ಬಾಗಲಕೋಟೆಯಲ್ಲಿ 31 ಬಿಳಿಜೋಳ ಖರೀದಿ ಕೇಂದ್ರ; ಕ್ವಿಂಟಾಲ್​ಗೆ 2640 ರೂಗೆ ಮಾಲ್ದಂಡಿ ಜೋಳ ಖರೀದಿ: ಜಿಲ್ಲಾಧಿಕಾರಿ

ಬೆಂಬಲ ಬೆಲೆ ಯೋಜನೆಯಡಿ ಪ್ರತೀ ಕ್ವಿಂಟಾಲ್ಗೆ 2,640 ರೂ ದರದಲ್ಲಿ 1.6 ಲಕ್ಷ ಕ್ವಿಂಟಾಲ್ ಪ್ರಮಾಣದ ಮಾಲ್ದಂಡಿ ಬಿಳಿ ಜೋಳವನ್ನು ಖರೀದಿಸುವಂತೆ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ. ಕೆ ರಾಜೇಂದ್ರ ತಿಳಿಸಿದ್ಧಾರೆ.

ಬಾಗಲಕೋಟೆ ಜಿಲ್ಲಾಧಿಕಾರಿ ಮತ್ತು ಆಹಾರ ಇಲಾಖೆ ಅಧಿಕಾರಿ

ಬಾಗಲಕೋಟೆ ಜಿಲ್ಲಾಧಿಕಾರಿ ಮತ್ತು ಆಹಾರ ಇಲಾಖೆ ಅಧಿಕಾರಿ

  • Share this:
ಬಾಗಲಕೋಟೆ: ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಎಫ್.ಎ.ಕ್ಯೂ ಗುಣಮಟ್ಟದ ಮಾಲ್ದಂಡಿ ಜೋಳವನ್ನು ಪ್ರತಿ ಕ್ವಿಂಟಲ್‍ಗೆ 2640 ರೂ.ಗಳಲ್ಲಿ ಖರೀದಿ ಪ್ರಕ್ರಿಯೆಯನ್ನು ರೈತರ ಹಿತದೃಷ್ಠಿಯಿಂದ ಹೋಬಳಿ ಮಟ್ಟದಲ್ಲಿ ಪ್ರಾರಂಭಿಸಲಾಗಿದೆ ಎಂದು ಬಾಗಲಕೋಟೆ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ. ಕೆ ರಾಜೇಂದ್ರ ಅವರು ತಿಳಿಸಿದರು. ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಇತ್ತೀಚೆಗೆ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು ಜಿಲ್ಲೆಯಲ್ಲಿ ಈಗಾಗಲೇ ಕೆ.ಎಫ್.ಸಿ.ಎಸ್ ಮೂಲಕ 6 ಖರೀದಿ ಕೇಂದ್ರಗಳನ್ನು ತಾಲೂಕಿಗೆ ಒಂದರಂತೆ ತೆರೆಯಲಾಗಿತ್ತು. ರೈತರ ಹಿತದೃಷ್ಠಿಯಿಂದ ಗ್ರಾಮೀಣ ಭಾಗದ ಹೋಬಳಿ ವ್ಯಾಪ್ತಿಯಲ್ಲಿ ಪಿಕೆಪಿಎಸ್, ವಿಎಸ್‍ಎಸ್‍ಎನ್, ಎಫ್‍ಪಿಓ, ಟಿಎಪಿಸಿಎಂಎಸ್ ಮೂಲಕ ಹೆಚ್ಚುವರು ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಹೇಳಿದರು.

ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚಾಗಿ ಜೋಳ ಬಳಸುತ್ತಿರುವುದರಿಂದ ಅಕ್ಕಿಯ ಜೊತೆ ಜೋಳ ನೀಡುವ ದೃಷ್ಠಿಯಿಂದ ಆಹಾರ ಇಲಾಖೆ ಸಚಿವರು ನಿರ್ದೇಶನ ನೀಡಿದ್ದು, ಬೆಂಬಲ ಬೆಲೆ ಯೋಜನೆಯಡಿ 1.60 ಲಕ್ಷ ಕ್ವಿಂಟಲ್ ಮಾಲ್ದಂಡಿ ಬಿಳಿ ಜೋಳ ಖರೀದಿಸುವ ಗುರಿ ಹೊಂದಲಾಗಿದೆ. ರೈತರು ಪ್ರತಿ ಎಕರೆಗೆ 15 ಕ್ವಿಂಟಾಲ್‍ನಂತೆ ಖರೀದಿಸಲಾಗುತ್ತಿದೆ. ಖರೀದಿಗೆ ಯಾವುದೇ ಗರಿಷ್ಠ ಮಿತಿ ಇರುವದಿಲ್ಲ. ಗುಣಮಟ್ಟದ ಬಿಳಿ ಜೋಳವನ್ನು 50 ಕೆಜಿ ಸಾಮರ್ಥದ ಗೋಣಿ ಚೀಲದಲ್ಲಿ ಖರೀದಿ ಕೇಂದ್ರಕ್ಕೆ ತರಬೇಕು. ಪ್ರತಿ ಚೀಲಕ್ಕೆ 22 ರೂ.ಗಳಂತೆ ಹಾಗೂ ಖರೀದಿ ಮೊತ್ತವನ್ನು ಡಿಬಿಟಿ ಮೂಲಕ ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಪಾವತಿಸಾಗುತ್ತಿದೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: ಪವಾಡ ಪುರುಷ ಶಿವಾನಂದ ಮಠ ಶ್ರೀಗಳ ಶತಮಾನದ ರಥೋತ್ಸವದಲ್ಲಿ ಸಹಸ್ರಾರು ಭಕ್ತರ ಸಂಭ್ರಮ

ರೈತರು ನೊಂದಣಿಗೆ ಕೃಷಿ ಇಲಾಖೆಯಿಂದ ನೀಡಿರುವ ಪ್ರೂಟ್ಸ ಐಡಿ ನಂಬರನ್ನು ಖರೀದಿ ಕೇಂದ್ರದಲ್ಲಿ ನೀಡಬೇಕು. ನೊಂದಣಿ ಹಾಗೂ ಖರೀದಿಗೆ ಮಾರ್ಚ್ 31 ಕೊನೆಯದಿನವಾಗಿದೆ. ಬಿಳಿ ಜೋಳ ಖರೀದಿ ಕುರಿತು ರೈತ ಸಂಪರ್ಕ ಕೇಂದ್ರ, ಗ್ರಾಮ ಪಂಚಾಯತ್, ಎಪಿಎಂಸಿ ಹಾಗೂ ಇತರೆ ಸಾರ್ವಜನಿಕ ಸ್ಥಳಗಳಲ್ಲಿ ಕರಪತ್ರ ವಿತರಣೆ, ಬ್ಯಾನರ್ ಅಂಟಿಸಲು ಖರೀದಿ ಏಜೆನ್ಸಿಯವರಿಗೆ ಸೂಚಿಸಲಾಗಿದೆ. ಮಧ್ಯವರ್ತಿ, ಏಜೆಂಟರ ಸಹಾಯವಿಲ್ಲದೇ ನೇರವಾಗಿ ಮಾಹಿತಿ ಪಡೆದು ಬಿಳಿಜೋಳ ನೀಡುವಂತಹದ್ದು ಎಂದರು. ಪತ್ರಿಕಾಗೋಷ್ಠಿಯಲ್ಲಿ ಆಹಾರ ಇಲಾಖೆಯ ಉಪನಿರ್ದೇಶಕ ಶ್ರೀಶೈಲ ಕಂಕಣವಾಡಿ ಇದ್ದರು.

ಜಿಲ್ಲೆಯಲ್ಲಿ 31 ಖರೀದಿ ಕೇಂದ್ರ:

ಬಾದಾಮಿ ತಾಲೂಕಿನಲ್ಲಿ ಕೆಎಫ್‍ಸಿಎಸ್‍ಸಿ ಬಾದಾಮಿ, ಪಿಕೆಪಿಎಸ್ ಕೆರೂರ, ಟಿ.ಎ.ಪಿ.ಸಿ.ಎಂ.ಎಸ್ ಬಾದಾಮಿ, ಕೆಎಫ್‍ಸಿಎಸ್‍ಸಿ ಗುಳೇದಗುಡ್ಡ, ಬಾಗಲಕೋಟೆ ತಾಲೂಕಿ ಕೆಎಫ್‍ಸಿಎಸ್‍ಸಿ, ಟಿ.ಎಪಿಸಿಎಂಎಸ್ ಬಾಗಲಕೋಟೆ, ಪಿಕೆಪಿಎಸ್ ಹಳ್ಳೂರ, ಅಚನೂರ, ಬೆನಕಟ್ಟಿ, ಇಲಕಲ್ಲ ತಾಲೂಕಿನ ಪಿಕೆಪಿಎಸ್ ಇಲಕಲ್ಲ, ನಂದವಾಡಗಿ, ಬೀಳಗಿ ತಾಲೂಕಿನ ಕೆಎಫ್‍ಸಿಎಸ್‍ಸಿ, ಟಿ.ಎಪಿ.ಸಿಎಂಎಸ್ ಬೀಳಗಿ, ಮುಧೋಳ ತಾಲೂಕಿನ ಕೆಎಫ್‍ಸಿಎಸ್‍ಸಿ, ಟಿ.ಎ.ಪಿ.ಸಿ.ಎಂ.ಎಸ್ ಮುಧೋಳ, ಹುನಗುಂದ ತಾಲೂಕಿನ ಕೆಎಫ್‍ಸಿಎಸ್‍ಸಿ, ಟಿ.ಎ.ಪಿ.ಸಿ.ಎಂ.ಎಸ್, ಪಿಕೆಪಿಎಸ್ ಹುನಗುಂದ, ಪಿಕೆ.ಪಿಎಸ್ ಕರಡಿ, ಕೂಡಲಸಂಗಮ, ಹಿರೇಆದಾಪೂರ, ಕಂದಗಲ್, ಬೂದಿಹಾಳ, ಎಫ್.ಪಿ.ಓ ಅಮರಾವತಿ, ಸೂಳೆಬಾವಿ, ಮೂಗನೂರ, ಪಿಕೆ.ಪಿಎಸ್ ಚಿಕ್ಕ ಸಿಂಗನಗುತ್ತಿ, ಜಮಖಂಡಿ ತಾಲೂಕಿನಲ್ಲಿ ಕೆಎಫ್‍ಸಿಎಸ್‍ಸಿ, ಟಿ.ಎಪಿ.ಸಿಎಂಎಸ್ ಜಮಖಂಡಿ, ಪಿಕೆಪಿಎಸ್ ಸಾವಳಗಿ, ಎಫ್‍ಪಿ.ಓ ತೊದಲಬಾಗಿ ಕೇಂದ್ರಗಳಲ್ಲಿ ಬಿಳಿ ಜೋಳ ಖರೀದಿಸಲಾಗುತ್ತದೆ.

ಇದನ್ನೂ ಓದಿ: Bengaluru Covid-19: ಬೆಂಗಳೂರಿನಲ್ಲಿ ವಿದ್ಯಾಪೀಠದಲ್ಲಿ ಕ್ಲಸ್ಟರ್ ಮಾದರಿಯ ಕೊರೋನಾ ಕೇಸ್ ಪತ್ತೆ; ಹಾಸ್ಟೆಲ್​ನ 158 ಜನ ಕ್ವಾರಂಟೈನ್!

ಕೋವಿಡ್ ಲಸಿಕೆ : ಶೇ.78 ರಷ್ಟು ಸಾಧನೆ..

ಜಿಲ್ಲೆಯಲ್ಲಿ ಕೋವಿಡ್-19 ಲಸಿಕೆ ವಿತರಣೆಯಲ್ಲಿ ಮೊದಲನೇ ಮತ್ತು ಎರಡನೇ ಹಂತದಲ್ಲಿ ಶೇ.78 ರಷ್ಟು ಸಾಧನೆ ಮಾಡಲಾಗಿದೆ. ಈಗ 3ನೇ ಹಂತದ ಲಸಿಕಾಕಾರಣ ಆರಂಭಿಸಲಾಗಿದ್ದು, ಇದಕ್ಕಾಗಿ ಜಿಲ್ಲೆಯಲ್ಲಿ 73 ಲಸಿಕಾಕರಣ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಜಿಲ್ಲಾ ಆಸ್ಪತ್ರೆ, 5 ತಾಲೂಕಾ ಆಸ್ಪತ್ರೆ, 8 ಸಮುದಾಯ ಆರೋಗ್ಯ ಕೇಂದ್ರ, 48 ಪ್ರಾಥಮಿಕ ಆರೋಗ್ಯ ಕೇಂದ್ರ, 7 ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ 4 ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ನೀಡಲಾಗುತ್ತಿದೆ. 3ನೇ ಹಂತದಲ್ಲಿ 45 ರಿಂದ 59 ವರ್ಷದ ಅನಾರೋಗ್ಯ ಹೊಂದಿದವರು ಹಾಗೂ 60 ವರ್ಷದ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ 1.54 ಲಕ್ಷ 60 ವರ್ಷದ ಮೇಲ್ಪಟ್ಟವರಿದ್ದು, ಇದರಲ್ಲಿ 1104 ಜನ ಮಾತ್ರ ಲಸಿಕೆ ಪಡೆದಿದ್ದಾರೆ. ಲಸಿಕೆ ಸಂಪೂರ್ಣ ಸುರಕ್ಷಿತವಾಗಿದ್ದು, ಯಾವುದೇ ಅಡ್ಡ ಪರಿಣಾಮಗಳಿಲ್ಲ. ಆದ್ದರಿಂದ ಲಸಿಕೆ ಪಡೆಯಲು ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ. ಕೆ ರಾಜೇಂದ್ರ ಮನವಿ ಮಾಡಿಕೊಂಡರು.

ವರದಿ: ರಾಚಪ್ಪ ಬನ್ನಿದಿನ್ನಿ
Published by:Vijayasarthy SN
First published: