ಒಂದೇ ಕುಟುಂಬದ 6 ಜನ ಆತ್ಮಹತ್ಯೆ ಪ್ರಕರಣ: ಸಾಲದ ಕಾಟ ಕೊಟ್ಟವರ ಪತ್ತೆಗೆ ಪೊಲೀಸರ ಹರಸಾಹಸ

ಶಹಾಪುರದ ದೋರನಹಳ್ಳಿ ಗ್ರಾದಲ್ಲಿ ಭೀಮರಾಯ ಎಂಬ ರೈತನ ಕುಟುಂಬದ ಆರು ಮಂದಿ ಸಾಲದ ಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಜ್ಯಾದ್ಯಂತ ಸದ್ದು ಮಾಡಿದೆ. ಇದಕ್ಕೆ ಕಾರಣರಾದವರ ಪತ್ತೆ ಹಚ್ಚಲು ಪೊಲೀಸರಿಗೆ ಇನ್ನೂ ಸಾಧ್ಯವಾಗಿಲ್ಲ.

ಶಹಾಪುರದ ದೋರನಹಳ್ಳಿ ಗ್ರಾಮಸ್ಥರು

ಶಹಾಪುರದ ದೋರನಹಳ್ಳಿ ಗ್ರಾಮಸ್ಥರು

  • Share this:
ಯಾದಗಿರಿ: ಸಾಲ ಬಾಧೆಯಿಂದ ಆ ರೈತ ಕುಟುಂಬ ಆತ್ಮಹತ್ಯೆ ದಾರಿ ತುಳಿದಿದೆ...! ಒಂದೇ ಕುಟುಂಬದ ಆರು ಜನ ಆತ್ಮಹತ್ಯೆ ಮಾಡಿಕೊಂಡು 13 ದಿನಗಳು ಗತಿಸಿವೆ...! ಆತ್ಮಹತ್ಯೆಗೆ ಕಾರಣರಾದವರ ಪತ್ತೆ ಹಚ್ಚಲು ಪೊಲೀಸರು ಇನ್ನೂ ಹರಸಾಹಸ ಪಡುತ್ತಿದ್ದಾರೆ. ಯಾರಾದರು ಸಾಲದ ಕಿರುಕುಳ ಕೊಟ್ಟು ಆತ್ಮಹತ್ಯೆಗೆ ಕಾರಣರಾದರಾ...! ಸಾಲದ ಹಣದ ಮೇಲೆ ಬಡ್ಡಿ ಚಕ್ರಬಡ್ಡಿ ಹಣದ ವಸೂಲಿಗೆ ಸಾಲಗಾರು ನಿಂತರಾ.. ಸಾಲ ಪಾವತಿಸಲಾಗದೆ ಆತ್ಮಹತ್ಯೆ ದಾರಿ ಕಂಡಿದ್ದು ಯಾಕೆ..! ಸಾಲದ ಕಾಟ ಕೊಟ್ಟವರಾರು...!

ಕಳೆದ ತಿಂಗಳ 28 ರಂದು ಒಂದೇ ಕುಟುಂಬದ ಆರು ಜನ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೇಳಿ ಯಾದಗಿರಿ ಜಿಲ್ಲೆಯ ಜನರೇ ಬೆಚ್ಚಿ ಬಿದ್ದಿದ್ದರು...! ಮಕ್ಕಳ ಸಮೇತ ತಂದೆ ಹಾಗೂ ತಾಯಿಯಂದಿರು ಆತ್ಮಹತ್ಯೆ ಮಾಡಿಕೊಂಡಿದ್ದು ಕರುಳು ಚುರ್ ಎನ್ನುವಂತಿತ್ತು..! ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮದಲ್ಲಿ ನಡೆದ ಘಟನೆಯು ಕಣ್ಣೀರು ಹಾಕುವಂತಾಗಿತ್ತು. ಒಂದೇ ಕುಟುಂಬ ಆರು ಜನ ಆತ್ಮಹತ್ಯೆ ಮಾಡಿಕೊಂಡಿದ್ದು ಯಾರಿಗೂ ಅರಗಿಸಿಕೊಳ್ಳಲು ಆಗಲ್ಲ. ದೋರನಹಳ್ಳಿ ಗ್ರಾಮದ ರೈತ ಭೀಮರಾಯ, ಭೀಮರಾಯನ ಪತ್ನಿ ಶಾಂತಮ್ಮ ಹಾಗೂ ಮಕ್ಕಳಾದ ಸುಮಿತ್ರಾ, ಶ್ರೀದೇವಿ, ಶಿವರಾಜ ಹಾಗೂ ಲಕ್ಷ್ಮಿ ಆರು ಜನ ಆತ್ಮಹತ್ಯೆ ಮಾಡಿಕೊಂಡಿದ್ದು ಬೆಚ್ಚಿ ಬಿಳುವಂತಾಗಿತ್ತು. ಸಾಲಬಾಧೆಯಿಂದ ಬಳಲಿದ ಭೀಮರಾಯ ತನ್ನ ಹೆಂಡತಿ ಹಾಗೂ ಮಕ್ಕಳ ಸಮೇತ ತಮ್ಮದೇ ಬಾವಿಗೆ ಹಾರಿ ಆತ್ಮಹತ್ಯೆ ದಾರಿ ತುಳಿದಿದ್ದಾರೆ. ದೋರನಹಳ್ಳಿ ಗ್ರಾಮದ ಹೊಲದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಘಟನೆ ಬಗ್ಗೆ ಶಹಾಪುರ ಪೊಲೀಸ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಈ ಬಗ್ಗೆ ನ್ಯೂಸ್ 18 ಕನ್ನಡಕ್ಕೆ ಎಸ್ಪಿ ವೇದಮೂರ್ತಿ ಮಾತನಾಡಿ, ರೈತ ಭೀಮರಾಯ ಸುಮಾರು 20 ಲಕ್ಷ ರೂ ಸಾಲ ಮಾಡಿಕೊಂಡಿದ್ದರು. ಒಂದೇ ಕುಟುಂಬದ ಆರು ಜನ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಹಲವು ಆಯಾಮಗಳಲ್ಲಿ ತನೀಖೆ ನಡೆಸಲಾಗುತ್ತಿದೆ ಎಂದರು.

ಇದನ್ನೂ ಓದಿ: CP Yogeeshwara - ಜೈಲಿಗೆ ಹೋದವರನ್ನ ಬಿಜೆಪಿಗೆ ಸೇರಿಸಲ್ಲ: ಡಿಕೆಶಿಗೆ ಸಚಿವ ಸಿ.ಪಿ.ವೈ. ಲೇವಡಿ

ಸಾಲಬಾಧೆಯಿಂದ ಜೀವನ ನಡೆಸಲು ಸಂಕಷ್ಟ ಎದುರಿಸಿದ ಭೀಮರಾಯ ಯಾರ್ಯಾರ ಹತ್ತಿರ ಎಷ್ಟು ಸಾಲ ಪಡೆದಿದ್ದು, ಯಾರು ಕಿರುಕುಳ ಕೊಟ್ಟಿದ್ದಾರೆಂಬುದು ಪೊಲೀಸರಿಗೆ ಪತ್ತೆ ಹಚ್ಚುವುದು ಸವಾಲ್ ಆಗಿದೆ. ಈ ನಿಟ್ಟಿನಲ್ಲಿ ಪೊಲೀಸರಿಗೆ ಇನ್ನೂ ಯಾವುದೇ ಸುಳಿವು ಸಿಗುತ್ತಿಲ್ಲ.

ಈ ಪ್ರಕರಣದಲ್ಲಿ ಇನ್ನೂ ಕೆಲ ಅನುಮಾನಗಳಿಗೆ ಉತ್ತರ ಸಿಗಬೇಕಿದೆ. ಭೀಮರಾಯ ಯಾಕೆ ಏಕಾಏಕಿ ತನ್ನ ಹೆಂಡತಿ ಹಾಗೂ ‌ನಾಲ್ಕು‌ ಮಕ್ಕಳ ಜೊತೆ ಆತ್ಮಹತ್ಯೆ ಮಾಡಿಕೊಂಡನು ಎಂಬ ಬಲವಾದ ಅನುಮಾನ ಕಾಡುತ್ತದೆ. ಸಾಲಬಾಧೆ ಇರುವ ಬಗ್ಗೆ ತಮ್ಮ ನಾಲ್ಕು ಜನ ಸಹೋದರರಿಗೆ ‌ಕೂಡ ಅವರು ನೋವು ತೋಡಿಕೊಂಡಿಲ್ಲ.

ಭೀಮರಾಯ ತನಗೆ ಸಾಲದ ಬಾಧೆ ಇದೆ ಎಂದು ನೋವು ತೋಡಿಕೊಂಡಿದ್ದರೆ ನಾವೇ ಹೊಲ ಮಾರಾಟ ಮಾಡಿ ಸಾಲ ಕಟ್ಟಿ ನಮ್ಮ ತಮ್ಮನ ಹಾಗೂ ಎಲ್ಲರ ಜೀವ ಉಳಿಸುತ್ತಿದ್ದೆವು. ಆದರೆ, ನಮಗೆ ಆತ ಯಾವುದೇ ಕಷ್ಟ ಹೇಳಿಕೊಳ್ಳಲಿಲ್ಲ ಎಂದು ಮೃತ ರೈತ ಭೀಮರಾಯನ ಸಹೋದರ ಮಲ್ಲಿಕಾರ್ಜುನ ಹೇಳುತ್ತಾನೆ.

ಮೃತ ರೈತನ ಮಗಳಾದ ಓರ್ವ ಪುತ್ರಿ ಚಂದ್ರಯ ಮಾತ್ರ ಮದುವೆಯಾದ ಹಿನ್ನೆಲೆ ಬದುಕಿದ್ದಾಳೆ. ಆಕೆಗೂ ತನ್ನ ಅಪ್ಪನ ಹಣಕಾಸು ಸಂಕಷ್ಟವಾಗಲೀ ಅಥವಾ ಬೇರೆ ಯಾವುದೇ ಮಾಹಿತಿ ಇಲ್ಲ. ಸದ್ಯ, ಮೃತ ಕುಟುಂಬದ ಸದಸ್ಯರ ಅಕ್ರಂದನ ಮುಗಿಲು ಮುಟ್ಟಿದೆ. ಪೊಲೀಸರು ಈ ಬಗ್ಗೆ ತನೀಖೆ ನಡೆಸಿ, ಸಾಲದ ಕಾಟ ಕೊಟ್ಟು ಆರು ಜನರ ಸಾವಿಗೆ ಕಾರಣರಾದವರ ಬಗ್ಗೆ ಪತ್ತೆ ಹಚ್ಚಿ ಕಠಿಣ ಕ್ರಮಕೈಗೊಳ್ಳಬೇಕಿದೆ.

ವರದಿ: ನಾಗಪ್ಪ ಮಾಲಿಪಾಟೀಲ
Published by:Vijayasarthy SN
First published: