HOME » NEWS » District » WITH SHORTAGE OF LECTURERS COLLEGES IN CHAMARAJANAGARA STRUGGLING TO COMPLETE LESSONS IN TIME NCHM SNVS

ಉಪನ್ಯಾಸಕರ ಕೊರತೆ, ಸರ್ಕಾರದ ನಿರ್ಲಕ್ಷ್ಯ - ಪಾಠಗಳು ಮುಗಿಯದ ಆತಂಕದಲ್ಲಿ ಪಿಯು ವಿದ್ಯಾರ್ಥಿಗಳು

ದ್ವಿತೀಯ ಪಿಯು ಪರೀಕ್ಷೆಗೆ ಕೇವಲ ಎರಡೂವರೆ ತಿಂಗಳು ಬಾಕಿ ಇದೆ. ಆದರೆ ಉಪನ್ಯಾಸಕರ ಕೊರತೆಯಿಂದ ಸರಿಯಾಗಿ ಪಾಠ ಪ್ರವಚನಗಳಾಗದೆ ಚಾಮರಾಜನಗರದ ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ.

news18-kannada
Updated:March 2, 2021, 4:12 PM IST
ಉಪನ್ಯಾಸಕರ ಕೊರತೆ, ಸರ್ಕಾರದ ನಿರ್ಲಕ್ಷ್ಯ - ಪಾಠಗಳು ಮುಗಿಯದ ಆತಂಕದಲ್ಲಿ ಪಿಯು ವಿದ್ಯಾರ್ಥಿಗಳು
ಸಾಂದರ್ಭಿಕ ಚಿತ್ರ
  • Share this:
ಚಾಮರಾಜನಗರ: ವಿದ್ಯಾರ್ಥಿಗಳ ಬದುಕಿನಲ್ಲಿ ದ್ವಿತೀಯ ಪಿಯುಸಿ ಮಹತ್ವವಾದ ಘಟ್ಟ. ಇದು ಅವರ ಮುಂದಿನ ಭವಿಷ್ಯಕ್ಕೆ ತಿರುವ ನೀಡುವ ಪ್ರಮುಖ ಹಂತವೂ ಆಗಿದೆ. ಆದರೆ ಕೋವಿಡ್ ಹಿನ್ನೆಲೆಯಲ್ಲಿ ಕಾಲೇಜುಗಳು ಪ್ರಾರಂಭವಾಗಿ ಕೇವಲ ಎರಡು ತಿಂಗಳಾಗಿದೆ. ಈ ಬಾರಿ ಶೈಕ್ಷಣಿಕ ಅವಧಿಯು ಕಡಿತಗೊಂಡಿದೆ. ಈ ನಡುವೆ ಕಾಲೇಜುಗಳಲ್ಲಿ ಸಾಕಷ್ಟು ಸಂಖ್ಯೆಯ ಕಾಯಂ ಉಪನ್ಯಾಸಕರಿಲ್ಲದೆ ಇದೇ ಪರಿಸ್ಥಿತಿ ಮುಂದುವರಿದಲ್ಲಿ ಪರೀಕ್ಷೆಗಳು ಆರಂಭವಾಗುವ ಮುನ್ನ ಪಾಠ ಪ್ರವಚನಗಳು ಮುಗಿಯುವ ಲಕ್ಷಣಗಳು ಕಾಣಿಸುತ್ತಿಲ್ಲ.

ಚಾಮರಾಜನಗರ ಜಿಲ್ಲೆಯಲ್ಲಿ 24 ಸರ್ಕಾರಿ ಪದವಿ ಪೂರ್ವ ಕಾಲೇಜುಗಳಿದ್ದು ಪ್ರಥಮ ಪಿಯುಸಿ ಹಾಗು ದ್ವಿತೀಯ ಪಿಯುಸಿಯಲ್ಲಿ ಒಟ್ಟು 7431 ವಿದ್ಯಾರ್ಥಿಗಳಿದ್ದಾರೆ. ಉಪನ್ಯಾಸಕರ ಸಂಖ್ಯೆ 207 ಇರಬೇಕಿದ್ದು 62 ಹುದ್ದೆ ಖಾಲಿ ಇದೆ.

ಈ ಹಿನ್ನೆಲೆಯಲ್ಲಿ ಹಾಲಿ ಇರುವ ಉಪನ್ಯಾಸಕರನ್ನೇ ಎರಡೆರಡು ಕಾಲೇಜುಗಳಿಗೆ ನಿಯೋಜನೆ ಮಾಡಲಾಗಿದ್ದು, ಇವರು ಒಂದು ಕಾಲೇಜಿನಲ್ಲಿ ಮೂರು ದಿನ, ಇನ್ನೊಂದು ಕಾಲೇಜಿನಲ್ಲಿ ಮೂರು ದಿನ ಪಾಠ ಮಾಡುತ್ತಿದ್ದಾರೆ. ಹೀಗಾಗಿ ಎರಡೂ ಕಡೆ ಪಾಠ ಪ್ರವಚನ ಪೂರ್ಣ ಪ್ರಮಾಣದಲ್ಲಿ ಆಗುತ್ತಿಲ್ಲ. ಪಾಠಗಳೇ ಆಗದೆ ಪರೀಕ್ಷೆ ಎದರಿಸುವುದು ಹೇಗೆ ಎಂದು ವಿದ್ಯಾರ್ಥಿಗಳ ಕಂಗಾಲಾಗಿದ್ದಾರೆ.

ಇದನ್ನೂ ಓದಿ: BS Yediyurappa: ಬಜೆಟ್​ಗೂ ಮುನ್ನ ಸಿಎಂ ವಿಶೇಷ ಪೂಜೆ; ಗುರುರಾಯರ ಭಕ್ತ ತಾವು ಎಂದ ಬಿಎಸ್​ವೈ

ಪ್ರೌಢಶಾಲೆ ಹಾಗು ಹಾಗು ಪ್ರಥಮದರ್ಜೆ ಕಾಲೇಜುಗಳಲ್ಲಿ ಉಪನ್ಯಾಸಕರ ಕೊರತೆ ನೀಗಿಸಲು ಅತಿಥಿ ಉಪನ್ಯಾಸಕರನ್ನು ನೇಮಿಸಿರುವ ಸರ್ಕಾರ ಪದವಿ ಪೂರ್ವ ಕಾಲೇಜುಗಳ ಬಗ್ಗೆ ನಿರ್ಲಕ್ಷ್ಯ ವಹಿಸಿದೆ. ಉಪನ್ಯಾಸಕರ ಸಮಸ್ಯೆ ಗಂಭೀರವಾಗಿ ಪರಿಗಣಿಸದ ಸರ್ಕಾರ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚಲ್ಲಾಟವಾಡುತ್ತಿದೆ ಎಂದು ಪಿಯು ವಿದ್ಯಾರ್ಥಿಯೊಬ್ಬರ ಪೋಷಕ ಸದಾಶಿವಮೂರ್ತಿ ಎಂಬುವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಮ್ಮ ಕಾಲೇಜಿನಲ್ಲಿ ರಾಜ್ಯಶಾಸ್ತ್ರ ಹಾಗು ಭೂಗೋಳ ಶಾಸ್ತ್ರ ವಿಷಯಗಳಿಗೆ ಉಪನ್ಯಾಸಕರೇ ಇಲ್ಲ. ಹಾಗಾಗಿ ಈ ವಿಷಯಗಳ ಪಾಠವೇ ನಡೆಯುತ್ತಿಲ್ಲ. ನಾವು ಪರೀಕ್ಷೆ ಬರೆಯುವುದಾದರೂ ಹೇಗೆ ಎಂದು ಯಳಂದೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಮಹೇಶ್ ಪ್ರಶ್ನಿಸುತ್ತಾರೆ.

ಆನ್ ಲೈನ್ ಮೂಲಕ ಪಾಠ ಕೇಳಿದರೂ ಅನುಮಾನಗಳನ್ನು ಪರಿಹರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಉಪನ್ಯಾಸಕರನ್ನು ನೇಮಿಸುವ ಮೂಲಕ ಪರೀಕ್ಷೆಗಳು ಆರಂಭವಾಗುವ ಮುನ್ನ ಪಾಠ ಪ್ರವಚನಗಳನ್ನು ಪೂರ್ಣಗೊಳಿಸಬೇಕು. ಇಲ್ಲವೇ ಪರೀಕ್ಷೆಗಳನ್ನು ಮುಂದೂಡಬೇಕು ಎಂದು ಮತ್ತೊಬ್ಬ ವಿದ್ಯಾರ್ಥಿನಿ ಮಧುಮಾಲಿನಿ ಒತ್ತಾಯಿಸಿದ್ದಾರೆ.ಇದನ್ನೂ ಓದಿ: ಡಿಕೆಶಿಗೆ ಮೈಸೂರು ಸಂಕಷ್ಟ; ಎಐಸಿಸಿ ವೀಕ್ಷಕ ಯಾಸ್ಕಿ ಮುಂದೆಯೇ ಸಿದ್ದರಾಮಯ್ಯ ಆಕ್ರೋಶ

ವಿದ್ಯಾರ್ಥಿಗಳಿಗೆ ಪಾಠಪ್ರವಚನಗಳಿಗೆ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಹಾಲಿ ಇರುವ ಕಾಯಂ ಉಪನ್ಯಾಸಕರ ಪೈಕಿ 23 ಮಂದಿ ಉಪನ್ಯಾಸಕರನ್ನು ಹೆಚ್ಚುವರಿ ಹೊಣೆ ನೀಡಿ ಖಾಲಿ ಇರುವ ಕಡೆಗೆ ನಿಯೋಜನೆ ಮಾಡಲಾಗಿದೆ. ಇವರು ಒಂದು ಕಾಲೇಜಿನಲ್ಲಿ ಮೂರು ದಿನ, ಇನ್ನೊಂದು ಕಾಲೇಜಿನಲ್ಲಿ ಮೂರು ದಿನ ಪಾಠ ಮಾಡುವಂತೆ ತಿಳಿಸಲಾಗಿದೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೃಷ್ಣಮೂರ್ತಿ ನ್ಯೂಸ್ 18 ಗೆ ತಿಳಿಸಿದ್ದಾರೆ.

ಉಪನ್ಯಾಸಕರ ಕೊರತೆ ನೀಗಿಸಲು ಮೂವತ್ತು ಮಂದಿ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಡುವಂತೆ ಪದವಿಪೂರ್ವ ಶಿಕ್ಷಣ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇಲಾಖಾ ನಿರ್ದೇಶಕರು ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಸರ್ಕಾರ ಅನುಮತಿ ನೀಡಿದ ಕೂಡಲೇ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಂಡು ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಕ್ರಮ ವಹಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಉಪನ್ಯಾಸಕರ ಕೊರತೆ ಕೇವಲ‌ ಚಾಮರಾಜನಗರಕ್ಕೆ ಸೀಮಿತವಾಗದೆ ಇಡೀ ರಾಜ್ಯಾದ್ಯಂತ ಈ ಸಮಸ್ಯೆ ಇದ್ದು ಸಹಸ್ರಾರು ವಿದ್ಯಾರ್ಥಿಗಳು ತೊಂದರೆಗೆ ಈಡಾಗಿದ್ದಾರೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸರ್ಕಾರ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುವುದು ಅತ್ಯಗತ್ಯವಾಗಿದೆ.

ವರದಿ: ಎಸ್.ಎಂ.ನಂದೀಶ್
Published by: Vijayasarthy SN
First published: March 2, 2021, 4:12 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories