Price Hike: ಹೋಟೆಲ್​ಗಳಲ್ಲಿ ಎಲ್ಲಾ ತಿಂಡಿ-ತಿನಿಸು ಬೆಲೆಯೇರಿಕೆ, ಯಾವುದಕ್ಕೆ ಎಷ್ಟಾಗಿದೆ ರೇಟ್? ಇಲ್ಲಿದೆ ವಿವರ

Food Price Hike: ಅಕ್ಕಿ, ಬೇಳೆ, ಸಕ್ಕರೆ, ಕಡಲೆ, ಎಣ್ಣೆ, ಬೆಲ್ಲ, ಒಣಮೆಣಸಿನಕಾಯಿ ಇತರ ವಸ್ತುಗಳ ಜತೆಗೆ ತರಕಾರಿ, ಗ್ಯಾಸ್, ನೀರು, ಕಟ್ಟಡ ಬಾಡಿಗೆ, ಕಾರ್ಮಿಕರ ಸಂಬಳ ಸಹ ಸಾಕಷ್ಟು ಏರಿಕೆಯಾಗುತ್ತಿದೆ. ಇದೇ ಕಾರಣಕ್ಕೆ ಉಪಾಹಾರ, ಊಟದ ದರದಲ್ಲಿ ಗಮನಾರ್ಹ ಬದಲಾವಣೆಯಾಗುತ್ತಿವೆ. ಆದರೆ, ಉಪಾಹಾರ ಹಾಗೂ ಊಟದ ದರ ಏರಿಕೆಯಾಗಿರುವುದು ಗ್ರಾಹಕರಿಗೆ ನುಂಗಲಾರದ ತುತ್ತಾಗಿದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • Share this:
  ಚಿಕ್ಕಬಳ್ಳಾಪುರ: ರಾಜ್ಯಾದ್ಯಂತ ಬಹುತೇಕ ಹೋಟೆಲ್ ಗಳಲ್ಲಿ ದಿನನಿತ್ಯದ  ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ  ಹೋಟೆಲ್, ಉಪಾಹಾರ ಮಂದಿರ, ಚಾಟ್ಸ್ ಅಂಗಡಿಗಳ  (Restaurants and Chat Centers) ಮಾಲೀಕರು ತಿಂಡಿ, ಊಟ, ಟೀ, ಕಾಫಿ ಬೆಲೆಗಳಲ್ಲಿ ಏರಿಕೆ ಮಾಡಿದ್ದಾರೆ. ಇದರ ಪರಿಣಾಮ ತಿಂಡಿ, ತಿನಿಸು (Breakfast and Lunch) ದಿನದಿಂದ ದಿನಕ್ಕೆ ದುಬಾರಿಯಾಗುತ್ತಿವೆ. ಉಪಾಹಾರ ಹಾಗೂ ಊಟಕ್ಕೆಂದು ಹೋಟೆಲ್‌ಗಳಿಗೆ ಭೇಟಿ ನೀಡುವ ಗ್ರಾಹಕರಿಗೆ ಬೆಲೆ ಏರಿಕೆಯ (Price Hike) ಬಿಸಿ ಮುಟ್ಟಿದೆ‌. ದೊಡ್ಡ ಹೋಟೆಲ್‌ಗಳು ಸೇರಿದಂತೆ ಬೀದಿ ಬದಿ ಹೋಟೆಲ್‌ಗಳಲ್ಲೂ (Street Food) ದರ ಏರಿಕೆಯಾಗಿದ್ದು ಕಾರ್ಮಿಕರಿಗೆ ಸೇರಿ ಇತರರಿಗೆ ಹೊರೆಯಾಗಿದೆ.  ದಿನ ನಿತ್ಯ ಒಂದಲ್ಲಾ ಒಂದು ವಸ್ತುವಿನ ಬೆಲೆಗಳು ಏರಿಕೆಯಾಗುತ್ತಲೇ (Costly) ಇದೆ. ಕೊರೊನಾ ಸಂಕಷ್ಟದ ನಡುವೆ ಈಗ ಹೋಟೆಲ್ ನಲ್ಲಿ ಕೂಡಾ ತಿಂಡಿ ತಿನಿಸುಗಳ ಬೆಲೆಗಳು ಏರಿಕೆ ಆಗಿರುವುದು ಗ್ರಾಹಕರ ಕೈ ಸುಡುತ್ತಿದೆ.

  ಬೆಲೆ ಏರಿಕೆಯಿಂದ ಗ್ರಾಹಕರಿಗೆ ಹೊರೆ:

  ಅಕ್ಕಿ, ಬೇಳೆ, ಸಕ್ಕರೆ, ಕಡಲೆ, ಎಣ್ಣೆ, ಬೆಲ್ಲ, ಒಣಮೆಣಸಿನಕಾಯಿ ಇತರ ವಸ್ತುಗಳ ಜತೆಗೆ ತರಕಾರಿ, ಗ್ಯಾಸ್, ನೀರು, ಕಟ್ಟಡ ಬಾಡಿಗೆ, ಕಾರ್ಮಿಕರ ಸಂಬಳ ಸಹ ಸಾಕಷ್ಟು ಏರಿಕೆಯಾಗುತ್ತಿದೆ. ಇದೇ ಕಾರಣಕ್ಕೆ ಉಪಾಹಾರ, ಊಟದ ದರದಲ್ಲಿ ಗಮನಾರ್ಹ ಬದಲಾವಣೆಯಾಗುತ್ತಿವೆ. ಆದರೆ, ಉಪಾಹಾರ ಹಾಗೂ ಊಟದ ದರ ಏರಿಕೆಯಾಗಿರುವುದು ಗ್ರಾಹಕರಿಗೆ ನುಂಗಲಾರದ ತುತ್ತಾಗಿದೆ.

  ಚಿಕ್ಕಬಳ್ಳಾಪುರ ತಾಲೂಕಿನಾದ್ಯಂತ ಕೈಗಾರಿಕಾ ‌ಕಾರ್ಮಿಕರು, ಕಟ್ಟಡ ಕಾರ್ಮಿಕರು ‌, ವಿದ್ಯಾರ್ಥಿಗಳು ದಿನನಿತ್ಯ ಊಟಕ್ಕಾಗಿ ಹೋಟೆಲ್ ಗಳನ್ನೇ ಅವಲಂಬಿಸಿದ್ದಾರೆ. ಈ ಹಿಂದೆ  ಸಾಮಾನ್ಯ ಹೋಟೆಲೊಂದರಲ್ಲಿ ಊಟ ಮಾಡಿದರೆ 30 ರಿಂದ ೪೦ ರೂ. ಖರ್ಚಾಗುತ್ತಿತ್ತು.ಇದೀಗ ಒಂದು ಊಟಕ್ಕೆ 50 ರಿಂದ 60 ರೂ ಬೆಲೆಯಿದೆ. ಬರುವ ಸಂಬಳದಲ್ಲಿ ಹೊಟ್ಟೆ ತುಂಬಿಸಿಕೊಳ್ಳುವುದೇ ದೊಡ್ಡ ಸವಾಲೆನಿಸಿದ್ದು, ದಿನಗೂಲಿ ನಂಬಿದವರು ಸಂಕಷ್ಟ ಎದುರಿಸುತ್ತಿದ್ದಾರೆ.

  ದರ ಏರಿಕೆ ಅನಿವಾರ್ಯ

  ತಾಲೂಕಿನಲ್ಲಿ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದಲ್ಲಿ ಹೋಟೆಲ್‌ಗಳ ಉಪಾಹಾರ ಹಾಗೂ ಊಟದ ಬೆಲೆ ಶೇಕಡಾ 20 ರಿಂದ 40 ರಷ್ಟು ಹೆಚ್ಚಳ ಕಂಡು ಬಂದಿದೆ. ಆಹಾರ ವಸ್ತುಗಳ ಬೆಲೆ ಏರಿಕೆಯಾಗಿರುವುದರಿಂದ ಇದು ಅನಿವಾರ್ಯವಾಗಿದೆ. ಕಳೆದ ವರ್ಷ ಒಂದು ಕೆಜಿ ಅಕ್ಕಿಗೆ 30 ರಿಂದ 35 ರೂ.ಇತ್ತು. ಆದರೆ, ಈಗ ಬೆಲೆ 36 ರೂ.ನಿಂದ 40 ಕ್ಕೇರಿದೆ. ಉದ್ದಿನ ಬೇಳೆ, ಸಕ್ಕರೆ ಸೇರಿದಂತೆ ಇಡ್ಲಿ ರವೆ, ಎಣ್ಣೆ , ಒಣ ಮೆಣಸಿನಕಾಯಿ, ಸಾಸಿವೆ, ಜೀರಿಗೆ ಹಾಗೂ ಮಸಾಲ ಪದಾರ್ಥ, ಗೋಧಿ, ಮೈದಾ ಹಿಟ್ಟುಗಳ ಬೆಲೆಯೂ ಕಳೆದ ವರ್ಷಕ್ಕೆ ಹೋಲಿಸಿದರೆ ಮತ್ತಷ್ಟು ಏರಿಕೆ ಕಂಡಿದೆ.

  ಹೋಟೆಲ್ ಗಳಲ್ಲಿ ಬಳಸುವ ಟ್ಯಾಂಕರ್ ಕುಡಿಯುವ ನೀರಿಗೆ 250 - 300 ರೂ.ನಿಂದ 350 - 400 ಗೆ ಏರಿಕೆ ಕಂಡಿದೆ. ಅಗತ್ಯ ವಸ್ತುಗಳ ದರ ಏರಿಕೆಯಿಂದ  ಆರ್ಥಿಕ ಹೊರೆಯನ್ನು ನಿಭಾಯಿಸಲು ದರ ಏರಿಕೆ ಅನಿವಾರ್ಯ ಎನ್ನುತ್ತಾರೆ ಹೋಟೆಲ್ ‌ಮಾಲೀಕರು.

  ಚಾಟ್ಸ್  ಕೂಡಾ ದುಬಾರಿ:

  ಸಂಜೆ ವೇಳೆಯಲ್ಲಿ ಜನರು ಮುಗಿಬಿದ್ದು ತಿನ್ನುವ ಮಸಾಲಪುರಿ, ಪಾನಿಪುರಿ, ಗೋಬಿ ಮ ಚೂರಿ, ಎಗ್ ರೈಸ್ ಸೇರಿ ಇತರೆ ಚಾಟ್ಸ್ ಗಳ ಬೆಲೆಯು ಹೆಚ್ಚಾಗಿದೆ. ಎಣ್ಣೆ, ಗ್ಯಾಸ್ ಸೇರಿ ಇತರೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಚಾಟ್ಸ್ 5 ರಿಂದ 10 ರೂಪಾಯಿವರೆಗೂ ಏರಿಕೆ ಕಂಡಿದೆ‌. ಸಂಜೆ ವೇಳೆ‌ ಕೆಲಸ ಮುಗಿಸಿ ಏನಾದರೂ ತಿನ್ನೋಣ ಎಂದು ಹೊರಗೆ ಬರುವ ಮುನ್ನ ಪರ್ಸ್ ನೋಡಿಕೊಳ್ಳಲುವ ಪರಿಸ್ಥಿತಿ ಎದುರಾಗಿದೆ.

  ದರ ಏರಿಕೆ ಹೇಗಿದೆ?

  ಅಕ್ಕಿ, ಎಣ್ಣೆ ಹಾಗೂ ರವೆ ಇತರೆ ವಸ್ತುಗಳ ಬೆಲೆ ತೀವ್ರವಾಗಿ ಏರಿಕೆ ಕಂಡಿದೆ. ತಿಂಡಿಗಳ ಬೆಲೆ ಕೂಡ ಏರಿಕೆ ಕಂಡಿದ್ದು ದೋಸೆಯ ರೇಟ್ 25 ರಿಂದ 30-35 ರೂ.ಗೆ ಜಿಗಿದಿದೆ. ಸಾಮಾನ್ಯ ಊಟಕ್ಕೆ 40 ರಿಂದ 50 ರೂ.ಗಳಷ್ಟಿದೆ. 2 ಇಡ್ಲಿ ಮತ್ತು 1 ವಡಾಕ್ಕೆ 35 ರೂ.ಕೊಡಬೇಕು. ಚೌಚೌಬಾತ್, ಪಲಾವ್, ಬಿಸಿಬೇಳೆ ಬಾತ್, ಪೊಂಗಲ್ ಹಾಗೂ ಶಾವಿಗೆ ಬಾತ್‌ಗೆ  ರೂ 30 ದರವಿದೆ. 1ಚಪಾತಿಗೆ 15 ರೂ.ದರವಿದೆ. ಕಾಫಿ ಬೆಲೆ 10 ರಿಂದ  15 ರೂ.ಗೆ ಏರಿದೆ. ಜತೆಗೆ ಮಾಂಸಹಾರ ಪ್ರಿಯರ ಬಿರಿಯಾನಿ, ಕುಷ್ಕ ಸೇರಿ ಇತರೆ ಆಹಾರ ಪದಾರ್ಥಗಳ ಬೆಲೆಯಲ್ಲೂ ಏರಿಕೆಯಾಗಿದೆ.

  ಕಾರ್ಮಿಕರಿಗೆ ಉದ್ಯೋಗ ಸಮಸ್ಯೆ

  ಕೊರೊನಾ ಸಮಯದಲ್ಲಿ ಹೋಟೆಲ್ ಗಳು‌ ಮುಚ್ಚಿದ ಹಿನ್ನಲೆ ‌ಕೆಲಸ ಕಳೆದುಕೊಂಡಿದ್ದ ಶೇ.40 ರಷ್ಟು ಕಾರ್ಮಿಕರಿಗೆ  ಇಂದಿಗೂ ಕೆಲಸ ದೊರೆತಿಲ್ಲ. ಇನ್ನೂ ‌ಉಳಿದ ಕಾರ್ಮಿಕರಿಗೆ ಕೆಲಸ ದೊರೆತಿದೆಯಾದರೂ ಸಂಬಳ ಕೂಡ ಕಡಿಮೆಯಾಗಿದೆ. ಕೆಲಸವಿಲ್ಲದೆ ಮನೆಬಾಡಿಗೆ ಸೇರಿ ಇತರೆ ಖರ್ಚುಗಳೊಂದಿಗೆ ಜೀವನ ನಡೆಸುವುದು ಕಷ್ಟವಾಗುತ್ತಿದೆ ಎಂದು ಕಾರ್ಮಿಕ ರಾಮಕೃಷ್ಣ ತಿಳಿಸಿದ್ದಾರೆ.

  ಬಾಡಿಗೆ, ವಿದ್ಯುತ್ ದರ, ತರಕಾರಿ, ಎಣ್ಣೆ, ಗ್ಯಾಸ್ ‌ಸೇರಿ ಅಗತ್ಯ ವಸ್ತುಗಳ ದರಗಳು ಸತತವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ  ಅನಿವಾರ್ಯವಾಗಿ ತಿಂಡಿ, ಊಟಗಳ ದರವು ಕೊಂಚ ಏರಿಕೆ ಮಾಡಲಾಗಿದೆ ಎಂದು ಹೋಟೆಲ್ ಮಾಲೀಕ ರಮೇಶ್ ಹೇಳಿದರು.

  (ವರದಿ: ಮನುಕುಮಾರ ಹೆಚ್ ಕೆ, ಚಿಕ್ಕಬಳ್ಳಾಪುರ)
  Published by:Soumya KN
  First published: