ಶಿವಮೊಗ್ಗ (ಜುಲೈ 25); ಸಿಎಂ ಯಡಿಯೂರಪ್ಪ ತವರು ಕ್ಷೇತ್ರ ಶಿಕಾರಿಪುರದಲ್ಲಿ ವಾಮವರ್ಗದ ಮೂಲಕ ಪುರಸಭೆ ಅಧಿಕಾರ ಹಿಡಿಯಲು ಬಿಜೆಪಿ ಮುಂದಾಗಿ ಎಂಬ ಆರೋಪ ಕೇಳಿ ಬಂದಿದೆ. ಕಾಂಗ್ರೆಸ್ 12 ಸ್ಥಾನಗಳಲ್ಲಿ ಗೆದ್ದು ಅಧಿಕಾರ ಚುಕ್ಕಾಣಿ ಹಿಡಿಯಲು ಮುಂದಾಗಿತ್ತು. ಆದರೆ, ಇಬ್ಬರು ಕಾಂಗ್ರೆಸ್ ಸದಸ್ಯರು ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿರುವುದು ಕಾಂಗ್ರೆಸ್‌ಗೆ ಹಿನ್ನೆಡೆ ಉಂಟು ಮಾಡಿದೆ. ಹೀಗಾಗಿ ಶಿಕಾರಿಪುರ ಪುರಸಭೆಯಲ್ಲಿ ಆಪರೇಷನ್ ಕಮಲ ನಡೆದಿದೆ, ಇದರ ವಿರುದ್ಧ ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು ಕಾಂಗ್ರೇಸ್ ಮುಖಂಡರು ಎಚ್ಚರಿಕೆ ನೀಡಿದ್ದಾರೆ.
ಶಿಕಾರಿಪುರ ರಾಜ್ಯಕ್ಕೆ ಸಿಎಂ ನೀಡಿದ ವಿಧಾನಸಭಾ ಕ್ಷೇತ್ರ. ಆದರೆ, ಅದೇಕೋ ಗೊತ್ತಿಲ್ಲ. ಕಳೆದ ಒಂದು ವರ್ಷ ಎರಡು ತಿಂಗಳ ಹಿಂದೆ ನಡೆದ ಶಿಕಾರಿಪುರ ಪುರಸಭೆ ಚುನಾವಣೆಯಲ್ಲಿ ಮಾತ್ರ ಕಾಂಗ್ರೆಸ್ ಪಕ್ಷಕ್ಕೆ ಮತದಾರರು ಜೈ ಎಂದಿದ್ದರು. 23 ಸ್ಥಾನಗಳಲ್ಲಿ ಕಾಂಗ್ರೆಸ್‌ಗೆ 12 ಸ್ಥಾನ ಗಳಿಸಿ ಅಧಿಕಾರ ಹಿಡಿಯುವ ಆಸೆಯಲ್ಲಿತ್ತು. ಬಿಜೆಪಿಗೆ ಮತದಾರರು 8 ಸ್ಥಾನ ಮಾತ್ರ ನೀಡಿದ್ದರು. 3 ಜನ ಪಕ್ಷೇತರರು ಜಯಗಳಿಸಿದ್ದರು.
ಕಳೆದ 25 ವರ್ಷಗಳಿಂದ ಶಿಕಾರಿಪುರ ಪುರಸಭೆಯಲ್ಲಿ ಅಧಿಕಾರ ನಡೆಸಿದ್ದ ಬಿಜೆಪಿಗೆ ಈ ಚುನಾವಣೆಯಲ್ಲಿ ಮತದಾರರು ಅಘಾತ ನೀಡಿದ್ದರು. ಯಡಿಯೂರಪ್ಪ ತವರು ಕ್ಷೇತ್ರದಲ್ಲೇ ಬಿಜೆಪಿಗೆ ಸೋತು ರಾಜ್ಯಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಒಂದು ವರ್ಷ ಎರಡು ತಿಂಗಳ ಆದರೂ, ಮೀಸಲಾತಿ ಕಾರಣದಿಂದ ಮತ್ತು ಕೋರ್ಟ್ ನಲ್ಲಿ ಕೇಸು ನಡೆಯುತ್ತಿರುವ ಹಿನ್ನೆಲೆಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ನೇಮಕ ಇದುವರೆಗೂ ಆಗಿಲ್ಲ.
ಕಳೆದ ಒಂದು ವರ್ಷದಿಂದ ಕಾಂಗ್ರೆಸ್ ಗೆ ಬಹುಮತವಿದ್ದರೂ ಅಧಿಕಾರ ಅನುಭವಿಸಲು ಸಾಧ್ಯವಾಗಿಲ್ಲ. ಆದರೆ, ಇದೀಗ ಬಿಜೆಪಿ ಆಪರೇಷನ್ ಕಮಲ ಮಾಡಿದೆ ಎಂಬ ಆರೋಪ ಕೇಳಿ ಬಂದಿದೆ. ಶಿಕಾರಿಪುರ ಪುರಸಭೆಯಲ್ಲಿ ವಾಮ ಮಾರ್ಗದಿಂದ ಅಧಿಕಾರ ಹಿಡಿಯಲು ಆಪರೇಷನ್ ಕಮಲ ಮಾಡಲಾಗಿದೆ ಎಂದು ಯಡಿಯೂರಪ್ಪ ಮತ್ತು ಸಂಸದ ರಾಘವೇಂದ್ರ ವಿರುದ್ಧ ಕಾಂಗ್ರೆಸ್ ನಾಯಕರು ಕಿಡಿಕಾರುತ್ತಿದ್ದಾರೆ.
ಸಿಎಂ ಯಡಿಯೂರಪ್ಪ ರಾಜ್ಯದಲ್ಲಿ ಆಪರೇಷನ್ ಕಮಲ ಮಾಡಿದರೆ ಮಗ ಸಂಸದ ಬಿ.ವೈ. ರಾಘವೇಂದ್ರ ಶಿಕಾರಿಪುರದಲ್ಲಿ ಆ ಕೆಲಸ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಯಡಿಯೂರಪ್ಪನವರ ಮನೆ ಇರುವಂತ ವಾರ್ಡ್ ನಲ್ಲೇ ಬಿಜೆಪಿ ಅಭ್ಯರ್ಥಿ ಸೋತಿದ್ದು, ಆ ಸಮಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಇದು ಯಡಿಯೂರಪ್ಪ ಸೇರಿದಂತೆ ಬಿ.ವೈ.ರಾಘವೇಂದ್ರ ಅವರಿಗೆ ಮುಖಭಂಗವಾಗಿತ್ತು. ಇದೀಗ ಮರ್ಯಾದೆ ಉಳಿಸಿಕೊಳ್ಳಲು ಹಾಗೂ ಬಿಜೆಪಿ ಆಡಳಿತದಲ್ಲಿ ಆಗಿರುವ ಭ್ರಷ್ಟಾಚಾರವನ್ನು ಮುಚ್ಚಿಕೊಳ್ಳಲು ಆಪರೇಷನ್ ಕಮಲಕ್ಕೆ ಕೈ ಹಾಕಿ ಕಾಂಗ್ರೆಸ್ ಸದಸ್ಯರಾದ ರಮೇಶ್ ಹಾಗೂ ಉಮಾವತಿ ಅವರಿಂದ ರಾಜೀನಾಮೆ ಕೊಡಿಸಲಾಗಿದೆ ಎಂದು ಕಾಂಗ್ರೇಸ್ ಸದಸ್ಯರು ಆರೋಪಿಸಿದ್ದಾರೆ.
ಇಬ್ಬರು ಸದಸ್ಯರಿಗೆ ರಾಜೀನಾಮೆ ನೀಡಲು ತಲಾ 20 ಲಕ್ಷ ರೂಪಾಯಿ ಹಣ ನೀಡಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಇನ್ನು ಪುರಸಭೆಯಲ್ಲಿ 35 ಸಿಬ್ಬಂದಿಗಳ ಹುದ್ದೆ ಖಾಲಿ ಇದ್ದರೂ ಸಹ ಇದುವರೆಗೆ ಭರ್ತಿ ಮಾಡಿಲ್ಲ. ಇದರಿಂದಾಗಿ ಅಭಿವೃದ್ದಿ ಕೆಲಸಗಳು ಆಗುತ್ತಿಲ್ಲ. ಚುನಾವಣೆ ನಡೆದು ಒಂದು ವರ್ಷ ಎರಡು ತಿಂಗಳು ಆಗಿದ್ದರೂ ಸಹ ಇದುವರೆಗೂ ಅಧ್ಯಕ್ಷ-ಉಪಾಧ್ಯಕ್ಷರ ನೇಮಕವಾಗಿಲ್ಲ. ಸದಸ್ಯರಿಗೆ ಗೌರವವೂ ಸಿಗುತ್ತಿಲ್ಲ ಹಾಗೂ ಕೆಲಸವೂ ಆಗುತ್ತಿಲ್ಲ ಎಂದು ಸದ್ಯಸ್ಯರು ಸಿಎಂ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.
ಸಿಎಂ ಸ್ಥಾನದಲ್ಲಿ ಇರುವಂತ ಯಡಿಯೂರಪ್ಪ ಪುರಸಭೆಯಂತಹ ರಾಜಕಾರಣಕ್ಕೆ ಕೈ ಹಾಕಿದ್ದಾರೆ. ಪ್ರಜಾಪ್ರಭುತ್ವದ ಕಗ್ಗೋಲೆ ಮಾಡಲು ಹೋರಟಿದ್ದಾರೆ ಎಂಬುದು ಕಾಂಗ್ರೇಸ್ ಆರೋಪ. 25 ವರ್ಷಗಳಿಂದ ಬಿಜೆಪಿಯರು ಇಲ್ಲಿ ಅಡಳಿತ ಮಾಡಿದ್ದಾರೆ. ಅವರ ಆಡಳಿತ ಸರಿಯಿಲ್ಲ ಎಂದು ಕಾಂಗ್ರೆಸ್‌ಗೆ ಶಿಕಾರಿಪುರದ ಜನರು ಮತ ನೀಡಿದ್ದಾರೆ.
ಇದನ್ನೂ ಓದಿ : ರಾಜಸ್ಥಾನದ ಸರ್ಕಾರವನ್ನು ಉರುಳಿಸಲು ಬಿಜೆಪಿ ಷಡ್ಯಂತ್ರ ಸ್ಪಷ್ಟವಾಗಿದೆ; ರಾಹುಲ್ ಗಾಂಧಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ