ಪತಿಯಿಂದ ದೂರವಿರುವ ಮಹಿಳೆಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ಧಾರೆ. ಆಟೋ ಚಾಲಕನೊಬ್ಬನಿಗೆ ಕೊಟ್ಟಿದ್ದ ಲಕ್ಷಾಂತರ ಹಣವನ್ನು ವಾಪಸ್ ಪಡೆಯಲು ಪ್ರಯತ್ನಿಸುತ್ತಿದ್ದ ಮಹಿಳೆ ಅದೇ ಕಾರಣಕ್ಕೆ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ.
ದೊಡ್ಡಬಳ್ಳಾಪುರ: ಸ್ನೇಹಿತ ಉದ್ದಾರವಾಗಲೆಂದು ಸಾಲವಾಗಿ 4 ಲಕ್ಷ ರೂ ಹಣ ಕೊಟ್ಟ ತಪ್ಪಿಗೆ ಗೃಹಿಣಿಯೊಬ್ಬರು ಸಾವನ್ನಪ್ಪಿದ್ದಾರೆಂದು ಹೇಳಲಾದ ಪ್ರಕರಣ ಬೆಳಕಿಗೆ ಬಂದಿದೆ. ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಗೃಹಿಣಿಯನ್ನು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ದೊಡ್ಡಬಳ್ಳಾಪುರ ನಗರದ ಚಿಕ್ಕಪೇಟೆಯ ನಿವಾಸಿ ಉಷಾರಾಣಿ (32) ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಮಹಿಳೆ.
ಗಂಡನಿಂದ ದೂರವಾಗಿರುವ ಮೃತ ಮಹಿಳೆ ತನ್ನ ಮಗಳ ಜೊತೆ ತಾಯಿ ಮನೆಯಲ್ಲಿ ವಾಸವಾಗಿರುತ್ತಾರೆ. ಇವರ ಕುಟುಂಬಕ್ಕೆ ಆಟೋ ಡ್ರೈವರ್ ಪವನ್ ಎಂಬಾತನ ಪರಿಚಯವಾಗಿರುತ್ತದೆ. ಉಷಾರಾಣಿಯ ಕುಟುಂಬಕ್ಕೆ ಆಟೋ ಚಾಲಕನಾಗಿಯೂ ಆತ ಕೆಲಸ ಮಾಡುತ್ತಿರುತ್ತಾನೆ. ಅವರು ಹೇಳಿದ ಸ್ಥಳಕ್ಕೆ ಕರೆದುಕೊಂಡು ಹೋಗುವ ಕೆಲಸ ಮಾಡುತ್ತಿದ್ದ ಪವನ್ ಉಷಾರಾಣಿಗೂ ಅಪ್ತನಾಗಿರುತ್ತಾನೆ. ಇದೇ ಸಲುಗೆಯಲ್ಲಿ ಸ್ವಂತ ಆಟೋ ತೆಗೆದುಕೊಂಡು ಜೀವನದಲ್ಲಿ ಮುಂದೆ ಬರುವುದಾಗಿ ಹೇಳಿ ಉಷಾರಾಣಿ ಬಳಿ 4 ಲಕ್ಷ ರೂಪಾಯಿ ಹಣವನ್ನ ಸಾಲವಾಗಿ ಪಡೆದಿರುತ್ತಾನೆ. ಆದರೆ ವರ್ಷಗಳೇ ಕಳೆದರೂ ಸಾಲದ ಹಣ ಆತ ವಾಪಸ್ ಮಾಡಿರಲಿಲ್ಲ.
ಹಣದ ವಿಚಾರಕ್ಕೆ ಪವನ್ ಮತ್ತು ಉಷಾರಾಣಿಯ ನಡುವೆ ಸಾಕಷ್ಟು ಬಾರಿ ಜಗಳವಾಗಿತ್ತು. ನಿನ್ನೆ ರಾತ್ರಿ ಉಷಾರಾಣಿಗೆ ಪೋನ್ ಮಾಡಿದ ಪವನ್ ಹಣ ಕೊಡುವುದಾಗಿ ಹೇಳಿ ಮೆಳೇಕೋಟೆ ಕ್ರಾಸ್ಗೆ ಬರುವಂತೆ ಹೇಳಿದ್ದಾನೆ. ರಾತ್ರಿ 9 ಗಂಟೆ ಸಮಯದಲ್ಲಿ ಉಷಾರಾಣಿ ತನ್ನ ಸಹೋದರ ಜೊತೆ ಬೈಕ್ನಲ್ಲಿ ಮೆಳೇಕೋಟೆ ಕ್ರಾಸ್ಗೆ ಹೋಗಿದ್ದಾಳೆ. ಅಲ್ಲಿಂದ ಉಷಾರಾಣಿಯನ್ನ ಮಾತ್ರ ಬೇರೆಡೆ ಕರೆದುಕೊಂಡು ಹೋದ ಪವನ್ ಹಣಕಾಸಿನ ವಿಚಾರಕ್ಕೆ ಜಗಳ ಮಾಡಿದ್ದಾನೆ. ಅನಂತರ ಲೋ ಬಿಪಿಯಾಗಿ ಆಟೋದಿಂದ ಕುಸಿದು ಬಿದ್ದಳೆಂದು ದೊಡ್ಡಬಳ್ಳಾಪುರ ಆಸ್ಪತ್ರೆಗೆ ದಾಖಲು ಮಾಡಿದ್ದಾನೆ. ಆದರೆ ಉಷಾರಾಣಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ.
ಉಷಾರಾಣಿಯನ್ನ ಹೊಡೆದು ಸಾಯಿಸಿದ್ದಾರೆಂದು ಮೃತ ಕುಟುಂಬಸ್ಥರು ಆರೋಪ ಮಾಡಿದ್ದಾರೆ. 4 ಲಕ್ಷ ರೂ ಸಾಲದ ಹಣ ವಾಪಸ್ ಕೊಡಬೇಕೆನ್ನುವ ಕಾರಣಕ್ಕೆ ಉಷಾರಾಣಿಯನ್ನ ಪವನ್ ಹೊಡೆದು ಸಾಯಿಸಿದ್ದಾನೆ. ನಂತರ ಆಕೆ ಲೋಬಿಪಿಯಾಗಿ ಕುಸಿದು ಬಿದ್ದು ಸಾವನ್ನಪ್ಪಿದ್ದಾಳೆಂದು ಆಸ್ಪತ್ರೆಗೆ ದಾಖಲು ಮಾಡಿ ಕೊಲೆ ಪ್ರಕರಣದಿಂದ ಬಚಾವ್ ಆಗಲು ಯತ್ನಿಸಿದ್ದಾನೆ. ಆಸ್ಪತ್ರೆಗೆ ದಾಖಲು ಮಾಡುವಾಗ ಉಷಾರಾಣಿ ತನ್ನ ಹೆಂಡತಿ ಎಂದು ಹೇಳಿ ದಾಖಲು ಮಾಡಿದ್ದಾನೆ. ಆಕೆಯ ಮೂಗು ಮತ್ತು ಬಾಯಿಂದ ರಕ್ತ ಸೋರುತ್ತಿದ್ದು ಆಕೆಯನ್ನ ಹೊಡೆದು ಕೊಲೆ ಮಾಡಿದ್ದಾನೆಂದು ಮೃತ ಮಹಿಳೆಯ ಕುಟುಂಬದವರು ಗಂಭೀರ ಆರೋಪ ಮಾಡುತ್ತಿದ್ದಾರೆ.
ಇದೇ ವೇಳೆ, ಮೃತ ಮಹಿಳೆಯ ಡೈವೋರ್ಸ್ ಕೇಸ್ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿತ್ತು. ಆಕೆಯ 14 ವರ್ಷದ ಮಗಳು ಒಂದು ಕಡೆ ತಂದೆಯಿಂದ ದೂರವಾಗಿ ಮತ್ತೊಂದು ಕಡೆ ತಾಯಿಯನ್ನ ಕಳೆದುಕೊಂಡು ಅನಾಥೆಯಾಗಿದ್ದಾಳೆ.
ವರದಿ: ನವೀನ್ ಕುಮಾರ್
Published by:Vijayasarthy SN
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ