ವಿಜಯಪುರ(ನವೆಂಬರ್. 22): ಮರಾಠ ಸಮುದಾಯ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆ ವಿರೋಧಿಸಿ ಡಿಸೆಂಬರ್ 5 ರಂದು ಕರೆ ನೀಡಲಾಗಿರುವ ಕರ್ನಾಟಕ ಬಂದ್ ವಿರೋಧಿಸಿ ಮತ್ತು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಕನ್ನಡ ಪರ ಸಂಘಟನೆಗಳು ನಡೆಸಿದ ಪ್ರತಿಭಟನೆ ಖಂಡಿಸಿ ನಾನಾ ಸಂಘಟನೆಗಳು ಸಾಂಕೇತಿಕ ಪ್ರತಿಭಟನೆ ನಡೆಸಿದವು. ವಿಜಯಪುರ ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದ ಎದುರು ಸ್ವಾಮಿ ವಿವೇಕಾನಂದ ಸೇನೆ, ನಾನಾ ದಲಿತ ಪರ, ಪ್ರಗತಿ ಪರ, ಹಿಂದೂ ಪರ ಸಂಘಟನೆಗಳು, ಯತ್ನಾಳ ಅಭಿಮಾನಿ ಬಳಗದ ಕಾರ್ಯಕರ್ತರಿಂದ ಪ್ರತಿಭಟನೆ ನಡೆಸಲಾಯಿತು. ಈ ಸಂದರ್ಭದಲ್ಲಿ ವಾಟಾಳ್ ನಾಗರಾಜ್ ಮತ್ತು ನಾರಾಯಣಗೌಡ ಅವರ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದು ದಹನ ಮಾಡುವ ಮೂಲಕ ನಾನಾ ಸಂಘಟನೆಗಳ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಸ್ವಾಮಿ ವಿವೇಕಾನಂದ ಸೇನೆ ಸಂಸ್ಥಾಪಕ ರಾಘವ ಅಣ್ಣಿಗೇರಿ, ವಾಟಾಳ್ ನಾಗರಾಜ್ ವಿರುದ್ಧ ಕಟುವಾಗಿ ಟೀಕಿಸಿದರು.
ಬಡವಿರೋಧಿ, ಜನವಿರೋಧಿ, ಕೂಲಿ ಕಾರ್ಮಿಕ ವಿರುದ್ಧವಾಗಿರುವ ಕರ್ನಾಟಕ ಬಂದ್ ಗೆ ವಾಟಾಳ ನಾಗರಾಜ್ ಕರೆ ನೀಡಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಇವರ ಡೆಪಾಸಿಟ್ ಜಪ್ತಿಯಾಗಿದೆ. ಇವರಿಗೆ ನಾಚಿಕೆಯಾಗಬೇಕು. ಕರ್ನಾಟಕ ಬಂದ್ ಮಾಡಿಸುವುದು ಬಿಡಲಿ ನಿಮ್ಮ ವಾರ್ಡ್ ಬಂದ್ ಮಾಡಿಸಿ ತೋರಿಸಿ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಎಷ್ಟು ಹಣ ಲೂಟಿ ಮಾಡಿದ್ದೀರಿ? 50 ಲಕ್ಷ ರೂಪಾಯಿ ಹಣವನ್ನು ಲೂಟಿ ಮಾಡಿ ಯಾವ ಕನ್ನಡ ಸಂಘಟನೆಗಳೂ ಯಾಕೆ ನೀಡಿಲ್ಲ. ಅದು ನಮ್ಮ ತೆರಿಗೆ ಹಣ. ತನ್ನ ಮಕ್ಕಳನ್ನು ಇಂಗ್ಲಿಷ್ ಶಾಲೆಗೆ ಹಾಕಿ ಏನು ಕನ್ನಡ ರಕ್ಷಣೆ ಮಾಡುತ್ತೀರಿ? ನಿಮ್ಮಿಂದ ನಾವು ಕನ್ನಡ ಕಲಿಯಬೇಕಿಲ್ಲಎಂದು ವಾಟಾಳ್ ನಾಗರಾಜ ಮತ್ತು ನಾರಾಯಣಗೌಡ ವಿರುದ್ದ ಆಕ್ರೋಶ ಹೊರ ಹಾಕಿದರು.
ನಾವೆಲ್ಲ ಅಪ್ಪಟ ಕನ್ನಡಿಗರು. ಎಲ್ಲ ಸಂಘಟನೆಗಳು ಒಂದೇ ಇದ್ದರೆ ಇಷ್ಟೆಲ್ಲ ಸಂಘಟನೆಗಳು ಯಾಕಿವೆ ? ಕನ್ನಡ ಸಾಹಿತ್ಯ ಪರಿಷತ್ ಅಡಿಯಲ್ಲಿ ಎಲ್ಲ ಹೋರಾಟ ಮಾಡಬೇಕಿತ್ತು. ಹಣ ಲೂಟಿ ಮಾಡಲು ಸಾರ್ವಜನಿಕರ ತೆರಿಗೆ ಹಣ ಲೂಟಿ ಮಾಡಲು ಈ ಸಂಘಟನೆಗಳನ್ನು ಮಾಡಿಕೊಂಡಿದ್ದಾರೆ. ಕೇಂದ್ರದ ಇಡಿ, ಎಸಿಬಿ, ಸಿಎಂ, ಗೃಹ ಇಲಾಖೆ, ಎಲ್ಲ ರಾಜಕಾರಣಿಗಳು ಸೇರಿ ವಾಟಾಳ್ ನಾಗರಾಜ್ ಅವರ ಹಣದ ಮೂಲ ಪತ್ತೆ ಮಾಡಿ ಎಂದು ಅವರು ಆಗ್ರಹಿಸಿದರು.
ಇದನ್ನೂ ಓದಿ : ರಾಜ್ಯದಲ್ಲಿ ಶಾಲೆಗಳನ್ನು ಆರಂಭಿಸುವ ಕುರಿತು ನಾಳೆ ಸಿಎಂ ನೇತ್ರತ್ವದಲ್ಲಿ ಮಹತ್ವದ ಸಭೆ
ಪದೇ ಪದೇ ಕರ್ನಾಟಕ ಬಂದ್ ಮಾಡಲು ಕರ್ನಾಟಕ ನಿಮ್ಮ ಅಪ್ಪಂದಲ್ಲ. ಬಂದ್ ಮಾಡುವುದರಿಂದ ಮಹಾರಾಷ್ಟ್ರದ ಶಿವಸೇನೆ, ಎಂಇಎಸ್, ಅಜಿತ್ ಪವಾರ್ ಹೈರಾಣಾಗುತ್ತಾರಾ? ಆರೂವರೆ ಕೋಟಿ ಕನ್ನಡಿಗರನ್ನು ತೊಂದರೆಗೆ ಸಿಲುಕಿಸಿದಂತಾಗುತ್ತದೆ. ಬಂದ್ ಮಾಡಲು ನಾಚಿಕೆಯಾಗಬೇಕು ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ