ಯೋಗೇಶ್ ಗೌಡ ಹತ್ಯೆ ಪ್ರಕರಣ: ಕೊಲೆ ಆರೋಪಿಯನ್ನೇ ಮುಗಿಸಲು ಸ್ಕೆಚ್ ಹಾಕಿದ್ರಾ ಮಾಜಿ ಸಚಿವರ ತಂಡ?

ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಪ್ರಮುಖ ಸಾಕ್ಷ್ಯವಾಗಿರುವ ಆರೋಪಿ ಬಸವರಾಜ ಮುತ್ತಗಿಯನ್ನು ಕೊಂದುಹಾಕಲು ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ತಂಡ ಪ್ರಯತ್ನಿಸಿತ್ತು ಎಂಬ ವಿಚಾರವನ್ನು ಸಿಬಿಐ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆನ್ನಲಾಗಿದೆ.

ವಿನಯ್ ಕುಲಕರ್ಣಿ

ವಿನಯ್ ಕುಲಕರ್ಣಿ

  • Share this:
ಹುಬ್ಬಳ್ಳಿ: ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣದ ಸಿಬಿಐ ತನಿಖೆ ಮುಂದುವರಿದಿದೆ. ತನಿಖೆಯಲ್ಲಿ ಬೆಚ್ಚಿಬೀಳಿಸುವ ವಿಚಾರಗಳು ಬಯಲಿಗೆ ಬರುತ್ತಿವೆ. ಕೊಲೆ ಆರೋಪದ ಮೇಲೆ ಜೈಲಲ್ಲಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಅವರು ಪ್ರಕರಣದಲ್ಲಿ ಪ್ರಮುಖ ಸಾಕ್ಷ್ಯವಾಗಿರುವ ಕೊಲೆ ಆರೋಪಿಯನ್ನೇ ಹತ್ಯೆ ಮಾಡಲು ಸಂಚು ರೂಪಿಸಿದ್ದರು ಎನ್ನಲಾಗಿದೆ. ಸಿಬಿಐ ತನಿಖೆ ವೇಳೆ ಈ ರಣರೋಚಕ ವಿಚಾರ ಬಹಿರಂಗ ಗೊಂಡಿದೆ.

ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುತ್ತಿದ್ದಂತೆ ಕೊಲೆ ಆರೋಪಿ ಬಸವರಾಜ್ ಮುತ್ತಗಿ ಹತ್ಯೆಗೆ ಸಂಚು ರೂಪಿಸಲಾಗಿತ್ತು. ಸಾಕ್ಷ್ಯ ಮುಚ್ಚಿ ಹಾಕಲು ಬಸವರಾಜ್ ಮುತ್ತಗಿ ಕೊಲೆಗೆ ಸ್ಕೆಚ್ ನಡೆದಿತ್ತು ಎನ್ನುವ ಭಯಾನಕ ವಿಚಾರವನ್ನು ಸಿಬಿಐ ಪತ್ತೆ ಹಚ್ಚಿದೆ. ಯೋಗೇಶ್ ಗೌಡ ಕೊಲೆ‌ ಪ್ರಕರಣದ ಪ್ರಮುಖ ಆರೋಪಿ ಬಸವರಾಜ್ ಮುತ್ತಗಿಯನ್ನು ಹತ್ಯೆ ಮಾಡುವ ಮೂಲಕ ಪ್ರಕರಣದ ಹಾದಿ ತಪ್ಪಿಸಲು ಯತ್ನಿಸಲಾಗಿತ್ತು. ಒಂದೇ ಕಲ್ಲಿಗೆ ಎರಡು ಹಕ್ಕಿಗಳನ್ನು ಹೊಡೆಯುವ ಪ್ಲ್ಯಾನ್‌ನ್ನು ವಿನಯ ಕುಲಕರ್ಣಿ ಆ್ಯಂಡ್ ಟೀಮ್ ಮಾಡಿದ್ದರಂತೆ.

ಬಸವರಾಜ ಮುತ್ತಗಿಯನ್ನು ಹತ್ಯೆ ಮಾಡಿದರೆ ಸುಪಾರಿ ವಿಚಾರವನ್ನು ಮುಚ್ಚಿ ಹಾಕಬಹುದು. ಬಸವರಾಜ ಮುತ್ತಗಿ ಹತ್ಯೆಯ ಕೇಸ್‌ನ್ನು ಯೋಗೇಶ್‌ಗೌಡ ಅಣ್ಣ ಗುರುನಾಥ ಗೌಡರ ತಲೆಗೆ ಕಟ್ಟುಬಹುದು ಎನ್ನುವ ಹುನ್ನಾರ ನಡೆದಿತ್ತಂತೆ. ಬಸವರಾಜ ಮುತ್ತಗಿ ಹತ್ಯೆಗೆ ಬೆಂಗಳೂರಿನ ನಟೋರಿಯಸ್ ರೌಡಿಯೊಬ್ಬನನ್ನು ಮಾಜಿ ಸಚಿವರ ತಂಡ ಸಂಪರ್ಕಿಸಿತ್ತು. ಧಾರವಾಡ ಮೂಲದ ಚಲನಚಿತ್ರ ನಟಿಯನ್ನು ಮದುವೆಯಾಗಿರುವ ಬೆಂಗಳೂರಿನ ರೌಡಿಶೀಟರ್‌ನನ್ನು ಸುಪಾರಿ ಕೊಲೆ ಮಾಡುವಂತೆ ಸಂಪರ್ಕಿಸಲಾಗಿತ್ತು. ಚಂದ್ರಶೇಖರ ಇಂಡಿ, ವಿನಯ್ ಕುಲಕರ್ಣಿ ಹಾಗೂ ಮಧ್ಯವರ್ತಿಯೊಬ್ಬನ ಫೋನ್ ಕರೆಗಳ ವಿವರವನ್ನು ಸಿಬಿಐ ಅಧಿಕಾರಿಗಳು ಕಲೆ ಹಾಕಿದ್ದಾರೆ. ಕರೆಗಳ ಸಂಪೂರ್ಣ ಪಟ್ಟಿಯನ್ನು ಚಂದ್ರಶೇಖರ ಇಂಡಿ‌ ಮುಂದಿಟ್ಟು ವಿಚಾರಣೆ ನಡೆಸಿದಾಗ ಈ ಎಲ್ಲಾ ಅಂಶಗಳು ಬಯಲಾಗಿವೆ.

ಇದನ್ನೂ ಓದಿ: 58 ವರ್ಷದಿಂದ ಚುನಾವಣೆ ಕಾಣದ ಗ್ರಾಮ ಪಂಚಾಯಿತಿ; ಬೆಳಗಾವಿಯಲ್ಲಿ ಇತಿಹಾಸ ಬರೆದ ಅವಿರೋಧ ಆಯ್ಕೆ

ಯೋಗೇಶ್‌ಗೌಡ ಹತ್ಯೆಗೆ ಪಿಸ್ತೂಲ್ ಪೂರೈಸಿದ್ದು, ಬಸವರಾಜ ಮುತ್ತಗಿಯ ಹತ್ಯೆಗೂ ಸಂಚು ರೂಪಿಸಿದ್ದನ್ನು ಚಂದ್ರಶೇಖರ್ ಇಂಡಿ ಬಾಯ್ಬಿಟ್ಟಿದ್ದಾರೆ ಎನ್ನಲಾಗಿದೆ. ಮಾಜಿ ಸಚಿವ ವಿನಯ ಕುಲಕರ್ಣಿ ಸೋದರ ಮಾವನಾಗಿರುವ ಚಂದ್ರಶೇಖರ್ ಇಂಡಿ ಮತ್ತು ಬಾಡಿಬಿಲ್ಡರ್‌ ಆಗಿರುವ ಜಿಮ್‌ ಒಂದರ ಮಾಲಿಕ ರೌಡಿಶೀಟರ್‌ನ ಜೊತೆಗೆ ಸಂಪರ್ಕ ಮಾಡಿದ್ದನ್ನು ಪತ್ತೆ ಹಚ್ಚಲಾಗಿದೆ. ಈ ವೇಳೆ ಚಂದ್ರಶೇಖರ್ ಇಂಡಿ ಭಯಾನಕ ವಿಷಯಗಳನ್ನು ಬಾಯ್ಬಿಟ್ಟಿರುವುದಾಗಿ ಮೂಲಗಳು ಸ್ಪಷ್ಟಪಡಿಸಿವೆ. ಈಗಾಗಲೇ ಚಂದ್ರಶೇಖರ್ ಇಂಡಿಯನ್ನು ಬಂಧಿಸಿರುವ ಸಿಬಿಐ ಅಧಿಕಾರಿಗಳು ಹೆಚ್ಚಿನ ವಿಚಾರಣೆಗೆ ಕಸ್ಟಡಿಗೆ ಪಡೆಯಲು ತಯಾರಿ ಮಾಡಿಕೊಂಡಿದ್ದಾರೆ.

ವರದಿ: ಪರಶುರಾಮ ತಹಶೀಲ್ದಾರ
Published by:Vijayasarthy SN
First published: