HOME » NEWS » District » WOMEN LIVES UNDER TREE DUE TO HAVE NO MONEY FOR PAY HOUSE RENT RHHSN RSK

ಲಾಕ್ ಡೌನ್ ಪರಿಣಾಮ ಕೆಲಸ ಕಳೆದುಕೊಂಡು ಮನೆ ಬಾಡಿಗೆ ಕಟ್ಟಲು ಹಣವಿಲ್ಲದೆ ಮರದಡಿ ಜೀವನ ಆರಂಭಿಸಿದ ಮಹಿಳೆ!

ಇದನ್ನು ಗಮನಿಸಿದ್ದ ಮಾಲ್ದಾರೆ ಗ್ರಾಮದ ಜನಪರ ಸಂಘದ ಯುವಕರು ತಟ್ಟಹಳ್ಳಿಗೆ ಹೋಗಿ ಮಹಿಳೆಯ ನೈಜಸ್ಥಿತಿಯನ್ನು ಕಂಡು ಸಹಾಯಕ್ಕೆ ಮುಂದಾಗಿದ್ದಾರೆ. ಈಗ ಯುವಕರೇ ಸ್ನೇಹಿತರ ತೋಟದಿಂದ ಮರಗಳನ್ನು ತಂದಿದ್ದಾರೆ. ಜೊತೆಗೆ ತಮ್ಮ ಸಂಘದಿಂದಲೇ ಟಾರ್ಪಲ್ ತಂದು ಅವುಗಳನ್ನು ಬಳಕೆ ಮಾಡಿಕೊಂಡು ಶೆಡ್ ನಿರ್ಮಿಸಿ ಕೊಡುತ್ತಿದ್ದೇವೆ ಎಂದಿದ್ದಾರೆ ಸಂಘದ ಅಧ್ಯಕ್ಷ ಆ್ಯಂಟೊನಿ.

news18-kannada
Updated:March 3, 2021, 7:38 AM IST
ಲಾಕ್ ಡೌನ್ ಪರಿಣಾಮ ಕೆಲಸ ಕಳೆದುಕೊಂಡು ಮನೆ ಬಾಡಿಗೆ ಕಟ್ಟಲು ಹಣವಿಲ್ಲದೆ ಮರದಡಿ ಜೀವನ ಆರಂಭಿಸಿದ ಮಹಿಳೆ!
ಮರದಡಿ ಅಡುಗೆ ಮಾಡುತ್ತಿರುವ ಮಹಿಳೆ.
  • Share this:
ಕೊಡಗು: ಕೊರೋನಾ ಲಾಕ್ ಡೌನ್ ಬಡವರ ಬದುಕಿನ ಮೇಲೆ ಇನ್ನೂ ಬರೆ ಎಳೆಯುತ್ತಲೇ ಇದೆ. ಲಾಕ್ ಡೌನ್ ಪರಿಣಾಮ ಕೆಲಸ ಕಳೆದುಕೊಂಡಿದ್ದ ವಿಧವಾ ಮಹಿಳೆಯೊಬ್ಬರು ಮನೆ ಬಾಡಿಗೆಯನ್ನು ಕಟ್ಟಲಾಗದೆ ಮರದ ಬುಡದಲ್ಲಿ ಬದುಕು ದೂಡುವಂತಾಗಿದೆ. ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ತಟ್ಟಹಳ್ಳಿಯ ಸುನೀತಾ ಇಂತಹ ಶೋಚನೀಯ ಬದುಕು ದೂಡುತ್ತಿದ್ದಾರೆ.

ಹೌದು, ಮದುವೆಯಾಗಿ ಇಬ್ಬರು ಮಕ್ಕಳು ಜನಿಸಿದ ಕೆಲವೇ ವರ್ಷಗಳಲ್ಲಿ ಪತಿ ಮೃತಪಟ್ಟಿದ್ದಾರೆ. ಪೊನ್ನಂಪೇಟೆಯಲ್ಲಿ ಬಾಡಿಗೆ ಮನೆಯಲ್ಲಿದ್ದುಕೊಂಡೇ ಮಕ್ಕಳಿಗಾಗಿ ಮನೆ ಕೆಲಸ ಮತ್ತು ಕೂಲಿ ಮಾಡಿ ಸುನೀತಾ ಇಬ್ಬರು ಮಕ್ಕಳನ್ನು ಇಷ್ಟು ವರ್ಷ ಸಾಕಿ ಸಲುಹಿ ಓದಿಸಿದ್ದಾರೆ. ಆದರೆ ಲಾಕ್ ಡೌನ್ ಆದ ಬಳಿಕ ಸುನೀತ ಅವರಿಗೆ ಮನೆ ಕೆಲಸವೂ ಇಲ್ಲದಂತಾಗಿದೆ. ಆದರೂ ಯಾವುದೋ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಸುನೀತಾ ಅವರು ಆ ಕೆಲಸವೂ ಇಲ್ಲದಂತಾಗಿ ಇಷ್ಟು ದಿನಗಳ ಕಾಲ ಹೇಗೋ ಜೀವನ ಮಾಡಿದ್ದಾರೆ. ಆದರೆ ಕೊನೆಗೆ ಮನೆ ಬಾಡಿಗೆಗೂ ಹಣವಿಲ್ಲದಂತಾಗಿ ಪೊನ್ನಂಪೇಟೆಯಲ್ಲಿದ್ದ ಬಾಡಿಗೆ ಮನೆಯನ್ನು ಖಾಲಿ ಮಾಡಿದ್ದಾರೆ. ಬಾಡಿಗೆ ಮನೆಯನ್ನು ಬಿಟ್ಟು ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಟ್ಟಹಳ್ಳಿಯಲ್ಲಿ ಮರದ ಬುಡವೊಂದರಲ್ಲಿ ಜೀವನ ನಡೆಸುತ್ತಿದ್ದಾರೆ. ತಾಯಿಯ ಹೆಸರಿನಲ್ಲಿರುವ 14 ಸೆಂಟ್ ಖಾಲಿ ಜಾಗವನ್ನು ಹುಡುಕಿ ಬಂದಿರುವ ಸುನೀತಾ ಸದ್ಯ ಖಾಲಿ ಜಾಗದಲ್ಲೇ ಇರುವ ಮರವೊಂದರ ಬುಡದಲ್ಲಿ, ಮನೆ ಖಾಲಿ ಮಾಡಿ ಎಲ್ಲಾ ವಸ್ತುಗಳನ್ನು ತಂದು ಹಾಕಿ ಟಾರ್ಪಲ್ ಮುಚ್ಚಿ ಅಲ್ಲಿಯೇ ಬದುಕು ದೂಡುತ್ತಿದ್ದಾರೆ. ಮರದ ಬುಡದಲ್ಲೇ ಅಡುಗೆ ಮಾಡಿ ಊಟ ಮಾಡುವ ಸುನೀತಾ, ರಾತ್ರಿ ಖಾಲಿ ಜಾಗದ ಪಕ್ಕದಲ್ಲಿ ಇರುವ ಪರಿಚಯಸ್ಥರ ಮನೆಯಲ್ಲಿ ಮಲಗುತ್ತಿದ್ದಾರೆ.

ಇದನ್ನು ಓದಿ: Ramesh Jarkiholi: ನೀರಾವರಿ ಸಚಿವರ ರಾಸಲೀಲೆ ಆರೋಪ ಪ್ರಕರಣ: ರಮೇಶ್ ಜಾರಕಿಹೊಳಿ ಹೇಳುವುದೇನು? ಸಚಿವರ ತಲೆದಂಡ ಸಾಧ್ಯತೆ?

ಕೂಲಿ ಮಾಡಿ ಬದುಕು ನಡೆಸುವ ಜೊತೆಗೆ ಒಬ್ಬ ಮಗಳನ್ನು ಎಂಜಿನಿಯರಿಂಗ್ ಓದಿಸುತ್ತಿದ್ದರೆ, ಮಗನನ್ನು ಪದವಿ ಓದಿಸುತ್ತಿದ್ದಾರೆ. ಮಕ್ಕಳ ವಿದ್ಯಾಭ್ಯಾಸಕ್ಕೂ ಶುಲ್ಕ ಕಟ್ಟಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾದಾಗ ಮಹಿಳೆ ಮಕ್ಕಳ ಶಿಕ್ಷಣಕ್ಕೆ ಸಹಾಯಾಸ್ತ ನೀಡುವಂತೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಇದನ್ನು ಗಮನಿಸಿದ್ದ ಮಾಲ್ದಾರೆ ಗ್ರಾಮದ ಜನಪರ ಸಂಘದ ಯುವಕರು ತಟ್ಟಹಳ್ಳಿಗೆ ಹೋಗಿ ಮಹಿಳೆಯ ನೈಜಸ್ಥಿತಿಯನ್ನು ಕಂಡು ಸಹಾಯಕ್ಕೆ ಮುಂದಾಗಿದ್ದಾರೆ. ಈಗ ಯುವಕರೇ ಸ್ನೇಹಿತರ ತೋಟದಿಂದ ಮರಗಳನ್ನು ತಂದಿದ್ದಾರೆ. ಜೊತೆಗೆ ತಮ್ಮ ಸಂಘದಿಂದಲೇ ಟಾರ್ಪಲ್ ತಂದು ಅವುಗಳನ್ನು ಬಳಕೆ ಮಾಡಿಕೊಂಡು ಶೆಡ್ ನಿರ್ಮಿಸಿ ಕೊಡುತ್ತಿದ್ದೇವೆ ಎಂದಿದ್ದಾರೆ ಸಂಘದ ಅಧ್ಯಕ್ಷ ಆ್ಯಂಟೊನಿ.

ಇದು ಪಂಚಾಯಿತಿ ಅಧಿಕಾರಿಗಳ ಗಮನಕ್ಕೆ ಬಂದಿದೆಯಾದರೂ ದಾಖಲೆಗಳೆಲ್ಲವೂ ಪೊನ್ನಂಪೇಟೆಯ ವಿಳಾಸದಲ್ಲಿವೆ. ಸೂಕ್ತ ದಾಖಲೆಗಳು ಸಿಗದ ಹೊರತ್ತು ನಾವೇನು ಸಹಾಯ ಮಾಡಲು ಸಾಧ್ಯವಿಲ್ಲವೆಂದು ಕೈಚೆಲ್ಲಿದ್ದಾರೆ. ಸದ್ಯ ಜನಪರ ಯುವಕ ಸಂಘದ ಯುವಕರೇ ದಾಖಲಾತಿಗಳ ವಿಳಾಸಗಳನ್ನು ತಟ್ಟೆಹಳ್ಳಿ ವಿಳಾಸಕ್ಕೆ ಬದಲಾಯಿಸುತ್ತಿದ್ದು, ದಾಖಲಾತಿಗಳು ಬದಲಾವಣೆ ಆದ ಮೇಲಾದರೂ ಮಹಿಳೆಯ ಕಷ್ಟಕ್ಕೆ ಅಧಿಕಾರಿಗಳು ಸ್ಪಂದಿಸುವರೇ ಎನ್ನೋದನ್ನು ಕಾದು ನೋಡಬೇಕಾಗಿದೆ.
Published by: HR Ramesh
First published: March 3, 2021, 7:38 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories