Yakshagana; ಯಕ್ಷ ಕಲಾಲೋಕದ‌ ಚಟುವಟಿಕೆ ಸ್ಥಬ್ದ; ಆಲಿಸುವವರಿಲ್ಲ ಕಲಾವಿದರ ಸಂಕಷ್ಟ!

ಕೋವಿಡ್‌ ಸಂಕಷ್ಟದಲ್ಲಿ ಕಲಾವಿದರು ಕಾರ್ಯಕ್ರಮಗಳಿಲ್ಲದೆ ಸಾಕಷ್ಟು ಸಮಸ್ಯೆಗೆ ಸಿಲುಕಿದ್ದಾರೆ. ಅವರ ಕಷ್ಟಗಳನ್ನು ಸರಕಾರಕ್ಕೆ ಮನವರಿಕೆ ಮಾಡಿ ಹೆಚ್ಚಿನ ಸಹಕಾರ ನೀಡುವ ಹಾಗೂ ಸರಕಾರದಿಂದ ಈಗಾಗಲೇ ಜಾರಿಯಾದ ಯೋಜನೆಗಳನ್ನು ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಸಂಪರ್ಕ ಸೇತುವಾಗಿ ಈ ಅಕಾಡೆಮಿಗಳು ಕಾರ್ಯ ನಿರ್ವಹಿಸಬೇಕಿತ್ತು. ಆದರೆ ನಾಯಕನಿಲ್ಲದೆ ಇದ್ಯಾವುದೂ ಸಾಧ್ಯವಾಗಿಲ್ಲ ಅನ್ನೋದು ವಿಪರ್ಯಾಸವೇ ಸರಿ.

ಯಕ್ಷಗಾನ ಕಲಾವಿದರ ಪ್ರಾತಿನಿಧಿಕ ಚಿತ್ರ.

ಯಕ್ಷಗಾನ ಕಲಾವಿದರ ಪ್ರಾತಿನಿಧಿಕ ಚಿತ್ರ.

  • Share this:
ಉಡುಪಿ: ಕರ್ನಾಟಕ ರಾಜ್ಯ ಯಕ್ಷಗಾನ ಅಕಾಡೆಮಿ ಹಾಗೂ ಬಯಲಾಟ ಅಕಾಡೆಮಿಗೆ ಅಧ್ಯಕ್ಷರಿಲ್ಲದೆ ಹಲವು ತಿಂಗಳು ಕಳೆದಿದ್ದು, ಅವುಗಳ ಚಟುವಟಿಕೆ ಸಂಪೂರ್ಣ ಸ್ತಬ್ಧವಾಗಿದೆ. ಹೌದು,‌ ಇಂದಿನ ಕೋವಿಡ್‌ ಸಂಕಷ್ಟದ ಸಮಯದಲ್ಲಿ ಕಲಾವಿದರ ಸಮಸ್ಯೆಗಳನ್ನು ಸರಕಾರಕ್ಕೆ ಮನವರಿಕೆ ಮಾಡಲೂ ಸಾಧ್ಯವಾಗುತ್ತಿಲ್ಲ.‌ ಮೊದಲಿನಿಂದಲೂ ಸರ್ಕಾರ ಯಕ್ಷ ಕಲಾವಿದರ ಕುರಿತು ಅಷ್ಟೊಂದು ಆಸಕ್ತಿ ವಹಿಸಿಲ್ಲ.‌ ಹೀಗಾಗಿ ಕಲಾವಿದರು ಕಷ್ಟದ ಜೀವನದಲ್ಲೇ ಕಲೆಯನ್ನು ಆರಾಧಿಸುತ್ತಾ ಬಂದಿದ್ದಾರೆ. ಇನ್ನು ಕೋವಿಡ್ ಸಮಯದಲ್ಲಿ ‌ಲಾಕ್ ಡೌನ್ ಆದಾಗಲೂ ಕಲಾವಿದರಿಗೆ ಸರಿಯಾದ ಪ್ರೊತ್ಸಾಹ ಸಿಗದೆ ಕಂಗಾಲಾಗಿದ್ದರು. ಇದೀಗ ಕೋವಿಡ್ ಎರಡನೇ ಅಲೆ‌ ಲಾಕ್ ಡೌನ್ ಬಳಿಕವೂ ಯಕ್ಷಲೋಕದ ಸಂಕಷ್ಟ ಸುಧಾರಿಸಿಲ್ಲ.‌ ಕಲಾವಿದರ ಜೀವನವೇ ಸಂಕಷ್ಟಕ್ಕೆ ಸಿಲುಕಿದೆ. ಅದೆಷ್ಟೋ ಹರಕೆ ಆಟಗಳು ಕೋವಿಡ್ ‌ನಿಂದ ನಿಂತಿರುವ ಕಾರಣ ಕಲಾವಿದರು ಬೀದಿಗೆ ಬೀಳುವಂತಾಗಿದೆ.

ಇನ್ನು ಮುಖ್ಯವಾಗಿ, ಕರ್ನಾಟಕ ಬಯಲಾಟ ಅಕಾಡೆಮಿ ಅಧ್ಯಕ್ಷರಾಗಿದ್ದ ಡಾ. ಟಿ.ಬಿ. ಸೊಲಬಕ್ಕನವರ್‌ 2020ರ ನ. 19ರಂದು ಅಸೌಖ್ಯದಿಂದ ನಿಧನ ಹೊಂದಿದ್ದರು. ಅಂತೆಯೇ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ. ಎಂ.ಎ. ಹೆಗಡೆ ಅವರು 2021 ಏಪ್ರಿಲ್ 18ರಂದು ನಿಧನ ಹೊಂದಿದ್ದರು. ಹೀಗೆ ತೆರವಾದ ಎರಡೂ ಅಕಾಡೆಮಿಗಳ ಅಧ್ಯಕ್ಷ ಸ್ಥಾನಕ್ಕೆ ಅರ್ಹರನ್ನು ನಿಯೋಜಿಸುವ ಕಾರ್ಯ ಸರಕಾರದಿಂದ ಇದುವರೆಗೆ ನಡೆದಿಲ್ಲ. ಯಕ್ಷಗಾನ ಅಕಾಡೆಮಿಯಿಂದ ತರಬೇತಿ ಶಿಬಿರ, ದಾಖಲೀಕರಣ, ಹಿರಿಯ ಕಲಾವಿದರಿಗೆ ಗೌರವಾರ್ಪಣೆ, ನೆನಪಿನ ಬುತ್ತಿ ಎನ್ನುವ  ಆನ್‌ಲೈನ್‌ ಲೈವ್‌ ಮೂಲಕ ಹಿರಿಯ ಕಲಾವಿದರನ್ನು ಪರಿಚಯಿಸುವ ಕಾರ್ಯ ಮುಂತಾದ ಕಾರ್ಯ ಕ್ರಮ ಚಾಲ್ತಿಯಲ್ಲಿದ್ದವು. ಪ್ರಸ್ತುತ ಈ ಎಲ್ಲ ಕಾರ್ಯಕ್ರಮಗಳು ಸ್ಥಗಿತಗೊಂಡಿವೆ ಹಾಗೂ ರಾಜ್ಯ ಮಟ್ಟದ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಕೂಡ ನಡೆದಿಲ್ಲ. ಬಯಲಾಟ ಅಕಾಡೆಮಿಯಲ್ಲೂ ಇದೇ ರೀತಿ ಹಲವು ಚಟುವಟಿಕೆಗಳು ಸ್ಥಗಿತವಾಗಿವೆ. ಎಲ್ಲ ಅಕಾಡೆಮಿಗಳಿಗೆ 3 ವರ್ಷಗಳ ಅವಧಿಗೆ ಸದಸ್ಯರು, ಅಧ್ಯಕ್ಷರನ್ನು ನೇಮಿಸಲಾಗುತ್ತದೆ. ಈಗಾಗಲೇ 2 ವರ್ಷ ಕೋವಿಡ್‌ ಕಾರಣ ಕಾರ್ಯಕ್ರಮಗಳಿಗೆ ಹಿನ್ನಡೆಯಾಗಿದ್ದು, ಇನ್ನುಳಿದ ಒಂದು ವರ್ಷ ಅವಧಿಯ ಚಟುವಟಿಕೆಗಳು ವೇಗವಾಗಿ ನಡೆಸುವ ಸಲುವಾಗಿ ಅಧ್ಯಕ್ಷರನ್ನು ಶೀಘ್ರ ನೇಮಿಸುವ ಕಾರ್ಯ ನಡೆಯಬೇಕಿದೆ.

ಇದನ್ನು ಓದಿ: Bharat Bandh: ಕೃಷಿ ಕಾನೂನು ವಿರೋಧಿಸಿ ರೈತರ ಪ್ರತಿಭಟನೆ; ಸೆ.25ಕ್ಕೆ ಭಾರತ್ ಬಂದ್​ಗೆ ಕರೆ ನೀಡಿದ ಸಂಯುಕ್ತ ಕಿಸಾನ್ ಮೋರ್ಚಾ

ಇನ್ನು ಪ್ರಮುಖವಾಗಿ ಅಕಾಡೆಮಿಯ ಮೂಲಕ ಯಾವುದೇ ಕಾರ್ಯಕ್ರಮ ಆಯೋಜಿಸಬೇಕಾದರೆ ಹಾಗೂ ಈ ಹಿಂದೆ ಹಾಕಿಕೊಂಡ ಕಾರ್ಯಕ್ರಮವನ್ನು ಮುಂದುವರಿಸಬೇಕಾದರೆ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ತೀರ್ಮಾನ ಕೈಗೊಳ್ಳಬೇಕು. ಆದರೆ ಅಧ್ಯಕ್ಷರೇ ಇಲ್ಲದ ಕಾರಣ ಬಯಲಾಟ ಅಕಾಡೆಮಿಗೆ 9 ತಿಂಗಳಿಂದ ಹಾಗೂ ಯಕ್ಷಗಾನ ಅಕಾಡೆಮಿಗೆ 5 ತಿಂಗಳಿಂದ ಸಭೆ ನಡೆದಿಲ್ಲ. ಕೋವಿಡ್‌ ಸಂಕಷ್ಟದಲ್ಲಿ ಕಲಾವಿದರು ಕಾರ್ಯಕ್ರಮಗಳಿಲ್ಲದೆ ಸಾಕಷ್ಟು ಸಮಸ್ಯೆಗೆ ಸಿಲುಕಿದ್ದಾರೆ. ಅವರ ಕಷ್ಟಗಳನ್ನು ಸರಕಾರಕ್ಕೆ ಮನವರಿಕೆ ಮಾಡಿ ಹೆಚ್ಚಿನ ಸಹಕಾರ ನೀಡುವ ಹಾಗೂ ಸರಕಾರದಿಂದ ಈಗಾಗಲೇ ಜಾರಿಯಾದ ಯೋಜನೆಗಳನ್ನು ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಸಂಪರ್ಕ ಸೇತುವಾಗಿ ಈ ಅಕಾಡೆಮಿಗಳು ಕಾರ್ಯ ನಿರ್ವಹಿಸಬೇಕಿತ್ತು. ಆದರೆ ನಾಯಕನಿಲ್ಲದೆ ಇದ್ಯಾವುದೂ ಸಾಧ್ಯವಾಗಿಲ್ಲ ಅನ್ನೋದು ವಿಪರ್ಯಾಸವೇ ಸರಿ. ಈ‌ ಬಗ್ಗೆ ಸರ್ಕಾರ ಗಮನ ಹರಿಸಬೇಕಿದೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಅನಗತ್ಯವಾಗಿ ಯಾರೂ ಮನೆಯಿಂದ ಹೊರಗೆ ಬಾರದೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕಿದೆ.

ವರದಿ-ಪರೀಕ್ಷಿತ್ ಶೇಟ್
Published by:HR Ramesh
First published: