ದಾವಣಗೆರೆ: ದಾವಣಗೆರೆ ಜಿಲ್ಲೆಯಾದ್ಯಂತ ಕಳೆದ ಒಂದು ವಾರದಿಂದ ಭಾರೀ ಮಳೆಯಾಗುತ್ತಿದ್ದು, ದೇಗುಲದ ಸುತ್ತಮುತ್ತ ಹಲವು ನೀರಿನ ಸೆಲೆಯುಳ್ಳ ಝರಿಗಳ ಜುಳು ಜುಳು ನಾದ ಕೇಳಿ ಬರುತ್ತಿದೆ. ಅಂದ ಹಾಗೆ ಅದು ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಬೆಳಗುತ್ತಿಯಿಂದ 3 ಕಿಲೋಮೀಟರ್ ದೂರದಲ್ಲಿರುವ ಬೆಟ್ಟದ ಮೇಲೆ ನೆಲೆಸಿರುವ ತೀರ್ಥರಾಮೇಶ್ವರ ದೇಗುಲ ಭಕ್ತಿಯ ತಾಣ. ಮಳೆಯು ಧಾರಾಕಾರವಾಗಿ ಸುರಿದಿರುವುದರಿಂದ ಕೃತಕ ಫಾಲ್ಸ್ ಗಳು ಹುಟ್ಟಿದ್ದು, ಇಲ್ಲಿಗೆ ಬರುವವರಲ್ಲಿ ರೋಮಾಂಚನ ಉಂಟು ಮಾಡುತ್ತಿದೆ.
ದಕ್ಷಿಣ ಕಾಶಿ ಎಂದೇ ಖ್ಯಾತವಾಗಿರುವ ತೀರ್ಥರಾಮೇಶ್ವರ ಭಕ್ತರ ಪಾಲಿನ ಆರಾಧ್ಯ ತಾಣ. ಜಿಲ್ಲೆ ಮಾತ್ರವಲ್ಲ, ಹೊರ ರಾಜ್ಯಗಳಿಂದಲೂ ಈ ಪವಿತ್ರ ಸ್ಥಳಕ್ಕೆ ಬರುತ್ತಾರೆ. ಇಂಥ ತಾಣ ಈಗ ಪ್ರವಾಸಿಗರ ಕೈ ಬೀಸಿ ಕರೆಯುತ್ತಿದೆ. ಎತ್ತ ನೋಡಿದರೂ ಪ್ರಕೃತಿಯ ಸೌಂದರ್ಯ. ಬೆಟ್ಟದ ಮೇಲೆ ನೆಲೆಸಿರುವ ತೀರ್ಥರಾಮೇಶ್ವರ ಸನ್ನಿಧಿ. ಈಗ ಭಕ್ತರಷ್ಟೇ ಅಲ್ಲ, ಪ್ರವಾಸಿಗರ ಹಾಟ್ ಫೇವರಿಟ್ ತಾಣವಾಗಿಬಿಟ್ಟಿದೆ. ಯಾಕೆಂದರೆ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಜಲವೈಭವ ಸೃಷ್ಟಿಯಾಗಿದೆ. ಸಣ್ಣ ಸಣ್ಣ ಝರಿಯಾಗಿ ಹರಿಯುತ್ತಿರುವ ನೀರು ಸೌಂದರ್ಯ ಲೋಕವನ್ನೇ ಸೃಷ್ಟಿಸಿದೆ.
ಇದು ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಬೆಳಗುತ್ತಿ ಗ್ರಾಮದಿಂದ ಸುಮಾರು 3 ಕಿಲೋಮೀಟರ್ ದೂರದಲ್ಲಿರುವ ಈ ಸನ್ನಿಧಿಯಲ್ಲಿ ಈಗ ಜಲಧಾರೆಯಿಂದ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ. ದೇಗುಲದಲ್ಲಿ ಈಗ ಝುಳು ಝುಳು ನಾದ ಕೇಳಿ ಬರುತ್ತಿದೆ. ಸ್ಥಳೀಯರಂತೂ ಇಲ್ಲಿಗೆ ಹೋಗಿ ಮೋಜು ಮಸ್ತಿ ಮಾಡುತ್ತಿದ್ದಾರೆ. ಚಿಕ್ಕ ಫಾಲ್ಸ್ ಗಳು ಇಲ್ಲಿ ನೋಡುಗರ ಕಣ್ಮನ ಸೆಳೆಯುತ್ತಿವೆ. ಈ ಕಿರು ಜಲಪಾತಗಳು ನೀರಿನಿಂದ ತುಂಬಿ ತುಳುಕುತ್ತಿದ್ದು ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ.
ಪ್ರಾಕೃತಿಕ ಸೌಂದರ್ಯದ ಮಧ್ಯೆ ನೆಲೆಸಿರುವ ಈ ಕ್ಷೇತ್ರವನ್ನು ದಕ್ಷಿಣ ಕಾಶಿ ಎಂತಲೂ ಸಹ ಸ್ಥಳೀಯವಾಗಿ ಕರೆಯಲಾಗುತ್ತದೆ. ಮಳೆಯಿಂದಾಗಿ ದೇಗುಲಕ್ಕೆ ಹೊಸ ಕಳೆ ಬಂದಿದ್ದು, ಮಿನಿ ಫಾಲ್ಸ್ ನಂತೆ ನೀರು ಹರಿಯುತ್ತಿದೆ. ಈ ವಿಹಂಗಮ ನೋಟಕ್ಕೆ ಜನರು ಫಿದಾ ಆಗಿದ್ದಾರೆ. ಅಲ್ಲದೇ ಅದನ್ನು ನೋಡಲು ಹೆಚ್ಚು ಪ್ರವಾಸಿಗರ ದಂಡು ಹರಿದು ಬರುತ್ತದೆ.
ಇದನ್ನೂ ಓದಿ: DK Suresh - ಯಡಿಯೂರಪ್ಪರ 2 ವರ್ಷದ ಸಾಧನೆ ಬರೀ ಸಿಡಿ ತೋರಿಸಿದ್ದು ಅಷ್ಟೇ: ಡಿ.ಕೆ. ಸುರೇಶ್
ಬಯಲುಸೀಮೆ ಪ್ರದೇಶದ ಮಧ್ಯದಲ್ಲಿರುವ ಪ್ರವಾಸಿ ಕೇಂದ್ರ:
ಅರೆ ಮಲೆನಾಡು ಆಗಿರುವುದರಿಂದ ಥೇಟ್ ಮಲೆನಾಡಿನ ಸೊಬಗನ್ನು ಇಲ್ಲಿ ಕಾಣಬಹುದು. ಭಕ್ತರು ಹಾಗೂ ಪ್ರವಾಸಿಗರ ಮನ ಪುಳಕಿತಗೊಳ್ಳುವಂತಹ ವಾತಾವರಣ ನಿರ್ಮಾಣವಾಗಿದೆ. ವರ್ಷ ಪೂರ್ತಿ ಇಲ್ಲಿ ನೀರು ಹರಿಯುತ್ತಿದ್ದು, ನೀರು ಎಂದಿಗೂ ಬತ್ತುವುದಿಲ್ಲ. ಈ ನೀರಿನಲ್ಲಿ ಮಿಂದರೆ ಸಕಲ ದೋಷಗಳು, ಪಾಪಗಳು ನಿವಾರಣೆಯಾಗುತ್ತವೆ ಎಂಬ ನಂಬಿಕೆ ಇದೆ. ಇದರ ನೈರ್ಮಲ್ಯವನ್ನು ಕಾಪಾಡುವ ದೃಷ್ಟಿಯಿಂದ ಕಲ್ಯಾಣಿಯ ನೀರನ್ನು ಬಿಂದಿಗೆಗಳಲ್ಲಿ ತೆಗೆದುಕೊಂಡು ಬೇರೆಡೆ ಹೋಗಿ ಭಕ್ತಾದಿಗಳು ಸ್ನಾನ ಮಾಡುತ್ತಾರೆ.
ಹದಿನೈದು ಕಿ.ಮೀ. ದೂರದ ಬೆಟ್ಟದ ತಪ್ಪಲಿನ ಪ್ರಕೃತಿಯ ಮಡಿಲಲ್ಲಿ ನೆಲೆಗೊಂಡ ತೀರ್ಥರಾಮೇಶ್ವರ ದೇವಸ್ಥಾನ, ಪ್ರೇಕ್ಷಣೀಯ ಹಾಗೂ ಧಾರ್ಮಿಕ ಸ್ಥಳವೂ ಹೌದು. ಈಗ ಮಳೆಯಿಂದಾಗಿ ಹೊಸ ಲೋಕ ಸೃಷ್ಟಿ ಯಾಗಿದ್ದು, ಮಿಂದೇಳಲು ಜನರು ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ. ಮಳೆಯ ಜೊತೆಗೆ ನೀರಿನಲ್ಲಿ ಆಟವಾಡುತ್ತಾ ಕಾಲ ಕಳೆಯುತ್ತಿದ್ದಾರೆ.
(ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)
ವರದಿ: ಸಂಜಯ್. ಕುಂದುವಾಡ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ