news18-kannada Updated:June 18, 2020, 8:32 PM IST
ಅಧಿಕಾರಿಗಳೊಂದಿಗೆ ಚರ್ಚಿಸುತ್ತಿರುವ ಉಸ್ತುವಾರಿ ಸಚಿವ ಕೆ ಗೋಪಾಲಯ್ಯ
ಹಾಸನ(ಜೂ.18): ಸರ್ಕಾರದ ಬಹು ಮಹತ್ವಾಕಾಂಕ್ಷಿ ಯೋಜನೆ ಎತ್ತಿನಹೊಳೆ ಯೋಜನೆಯು ಬಯಲು ಸೀಮೆಗಳಾದ ಬೆಂಗಳೂರು ಗ್ರಾಮಾಂತರ, ರಾಮನಗರ, ಚಿಕ್ಕಬಳ್ಳಾಪುರ, ತುಮಕೂರು ಮತ್ತು ಕೋಲಾರ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ಯೋಜನೆ ಕೈಗೊಳ್ಳಲಾಗಿದೆ. ಹಿಂದಿನ ಸಿದ್ಧರಾಮಯ್ಯ ಸರ್ಕಾರದಲ್ಲಿ ಯೋಜನೆ ಕೈಗೊಂಡಿದ್ದು, ನೀರಿಗಾಗಿ ಬಯಲು ಸೀಮೆಯ ಜನರು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಈಗ ಒಂದು ಹಂತ ತಲುಪಿದ್ದು, ಯಾವಾಗ ನೀರು ಹರಿಸುತ್ತಾರೆಂಬ ಕುತೂಹಲ ಮೂಡಿತ್ತು. ಆದರೆ, ಈಗ ಮೊದಲ ಹಂತದಲ್ಲಿ ಬಯಲು ಸೀಮೆಗೆ ನೀರು ಹರಿಯಲಿದೆ. ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನಲ್ಲಿ ನಡೆಯುತ್ತಿರುವ ಎತ್ತಿನಹೊಳೆ ಯೋಜನೆ ಕಾಮಗಾರಿ ಶೇ. 85 ರಷ್ಟು ಮುಗಿದಿದೆ.
ಇಂದು ಎತ್ತಿನಹೊಳೆ ಯೋಜನಾ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ ಯೋಜನಾ ಸ್ಥಳ ಪರಿಶೀಲನೆ ಮಾಡಿದರು. ನೀರು ಮೇಲೆತ್ತುವ ಯಂತ್ರ ಮತ್ತು ಕಾಮಗಾರಿ ಸ್ಥಳ ಪರಿಶೀಲಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ಎತ್ತಿನ ಹೊಳೆ ಯೋಜನೆಯಲ್ಲಿ ಶೇ 85 ರಷ್ಟು ಕೆಲಸ ಮುಗಿದಿದ್ದು, 2021 ರ ಮಾರ್ಚ್ ಅಂತ್ಯದೊಳಗೆ ಮೊದಲ ಹಂತದಲ್ಲಿ ನೀರು ಹರಿಸಲಾಗುತ್ತದೆ ಎಂದು ಸಚಿವ ಗೋಪಾಲಯ್ಯ ಹೇಳಿದರು.
ಈ ಯೋಜನೆಯಲ್ಲಿ ಒಟ್ಟು 152 ಕಿಮೀ ದೂರದವರೆಗೆ ಪೈಪ್ ಲೈನ್ ಅಳವಡಿಸಲಾಗಿದೆ. ಮಳೆ ಬಂದರೆ 24 ಟಿಎಂಸಿ ನೀರು ಸಿಗಲಿದೆ ಎಂದು ಈಗಾಗಲೇ ಸರ್ಕಾರಕ್ಕೆ ವೈಜ್ಞಾನಿಕವಾಗಿ ವಿಜ್ಞಾನಿಗಳು ವರದಿ ನೀಡಿದ್ದಾರೆ. ಇದರಲ್ಲಿ ಯಾವುದೇ ಅನುಮಾನವಿಲ್ಲಾ ಸರಿಯಾಗಿ ಮಳೆ ಬಂದರೆ 24 ಟಿಎಂಸಿ ನೀರು ಬರಲಿದೆ ಎಂದು ಸಚಿವರು ತಿಳಿಸಿದ್ದಾರೆ.
ಈ ಎತ್ತಿನಹೊಳೆ ಯೋಜನೆಯು ಒಟ್ಟು 12 ಸಾವಿರ ಕೋಟಿ ವೆಚ್ಚದಲ್ಲಿ ಕಾಮಗಾರಿ ಮಾಡಲಾಗುತ್ತಿದೆ. ಆದರೆ, ಈಗ ಎಸ್ ಆರ್ ವ್ಯಾಲ್ಯೂ ಪ್ರಕಾರ ಇದರ ವೆಚ್ಚ ಮತ್ತಷ್ಟು ಹೆಚ್ಚಾಗಲಿದೆ. ಅಲ್ಲದೇ ಈಗ ಕರೋನಾ ಹಿನ್ನೆಲೆ ಕಾರ್ಮಿಕರಿಲ್ಲದೇ ಕೆಲಸ ಕುಂಠಿತವಾಗಿದೆ. ಯಂತ್ರ ಅಳವಡಿಕೆ ಕಾರ್ಯ ಶೇ,95 ರಷ್ಟು ಕೆಲಸ ಮುಗಿದಿದೆ. ಇನ್ನೂ 3.5 ಎಕರೆ ಭೂಮಿ ವಶಪಡಿಸಿಕೊಳ್ಳಬೇಕಿದೆ. ಈ ಭೂಮಿ ಸ್ವಾಧೀನ ಪಡಿಸಿಕೊಳ್ಳುವ ಕಾರ್ಯ ಪ್ರಗತಿಯಲ್ಲಿದ್ದು ಕೆಲವೇ ದಿನಗಳಲ್ಲಿ ಪ್ರಕ್ರಿಯೆ ಮುಗಿಯಲಿದೆ. ಪೈಪ್ ಲೈನ್ ಅಳವಡಿಸುವ ಕಾಮಗಾರಿ ಕೂಡ ಆದಷ್ಟು ಬೇಗ ಮುಗಿಯಲಿದೆ.
ಇದನ್ನೂ ಓದಿ :
ಕೊರೋನಾದಿಂದ ಬಾಡಿಗೆದಾರರ ಸಂಕಷ್ಟ ; 10 ಲಕ್ಷ ರೂಪಾಯಿ ಬಾಡಿಗೆ ಮನ್ನಾ ಮಾಡಿ ಕಾಂಪ್ಲೆಕ್ಸ್ ಮಾಲೀಕನ ಮಾನವೀಯತೆ
ಈ ಎತ್ತಿನಹೊಳೆ ಯೋಜನೆಯಲ್ಲಿ ಹಿಂದಿನ ನಾಲ್ಕೈದು ಮಂದಿ ಜಿಲ್ಲಾ ಉಸ್ತುವಾರಿ ಸಚಿವರು ಬದಲಾವಣೆಯಾಗಿದ್ದಾರೆ. ಆದರೂ ಕೂಡ ನೀರು ಹರಿಸಿಲ್ಲ. ಆದರೆ, ಈ ಯೋಜನೆ ಕನಸಿನ ಯೋಜನೆಯಾಗಿದ್ದು, ಇದು ಪೂರ್ಣಗೊಳ್ಳುವ ಲಕ್ಷಣಗಳು ಕಾಣುತ್ತಿಲ್ಲ. ಮುಂದಿನ ವರ್ಷದ ಮಾರ್ಚ್ ಅಂತ್ಯಕ್ಕೆ ನೀರು ಹರಿಸುವುದಾಗಿ ಬಿಜೆಪಿ ಸರ್ಕಾರ ಹೇಳುತ್ತಿದೆ. ಈವರೆಗೆ ಮೂರು ಸರ್ಕಾರಗಳು ಬದಲಾವಣೆಯಾಗಿದೆ. ಆದರೆ, ಕಾಮಗಾರಿ ಪೂರ್ಣಗೊಂಡು ನೀರು ಹರಿಯುತ್ತಾ ಎಂಬ ಅನುಮಾನ ಮತ್ತಷ್ಟು ಹೆಚ್ಚಾಗಿದೆ.
ಒಟ್ಟಾರೆ ಈಗಲಾದರೂ ಬಯಲು ಸೀಮೆಗೆ ನೀರು ಹರಿಯುತ್ತಾ ಎಂಬುದನ್ನ ಕಾದು ನೋಡಬೇಕಿದೆ.
First published:
June 18, 2020, 8:15 PM IST