HOME » NEWS » District » YOUNG MAN PARENTS ASSAULTED BY POLICE AFTER BEING CALLED TO THE STATION HK

ಓಡಿ ಹೋಗಿ ಯುವಕ-ಯುವತಿ ಮದುವೆ ; ಠಾಣೆಗೆ ಕರೆತಂದು ಪೊಲೀಸರಿಂದ ಯುವಕನ ಪೋಷಕರ ಥಳಿತ

ಪ್ರಕರಣ ದಾಖಲಿಸಿಕೊಂಡಿದ್ದ ಮಹಿಳಾ ಠಾಣೆ ಪೊಲೀಸರು ವಿಚಾರಣೆ ನೆಪದಲ್ಲಿ ಅಯ್ಯಪ್ಪನ ಪೋಷಕರನ್ನು ಕರೆಯಿಸಿಕೊಂಡಿದ್ದರು. ನಂತರ ಲಾಕಪ್ ನಲ್ಲಿ ಹಾಕಿ ಮನ ಬಂದಂತೆ ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ.

news18-kannada
Updated:November 23, 2020, 6:07 PM IST
ಓಡಿ ಹೋಗಿ ಯುವಕ-ಯುವತಿ ಮದುವೆ ; ಠಾಣೆಗೆ ಕರೆತಂದು ಪೊಲೀಸರಿಂದ ಯುವಕನ ಪೋಷಕರ ಥಳಿತ
ಅಯ್ಯಪ್ಪ ಹಾಗೂ ಕಸ್ತೂರಿ
  • Share this:
ಕಲಬುರ್ಗಿ(ನವೆಂಬರ್​. 23) : ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎನ್ನುವ ಗಾದೆ ಮಾತಿನಂತೆ. ಯುವಕ-ಯುವತಿ ಓಡಿ ಹೋಗಿ ಮದುವೆಯಾದ್ರೆ, ಯುವಕನ ಪೋಷಕರನ್ನು ಕರೆತಂದು ಮನಬಂದಂತೆ ಥಳಿಸಲಾಗಿದೆ. ಪೊಲೀಸರಿಂದ ಹಲ್ಲೆಗೊಳಗಾದ ಪೋಷಕರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಘಟನೆಗೆ ದಲಿತ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಪ್ರೀತಿಸಿ ಪ್ರೇಮಿಗಳಿಬ್ಬರು ಮದುವೆಯಾಗಿದ್ದಕ್ಕೆ ಹುಡುಗನ ತಂದೆ-ತಾಯಿಗೆ ಪೊಲೀಸರು ಠಾಣೆಗೆ ಕರೆತಂದು ಟಾರ್ಚರ್ ಕೊಟ್ಟ ಘಟನೆ ಕಲಬುರ್ಗಿಯಲ್ಲಿ ಬೆಳಕಿಗೆ ಬಂದಿದೆ. ಕಲಬುರ್ಗಿಯ ಮಹಿಳಾ ಠಾಣೆಯ ಪೊಲೀಸರು ಯುವಕನ ಪೋಷಕರಿಗೆ ಮನಬಂದಂತೆ ಥಳಿಸಿದ್ದು, ಅವರನ್ನು ಕಲಬುರ್ಗಿಯ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ರಾತ್ರಿಯಿಡೀ ಪೊಲೀಸ್ ಠಾಣೆಯ ಲಾಕಪ್ ನಲ್ಲಿಟ್ಟು ಟಾರ್ಚರ್ ಕೊಟ್ಟಿದ್ದಾರೆ ಎಂದು ಆರೋಪಿಸಲಾಗಿದೆ. ಇನ್ಸ್​​ಪೆಕ್ಟರ್ ಸಂಗಮೇಶ ಪಾಟೀಲ್, ಕಾನ್ಸ್​ಸ್ಟೇಬಲ್​​ ನೆಹರು ಸಿಂಗ್ ಟಾರ್ಚರ್ ನೀಡಿದ್ದಾರೆಂದು ಆರೋಪಿಸಲಾಗಿದೆ. ಸಂಗಮೇಶ್ ಹಾಗೂ ನೆಹರು ಸಿಂಗ್ ಇಬ್ಬರೂ ಕಲಬುರ್ಗಿ ನಗರದ ಮಹಿಳಾ ಠಾಣೆಯ ಸಿಬ್ಬಂದಿಯಾಗಿದ್ದಾರೆ.

ಪೊಲೀಸರ ಥಳಿತದಿಂದ ಅಸ್ವಸ್ಥಗೊಂಡ ಹುಡುಗನ ತಂದೆ ತುಕಾರಾಂ, ತಾಯಿ ಸುಜಾತಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪೊಲೀಸರ ಥಳಿತಕ್ಕೊಳಗಾದ ತುಕಾರಾಂ ಹಾಗೂ ಸುಜಾತಾ ವಿಜಯಪುರ ಜಿಲ್ಲೆಯ ಇಂಡಿ ನಿವಾಸಿಗಳಾಗಿದ್ದಾರೆ. ಇವರ ಮಗ ಅಯ್ಯಪ್ಪ ಯುವತಿಯೊಬ್ಬಳ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದ ಎನ್ನಲಾಗಿದೆ. ಕಲಬುರ್ಗಿಯ ರಾಘವೇಂದ್ರ ಠಾಣೆ ವ್ಯಾಪ್ತಿಯಲ್ಲಿ ಬರುವ ಯುವತಿ ಕಸ್ತೂರಿಯನ್ನು ಲವ್​​ ಮಾಡುತ್ತಿದ್ದ ಎನ್ನಲಾಗಿದೆ.

ಬೆಳಗಾವಿಯ ಖಾಸಗಿ ಕಾಲೇಜ್ ನಲ್ಲಿ ಬಿಎಂಎಸ್ ದ್ವಿತೀಯ ವರ್ಷದಲ್ಲಿ ಓದುತ್ತಿದ್ದಾಗ ಹುಟ್ಟಿದ ಲವ್, ಮದುವೆಯವರೆಗೂ ಕೊಂಡೊಯ್ದಿದೆ. ಪರಸ್ಪರ ಪ್ರೀತಿಸಿದ ಅಯ್ಯಪ್ಪ ಹಾಗೂ ಕಸ್ತೂರಿ, ಓಡಿಹೋಗಿ ದೇವಸ್ಥಾನವೊಂದರಲ್ಲಿ ಮದುವೆಯಾಗಿದ್ದಾರೆ ಎನ್ನಲಾಗಿದೆ. ಈ ಸುದ್ದಿ ತಿಳಿಯುತ್ತಿದ್ದಂತೆಯೇ ಯುವತಿಯ ಪೋಷಕರು ಕಲಬುರ್ಗಿಯ ಮಹಿಳಾ ಪೊಲೀಸ್ ಠಾಣೆಯಲ್ಲಿ ನವೆಂಬರ್ 18 ರಂದು ದೂರು ನೀಡಿದ್ದರು. ಮಗಳು ನಾಪತ್ತೆಯಾಗಿರುವುದಾಗಿ ಪೋಷಕರು ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡಿದ್ದ ಮಹಿಳಾ ಠಾಣೆ ಪೊಲೀಸರು ವಿಚಾರಣೆ ನೆಪದಲ್ಲಿ ಅಯ್ಯಪ್ಪನ ಪೋಷಕರನ್ನು ಕರೆಯಿಸಿಕೊಂಡಿದ್ದರು. ನಂತರ ಲಾಕಪ್ ನಲ್ಲಿ ಹಾಕಿ ಮನ ಬಂದಂತೆ ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ. ಪೊಲೀಸರಿಂದ ಥಳಿತಕ್ಕೊಳಗಾಗಿರುವ ಯುವಕನ ಪೋಷಕರಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಯುವಕ-ಯುವತಿ ಪರಸ್ಪರ ಪ್ರೀತಿಸಿ ಓಡಿ ಹೋಗಿ ಮದುವೆಯಾಗಿದ್ದಾರೆ.

ಇದನ್ನೂ ಓದಿ : Govind Karjol: ಸಚಿವ ಸಂಪುಟ ವಿಸ್ತರಣೆಗೆ ಇನ್ನೂ ನಾಲ್ಕು ದಿನ ಕಾಯಿರಿ: ಡಿಸಿಎಂ ಗೋವಿಂದ ಕಾರಜೋಳ

ಆದರೆ ನಮ್ಮಿಬ್ಬರನ್ನು ಕರೆಯಿಸಿ ಮನಬಂದಂತೆ ಥಳಿಸಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಪೊಲೀಸರ ಮೇಲೆ ಸೂಕ್ತ ಕ್ರಮ ಕೈಗೊಳ್ಳಿ. ನಮ್ಮ ಮಗನಿಗೆ ಜೀವ ಭಯವಿದ್ದು, ಸೂಕ್ತ ರಕ್ಷಣೆ ನೀಡುವಂತೆ ಯುವಕನ ತಂದೆ ತುಕಾರಾಂ ಹಾಗೂ ತಾಯಿ ಸುಜಾತ ಮನವಿ ಮಾಡಿದ್ದಾರೆ.
ಇದೇ ವೇಳೆ ದಲಿತಪರ ಸಂಘಟನೆಗಳು ಘಟನೆಯನ್ನು ಖಂಡಿಸಿವೆ. ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದ ದಲಿತ ಮುಖಂಡರು, ಯುವಕನ ಪೋಷಕರ ಆರೋಗ್ಯ ವಿಚಾರಿಸಿದ್ದಾರೆ. ಪೊಲೀಸರ ಕಾರ್ಯವೈಖರಿಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸರು ಅಮಾಯಕರ ಮೇಲೆ ಅಮಾನವೀಯವಾಗಿ ವರ್ತಿಸಿದ್ದಾರೆ. ಮನಬಂದಂತೆ ಥಳಿಸಿದ್ದಾರೆ. ಪೋಷಕರಿಗೆ ಕಿರುಕುಳ ನೀಡಿದ ಪೊಲೀಸ್ ಸಿಬ್ಬಂದಿ ಮೇಲೆ ಕ್ರಮ ಕೈಗೊಳ್ಳುವಂತೆ ದಲಿತ ಮುಖಂಡ ಸಂತೋಷ್ ಮೂಲಿಮನಿ ಒತ್ತಾಯಿಸಿದ್ದಾರೆ.
Published by: G Hareeshkumar
First published: November 23, 2020, 6:06 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories