ವಿಜಯಪುರ (ಆಗಸ್ಟ್ 25); "ಕಾಂಗ್ರೆಸ್ ನಾಯಕ ಮಾಜಿ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಟೀಕೆ ಮಾಡುತ್ತಿರುವ ದಾಟಿ ಸರಿಯಲ್ಲ" ಎಂದು ಮಾಜಿ ಶಾಸಕ ಪಂಚಮಸಾಲಿ ಸಮುದಾಯದ ಮುಖಂಡ ವಿಜಯಾನಂದ ಕಾಶಪ್ಪನವರ್ ಕಿಡಿಕಾರಿದ್ದಾರೆ. ಈ ಹಿಂದೆ ರಾಹುಲ್ ಗಾಂಧಿ ಬಗ್ಗೆ ಅವಹೇಳನಕರ ರೀತಿಯಲ್ಲಿ ಟೀಕೆ ಮಾಡುತ್ತಿದ್ದ ಯತ್ನಾಳ್, "ರಾಹುಲ್ ಗಾಂಧಿ ಓರ್ವ ಹುಚ್ಚ. ಆತ ಹಿಂದೂನಾ? ಅಥವಾ ಕ್ರಶ್ಚಿಯನ್ನಾ ಯಾರಿಗೂ ಗೊತ್ತಿಲ್ಲ.. ಎಂಬ ರೀತಿಯಲ್ಲಿ ಅಸಭ್ಯ ಭಾಷೆ ಬಳಸಿ ಟೀಕೆ ಮಾಡಿದ್ದಾರೆ. ಇದು ಸಾಮಾನ್ಯವಾಗಿ ಕಾಂಗ್ರೆಸ್ ನಾಯಕರನ್ನು ಕೆರಳಿಸಿತ್ತು. ಆದರೆ, ಇದೀಗ ಈ ಬಗ್ಗೆ ಕೈ ನಾಯಕ ವಿಜಯಾನಂದ ಕಾಶಪ್ಪನವರ್ ಧ್ವನಿ ಎತ್ತಿದ್ದಾರೆ.
ಈ ಬಗ್ಗೆ ಇಂದು ವಿಜಯಪುರದಲ್ಲಿ ಮಾತನಾಡಿರುವ ವಿಜಯಾನಂದ ಕಾಶಪ್ಪನವರ್, "ಕಾಂಗ್ರೆಸ್ ವಿಚಾರ ಬಂದ್ರೆ ನಾನು ಹುಟ್ಟಾ ಕಾಂಗ್ರೆಸಿಗ. ಯತ್ನಾಳ್ ಮಾತನಾಡಿದ್ದು ತಪ್ಪು, ಯಾರೂ ನಾಯಕರ ಬಗ್ಗೆ ಮಾತನಾಡಬಾರದು. ನಾನು ಇದನ್ನು ಖಂಡಿಸ್ತೀನಿ. ವಾಜಪೇಯಿ ಬಗ್ಗೆ ಮಾತನಾಡಿದ್ರೆ ಅವರು ಸುಮ್ಮನಿರ್ತಾರಾ? ಸಮಯದಾಯದ ಹೋರಾಟ ಬೇರೆ, ರಾಜಕೀಯ ವಿಚಾರ ಬೇರೆ. ರಾಜಕೀಯ ಬಂದಾಗ ನಾನು ಇದನ್ನು ಖಂಡಿಸಬೇಕಾಗುತ್ತದೆ. ಯತ್ನಾಳ್ ಜೊತೆಗೆ ಮಾತನಾಡ್ತೀನಿ, ಈ ತರಹ ಯತ್ನಾಳ್ ಮಾತನಾಡಬಾರದು" ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದೇ ಸಂದರ್ಭದಲ್ಲಿ ಇತ್ತೀಚೆಗೆ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಮಾಜಿ ಶಾಸಕ ವಿನಯ್ ಕುಲಕರ್ಣಿ ಸಹ ಪಂಚಮಸಾಲಿ ಹೋರಾಟದ ಬಗ್ಗೆ ಮಾತನಾಡಿದ್ದು, "ಪಂಚಮಸಾಲಿ ಹೋರಾಟಕ್ಕೆ ನನ್ನ ಬೆಂಬಲ ಇದೆ. ಶ್ರೀಗಳು ಹೋರಾಟ ಪ್ರಾರಂಭ ಮಾಡಿದ್ದಾರೆ, ಅವರ ಜೊತೆ ಸದಾ ಇರ್ತೀವಿ. ನಮ್ಮ ಸಮುದಾಯಕ್ಕೆ ನ್ಯಾಯ ಸಿಗಲಿದೆ" ಎಂದು ತಿಳಿಸಿದ್ದಾರೆ.
ಇನ್ನೂ ತಮ್ಮ ಮೇಲಿನ ಪ್ರಕರಣದ ಬಗ್ಗೆಯೂ ಮಾತನಾಡಿರುವ ಅವರು, "ಕೋರ್ಟ್ ಹೇಳಿದ ಇತಿಮಿತಿಯಲ್ಲೇ ನಾನು ನಡೆದುಕೊಳ್ಳುತ್ತೀನಿ. ಕೋರ್ಟ್ ಹೇಳಿದ ವಿಚಾರಗಳು ನನ್ನ ಅರಿವಿನಲ್ಲಿದೆ. ನ್ಯಾಯಾಂಗ ವ್ಯವಸ್ಥೆ ಮೇಲೆ ಸಂಪೂರ್ಣ ವಿಶ್ವಾಸ ಇದೆ. ನಾನು ನಿರಪರಾಧಿಯಾಗಿ ಹೊರ ಬರ್ತೀನಿ ಅನ್ನೋ ವಿಶ್ವಾಸವಿದೆ. ಷಡ್ಯಂತ್ರ ಅಥವಾ ಪ್ರಕರಣದ ವಿಚಾರದಲ್ಲಿ ನಾನು ಏನೇನೂ ಮಾತನಾಡಲ್ಲ. ಆ ವಿಚಾರ ಕೇಳಬೇಡಿ, ನಾನು ಹೇಳುವುದಿಲ್ಲ" ಎಂದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ