• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • ಕರಾವಳಿಯಲ್ಲಿ ಹೆಚ್ಚುತ್ತಿದೆ ಅಡಿಕೆಗೆ ಹಳದಿ ರೋಗಬಾಧೆ; ಸುಳ್ಯ ತಾಲೂಕೊಂದರಲ್ಲೇ ಸಾವಿರಾರು ಹೆಕ್ಟೇರ್​ನಲ್ಲಿ ರೋಗ ಲಕ್ಷಣ ಪತ್ತೆ

ಕರಾವಳಿಯಲ್ಲಿ ಹೆಚ್ಚುತ್ತಿದೆ ಅಡಿಕೆಗೆ ಹಳದಿ ರೋಗಬಾಧೆ; ಸುಳ್ಯ ತಾಲೂಕೊಂದರಲ್ಲೇ ಸಾವಿರಾರು ಹೆಕ್ಟೇರ್​ನಲ್ಲಿ ರೋಗ ಲಕ್ಷಣ ಪತ್ತೆ

ಅಡಕೆ ತೋಟಕ್ಕೆ ಹಳದಿ ರೋಗ ತಗುಲಿರುವುದು.

ಅಡಕೆ ತೋಟಕ್ಕೆ ಹಳದಿ ರೋಗ ತಗುಲಿರುವುದು.

ಒಟ್ಟು  7048 ಸರ್ವೆ ನಂಬರ್ ವ್ಯಾಪ್ತಿಯಲ್ಲಿ ಹಳದಿ ರೋಗ ಕಂಡುಬಂದಿದೆ. 1217 ಹೆಕ್ಟೇರ್‌ಗಳಲ್ಲಿ ಸರಿಸುಮಾರು  14,30,440  ಅಡಿಕೆ ಮರಗಳು ರೋಗಬಾಧಿತ ಎಂದು ಪರಿಗಣಿಸಲಾಗಿದೆ. ಸುಳ್ಯ ಭಾಗದಲ್ಲಿ  ವಿಪರೀತವಾಗಿ ಹರಡುತ್ತಿರುವ ಅಡಿಕೆ ಹಳದಿ ರೋಗ ಜಿಲ್ಲೆಯ ಇನ್ನಷ್ಟು ಭಾಗವನ್ನು ಪಸರಿಸುವ ಸಾಧ್ಯತೆಯೂ ಹೆಚ್ಚಾಗಿದ್ದು, ಈ ಬೆಳವಣಿಗೆ ಅಡಿಕೆ ಬೆಳೆಗಾರ ತಲೆಬಿಸಿಗೆ ಕಾರಣವಾಗಿದೆ. 

ಮುಂದೆ ಓದಿ ...
  • Share this:

ಪುತ್ತೂರು: ಕರಾವಳಿ ಭಾಗದ ಕೃಷಿಕರ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆ ಬೆಳೆ ಇಂದು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದೆ. ಭತ್ತಕ್ಕಿಂತ ಹೆಚ್ಚು ಆದಾಯ ತಂದುಕೊಡುವ ಈ ಅಡಿಕೆ ಬೆಳೆಯು ಹಳದಿ ಎಲೆ ರೋಗ ಬಾಧೆಗೆ ತುತ್ತಾಗುತ್ತಿದೆ. ದಕ್ಷಿಣಕನ್ನಡ ಜಿಲ್ಲೆಯ ಸಾವಿರಾರು ಎಕರೆ ಅಡಿಕೆ ತೋಟಗಳಲ್ಲಿ ಈ ರೋಗ ವ್ಯಾಪಕವಾಗಿ ಪಸರಿಸುತ್ತಿದೆ. ಅಡಕೆಯನ್ನೇ ನಂಬಿರುವ ಕೃಷಿ ಪ್ರಧಾನವಾದ ಜಿಲ್ಲೆಯ ಬಹುತೇಕ ಗ್ರಾಮಗಳ ಅಡಿಕೆ ಕೃಷಿಕರ ಬದುಕು ಅಡಕತ್ತರಿಯಲ್ಲಿ ಸಿಲುಕಿದಂತಾಗಿದೆ.


ಆರಂಭದಲ್ಲಿ ಜಿಲ್ಲೆಯ ಸುಳ್ಯ ತಾಲೂಕಿನ ಸಂಪಾಜೆಯ ಭಾಗದಲ್ಲಿ ಕಾಣಿಸಿಕೊಂಡ ಹಳದಿ ರೋಗ ಅಡಿಕೆ ತೋಟವನ್ನು ನಾಶ ಮಾಡಿ ಅಡಕೆ ಕೃಷಿಕರ ಬದುಕನ್ನು ಸಂಕಷ್ಟಕ್ಕೀಡು ಮಾಡಿತ್ತು.  ಹಳದಿ ರೋಗ ಇದೀಗ ಸುಳ್ಯ ತಾಲೂಕಿನ ಹಲವು ಗ್ರಾಮಗಳಿಗೆ ವ್ಯಾಪಿಸುತ್ತಿದೆ. ಸುಳ್ಯ ತಾಲೂಕಿನ ಅರ್ಧಕ್ಕಿಂತಲೂ ಹೆಚ್ಚು ಪ್ರದೇಶಗಳ ತೋಟಗಳಲ್ಲಿ ಹಳದಿ ರೋಗ ವ್ಯಾಪಕವಾಗಿ ಹರಡುತ್ತಿದೆ. ಕೆಲವು ಕೃಷಿಕರು ಹಳದಿ ರೋಗ ಬಂದು ನಾಶವಾದ ತೋಟವನ್ನು ಕಡಿಯಲು ಆರಂಭಿಸಿದ್ದಾರೆ. ಸಂಪಾಜೆ, ಅರಂತೋಡು, ಆಲೆಟ್ಟಿ, ಉಬರಡ್ಕ, ಮರ್ಕಂಜ, ನೆಲ್ಲೂರು ಕೆಮ್ರಾಜೆ, ಮಡಪ್ಪಾಡಿ, ಕೊಡಿಯಾಲ, ಅಮರ ಮೂಡ್ನೂರು ಕಲ್ಮಕ್ಕಾರು ಗ್ರಾಮಗಳಲ್ಲಿ ಸುಮಾರು ಐದು ಸಾವಿರ ಎಕರೆಗಿಂತಲೂ ಅಧಿಕ ಪ್ರದೇಶದಲ್ಲಿ ಅಡಕೆ ಕೃಷಿಯಿದೆ. ಸಂಪಾಜೆಯಲ್ಲಿ ಪ್ರಥಮ ಬಾರಿಗೆ ಈ ಭಾಗದಲ್ಲಿ ಅಡಿಕೆಗೆ ಹಳದಿ ರೋಗ ಕಂಡು ಬಂದಿತ್ತು. ಸುಮಾರು 25 ವರ್ಷಗಳ ಹಿಂದೆ ಕಂಡು ಬಂದ ಹಳದಿ ರೋಗ ಬಾಧೆಯು ದಕ್ಷಿಣಕನ್ನಡ ಜಿಲ್ಲೆಯ ಸಂಪಾಜೆ, ಕೊಡಗು ಸಂಪಾಜೆ, ಚೆಂಬು ಗ್ರಾಮದ ಅಡಕೆ ಕೃಷಿಯನ್ನು ಸಂಪೂರ್ಣ ನಾಶಪಡಿಸಿತ್ತು.


ಆರ್ಥಿಕತೆಯ ಆಧಾರ ಸ್ತಂಭವಾಗಿದ್ದ ಅಡಕೆ ಕೃಷಿ ನಾಶವಾದ ಕಾರಣ ಇಲ್ಲಿಯ ಕೃಷಿಕರು ಹಲವು ವರ್ಷಗಳಿಂದ ಆರ್ಥಿಕ ಸಂಕಷ್ವವನ್ನು ಎದುರಿಸುತ್ತಿದ್ದಾರೆ. ದ.ಕ.ಸಂಪಾಜೆ ಗ್ರಾಮವೊಂದರಲ್ಲೆ ಸುಮಾರು 500 ಎಕರೆಗಿಂತಲೂ ಹೆಚ್ಚು ಅಡಕೆ ಕೃಷಿ ನಾಶವಾಗಿದೆ.
ಕೊಡಗು ಸಂಪಾಜೆ ಮತ್ತು ಚೆಂಬು ಗ್ರಾಮದಲ್ಲಿಯೂ ನೂರಾರು ಎಕರೆ ಅಡಕೆ ತೋಟ ಸಂಪೂರ್ಣ ನಶಿಸಿ ಹೋಗಿದೆ. ಸುಳ್ಯದ ಅರಂತೋಡಿನಲ್ಲಿ ಒಟ್ಟು  650 ಎಕರೆಗೂ ಹೆಚ್ಚು ಮತ್ತು ತೊಡಿಕಾನದಲ್ಲಿ 550 ಎಕರೆಗೂ ಮಿಕ್ಕಿ ಅಡಕೆ ತೋಟಗಳಿದ್ದು ಸಂಪೂರ್ಣ ನಾಶವಾಗಿದೆ. ಆಲೆಟ್ಟಿಯಲ್ಲಿ 1200, ಮರ್ಕಂಜದಲ್ಲಿ 720, ಕಲ್ಮಕಾರಿನಲ್ಲಿ 430 ಎಕರೆಗಳಿಗಿಂತಲೂ ಮಿಕ್ಕಿ ಅಡಕೆ ತೋಟವಿದ್ದು ಇದರಲ್ಲಿ ಹಲವು ತೋಟಗಳು ಹಳದಿ ರೋಗದ ಲಕ್ಷಣಗಳು ಕಾಣಿಸಿಕೊಂಡಿದೆ. ಅಲ್ಲದೇ ತಾಲೂಕಿನ ಹಲವು ಗ್ರಾಮಗಳಲ್ಲಿ ಅಲ್ಲಲ್ಲಿ ಹಳದಿ ರೋಗ ಆರಂಭವಾಗುವ ಲಕ್ಷಣಗಳು ಕಂಡು ಬಂದಿದೆ. ಅಡಕೆಗೆ ಬಾಧಿಸುವ ಹಳದಿ ರೋಗ ಮತ್ತು ಬೇರು ಹುಳ ಬಾಧೆಯ ಬಗ್ಗೆ ಸಮಗ್ರ ಅಧ್ಯಯನಕ್ಕೆ ಸಿಪಿಸಿಆರ್‌ಐ ವಿಜ್ಞಾನಿಗಳು ಈಗಾಗಲೇ ಮುಂದಾಗಿದ್ದಾರೆ. ಮರ್ಕಂಜ ಗ್ರಾಮದಲ್ಲಿ ಸಿಪಿಸಿಆರ್‌ಐ ವಿಜ್ಞಾನಿಗಳು ಇತ್ರೀಚೆಗೆ ರೋಗ ಬಾಧಿಕ ತೋಟಗಳ ಸಮೀಕ್ಷೆಯನ್ನೂ  ನಡೆಸಿದ್ದಾರೆ.


ಇದನ್ನು ಓದಿ: ಭಾರತವನ್ನು ಕತ್ತಲಲ್ಲಿ ಮುಳುಗಿಸಲು ಚೀನಾ ಪ್ಲಾನ್? 12 ಸರ್ಕಾರಿ ಘಟಕಗಳನ್ನ ಹ್ಯಾಕ್ ಮಾಡಿದ ಚೀನೀಯರು


ಹಲವಾರು ವರ್ಷಗಳಿಂದ ಸುಳ್ಯ ತಾಲೂಕಿನ ಅಡಕೆ ಕೃಷಿಕರ ಕಣ್ಣಿರ ಕೋಡಿ ಹರಿಸಲು ಕಾರಣವಾಗುತ್ತಿರುವ ಹಳದಿ ರೋಗ ಇತ್ತೀಚಿನ ದಿನಗಳಲ್ಲಿ ವೇಗವಾಗಿ ಹರಡುತ್ತಿರುವುದು ಅಡಕೆಯನ್ನೇ ನಂಬಿರುವ ಕೃಷಿಕರಲ್ಲಿ ದಿಗಿಲು ಹುಟ್ಟಿಸಿದೆ.  ಕಾಸರಗೋಡಿನ ಸಿಪಿಸಿಆರ್‌ಐನಿಂದ 7 ಕೋಟಿ ವೆಚ್ಚದಲ್ಲಿ ಹಳದಿ ಎಲೆ ರೋಗದ ನಿಯಂತ್ರಣ ಅಧ್ಯಯನ ಆರಂಭಿಸಲಾಗಿದೆ. ಹಳದಿ ಎಲೆ ರೋಗ ನಿರೋಧಕ ತಳಿಯ ಅಭಿವೃದ್ಧಿಯ ಬಗ್ಗೆಯೂ ಸಂಶೋಧನೆ ನಡೆಯುತ್ತಿದೆ. ಅಡಿಕೆ ಹಳದಿ ರೋಗ ಬಾಧಿತ ಪ್ರದೇಶಗಳ ಸಮೀಕ್ಷೆ ನಡೆಸಲಾಗಿದ್ದು , ಒಟ್ಟು 7048 ಸರ್ವೆ ನಂಬರ್‌ಗಳ ವ್ಯಾಪ್ತಿಯಲ್ಲಿ ಪರಿಶೀಲನೆ ನಡೆಸಿ 1217 ಹೆಕ್ಟೇರ್ ರೋಗ ಬಾಧಿತ ಪ್ರದೇಶವನ್ನು ಗುರುತಿಸಿ ವರದಿ ಸಲ್ಲಿಸಲಾಗಿದೆ.


ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಡಿಕೆ ಹಳದಿ ಎಲೆ ರೋಗಬಾಧಿತ ಪ್ರದೇಶಗಳ ವ್ಯಾಪ್ತಿ ಮತ್ತು ತೀವ್ರತೆಗಳ ಅಂಕಿಅಂಶಗಳನ್ನು ನಿಖರವಾಗಿ ಅಧ್ಯಯನ ಮಾಡಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸುವ ಸಲುವಾಗಿ ಕಳೆದ ಜನವರಿಯಲ್ಲಿ ಸಮೀಕ್ಷೆ ಆರಂಭಿಸಲಾಗಿತ್ತು . 1217  ಹೆಕ್ಟೇರ್ ಗುರುತು ಮಾಡಿ ಸಂಪಾಜೆ, ಅರಂತೋಡು, ಆಲೆಟ್ಟಿ, ಉಬರಡ್ಕ, ಮರ್ಕಂಜ, ನೆಲ್ಲೂರು ಕೆಮ್ರಾಜೆ, ಮಡಪ್ಪಾಡಿ, ಕೊಡಿಯಾಲ, ಅಮರ ಮೂಡ್ನೂರು, ಕೊಲ್ಲಮೊಗ್ರು, ಹರಿಹರ ಪಲ್ಲತ್ತಡ್ಕ ಗ್ರಾ.ಪಂ. ವ್ಯಾಪ್ತಿಯಲ್ಲಿ ಸಮೀಕ್ಷೆ ನಡೆಸಲು ತಂಡ ರಚಿಸಲಾಗಿತ್ತು. 13,993 ಸರ್ವೆ ನಂಬರ್ ಪ್ರದೇಶದಲ್ಲಿ ಸಮೀಕ್ಷೆ ನಡೆಸಿದ್ದು, ಒಟ್ಟು  7048 ಸರ್ವೆ ನಂಬರ್ ವ್ಯಾಪ್ತಿಯಲ್ಲಿ ಹಳದಿ ರೋಗ ಕಂಡುಬಂದಿದೆ. 1217 ಹೆಕ್ಟೇರ್‌ಗಳಲ್ಲಿ ಸರಿಸುಮಾರು  14,30,440  ಅಡಿಕೆ ಮರಗಳು ರೋಗಬಾಧಿತ ಎಂದು ಪರಿಗಣಿಸಲಾಗಿದೆ. ಸುಳ್ಯ ಭಾಗದಲ್ಲಿ  ವಿಪರೀತವಾಗಿ ಹರಡುತ್ತಿರುವ ಅಡಿಕೆ ಹಳದಿ ರೋಗ ಜಿಲ್ಲೆಯ ಇನ್ನಷ್ಟು ಭಾಗವನ್ನು ಪಸರಿಸುವ ಸಾಧ್ಯತೆಯೂ ಹೆಚ್ಚಾಗಿದ್ದು, ಈ ಬೆಳವಣಿಗೆ ಅಡಿಕೆ ಬೆಳೆಗಾರ ತಲೆಬಿಸಿಗೆ ಕಾರಣವಾಗಿದೆ.

Published by:HR Ramesh
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು