20 ದಿನದಲ್ಲಿ ಕೋಲಾರದ ವಿಸ್ಟ್ರಾನ್ ಕಂಪನಿ ಪುನರ್ ಆರಂಭ: ಸಚಿವ ಶಿವರಾಮ್ ಹೆಬ್ಬಾರ್ ವಿಶ್ವಾಸ

ಕಂಪನಿಯು ಇನ್ನು 20 ದಿನದಲ್ಲಿ ಪೂರ್ಣ ಪ್ರಮಾಣದಲ್ಲಿ ಆರಂಭವಾಗುವ ವಿಶ್ವಾಸವನ್ನು ಕಂಪನಿ ನೀಡಿದೆ, ಹಾಗಾಗಿ ಮತ್ತೊಮ್ಮೆ ಎಲ್ಲರ ಸಭೆಯನ್ನ ನಡೆಸುವುದಾಗಿ ಸಚಿವರು ತಿಳಿಸಿದ್ದು, ಕಾರ್ಮಿಕರಿಗೆ ಬಾಕಿಯಿರುವ ಹಣವನ್ನ ಪೂರ್ಣ ಪ್ರಮಾಣದಲ್ಲಿ ಕೊಡಿಸುವ ಜವಾಬ್ದಾರಿ ನಮ್ಮದಾಗಿದೆ

ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್

ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್

  • Share this:
ಕೋಲಾರ(ಡಿಸೆಂಬರ್​. 27): ಕೋಲಾರದ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿನ ವಿಸ್ಟ್ರಾನ್ ಕಂಪನಿಗೆ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಹಾಗು ಕಾರ್ಮಿಕ ಇಲಾಖೆಯ ಹಿರಿಯ ಅಧಿಕಾರಿಗಳ ನಿಯೋಗ ಭೇಟಿ ನೀಡಿ, ಕಂಪನಿಯ ಅಧಿಕಾರಿಗಳ ಜೊತೆಗೆ ಮಾತುಕತೆ ನಡೆಸಿದರು. ಸಚಿವರಿಗೆ ಸಂಸದ ಎಸ್ ಮುನಿಸ್ವಾಮಿ, ಶಾಸಕ ಶ್ರೀನಿವಾಸಗೌಡ, ಕಾರ್ಮಿಕ ಇಲಾಖೆ ಆಯುಕ್ತ ಅಕ್ರಂ ಪಾಷಾ, ಡಿಸಿ ಸತ್ಯಭಾಮ, ಎಸ್ಪಿ ಕಾರ್ತಿಕ್ ರೆಡ್ಡಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಸಾಥ್ ನೀಡಿದರು. ಕಂಪನಿ ಅಧಿಕಾರಿಗಳ ಜೊತೆಗೆ ಸಭೆ ನಡೆಸಿದ ನಂತರ ಮಾತನಾಡಿದ ಸಚಿವರು, ಕಾರ್ಮಿಕರು ಏಕಾಏಕಿ ರೊಚ್ಚಿಗೇಳಲು ಕಾರಣವೇನು ಹಾಗು ಕಂಪನಿಯಲ್ಲಿನ ಕಾರ್ಮಿಕರ ಸಮಸ್ಯೆಗಳನ್ನ ತಿಳಿದುಕೊಳ್ಳಲು, ಕಂಪನಿಗೆ ಭೇಟಿ ನೀಡಿದ್ದೇನೆ. ಇನ್ನು ಸಭೆ ಪೂರ್ಣವಾಗಿಲ್ಲ, ನಾನು ಕಂಪನಿಗೆ ಕೆಲ ಮಾಹಿತಿಯನ್ನ ಕೇಳಿದ್ದೇನೆ, ಅವರಿಗೆ ಇನ್ನು ಸಮಯ ಬೇಕಿದೆ ಬೆಂಗಳೂರಲ್ಲಿ ಮುಂದಿನ ವಾರ ವಿಕಾಸ ಸೌಧದಲ್ಲಿ, ಕಂಪನಿ ಅಧಿಕಾರಿಗಳು ಮತ್ತು ಜಿಲ್ಲೆಯ ಜನಪ್ರತಿನಿಧಿಗಳ ಪ್ರತ್ಯೇಕ ಸಭೆ ನಡೆಸಿ ಪ್ರಕರಣ ತಾರ್ಕಿಕ ಅಂತ್ಯ ಕಾಣುವ ನಿಟ್ಟಿನಲ್ಲಿ ಪ್ರಯತ್ನ ಮಾಡುವುದಾಗಿ ತಿಳಿಸಿದರು.

ಕಾರ್ಮಿಕರ ನಯಾ ಪೈಸೆ ಸಂಬಳದ ಹಣವನ್ನು ಅವರಿಗೆ ತಲುಪಿಸುತ್ತೇವೆ. ಕಂಪನಿಯಲ್ಲಿ ದೊಡ್ಡ ಮಟ್ಟದಲ್ಲಿ ಧಾಂದಲೆ ಸೃಷ್ಟಿಯಾಗಲು ಕಂಪನಿಯಲ್ಲಿನ ಮ್ಯಾನೇಜ್‍ಮೆಂಟ್ ನ ಅಲ್ಪ ಸ್ವಲ್ಪ ಲೋಪದೋಷ ಮೇಲ್ನೋಟಕ್ಕೆ ಕಾರಣವೆಂದು, ಕಾರ್ಮಿಕ ಇಲಾಖೆಯ ಪ್ರಾಥಮಿಕ ವರದಿಯಲ್ಲಿ ತಿಳಿದು ಬಂದಿದೆ, ಕಂಪನಿಯು ಇನ್ನು 20 ದಿನದಲ್ಲಿ ಪೂರ್ಣ ಪ್ರಮಾಣದಲ್ಲಿ ಆರಂಭವಾಗುವ ವಿಶ್ವಾಸವನ್ನು ಕಂಪನಿ ನೀಡಿದೆ, ಹಾಗಾಗಿ ಮತ್ತೊಮ್ಮೆ ಎಲ್ಲರ ಸಭೆಯನ್ನ ನಡೆಸುವುದಾಗಿ ಸಚಿವರು ತಿಳಿಸಿದ್ದು, ಕಾರ್ಮಿಕರಿಗೆ ಬಾಕಿಯಿರುವ ಹಣವನ್ನ ಪೂರ್ಣ ಪ್ರಮಾಣದಲ್ಲಿ ಕೊಡಿಸುವ ಜವಾಬ್ದಾರಿ ನಮ್ಮದಾಗಿದೆ ಎಂದು ಭರವಸೆ ನೀಡಿದರು,

ವಿಸ್ಟ್ರಾನ್ ಕಂಪನಿಯಲ್ಲಿ ಕಾರ್ಮಿಕರ ಧಾಂಧಲೆ ಪ್ರಕರಣ ನಡೆಯಲು ಪ್ರಮುಖ ಕಾರಣ ತನಿಖೆಯ ನಂತರ ತಿಳಿಯಲಿದ್ದು, ಕಾರ್ಮಿಕರ ಸಮಸ್ಯೆ ಇದುವರೆಗು ಯಾರಿಗು ತಿಳಿದು ಬಂದಿಲ್ಲ, ಜಿಲ್ಲಾಡಳಿತ, ಉಸ್ತುವಾರಿ ಸಚಿವ, ಸಂಸದ, ಶಾಸಕ ಯಾರ ಗಮನಕ್ಕು ಕಾರ್ಮಿಕರ ಸಮಸ್ಯೆ ತಿಳಿದು ಬಂದಿಲ್ಲ. ಘಟನೆ ನಡೆಯಲು ಇದು ಒಂದು ಕಾರಣ ಇರಬಹುದು, ಒಂದು ಸಣ್ಣ ಪ್ರತಿಭಟನೆಯನ್ನಾದರು ಯಾರೂ ಮಾಡಿಲ್ಲ, ಆದರೆ ಪ್ರಕರಣದಲ್ಲಿ, ಕಾಂಟ್ರಾಕ್ಟ್ ಲೇಬರ್ ಏಜೆನ್ಸಿಗಳು ತಪ್ಪು ಕಂಡು ಬಂದರು ಹಾಗು ಕಾರ್ಮಿಕ ಇಲಾಖೆಯ ಅಧಿಕಾರಿಗಳ ಲೋಪ ಕಂಡು ಬಂದರು ಶಿಸ್ತು ಕ್ರಮ ಜರುಗಿಸುವ ಭರವಸೆ ನೀಡಿರುವ ಸಚಿವರು, ಧಾಂಧಲೆಯಲ್ಲಿ ನೇರವಾಗಿ ಭಾಗಿಯಾದವರನ್ನ ಹೊರತು ಪಡಿಸಿ, ಉಳಿದ ಶೇಖಡಾ 97 ರಷ್ಟು ಕಾರ್ಮಿಕರನ್ನ ಮರಳಿ ಕೆಲಸಕ್ಕೆ ಕರೆಸಿಕೊಳ್ಳಲು ಕಂಪನಿ ಒಪ್ಪಿಗೆ ನೀಡಿದೆ ಎಂದು ಸಚಿವರು ತಿಳಿಸಿದ್ದಾರೆ.

ಟೊಯೋಟಾ ನೌಕರರ ಪ್ರತಿಭಟನೆ ಭಾಗಶಃ ಮುಗಿದಿದೆ :

ಟೊಯೋಟಾ ಕಂಪನಿಯಲ್ಲಿ ಕಾರ್ಮಿಕರ ಪ್ರತಿಭಟನೆ ಕುರಿತು ಪ್ರತಿಕ್ರಿಯೆ ನೀಡಿದ ಕಾರ್ಮಿಕ ಸಚಿವರು, ಈ ಬಗ್ಗೆ ನಾನು ಮೂರು ಸಭೆಗಳನ್ನ ನಡೆಸಿದ್ದೇನೆ, ಕಂಪನಿಯಲ್ಲಿನ 59 ಕಾರ್ಮಿಕರು ಹಾಗು ಕಂಪನಿ ಜೊತೆಗೆ ದೊಡ್ಡ ಅಂತರ ನಿರ್ಮಾಣವಾಗಿದೆ, ಅನುಮತಿ ಪಡೆಯದೆ ಕಂಪನಿಯು ಲಾಕೌಟ್ ಮಾಡಿದ್ದು ತಪ್ಪು, ಸಾವಿರಾರು ಕಾರ್ಮಿಕರು ಬಂದ್ ಮಾಡಿದ್ದು ತಪ್ಪಾಗಿದೆ.

ಇದನ್ನೂ ಓದಿ : ಖರ್ಗೆಗೆ ಸಿಎಂ ಸ್ಥಾನ ತಪ್ಪಿಸಿದ್ದು ಯಾರು ಅಂತ ಹೆಸರು ಹೇಳಿಬಿಡಿ: ದೇವೇಗೌಡರಿಗೆ ಸಿದ್ದು ಸವಾಲ್​​

ಈ ವಿಚಾರದಲ್ಲಿ ಇಬ್ಬರು ತಪ್ಪು ಮಾಡಿದ್ದಾರೆ, ಕಾರ್ಮಿಕ ಇಲಾಖೆಯ 10/2 ನಿಯಮದಡಿ ಇಬ್ಬರಿಗೂ ನೋಟೀಸ್ ನೀಡಿದ್ದೇವೆ, ಸಿಎಂ ಯಡಿಯೂರಪ್ಪ ಅವರು ಸಭೆ ನಡೆಸಿದ ನಂತರ, ಈಗ ಕಂಪನಿಯಲ್ಲಿ ಮೊದಲ ಶಿಫ್ಟ್​​ನಲ್ಲಿ ಕಾರ್ಮಿಕರು ಕೆಲಸಕ್ಕೆ ಬಂದಿದ್ದಾರೆ. ಮುಂದೆ ಎರಡನೇ ಶಿಫ್ಟ್​​ ಆರಂಭವಾಗುವ ನಿರೀಕ್ಷೆಯಿದೆ ಎಂದು ತಿಳಿಸಿದ್ದಾರೆ.

ಒಟ್ಟಿನಲ್ಲಿ ವಿಸ್ಟ್ರಾನ್ ಕಂಪನಿ 20 ದಿನದಲ್ಲಿ ಪುನರ್ ಆರಂಭವಾಗಲಿದೆ ಎಂದು ಕಾರ್ಮಿಕ ಸಚಿವರೇ ಮಾಹಿತಿ ನೀಡಿದ್ದು, ಧಾಂದಲೆ ಪ್ರಕರಣದಲ್ಲಿ ನೇರವಾಗಿ ಭಾಗಿಯಾದವರನ್ನ ಹೊರತುಪಡಿಸಿ, ಉಳಿದವರನ್ನ ಕೆಲಸಕ್ಕೆ ಕರೆಸಿಕೊಳ್ಳುವ ಭರವಸೆಯನ್ನ ಕಂಪನಿ ನೀಡಿದ್ದು, ಕಾರ್ಮಿಕ ಸಚಿವರ ಹೇಳಿಕೆಯಿಂದ ಸಾವಿರಾರು ನೌಕರರು ನಿಟ್ಟುಸಿರು ಬಿಟ್ಟಂತಾಗಿದೆ.
Published by:G Hareeshkumar
First published: