಂತಹ ಪ್ರಕರಣಗಳು ಪದೇ ಪದೇ ಮರುಕಳುಹಿಸುತ್ತಿವೆ. ಈಗಾಗಲೇ ಜಿಲ್ಲಾಡಳಿತ ನಂದಿಗಿರಿಧಾಮ ಬಂದ್ ಮಾಡಿರುವ ಪರಿಣಾಮ ನಂದಿಗಿರಿಧಾಮ ದತ್ತ ಬರುವ ಪ್ರವಾಸಿಗರಿಗೆ ಚೆಕ್ ಪೋಸ್ಟ್ ಬಳಿ ತಡೆ ಹಿಡಿಯಲಾಗುತ್ತಿದೆ. ಹಾಗಾಗಿ ಬೆಟ್ಟದ ತಪ್ಪಲಲ್ಲೇ ಕಾರು-ಬೈಕ್ ಪಾರ್ಕ್ ಮಾಡಿ ಅಕ್ಕಪಕ್ಕದ ಬೆಟ್ಟಗಳಲ್ಲಿ ಪ್ರವಾಸಿಗರು ಈ ರೀತಿ ಮೋಜು ಮಸ್ತಿಯಲ್ಲಿ ತೊಡಗಿದ್ದಾರೆ.
ನಂದಿ ಗಿರಿಧಾಮದ ತಪ್ಪಲಿನ ಚೆಕ್ ಪೋಸ್ಟ್ ಚಿಕ್ಕಬಳ್ಳಾಪುರ ದ ನಂದಿಗಿರಿಧಾಮ ಪೊಲೀಸ್ ಠಾಣೆ ವ್ಯಾಪ್ತಿಗೆ ಸೇರಿದರೆ ತಪ್ಪಲಿಂದ ಬೆಟ್ಟದ ಕೆಳಭಾಗದ ಕಡೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಗೆ ಸೇರಿದೆ.
ನಂದಿಗಿರಿಧಾಮ ಪೊಲೀಸರು ಚೆಕ್ ಪೋಸ್ಟ್ ಸೇರಿ ಮೇಲ್ಬಾಗದಲ್ಲಿ ಬಂದೋಬಸ್ತ್ ವ್ಯವಸ್ಥೆ ಮಾಡ್ತಾರೆ. ಆದರೆ ತಪ್ಪಲಿನ ಕೆಳಭಾಗದಲ್ಲಿ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಸೂಕ್ತ ಬಂದೋಬಸ್ತ್ ಪೊಲೀಸರ ನಿಯೋಜನೆ ಮಾಡುತ್ತಿಲ್ಲ. ಅವರ ಮೇಲೆ ಇವರು, ಇವರ ಮೇಲೆ ಅವರು ಹೇಳುವ ಬದಲು ಪ್ರವಾಸಿಗರ ಇಂತಹ ಹುಚ್ಚಾಟಗಳಿಗೆ ಪೊಲೀಸ್ ಇಲಾಖೆ ಕಡಿವಾಣ ಹಾಕಬೇಕಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಇಷ್ಟು ದಿನ ಬರೀ ಸೆಲ್ಫಿ ಮತ್ತು ಫೋಟೋ ಶೂಟ್ ಗೆ ಸೀಮಿತವಾಗಿದ್ದ ಜಾಗದಲ್ಲಿ ಇಂದು ಕೆಲ ಕಿಡಿಗೇಡಿಗಳು ಮದ್ಯ, ಹುಕ್ಕಾ ಸೇವನೆಗೆ ಇಳಿದಿದ್ದಾರೆ.
ಇದನ್ನೂ ಓದಿ: ನೀನು ಸಿಎಂ ಆಗಿದ್ದರೆ ನಮ್ಮಿಂದ ಯಾವ ತೊಂದರೆನೂ ಇಲ್ಲ: ಬೊಮ್ಮಾಯಿಗೆ ದೇವೇಗೌಡರ ಅಭಯ!
ಬೆಳಗೇಯಿಂದಲೇ ಸಾವಿರಾರು ಜನ ಬೆಂಗಳೂರು ಸೇರಿ ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸಿ ನಂದಿ ಗಿರಿಧಾಮದ ಸೌಂದರ್ಯವನ್ನು ಸವಿಯಲು ಆಗಮಿಸಿದ್ದರು. ಆದರೆ ಈ ಹಿಂದೆಯೇ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಮೊದಲೇ ವೀಕೆಂಡ್ ಕರ್ಪ್ಯೂ ಹೇರಿತ್ತು. ಹೀಗಾಗಿ ಕೆಲ ವಾರಗಳಿಂದ ಜನರು ಆಗಮಿಸುತ್ತಿದ್ದರು. ಇದರ ಜೊತೆಗೆ ಕೆಲ ಕಿಡಿಗೇಡಿಗಳು ಪಕ್ಕದ ಸ್ಕಂದಗಿರಿ ಬೆಟ್ಟದ ಮುಖ ಮಾಡುತ್ತಿದ್ದರು. ಪ್ರವಾಸಿಗರನ್ನು ಹತೋಟಿಗೆ ತರಲು ಹರಸಾಹಸ ಪಡುವಂತಾಗಿತ್ತು. ಈಗಾಗಲೇ ಜಿಲ್ಲಾಡಳಿತ ಮೂರನೇ ಅಲೆಯ ಪರಿಣಾಮವನ್ನು ಎದುರಿಸಲು ಸಕಲ ಸಿದ್ದತೆ ಗಳನ್ನು ಮಾಡಿಕೊಂಡಿದೆ ಆದರೆ ಪ್ರವಾಸಿಗರ ಹುಚ್ಚಾಟದಿಂದ ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಪ್ರಮಾಣ ಹೆಚ್ಚಾಗುವ ಭೀತಿಯಲ್ಲಿ ಜಿಲ್ಲೆಯ ಜನ ಮತ್ತು ಜಿಲ್ಲಾಡಳಿತ ಆತಂಕದಲ್ಲಿದೆ.
ವರದಿ: ಮನುಕುಮಾರ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ