ಯಾದಗಿರಿ: ಭೀಮಾ ನದಿ ಪ್ರವಾಹಕ್ಕೆ ಈಗ ಮಠ ಹಾಗೂ ದೇವಾಲಯ ಜಲಾವೃತವಾಗಿದ್ದು ಜಿಲ್ಲಾಡಳಿತ ಮುಂಜಾಗ್ರತೆ ವಹಿಸಿ ನದಿ ತೀರದ ಜನರನ್ನು ಸುರಕ್ಷತೆ ಸ್ಥಳಕ್ಕೆ ತೆರಳುವಂತೆ ಸೂಚಿಸಿದೆ. ಆದರೆ, ಕಾಳಿಕಾದೇವಿ ಮಂದಿರದ ಸ್ವಾಮಿಗಳು ಮಾತ್ರ ಅನುಷ್ಠಾನ ಪೂರ್ಣ ಆಗುವವರೆಗೂ ಎಲ್ಲಿಯೂ ಬರುವುದಿಲ್ಲ ಎಂದು ಹಠ ಹಿಡಿದು ಕುಳಿತಿರುವ ಘಟನೆ ನಡೆದಿದೆ.
ತಹಶಿಲ್ದಾರಗೆ ಸ್ವಾಮಿ ಎಚ್ಚರಿಕೆ: ಭೀಮಾ ನದಿ ತೀರದಲ್ಲಿರುವ ವಿಶ್ವಾರಾಧ್ಯ ಆನಂದಾಶ್ರಮ ಹಾಗೂ ಕಾಳಿಕಾದೇವಿ ಮಂದಿರ ಮುಳುಗಡೆಯಾದ ಹಿನ್ನೆಲೆ ಸ್ಥಳಕ್ಕೆ ಸಹಾಯಕ ಆಯುಕ್ತ ಶಂಕರಗೌಡ ಸೋಮನಾಳ, ತಹಶಿಲ್ದಾರ ಜಗನ್ನಾಥರೆಡ್ಡಿ ಅವರು ಭೇಟಿ ನೀಡಿ ಪರಿಶೀಲನೆ ಮಾಡಿದರು. ಈ ವೇಳೆ ತಹಶಿಲ್ದಾರ ಜಗನ್ನಾಥರೆಡ್ಡಿ ಅವರು ಮಠದ ಮಲ್ಲಣ್ಣಪ್ಪ ಸ್ವಾಮಿ ಹತ್ತಿರ ತೆರಳಿ ಮತ್ತೆ ಭೀಮಾನದಿಗೆ ನೀರು ಹರಿವು ಹೆಚ್ಚಳವಾದರೆ ಸಮಸ್ಯೆಯಾಗಲಿದ್ದು ತಾವು ಸುರಕ್ಷತೆ ಸ್ಥಳಕ್ಕೆ ತೆರಳಬೇಕೆಂದು ಸೂಚಿಸಿದರು. ಇದಕ್ಕೆ ಗರಂ ಆದ ಸ್ವಾಮಿ, ಸಿಎಂ ಬಂದರೂ, ಮಿಲಿಟರಿಯವರು ಬಂದರೂ ನಾನು ಅನುಷ್ಠಾನ ಅಪೂರ್ಣಗೊಳಿಸಿ ಮಂದಿರ ಬಿಟ್ಟು ತೆರಳಲ್ಲ. ಒಂದು ವೇಳೆ ಒತ್ತಾಯವಾಗಿ ಕರೆದುಕೊಂಡು ಹೋದರೆ ವಿಷ ಸೇವಿಸಿ ಸಾಯುತ್ತೇನೆಂದು ಎಚ್ಚರಿಸಿದರು.
ಇದನ್ನೂ ಓದಿ: ರಾಜ್ಯಾದ್ಯಂತ ಭಾರೀ ಮಳೆ; ಸಿಡಿಲಿಗೆ ಐವರು ರೈತರು, ಹತ್ತಾರು ಜಾನುವಾರು ಬಲಿ
ನಮಗೆ ದೇವರೇ ಕಾಪಾಡುತ್ತಾನೆ...!
ಒಂದು ವೇಳೆ ನೀರು ಹೆಚ್ಚು ಬಂದರೆ ಹೋಗುತ್ತೇನೆ. ಸದ್ಯಕ್ಕೆ ಈ ಜಾಗ ಬಿಟ್ಟು ಹೊಗಲ್ಲ. ನೀರು ಕಡಿಮೆಯಾಗುತ್ತಿದೆ. ನಾವು ವಿಶ್ವರಾಧ್ಯ, ಕಾಳಿಕಾದೇವಿ ನಂಬಿಕೊಂಡು ಕುಳಿತಿದ್ದೀವಿ. ನನಗೆ ಹಾಗೂ ಭಕ್ತರಿಗೆ ಕಾಪಾಡುತ್ತಾನೆ. ನವರಾತ್ರಿ ಅನುಷ್ಠಾನ ಮಾಡುತ್ತಿದ್ದು, ನೀರು ಬಂದಿವೆಂದು ಸಂಕಷ್ಟ ಬಂದಾಗ ದೇವರನ್ನು ಬಿಟ್ಟು ಹೋದರೆ ಹೇಗೆ? ಚೆನ್ನಾಗಿ ಇದ್ದಾಗ ಮಾತ್ರ ನಮಗೆ ದೇವರು ಬೇಕಾ? ಹೀಗಾಗಿ ಈಗ ಸಂಕಷ್ಟ ಬಂದಾಗ ನಾವು ಮಂದಿರ ಬಿಟ್ಟು ತೆರಳಲ್ಲ ಎಂದು ನ್ಯೂಸ್ 18 ಕನ್ನಡಕ್ಕೆ ಮಲ್ಲಣಪ್ಪ ಸ್ವಾಮಿ ಹೇಳಿದ್ದಾರೆ. ಅದೇನೇ ಇರಲಿ, ಎಷ್ಟೇ ಸಂಕಷ್ಟ ಬರಲಿ ದೇವಿ ಪೂಜೆ ಮಾತ್ರ ಬಿಡಲ್ಲವೆಂದು ಸ್ವಾಮಿ ಮತ್ತೆ ಭಕ್ತಿ ಪರಕಾಷ್ಠೆ ಮೆರೆದಿದ್ದಾರೆ.
ಆದರೆ, ಪ್ರವಾಹ ಬಂದಾಗ ಭಕ್ತರಿಗೆ ಮಾದರಿಯಾಗಿರಬೇಕಾದ ಸ್ವಾಮಿ ಈಗ ದೇವರ ಹೆಸರಿನಲ್ಲಿ ಹಠ ಹೀಡಿದು ಕುಳಿತಿರುವುದು ಜಿಲ್ಲಾಡಳಿತಕ್ಕೆ ತಲೆನೋವಾಗಿದೆ.
ವರದಿ: ನಾಗಪ್ಪ ಮಾಲಿಪಾಟೀಲ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ