news18-kannada Updated:February 22, 2021, 4:40 PM IST
ಧಾರವಾಡ ಡಿಮ್ಹಾನ್ಸ್
ಧಾರವಾಡ: ಮಲೇಶಿಯಾದ ಈ ಮಹಿಳೆ ಭಾರತಕ್ಕೆ ಬಂದು ದಶಕಗಳೇ ಕಳೆದಿವೆ. ವಿದೇಶದಿಂದ ಬಂದವಳು ಹರ್ಬಲ್ ವ್ಯಾಪಾರ ಮಾಡುತ್ತ ಜೀವನ ನಡೆಸುತ್ತಿದ್ದಳು. ವ್ಯಾಪಾರ ಮಾಡುತ್ತಾ ಹುಬ್ಬಳ್ಳಿ ಕಡೆ ಬಂದ ಈಕೆಯನ್ನ ಹುಚ್ಚಿ ಎಂದು ಡಿಮಾನ್ಸ್ (DIMHANS) ಗೆ ದಾಖಲು ಮಾಡಲಾಯಿತು. ಆದರೆ ಅವಳು ಹುಚ್ಚಿ ಅಲ್ಲ ಅನ್ನೊದನ್ನ ವಕೀಲರಿಬ್ಬರು ನ್ಯಾಯಾಲಯದ ಮೊರೆಹೋಗಿ ಅವಳಿಗೆ ಹೊರ ಬರುವಂತೆ ಮಾಡಿದ್ದಾರೆ.
ಈ ಮಹಿಳೆಯ ಹೆಸರು ಕಲೈ ಸೆಲ್ವಿ ಎಂದು. ಮೂಲತಃ ಮಲೇಶಿಯಾದವಳಾಗಿರುವ ಇವಳು ಕಳೆದ 26 ವರ್ಷಗಳ ಹಿಂದೆಯೇ ಭಾರತಕ್ಕೆ ಬಂದು ತಮಿಳುನಾಡಿನಲ್ಲಿ ನೆಲೆಸಿದ್ದಳು. ಅಲ್ಲಿ ಹರ್ಬಲ್ ವ್ಯಾಪಾರ ಮಾಡುತಿದ್ದ ಸೆಲ್ವಿಗೆ ಸುಂದರರಾಜನ್ ಎಂಬ ವ್ಯಕ್ತಿ ಪರಿಚಯವಾಗಿದ್ದ. ಆತನೇ ಇವಳಿಗೆ ತಮಿಳುನಾಡಿನಿಂದ ಹುಬ್ಬಳ್ಳಿಗೆ ಕರೆ ತಂದಿದ್ದ. ಹುಬ್ಬಳ್ಳಿಯಲ್ಲಿ ಕೂಡಾ ಇವರ ಹರ್ಬಲ್ ವ್ಯಾಪಾರ ಚನ್ನಾಗಿಯೇ ಇತ್ತು. ಆದರೆ ಸುಂದರರಾಜನ್ ಇವಳ ಬಳಿ ಇರುವ ಹಣಕ್ಕಾಗಿ, ಇವಳಿಗೆ ಮೋಸ ಮಾಡಲು ಧಾರವಾಡದ ಡಿಮ್ಹಾನ್ಸ್ಗೆ ಸೇರಿಸಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.
ಸೆಲ್ವಿ ಅವರು ಒಟ್ಟು 16 ತಿಂಗಳ ಕಾಲ ಮಾನಸಿಕ ರೋಗಿಗಳ ಜೊತೆ ಕಾಲ ಕಳೆದು, ಹೈಕೋರ್ಟ್ನಿಂದ ಆದೇಶ ಪಡೆದು ಈಗ ಹೊರ ಬಂದಿದ್ದಾಳೆ. ಸದ್ಯ ಸೆಲ್ವಿಯ ಆರೋಪ ಏನೆಂದ್ರೆ, ಧಾರವಾಡ ಡಿಮಾನ್ಸ್ನಲ್ಲಿರುವ ಮೂವರು ವೈದ್ಯರು ಆಸ್ಪತ್ರೆಯನ್ನ ದುರ್ಬಳಕೆ ಮಾಡುತಿದ್ದಾರೆ. ಇವರ ವಿರುದ್ಧ ಧಾರವಾಡ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ ಎಂದು ಸೆಲ್ವಿ ಹೇಳಿದ್ದಾರೆ.
ಇದನ್ನೂ ಓದಿ: ಯತ್ನಾಳ್ ಕಾಂಗ್ರೆಸ್ನ ಬಿ ಟೀಮ್; ಪಕ್ಷೇತರನಾಗಿ ನಿಂತು ಗೆದ್ದು ಬರಲಿ: ಮುರುಗೇಶ್ ನಿರಾಣಿ ಸವಾಲು
ಸೆಲ್ವಿ ಡಿಮ್ಹಾನ್ಸ್ ಆಸ್ಪತ್ರೆಯಲ್ಲಿದ್ದಾಗ ಇವಳಿಗೆ ಯಾರನ್ನೂ ಭೇಟಿ ಮಾಡಲು ಬಿಡುತ್ತಿರಲಿಲ್ಲ ಎಂಬ ಅರೋಪ ಸಹ ಇದೆ. ಹೇಗೋ ಮಾಡಿ ವಕೀಲರೊಬ್ಬರಿಗೆ ಪರಿಚಯ ಮಾಡಿಕೊಂಡಿದ್ದ ಸೆಲ್ವಿಗೆ, ಆ ವಕೀಲರೇ ಹೊರ ಬರಲು ಸಹಾಯ ಮಾಡಿದ್ದಾರೆ. ವಕೀಲರ ತಂಡ ಕೂಡಾ ಆಸ್ಪತ್ರೆಗೆ ಹೋದಾಗ ಅವರನ್ನ ಭೇಟಿಗೆ ಆಸ್ಪತ್ರೆ ವೈದ್ಯರು ಅವಕಾಶ ಮಾಡಿ ಕೊಡುತ್ತಿರಲಿಲ್ಲ. ಮತ್ತೊಂದು ಕಡೆ ಸುಂದರಾಜನ್ ಜೊತೆ ಕೆಲ ವೈದ್ಯರೂ ಸೇರಿದ್ದಾರೆ ಎಂದೂ ನ್ಯಾಯಾಲಯಕ್ಕೆ ಸೆಲ್ವಿ ರಿಪೋರ್ಟ್ ಕೊಟ್ಟಿದ್ದರು. ಆದರೆ ಅದೇ ಆಸ್ಪತ್ರೆಯಲ್ಲಿ ಕೆಲ ವೈದ್ಯರು, ಇಲ್ಲಿ ಸೆಲ್ವಿ ಸರಿ ಇದ್ದಾಳೆ ಎಂದು ಹೇಳಿಕೆ ನೀಡಿದ್ದರು.
ಸದ್ಯ ಹೈಕೋರ್ಟ್ನಲ್ಲಿ ಗೆಲುವು ಸಿಕ್ಕು ಹುಚ್ಚಾಸ್ಪತ್ರೆಯಿಂದ ಸೆಲ್ವಿ ಹೊರ ಬಂದಿದ್ದಾಳೆ. ಆದರೆ ಎಷ್ಟೋ ಮಹಿಳೆಯರು ಈಗಲೂ ಅಲ್ಲಿ ಇದ್ದಾರೆ. ಅವರಿಗೆ ಕೂಡಾ ಸೆಲ್ವಿಗೆ ಸಿಕ್ಕಂತೆ ನ್ಯಾಯ ಸಿಗಬೇಕು ಎಂದು ಸೆಲ್ವಿ ಪರ ವಕೀಲರಾದ ಎ ಆರ್ ಪಾಟೀಲ ಅವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಡಿಮ್ಹಾನ್ಸ್ ನಿರ್ದೇಶಕ ಮಹೇಶ್, ಈ ಬಗ್ಗೆ ಸರ್ಕಾರಕ್ಕೆ ಹಾಗೂ ಪೊಲೀಸ್ ಕಮಿಷನರ್ ಗಮನಕ್ಕೆ ತರಲಾಗಿದೆ. ಇನ್ನು, ಇಲ್ಲಿನ ವೈದ್ಯರು ಪ್ರತಿಭಟನೆ ಮಾಡುವುದಾಗಿ ಹೇಳಿದರು. ಅದಕ್ಕೆ ರೋಗಿಗಳಿಗೆ ಚಿಕಿತ್ಸೆ ಮಾಡುವಂತೆ ವೈದ್ಯರಿಗೆ ಮನವಿ ಮಾಡಲಾಗಿದೆ.ಧಾರವಾಡ ಮಾನಸಿಕ ಆಸ್ಪತ್ರೆಯಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದು ಸೆಲ್ವಿ ಕೇಸ್ ನೋಡಿದರೆಯೇ ಗೊತ್ತಾಗುತ್ತಿದೆ. ಈ ಆಸ್ಪತ್ರೆಯಲ್ಲಿ ಇರುವ ಅಮಾಯಕರ ರಕ್ಷಣೆಗೆ ಸರ್ಕಾರ ಮುಂದಾಗುತ್ತಾ ಎಂಬುದನ್ನು ಕಾದು ನೋಡಬೇಕಿದೆ.
ವರದಿ: ಮಂಜುನಾಥ ಯಡಳ್ಳಿ
Published by:
Vijayasarthy SN
First published:
February 22, 2021, 4:40 PM IST