ಸರ್ಕಾರಿ ಶಾಲೆಗೆ ಸುಣ್ಣ ಬಣ್ಣ ಹಚ್ಚಿ ವಿನೂತನವಾಗಿ ಜನ್ಮದಿನಾಚರಿಸಿಕೊಂಡ ದ್ರಾಕ್ಷಿ ನಾಡಿನ ಯುವಕ

ವಿಜಯಪುರದ ತಿಕೋಟಾದ 29 ವರ್ಷದ ಸುರೇಶ್ ಕೊಣ್ಣೂರ ತನ್ನ ಪ್ರತಿವರ್ಷದ ಜನ್ಮದಿನಾಚರಣೆಯನ್ನು ಅರ್ಥಗರ್ಭಿತವಾಗಿ ಆಚರಿಸಿಕೊಳ್ಳುತ್ತಾರೆ. ಈ ವರ್ಷ ತನ್ನೂರಿನ ಸರಕಾರಿ ಶಾಲೆಗೆ ಸುಣ್ಣ ಬಣ್ಣ ಬಳಿಸಿ ಹುಟ್ಟು ಹಬ್ಬಕ್ಕೆ ಸಾರ್ಥಕತೆ ಮೆರೆದಿದ್ದಾರೆ.

ವಿಜಯಪುರದ ಸುರೇಶ್ ಕೊಣ್ಣೂರ

ವಿಜಯಪುರದ ಸುರೇಶ್ ಕೊಣ್ಣೂರ

  • Share this:
ವಿಜಯಪುರ: ಜನ್ಮದಿನಗಳೆಂದರೆ ಸಾಕು ನಾಯಕರು, ಅವರ ಬೆಂಬಲಿಗರು ಆಸ್ಪತ್ರೆಗಳಿಗೆ ತೆರಳಿ ರೋಗಿಗಳಿಗೆ ಹಣ್ಣು-ಹಂಪಲು ಹಂಚುವುದು, ಬಡವರಿಗೆ ಆರೋಗ್ಯ ತಪಾಸಣೆ ನಡೆಸುವುದು ಸೇರಿದಂತೆ ನಾನಾ ರೀತಿಯಲ್ಲಿ ಸಾಮಾಜಿಕ ಕಾರ್ಯ ಮಾಡುತ್ತಾರೆ. ಆದರೆ, ದ್ರಾಕ್ಷಿ ನಾಡಿನ ಯುವಕನೊಬ್ಬ ತನ್ನ ಜನ್ಮದಿನವನ್ನು ವಿನೂತನವಾಗಿ ಆಚರಿಸುವ ಮೂಲಕ ಗಮನ ಸೆಳೆದಿದ್ದಾನೆ. ವಿಜಯಪುರ ಜಿಲ್ಲೆಯ ತಿಕೋಟಾ ಯುವಕ ಸುರೇಶ ಕೊಣ್ಣೂರ ತನ್ನ 29ನೇ ಹುಟ್ಟು ಹಬ್ಬವನ್ನು ತನ್ನೂರಿನ ಶಾಲೆಗೆ ಸುಣ್ಣ ಬಣ್ಣ ಬಳಿಯುವ ಮೂಲಕ ಗಮನ ಸೆಳೆದಿದ್ದಾನೆ.

ಶಂಕ್ರೆಪ್ಪ ಮತ್ತು ಗೌರವ್ವ ಕೊಣ್ಮೂರ ಅವರ ಪುತ್ರನಾಗಿರುವ ಈ ಯುವಕ ಬೆಳಿಗ್ಗೆ ಹಾಲು ಮಾರಾಟ ಮಾಡುತ್ತಾನೆ.  ಉಳಿದ ಸಮಯದಲ್ಲಿ ತನಗಿರುವ ಎರಡು ಎಕರೆ ಜಮೀನಿನಲ್ಲಿ ಕೆಲಸ ಮಾಡುತ್ತಾನೆ.  ಪ್ರತಿಬಾರಿಯೂ ತನ್ನ ಜನ್ಮದಿನದಂದು ಸಮಾಜಕ್ಕೆ ಏನಾದರೂ ಒಂದು ಸಂದೇಶ ಕೊಡಬೇಕು. ಏನಾದರೊಂದು ಸಹಾಯ ಮಾಡಬೇಕು ಎಂಬ ಹುಮ್ಮಸ್ಸು ಈತನದ್ದಾಗಿದೆ.

ಈ ಹಿನ್ನೆಲೆಯಲ್ಲಿಯೇ ತಾನು ವಾಸಿಸುವ ವಿಜಯಪುರ ಜಿಲ್ಲೆಯ ತಿಕೋಟಾ ಗ್ರಾಮದ ಶ್ರೀರಾಮ (ಆಶ್ರಯ) ಕಾಲನಿಯಲ್ಲಿರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಈ ಬಾರಿ ಸುಣ್ಣ-ಬಣ್ಣ ಹಚ್ಚಿ ಹೊಸ ಲುಕ್ ನೀಡಿದ್ದಾನೆ.  ಅಷ್ಟೇ ಅಲ್ಲ, ಈ ಯುವಕ ಇದೇ ಶಾಲೆಯಲ್ಲಿ 1 ರಿಂದ 5ನೇ ತರಗತಿಯವರೆಗೆ ಓದುವ 108 ಜನ ಮಕ್ಕಳಿಗೆ ಕಳೆದ ವರ್ಷ ಉಚಿತವಾಗಿ ನೋಟ್‌ ಬುಕ್ ಗಳನ್ನು ಹಂಚಿಕೆ ಮಾಡಿದ್ದ. ಈ ಬಾರಿ ಈ ಶಾಲೆ ಕೊರೋನಾದಿಂದಾಗಿ ಇನ್ನೂ ಆರಂಭವಾಗಿಲ್ಲ.  ಹೀಗಾಗಿ ರೂ. 25 ಸಾವಿರ ಹಣವನ್ನು ಖರ್ಚು ಮಾಡಿ ಶಾಲೆಗೆ ಪೇಂಟ್ ಮಾಡಿಸಿದ್ದಾನೆ. ನಾಲ್ಕೈದು ಜನ ಕಾರ್ಮಿಕರ ಮೂಲಕ ಮೂರ್ನಾಲ್ಕು ದಿನ ಈ ಶಾಲೆಯ ಮೂರು ಕೊಠಡಿಗಳು ಮತ್ತು ಕೊಠಡಿಯ ಹೊರಗಡೆಯೂ ಬಣ್ಣ ಹಚ್ಚಿಸಿದ್ದಾನೆ.  ಅಷ್ಟೇ ಅಲ್ಲ, ಈ ಶಾಲೆಯ ಕಿಟಗಿ ಮತ್ತು ಬಾಗಿಲುಗಳಿಗೂ ಬಣ್ಣ ಹಚ್ಚಿಸುವ ಮೂಲಕ ಶಾಲೆಯ ಅಂದವನ್ನು ಹೆಚ್ಚುವಂತೆ ಮಾಡಿದ್ದಾನೆ.

ಇದನ್ನೂ ಓದಿ: ಶಬರಿಮಲೆಗೆ ಸಿಗುತ್ತಿದೆ ರೈಲ್ವೆ ಸಂಪರ್ಕ; 23 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಯೋಜನೆಗೆ ಜೀವ

ಈ ಕುರಿತು ನ್ಯೂಸ್ 18 ಕನ್ನಡದ ಜೊತೆ ದೂರವಾಣಿ ಮೂಲಕ ಮಾತನಾಡಿ ಸಮಾಜ ಸೇವಕ ಮತ್ತು ಸಂಘದ ಶಿಸ್ತಿನ ಸಿಪಾಯಿಯಾಗಿರುವ ಸುರೇಶ ಕೊಣ್ಣೂರ, ತಾನು ಪಿಯುಸಿವರೆಗೆ ಓದಿದ್ದಾಗಿ ತಿಳಿಸಿದ್ದಾನೆ. ತಾನು ಕಲಿತದ್ದು ಬೇರೆ ಶಾಲೆಯಲ್ಲಿ. ಆದರೆ, ಈಗ ಬಣ್ಣ ಸುಣ್ಣ, ಬಣ್ಣ ಮಾಡಿಸಿರುವ ಶಾಲೆ ಬೇರೆಯದಾಗಿದೆ. ಈ ಶಾಲೆಯಲ್ಲಿಯೇ ನಮ್ಮ ಓಣಿಯ ಮಕ್ಕಳು, ನಮ್ಮ ಅಣ್ಣ, ತಮ್ಮಂದಿರ, ಸಂಬಂಧಿಕರ ಮಕ್ಕಳೂ ವಿದ್ಯಾರ್ಜನೆ ಮಾಡುತ್ತಾರೆ. ಹೀಗಾಗಿ ಈ ಬಾರಿ ಕೊರೊನಾ ಸಂಕಷ್ಟದ ಸಮಯದಲ್ಲಿ ಶಾಲೆಗೊಂದು ಹೊಳಪು ನೀಡಲು ಪ್ರಯತ್ನಿಸಿದ್ದಾಗಿ ತಿಳಿಸಿದ್ದಾನೆ.

ಈ ಹಿಂದೆಯೂ ನಾನಾ ರೀತಿಯಲ್ಲಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಈ ಯುವಕ ಕೊರೊನಾ ಸಂದರ್ಭದಲ್ಲಿ ತನ್ನ ಕಾಲನಿಯ ಜನರಿಗೆ ಮಾಸ್ಕ್ ವಿತರಣೆ ಮಾಡಿದ್ದಾನೆ. ಕಾಲನಿಯಲ್ಲಿ ಪಶು ಪಕ್ಷಿಗಳಿಗೆ ನೀರು ಹಾಗೂ ಆಹಾರದ ವ್ಯವಸ್ಥೆ ಮಾಡಿ ಮೂಕ ಪಕ್ಕಿಗಳ ಕಾಳಜಿಯನ್ನೂ ತೋರಿದ್ದಾರೆ.

ಇದನ್ನೂ ಓದಿ: ಚನ್ನಪಟ್ಟಣ- ಕನಕಪುರ ಗಡಿಯಲ್ಲಿ ಕಾಡಾನೆಗಳ ಹಾವಳಿ; ವ್ಯವಸಾಯವೇ ಬೇಡ ಎನ್ನುತ್ತಿರುವ ರೈತರು

ಈ ಯುವಕ ತಮ್ಮ ಶಾಲೆಗೆ ಸುಣ್ಣ, ಬಣ್ಣ ಬಳಿಸಿದ್ದರ ಕುರಿತು ಪ್ರತಿಕ್ರಿಯೆ ನೀಡಿರುವ ಶಾಲೆಯ ಮುಖ್ಯ ಶಿಕ್ಷಕಿ ಶಾರದಾ ಬಿರಾದಾರಪಾಟೀಲ, ನಮ್ಮ ಶಾಲೆಗೆ ಮಕ್ಕಳಿಗೆ ಸುರೇಶ ಕೊಣ್ಣೂರ ಅವರು ಪ್ರತಿವರ್ಷ ನೊಟ್​ಬುಕ್ ವಿತರಿಸುತ್ತಿದ್ದರು.  ಈ ವರ್ಷ ಸುಣ್ಣ ಬಣ್ಣ ಮಾಡಿದ್ದರಿಂದ ತುಂಬಾ ಖುಷಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ವರದಿ: ಮಹೇಶ ವಿ. ಶಟಗಾರ
Published by:Vijayasarthy SN
First published: