ಕೊಲೆಗೆ ಸುಪಾರಿ, ಪೊಲೀಸ್ ಎನ್​ಕೌಂಟರ್… ಯೋಗೇಶ್ ಗೌಡ ಹತ್ಯೆ ನಂತರದ ಸ್ಫೋಟಕ ಬೆಳವಣಿಗೆ

ಯೋಗೇಶ್ ಗೌಡ ಕೊಲೆ ಪ್ರಕರಣವನ್ನು ರೀಓಪನ್ ಮಾಡಿ ಸಿಬಿಐ ತನಿಖೆಗೆ ವಹಿಸಲು ಕಾರಣರಾದ ಗುರುನಾಥ ಗೌಡ ಮತ್ತು ಬಸವರಾಜ ಕೊರವರ ಅವರನ್ನು ಮುಗಿಲು ಸುಪಾರಿ ನೀಡಲಾಗಿತ್ತು. ಹಾಗೆಯೇ, ಪೊಲೀಸ್ ಎನ್​ಕೌಂಟರ್​ನಲ್ಲಿ ಮುಗಿಸುವ ಸಂಚು ಕೂಡ ನಡೆದಿತ್ತೆನ್ನಲಾಗಿದೆ.

ಮೃತ ಯೋಗೇಶ್ ಗೌಡ

ಮೃತ ಯೋಗೇಶ್ ಗೌಡ

  • Share this:
ಹುಬ್ಬಳ್ಳಿ/ಧಾರವಾಡ (ನ. 09): ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಸಿಬಿಐ ತನಿಖೆ ನಡೆಸುತ್ತಿರುವಂತೆಯೇ ಒಂದೊಂದೇ ಸ್ಫೋಟಕ ಮಾಹಿತಿ ಹೊರಬರುತ್ತಿವೆ. ಯೋಗೇಶ್ ಗೌಡ ಕೊಲೆ ಪ್ರಕರಣವನ್ನು ರೀಓಪನ್ ಮಾಡಿಸಿದ್ದ ಆತನ ಸಹೋದರ ಗುರುನಾಥಗೌಡ ಮತ್ತು ಅವರಿಗೆ ಸಹಕರಿಸಿರುವ ಬಸವರಾಜ್ ಕೊರವರ ಅವರ ಹತ್ಯೆಗೆ ಸಂಚು ರೂಪಿಸಿರುವ ವಿಚಾರ ಕೇಳಿಬರುತ್ತಿದೆ. ಮಾಜಿ ಸಚಿವ ವಿನಯ್ ಕುಲಕರ್ಣಿ ಮತ್ತವರ ಸಹೋದರರೇ ಇವರಿಬ್ಬರ ಕೊಲೆಗೆ ಸುಪಾರಿ ನೀಡಿದ್ದರೆಂಬ ಆರೋಪ ಕೇಳಿಬಂದಿದೆ. ಇದಕ್ಕಾಗಿ ಆರು ಜನ ಹಂತಕರನ್ನು ಅಣಿಗೊಳಿಸಲಾಗಿತ್ತು. ಈ ಹಂತಕರಲ್ಲಿ ಒಬ್ಬಾತ ಅದಾಗಲೇ ಯೋಗೇಶ್ ಗೌಡ ಹತ್ಯೆಯಲ್ಲಿ ಭಾಗಿಯಾದವನಾಗಿದ್ದ. ಇನ್ನುಳಿದ ಐವರು ತಮಿಳುನಾಡು ಮೂಲದವರಾಗಿದ್ದರು. ಈ ಆರು ಮಂದಿ ಹಂತಕರು ಗುರುನಾಥಗೌಡ ಮತ್ತು ಬಸವರಾಜ ಕೊರವರ ಅವರ ಹತ್ಯೆಗೆ ಯೋಜಿಸಲು 15 ದಿನ ಧಾರವಾಡದಲ್ಲಿ ತಂಗಿದ್ದರಂತೆ. ಇವರ ಪ್ರಮುಖ ಟಾರ್ಗೆಟ್ ಆಗಿದ್ದು ಬಸವರಾಜ ಕೊರವರ ಎನ್ನಲಾಗಿದೆ.

ಈ ವಿಚಾರಗಳು ಸಿಬಿಐ ತನಿಖೆ ವೇಳೆ ಬೆಳಕಿಗೆ ಬಂದಿದೆ ಎಂದು ನ್ಯೂಸ್18 ಕನ್ನಡಕ್ಕೆ ಮೂಲಗಳು ತಿಳಿಸಿವೆ. ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲು ಗುರುನಾಥಗೌಡಗೆ ಹಿಂದಿನ ಶಕ್ತಿಯಾಗಿ ನಿಂತಿದ್ದ ಕಾರಣಕ್ಕೆ ಕೊರವರರನ್ನು ಮುಗಿಸಲು ಕುಲಕರ್ಣಿ ಸಹೋದರರು ಪ್ಲಾನ್ ಮಾಡಿದ್ದರು.

ಇದನ್ನೂ ಓದಿ: ನಂಜೇಗೌಡ ವಿರುದ್ಧ ಸಂಸದ ಮುನಿಸ್ವಾಮಿ ಆಡಿಯೋ ಬಾಂಬ್; ಆರೋಪ ಸಾಬೀತಾದರೆ ರಾಜೀನಾಮೆಗೆ ಸಿದ್ಧ ಎಂದ ಕೈ ಶಾಸಕ

ಅಷ್ಟೇ ಅಲ್ಲ, ಗುರುನಾಥ ಗೌಡ ಅವರನ್ನ ಪೊಲೀಸ್ ಎನ್​ಕೌಂಟರ್​ನಲ್ಲಿ ಮುಗಿಸಲುವ ಪ್ಲಾನ್ ಕೂಡ ನಡೆದಿದ್ದ ವಿಚಾರ ಬೆಳಕಿಗೆ ಬಂದಿದೆ. ಇಲ್ಲಿಯೂ ಕೂಡ ಸ್ಕೆಚ್ ರೂಪಿಸಿದ್ದು ಕುಲಕರ್ಣಿ ಬ್ರದರ್ಸ್ ಎನ್ನಲಾಗಿದೆ. ಒಬ್ಬ ಪೊಲೀಸ್ ಎನ್ಸ್​ಪೆಕ್ಟರ್ ಮತ್ತು ಡಿವೈಎಸ್​ಪಿ ಅವರು ಈ ಪ್ಲಾನ್​ನಲ್ಲಿ ಭಾಗಿಯಾಗಿದ್ದರು. ಸಂಚಿನಂತೆ ಗುರುನಾಥಗೌಡರ ಮನೆ ಮೇಲೆ ದಾಳಿ ನಡೆಸಿ ಪೊಲೀಸರು ಅಕ್ರಮ ಶಸ್ತ್ರಾಸ್ತ್ರಗಳನ್ನಿರಿಸಿದ್ದರು. ಅದರ ಪರಿಶೀಲನೆ ವೇಳೆ ಪೊಲೀಸರ ಮೇಲೆಯೇ ಫೈರಿಂಗ್ ಮಾಡಿದರೆಂದು ಹೇಳಿ ಗುರುನಾಥರನ್ನು ಎನ್​ಕೌಂಟರ್ ಮಾಡಿದಂತೆ ಬಿಂಬಿಸುವ ಪ್ಲಾನ್ ಆಗಿತ್ತು. ಆದರೆ, ಎನ್​ಕೌಂಟರ್​ಗೆ ಪೊಲೀಸರು ಹಿಂದೇಟು ಹಾಕಿದರು. ಎನ್​ಕೌಂಟರ್ ಸಾಧ್ಯವಾಗದಿದ್ದಾಗ ಗುರುನಾಥಗೌಡರ ವಿರುದ್ಧ ಅಕ್ರಮ ಶಸ್ತ್ರಾಸ್ತ್ರ ಪ್ರಕರಣವನ್ನು ದಾಖಲಿಸಿ ಬಂಧಿಸಲಾಗಿತ್ತು ಎಂಬ ಆರೋಪಗಳು ಕೇಳಿಬರುತ್ತಿವೆ.

ಗುರುನಾಥಗೌಡರನ್ನು ಪೊಲೀಸ್ ಎನ್​ಕೌಂಟರ್​ನಲ್ಲಿ ಸಾಯಿಸುವ ಪ್ಲಾನ್ ನಡೆದಿದ್ದ ವಿಚಾರವನ್ನು ಬಸವರಾಜ ಕೊರವರ ಕೂಡ ದೃಢಪಡಿಸಿದ್ದಾರೆ. ಇಂದು ಧಾರವಾಡದಲ್ಲಿ ಕೋರ್ಟ್​ಗೆ ಹಾಜರಾಗುವ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಎನ್​ಕೌಂಟರ್ ಮಾಡಲು ಸಂಚು ರೂಪಿಸಿರುವ ವಿಚಾರ ತನಗೆ ಗೊತ್ತಾಗಿತ್ತು. ಗುರುನಾಥಗೌಡಗೆ ಜಾಗ್ರತೆಯಿಂದ ಇರುವಂತೆ ಹೇಳಿದ್ದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಗ್ರಾಮ ಪಂಚಾಯತ್ ಚುನಾವಣೆ ಸಮೀಪ ಹಿನ್ನೆಲೆ; ಸಾವಿನ‌ ಮನೆಯಲ್ಲೂ ಬಿಜೆಪಿ-ಜೆಡಿಎಸ್​ ಸಾಂತ್ವನದ ರಾಜಕೀಯ

ಎನ್​ಕೌಂಟರ್ ವಿಚಾರ ಗೊತ್ತಿತ್ತು. ಆದರೆ ನಮ್ಮಿಬ್ಬರ ಕೊಲೆಗೆ ಸುಪಾರಿ ಕೊಟ್ಟಿದ್ದ ಬಗ್ಗೆ ನನಗೆ ಮಾಹಿತಿ ಇರಲಿಲ್ಲ.  ಈ ವಿಷಯ ಕೇಳಿ ನಾನು ಶಾಕ್ ಆದೆ. ನಮ್ಮಿಬ್ಬರ ಕೊಲೆ ಮಾಡಿ ಈ ಪ್ರಕರಣವನ್ನೇ ಮುಚ್ಚಿಹಾಕುವ ಪ್ರಯತ್ನ ನಡೆದಿತ್ತು. ದೇವರು ದೊಡ್ಡವನು, ನಮ್ಮನ್ನು ಬಚಾವ್ ಮಾಡಿದ್ದಾನೆ. ಯೋಗೇಶ್ ಗೌಡ ಕೊಲೆ ಆರೋಪಿಗಳು ಯಾರೇ ಇರಲಿ ಅವರಿಗೆ ಶಿಕ್ಷೆ ಆಗಬೇಕು ಎಂದು ಬಸವರಾಜ ಕೊರವರ ಒತ್ತಾಯಿಸಿದ್ದಾರೆ.

ಬಿಜೆಪಿ ನಾಯಕ ಹಾಗೂ ಜಿ.ಪಂ. ಸದಸ್ಯನಾಗಿದ್ದ ಯೋಗೇಶ್ ಗೌಡನನ್ನು 2016ರಲ್ಲಿ ಹತ್ಯೆ ಮಾಡಲಾಗಿತ್ತು. ಕಳೆದ ವರ್ಷ ಇದರ ತನಿಖೆಯನ್ನು ಸಿಬಿಐಗೆ ನೀಡಲಾಗಿತ್ತು. ಇದೇ ಫೆಬ್ರವರಿಯಿಂದ ತನಿಖೆ ಪ್ರಾರಂಭಿಸಿರುವ ಸಿಬಿಐ ಲಾಕ್ ಡೌನ್ ಅವಧಿಯಲ್ಲೂ ಪ್ರಕರಣದಲ್ಲಿ ಬೇರು ಮುಟ್ಟುವ ಪ್ರಯತ್ನ ಮಾಡಿದೆ. ಇದೀಗ ಸಿಬಿಐ ಅಧಿಕಾರಿಗಳು ಕಾಂಗ್ರೆಸ್ ಮುಖಂಡ ಮತ್ತು ಮಾಜಿ ಸಚಿವ ವಿನಯ್ ಕುಲಕರ್ಣಿ ಅವರನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದ್ದಾರೆ.

ಇದೇ ವೇಳೆ, ವಿನಯ್ ಕುಲಕರ್ಣಿ ಹಾಗೂ ಅವರ ಸಹೋದರನನ್ನು ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಸುಮ್ಮನೆ ಸಿಲುಕಿಸಲಾಗಿದೆ. ಇದು ಕೇಂದ್ರ ಸಚಿವ ಹಾಗೂ ಬಿಜೆಪಿ ಸಂಸದ ಪ್ರಹ್ಲಾದ್ ಜೋಷಿ ಅವರ ಪಿತೂರಿ ಎಂದು ಕಾಂಗ್ರೆಸ್ ನಾಯಕರು ವಾದಿಸಿದ್ದಾರೆ. ಪ್ರಕರಣ ಇನ್ನೂ ತನಿಖಾ ಹಂತದಲ್ಲಿರುವ ಹಿನ್ನೆಲೆಯಲ್ಲಿ ಸ್ಪಷ್ಟ ಚಿತ್ರ ಸಿಕ್ಕಿಲ್ಲ.

ವರದಿ: ಪರಶುರಾಮ ತಹಶೀಲ್ದಾರ / ಮಂಜುನಾಥ ಯಡಹಳ್ಳಿ
Published by:Vijayasarthy SN
First published: