ವಿಜಯಪುರ(ಮಾ. 24): ವಿಶ್ವ ಕ್ಷಯ ರೋಗ ದಿನದ ಅಂಗವಾಗಿ ಇಂದು ಬುಧವಾರ ಜಿಲ್ಲಾಡಳಿತ ಹಾಗೂ ಜಿಲ್ಲಾ ಕ್ಷಯ ರೋಗ ನಿರ್ಮೂಲನಾ ಅಧಿಕಾರಿಗಳ ಕಾರ್ಯಾಲಯದಿಂದ “ದೇಶ ಗೆಲ್ಲಿಸಿ, ಟಿಬಿ ಸೋಲಿಸಿ” ಜನಜಾಗೃತಿ ಅಭಿಯಾನ ನಡೆಸಲು ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಆಲಮಟ್ಟಿ ಆಣೆಕಟ್ಟು, ವಿಶ್ವಪ್ರಸಿದ್ಧ ಗೋಲಗುಂಬಜ್, ಜಿಲ್ಲಾಧಿಕಾರಿಗಳ ಕಾರ್ಯಾಲಯ, ಜಿಲ್ಲಾ ಆಸ್ಪತ್ರೆ ಮತ್ತು ಎಲ್ಲ ತಾಲೂಕ ಆಸ್ಪತ್ರೆಗಳ ಮೇಲೆ ಒಂದು ದಿನ ಕೆಂಪು ದೀಪದ ಬೆಳಕು ಚೆಲ್ಲುವ ಮೂಲಕ ಜನರನ್ನು ಆಕರ್ಷಿಸಿ ವಿಶೇಷವಾಗಿ ಆಚರಿಸಲಾಗುತ್ತದೆ ಎಂದು ಜಿಲ್ಲಾ ಕ್ಷಯ ವೇದಿಕೆ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿಗಳಾದ ಪಿ. ಸುನೀಲಕುಮಾರ್ ಅವರು ತಿಳಿಸಿದ್ದಾರೆ. ಅದರಂತೆ ಆಡಿಯೋ ವಿಡಿಯೋ, ಜಿಂಗಲ್ಸ್‍ಗಳನ್ನು ಆಲಮಟ್ಟಿ ಡ್ಯಾಮ್‍ಸೈಟ್‍ನಲ್ಲಿ ಜಿಲ್ಲೆಯ ವಿವಿಧ ಬಸ್ ನಿಲ್ದಾಣಗಳಲ್ಲಿ ಹಾಗೂ ಇತರೆ ಜನನಿಬಿಡ ಪ್ರದೇಶಗಳಲ್ಲಿ ಪ್ರಸಾರ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಅಲ್ಲದೇ, ಆಟೋ ಹಾಗೂ ಟಾಂಗಾ ರ್ಯಾಲಿಗಳನ್ನು ಏರ್ಪಡಿಸಲಾಗಿದೆ ಎಂದು ಅವರು ಹೇಳಿದ್ದಾರೆ.
"ದೇಶ ಗೆಲ್ಲಿಸಿ ಟಿಬಿ ಸೋಲಿಸಿ" ಜನಜಾಗೃತಿ ಅಭಿಯಾನದ ಅಂಗವಾಗಿ ಕಾರ್ಮಿಕ ಇಲಾಖೆ ಹಾಗೂ ಕೈಗಾರಿಕಾ ಇಲಾಖೆಗಳ ಸಹಯೋಗದೊಂದಿಗೆ ಎಲ್ಲಾ ಕಾರ್ಮಿಕರಿಗೆ ಕ್ಷಯ ರೋಗದ ಬಗ್ಗೆ ತಿಳುವಳಿಕೆ ಹಾಗೂ ತಪಾಸಣೆ ಮಾಡಲಾಗಿದೆ. ವಿಜಯಪುರ ನಗರದ ಪೌರ ಕಾರ್ಮಿಕರಿಗೆ ತಿಳುವಳಿಕೆ ಹಾಗೂ ತಪಾಸಣೆ ಮಾಡುವುದು. ಜನಸಂದಣಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಂತಹ ರಸ್ತೆ ಸಾರಿಗೆ ಸಂಸ್ಥೆಯ ಸಿಬ್ಬಂದಿ ಹಾಗೂ ಇತರೆ ಇಲಾಖೆಗಳಿಗೆ ಎಲ್ಲಾ ಸಿಬ್ಬಂದಿಗಳಿಗೆ ಹಂತ ಹಂತವಾಗಿ ತಪಾಸಣೆ ಹಾಗೂ ತಿಳುವಳಿಕೆ ಕಾರ್ಯಕ್ರಮ ಮಾಡುವುದು. ಕ್ಷಯರೋಗದಿಂದ ಆರೋಗ್ಯ, ಸಾಮಾಜಿಕ ಮತ್ತು ಆರ್ಥಿಕ ವಿನಾಶಕಾರಿ ಪರಿಣಾಮಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಮತ್ತು ಜಾಗೃತಿಕ ಟಿಬಿ ಸಾಂಕ್ರಾಮಿಕ ರೋಗವನ್ನು ಕೊನೆಗೊಳಿಸುವ ಪ್ರಯತ್ನಗಳನ್ನು ಹೆಚ್ಚಿಸಲು ಪ್ರತಿ ವರ್ಷ ಮಾರ್ಚ್ 24ರಂದು ವಿಶ್ವ ಕ್ಷಯ (ಟಿಬಿ) ದಿನವೆಂದು ಸ್ಮರಿಸುತ್ತೇವೆ ಎಂದು ಪಿ. ಸುನೀಲ ಕುಮಾರ ತಿಳಿಸಿದರು.
ಇದನ್ನೂ ಓದಿ: ಯೂಟ್ಯೂಬ್ ವಿಮರ್ಶಕರ ಮೇಲೆ ಆದಿತ್ಯ ಗರಂ: ಫಿಲ್ಮ್ ಚೇಂಬರ್ನಲ್ಲಿ ದೂರು, ಕಾನೂನು ಹೋರಾಟಕ್ಕೆ ತಯಾರಿ!
ಜರ್ಮನ್ ದೇಶದ ವಿಜ್ಞಾನಿ ಹಾಗೂ ವೈದ್ಯಕೀಯ ಸಂಶೋಧಕರಾದ ಡಾ. ರಾಬರ್ಟ್ ಕಾಕ್ ಅವರು 24, ಮಾ. 1882 ರಲ್ಲಿ ಟಿಬಿಗೆ ಕಾರಣವಾಗುವ ಬ್ಯಾಕ್ಟೀರಿಯಂ ಕಂಡುಹಿಡಿದಿದ್ದಾರೆ. ಈ ರೋಗವನ್ನು ಪತ್ತೆ ಹಚ್ಚಿ ಮತ್ತು ಗುಣಪಡಿಸಲು ದಾರಿ ತೆರೆಯಿತು. ಕ್ಷಯವು ವಿಶ್ವದ ಮಾರಕ ಸಾಂಕ್ರಾಮಿಕ ರೋಗವಾಗಿದ್ದು ಜಾಗತಿಕವಾಗಿ ಪ್ರತಿ ಮೂರು ನಿಮಿಷಕ್ಕೆ ಒಂದು ಮರಣವಾಗುತ್ತಿದ್ದು, ಸುಮಾರು 60 ಸಾವಿರಕ್ಕೂ ಹೆಚ್ಚು ಜನರು ಸೋಂಕಿಗೆ ಜಾಗತಿಕವಾಗಿ ತುತ್ತಾಗುತ್ತಿದ್ದಾರೆ. ಬಡತನ, ಅಪೌಷ್ಟಿಕತೆ, ಅಜ್ಞಾನ, ಪರಿಸರ ಮಾಲಿನ್ಯ, ಎಲ್ಲೆಂದರಲ್ಲಿ ಉಗುಳುವ, ಸೀನುವ, ಕೆಮ್ಮುವ ಅಭ್ಯಾಸ ಹೊಂದಿದವರು, ಕೈಗಾರಿಕೀಕರಣ, ಬೀಡಿ, ಸಿಗರೇಟ್, ತಂಬಾಕು ಸೇವನೆ, ಮದ್ಯಪಾನ, ದುರ್ವ್ಯಸನಿಗಳು ಪ್ರದೇಶದ ಜನರು ಈ ರೋಗದ ಪ್ರಮುಖ ಕಾರಣಗಳಾಗಿವೆ ಎಂದು ಅವರು ತಿಳಿಸಿದರು.
ಉಗುರು ಕೂದಲುಗಳನ್ನು ಹೊರತುಪಡಿಸಿ ಶರೀರದ ಎಲ್ಲಾ ಭಾಗಕ್ಕೂ ಈ ಕಾಯಿಲೆ ತಗಲುವುದು. ತಡೆಗಟ್ಟಬಹುದಾದ ಮತ್ತು ಗುಣಪಡಿಸಬಹುದಾದ ಕಾಯಿಲೆಗೆ ಸರ್ಕಾರವು ವಿಶೇಷ ಆಸಕ್ತಿ ಹೊಂದಿ 'ಕ್ಷಯಮುಕ್ತ ಭಾರತ 2025'ಎಂಬ ಘೋಷಣೆಯೊಂದಿಗೆ ಹಲವಾರು ಸುಧಾರಣೆಗಳನ್ನು ಹಾಗೂ ಯೋಜನೆಗಳನ್ನು ಈ ಕಾರ್ಯಕ್ರಮದಲ್ಲಿ ಅಳವಡಿಸಿದೆ. ಜಿಲ್ಲೆಯಲ್ಲಿ ಸಂಭವನೀಯ ಪ್ರಕರಣಗಳನ್ನು ಶೀಘ್ರ ಪತ್ತೆ ಹಚ್ಚಲು ಪ್ರತಿ 2 ಲಕ್ಷ ಜನಸಂಖ್ಯೆಗೆ ಒಂದು ಕ್ಷಯ ಘಟಕದಂತೆ, ನಮ್ಮ ಜಿಲ್ಲೆಯಲ್ಲಿ ಒಟ್ಟು 12 ಕ್ಷಯ ಘಟಕಗಳು ಕಾರ್ಯನಿರ್ವಹಿಸುತ್ತವೆ ಎಂದು ಜಿಲ್ಲಾಧಿಕಾರಿಗಳು ಇದೇ ಸಂದರ್ಭದಲ್ಲಿ ಹೇಳಿದರು.
ಇದನ್ನೂ ಓದಿ: Bengaluru Metro: ನಮ್ಮ ಮೆಟ್ರೋದಲ್ಲಿ ಸ್ಮಾರ್ಟ್ ಕಾರ್ಡ್ ಸಮಸ್ಯೆ; ಪ್ರಯಾಣಿಕರ ಪರದಾಟ!
ರೋಗ ಪತ್ತೆ ಹಚ್ಚುವಿಕೆಗೆ ಉನ್ನತ ತಾಂತ್ರಿಕತೆ ಹೊಂದಿರುವ ಸಿಬಿಎನ್‍ಎಎಟಿ ನಮ್ಮ ಜಿಲ್ಲೆಯಲ್ಲಿ ಒಟ್ಟು 7 ಯಂತ್ರಗಳು ಕಾರ್ಯನಿರ್ವಹಿಸುತ್ತಿವೆ. ನಮ್ಮ ಜಿಲ್ಲೆಯಲ್ಲಿ ಒಟ್ಟು 16 ಬೈನಾಕುಲಾರ್ (Binocular) ಮೈಕ್ರೋಸ್ಕೋಪ್ ಹಾಗೂ ಫ್ಲೋರೆಸೆಂಟ್ ಮೈಕ್ರೋಸ್ಕೋಪ್ (fluorescent microscope) ಯಂತ್ರಗಳು ಕಾರ್ಯನಿರ್ವಹಿಸುತ್ತಿವೆ.
ಚಿಕಿತ್ಸೆ: ತೂಕದ ಆಧಾರದ ಮೇಲೆ ಚಿಕಿತ್ಸಾ ಅವಧಿಗೆ ಬೇಕಾಗುವಷ್ಟು ನಿರಂತರ ಔಷಧಿ ಪೂರೈಕೆ ಹಾಗೂ ಚಿಕಿತ್ಸಾ ಸಹಾಯಕರಿಗೆ ಪೂರ್ಣಗೊಳಿಸುವ ವ್ಯವಸ್ಥೆ ಹಾಗೂ ಚಿಕಿತ್ಸಾ ಸಹಾಯಕರಿಗೆ ರೂ 1000 /- ಗೌರವ ಧನ ನೀಡಲಾಗುತ್ತದೆ. ಸಂಕೀರ್ಣ ಔಷಧ ಪ್ರತಿರೋಧ ಹಾಗೂ ಟಿಬಿ -ಹೆಚ್.ಐ.ವಿ, ಡಯಾಬಿಟಿಸ್ ಹೊಂದಿರುವ ರೋಗಿಗಳಿಗೆ ಬಿ. ಎಲ್. ಡಿ. ಇ. ವೈದ್ಯಕೀಯ ಮಹಾವಿದ್ಯಾಲಯದ ಸಹಯೋಗದೊಂದಿಗೆ ವಿಶೇಷ ಚಿಕಿತ್ಸಾ ಸೌಲಭ್ಯ (ಪ್ರತಿ ವರ್ಷ 30- 35 ಹೊಂದಿರುವ ರೋಗಗಳು) ಖಾಸಗಿ ವಲಯದ ಕ್ಷಯರೋಗಿಗಳಿಗೂ ನೊಂದಣಿ ಹಾಗೂ ಸವಲತ್ತುಗಳು. ಜೊತೆಗೆ ಅಪೌಷ್ಟಿಕತೆ ನೀಗಿಸಲು 'ನಿಕ್ಷಯ ಪೋಷಣ ಯೋಜನೆ ಅಡಿಯಲ್ಲಿ ಪ್ರತಿ ಕ್ಷಯ ರೋಗಿಗಳಿಗೆ ಚಿಕಿತ್ಸಾ ಅವಧಿ ಪೂರ್ಣಗೊಳ್ಳುವವರೆಗೆ ಡಿವಿಟಿ ತಂತ್ರಾಂಶದ ಮೂಲಕ ಪ್ರತಿ ತಿಂಗಳು ರೂ.500/-ಗಳ ಆರ್ಥಿಕ ಸಹಾಯ ಮಾಡಲಾಗುವುದು ಎಂದು ಅವರು ತಿಳಿಸಿದರು.
ಕ್ಷಯರೋಗ ನಿರ್ಮೂಲನೆಗೆ 'ಕಾಲ ಘಟಿಸುತ್ತಿದೆ ' ಎಂಬ ಘೋಷ ವಾಕ್ಯದೊಂದಿಗೆ ವಿಶ್ವ ಕ್ಷಯರೋಗ ದಿನವೆಂದು ಸ್ಮರಿಸುತ್ತಾ ನಾವೆಲ್ಲರೂ 'ಕ್ಷಯರೋಗ ಮುಕ್ತ ವಿಜಯಪುರಕ್ಕಾಗಿ ಶ್ರಮಿಸೋಣ ಎಂದು ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ತಿಳಿಸಿದರು. ಇದೇ ಸಂದರ್ಭದಲ್ಲಿ ಪ್ರಚಾರ ಸಾಮಗ್ರಿಗಳನ್ನು ಬಿಡುಗಡೆ ಮಾಡಲಾಯಿತು. ಜಿಲ್ಲಾ ಕ್ಷಯರೋಗ ಅಧಿಕಾರಿ ಡಾ. ಈರಣ್ಣ. ಎಸ್. ಧಾರವಾಡಕರ, ಆರ್ ಸಿ ಎಚ್ ಅಧಿಕಾರಿ ಡಾ. ಮಹೇಶ್ ನಾಗರಬೆಟ್ಟ ಮತ್ತು ಎನ್‍ಟಿಇಪಿ ಕಾರ್ಯಕ್ರಮದ ಸಿಬ್ಬಂದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ವರದಿ: ಮಹೇಶ ವಿ. ಶಟಗಾರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ