Yadagiri Farmers Protest: ಜೀವ ಹೋದರೂ ಪರವಾಗಿಲ್ಲ ಕೈಗಾರಿಕೆ ಸ್ಥಾಪನೆಗೆ ಭೂಮಿ ನೀಡಲ್ಲ: ಸರಕಾರದ ವಿರುದ್ಧ ಅನ್ನದಾತರ ಅಕ್ರೋಶ...!

2011 ನೇ ಸಾಲಿನಲ್ಲಿ ಭೂಮಿ ಕಳೆದುಕೊಂಡ ರೈತರಿಗೆ ಇನ್ನೂ ಸೂಕ್ತ ಪರಿಹಾರ ಸಿಕ್ಕಿಲ್ಲ. ಇಂತಹದರ ನಡುವೆ ಸರಕಾರ ಇದ್ದ ಭೂಮಿಯಲ್ಲಿ ಕೈಗಾರಿಕಾ ಆರಂಭ ಮಾಡದೆ ಮತ್ತೆ ಭೂಮಿ ಸ್ವಾಧೀನ ಪಡಿಸಿಕೊಳ್ಳಲು ಮುಂದಾಗಿದ್ದು ರೈತರನ್ನು ಕೆರಳಿಸಿದೆ.

ಭೂ ಸ್ವಾಧೀನದ ವಿರುದ್ಧ ಯಾದಗಿರಿ ರೈತರ ಪ್ರತಿಭಟನೆ.

ಭೂ ಸ್ವಾಧೀನದ ವಿರುದ್ಧ ಯಾದಗಿರಿ ರೈತರ ಪ್ರತಿಭಟನೆ.

  • Share this:
ಯಾದಗಿರಿ: (Yadagiri) ರಾಜ್ಯ ಸರಕಾರ ಕೈಗಾರಿಕಾ ಸ್ಥಾಪನೆಗಾಗಿ ಮತ್ತೆ 3269 ಎಕರೆ ಭೂಮಿ ಸ್ವಾಧೀನ ಪಡಿಸಿಕೊಳ್ಳಲು ಮುಂದಾಗುತ್ತಿರುವುದಕ್ಕೆ ರೈತರು (Farmers) ಸರಕಾರದ ನಡೆ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದ್ದಾರೆ. ಜೀವ ಹೋದರೂ ಪರವಾಗಿಲ್ಲ ನಾವು ಯಾವುದೇ ಕಾರಣಕ್ಕೂ ಸರಕಾರಕ್ಕೆ ಭೂಮಿ ನೀಡಲ್ಲ ಎಂದು ಕಡೆಚೂರು, ಶೆಟ್ಟಿಹಳ್ಳಿ, ರಾಮನಹಳ್ಳಿ ಹಾಗೂ ದದ್ದಲ ಗ್ರಾಮದ ರೈತರು ಈಗ ಸರಕಾರದ ವಿರುದ್ಧ ಬೃಹತ್ ಪ್ರತಿಭಟನೆ (Farmers Protest Against Government) ನಡೆಸಿ ಅಕ್ರೋಶ ವ್ಯಕ್ತಪಡಿಸಿದ್ದಾರೆ. ಯಾದಗಿರಿ ತಾಲೂಕಿನ ಕಡೇಚೂರು- ಬಾಡಿಹಾಳ ಪ್ರದೇಶದಲ್ಲಿ 2011 ನೇ ಸಾಲಿನಲ್ಲಿ ಅಂದಿನ ಸರಕಾರವು ಕೈಗಾರಿಕೆ ಸ್ಥಾಪನೆಗಾಗಿ 3200 ಎಕರೆ ಪ್ರದೇಶ ಭೂಮಿ ಸ್ವಾಧೀನ ಪಡಿಸಿಕೊಂಡಿದೆ. ಅಂದಿನ ಸರಕಾರ ಭೂಮಿ ಕಳೆದುಕೊಂಡವರಿಗೆ ಕೈಗಾರಿಕೆಯಲ್ಲಿ ಉದ್ಯೋಗ ಕಲ್ಪಿಸುವ ಭರವಸೆ ನೀಡಿ ರೈತರಿಂದ ಭೂಮಿ ಸ್ವಾಧೀನ ಪಡಿಸಿಕೊಂಡಿತ್ತು. ಆದರೆ, ಕೇವಲ ನಾಲ್ಕೈದು ಕಾರ್ಖಾನೆಗಳು ಆರಂಭವಾಗಿದ್ದು ಅವುಗಳ ಕೂಡ ಪರಿಸರಕ್ಕೆ ಮಾರಕವಾದ ಫ್ಯಾಕ್ಟರಿ ಹಾಕಿದ್ದಾರೆಂದು ರೈತರು ಅಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನೂ ಯಾವುದೇ ಬೃಹತ್ ಕೈಗಾರಿಕೆಗಳು ಆರಂಭಗೊಂಡಿಲ್ಲ. ಈಗ ಭೂಮಿ ಕಳೆದುಕೊಂಡ ರೈತರು ಉದ್ಯೋಗ ಅರಸಿ ಬೃಹತ್ ನಗರಗಳತ್ತ ವಲಸೆ ಹೋಗಿದ್ದಾರೆ. ಈಗ ಮತ್ತೆ ಸರಕಾರ 3269 ಎಕರೆ ಭೂಮಿ ಕೆಐಡಿಬಿ ಮೂಲಕ ಸ್ವಾಧೀನ ಪಡಿಸಿಕೊಳ್ಳಲು ಮುಂದಾಗಿದ್ದು, ಮತ್ತೆ ಅನ್ನದಾತರ ಅಕ್ರೋಶಕ್ಕೆ ಕಾರಣವಾಗಿದೆ. ಸರಕಾರ ಔಷಧಿ ಪಾರ್ಕ್, ಜವಳಿ ಪಾರ್ಕ್ ಆರಂಭ ಮಾಡುತ್ತೇವೆಂದು ಹೇಳಿ ಭೂಮಿ ಸ್ವಾಧೀನ ಪಡಿಸಿಕೊಳ್ಳಲು ಮುಂದಾಗಿದೆ. 2011 ನೇ ಸಾಲಿನಲ್ಲಿ ಭೂಮಿ ಕಳೆದುಕೊಂಡ ರೈತರಿಗೆ ಇನ್ನೂ ಸೂಕ್ತ ಪರಿಹಾರ ಸಿಕ್ಕಿಲ್ಲ. ಇಂತಹದರ ನಡುವೆ ಸರಕಾರ ಇದ್ದ ಭೂಮಿಯಲ್ಲಿ ಕೈಗಾರಿಕಾ ಆರಂಭ ಮಾಡದೆ ಮತ್ತೆ ಭೂಮಿ ಸ್ವಾಧೀನ ಪಡಿಸಿಕೊಳ್ಳಲು ಮುಂದಾಗಿದ್ದು ರೈತರನ್ನು ಕೆರಳಿಸಿದೆ.

ರೈತರ ಪ್ರತಿಭಟನೆ ಅಕ್ರೋಶ...!

ಯಾವುದೇ ಕಾರಣಕ್ಕು ಭೂಮಿ ನೀಡಲ್ಲ. ಸರಕಾರ ಮತ್ತೆ ಭೂಮಿ ಸ್ವಾಧೀನ ಪಡಿಸಿಕೊಳ್ಳಬಾರದು. 2011 ರಲ್ಲಿ  ಭೂಮಿ ಸ್ವಾಧೀನ ಪಡಿಸಿಕೊಂಡ ರೈತರಿಗೆ ಹೆಚ್ಚಿನ ಪರಿಹಾರ ನೀಡಬೇಕು. ಸ್ವಾಧೀನ ಪಡಿಸಿಕೊಂಡ ಭೂಮಿಯಲ್ಲಿ ಕೈಗಾರಿಕೆಗಳನ್ನು ಆರಂಭ ಮಾಡಿ ಉದ್ಯೋಗ ಅವಕಾಶ ನೀಡಬೇಕೆಂದು ಒತ್ತಾಯಿಸಿ ರೈತರು ಶೆಟ್ಟಿಹಳ್ಳಿಯ ಗ್ರಾಮದ ಹೊರಭಾಗದಲ್ಲಿ ಪ್ರತಿಭಟನೆ ನಡೆಸಿ ಸರಕಾರದ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ನ್ಯೂಸ್ 18 ಕನ್ನಡದ ಜೊತೆ ಕಡೇಚೂರು ಗ್ರಾಮದ ಮುಖಂಡ ಸಿದ್ದಣ್ಣಗೌಡ ಪಾಟೀಲ ಮಾತನಾಡಿ, ಸರಕಾರ ಮತ್ತೆ ಕೆಐಡಿಬಿ ಮೂಲಕ ರೈತರ ಭೂಮಿ ಸ್ವಾಧೀನ ಪಡಿಸಿಕೊಳ್ಳಲು ಮುಂದಾಗುತ್ತಿದೆ. ನಾವು ಜೀವ ಹೋದರೂ ಪರವಾಗಿಲ್ಲ ಭೂಮಿ ಮಾತ್ರ ಕೊಡುವುದಿಲ್ಲ. 2011 ನೇ ಸಾಲಿನಲ್ಲಿ ಸರಕಾರ ಕೈಗಾರಿಕೆ ಸ್ಥಾಪನೆ ಮಾಡಲು ಭೂಮಿ ಸ್ವಾಧೀನ ಪಡಿಸಿಕೊಂಡರೂ ಯಾವುದೇ ಬೃಹತ್ ಕೈಗಾರಿಕೆಗಳನ್ನು ಆರಂಭ ಮಾಡಿಲ್ಲ. ಇದರಿಂದ ಭೂಮಿ ಕಳೆದುಕೊಂಡವರು ಈಗ ಬೃಹತ್ ನಗರಗಳತ್ತ ವಲಸೆ ಹೋಗಿದ್ದಾರೆ ಎಂದು ಹೇಳಿದರು.

ಇದನ್ನು ಓದಿ: Council Election: ಮತದಾರರ ಪಟ್ಟಿಗೆ ನೋಂದಾಯಿಸಿದರೆ ಉಚಿತವಾಗಿ 1 ಲಕ್ಷ ರೂ. ಇನ್ಶ್ಯೂರೆನ್ಸ್ ಬಾಂಡ್!

2011 ನೇ ಸಾಲಿನಲ್ಲಿ ಕೈಗಾರಿಕೆಗಳನ್ನು ಆರಂಭ ಮಾಡಲಾಗುತ್ತದೆ ಎಂದು ಸುಳ್ಳು ಭರವಸೆ ನೀಡಿ ಜನಪ್ರತಿನಿಧಿಗಳು ಕೂಡ ರೈತರಿಗೆ ಮೋಸ ಮಾಡಿದ್ದಾರೆ. ಆದರೆ, ಈಗ ಆ ಜನಪ್ರತಿನಿಧಿಗಳು ಮೌನ ವಹಿಸಿದ್ದು ರೈತರ ಅಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ನ್ಯೂಸ್ 18 ಕನ್ನಡಕ್ಕೆ ಶೆಟ್ಟಿಹಳ್ಳಿ ಗ್ರಾಮದ ಮುಖಂಡ ನಿರಂಜನ ರೆಡ್ಡಿಗೌಡ ಮಾತನಾಡಿ, ಸುಳ್ಳು ಭರವಸೆ ನೀಡುತ್ತಾ ಸರಕಾರ ರೈತರ ಜಮೀನು ವಶಪಡಿಸಿಕೊಂಡು ರಿಯಲ್ ಎಸ್ಟೇಟ್ ದಂಧೆ ಮಾಡಲು ಮುಂದಾಗುತ್ತಿದೆ. ಮತ್ತೆ ಸರಕಾರ ಈಗ ಮೂರು ಸಾವಿರ ಎಕರೆ ಭೂಮಿಯನ್ನು ಕೆಐಡಿಬಿ ಮೂಲಕ ಸ್ವಾಧೀನ ಪಡಿಸಿಕೊಳ್ಳಲು ಮುಂದಾಗಿದ್ದು ಕೂಡಲೇ ಭೂಮಿ ಸ್ವಾಧೀನ ಪಡಿಸಿಕೊಳ್ಳುವ ಪ್ರಕ್ರಿಯೆ ಕೈಬಿಡಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
Published by:HR Ramesh
First published: