HOME » NEWS » District » WILD ELEPHANTS STORMING AROUND VILLAGES CREATE PANIC AMONG PEOPLE IN KANAKAPURA ATVR SNVS

ಕನಕಪುರದ ಗ್ರಾಮಗಳಲ್ಲಿ ಕಾಡಾನೆಗಳ ಹಾವಳಿ; ರೈತರ ಬೆಳೆ ನಾಶ – ಪ್ರಾಣಭೀತಿಯಲ್ಲಿ ಅನ್ನದಾತರು

ಕಾಡಿನಲ್ಲಿ ಸೂಕ್ತ ಆಹಾರ, ನೀರಿಲ್ಲದ ಕಾರಣ ಕಾಡಾನೆಗಳು ನಾಡಿಗೆ ದಾಂಗುಡಿ ಇಟ್ಟು ರೈತರಲ್ಲಿ ಭಯಭೀತಿ ಸೃಷ್ಟಿಸಿವೆ. ರಾಮನಗರ-ಕನಕಪುರ ಗಡಿಭಾಗದ ಗ್ರಾಮಗಳಲ್ಲಿ ಜನರು ಜೀವ ಕೈಯಲ್ಲಿಡಿದು ಬದುಕು ನಡೆಸುವಂತಾಗಿದೆ.

news18-kannada
Updated:March 22, 2021, 9:17 AM IST
ಕನಕಪುರದ ಗ್ರಾಮಗಳಲ್ಲಿ ಕಾಡಾನೆಗಳ ಹಾವಳಿ; ರೈತರ ಬೆಳೆ ನಾಶ – ಪ್ರಾಣಭೀತಿಯಲ್ಲಿ ಅನ್ನದಾತರು
ಕನಕಪುರದಲ್ಲಿ ಕಾಡಾನೆ
  • Share this:
ರಾಮನಗರ: ರಾಮನಗರ ಜಿಲ್ಲೆ ಕನಕಪುರ ಪಟ್ಟಣದಲ್ಲಿಯೇ ಆನೆ ಪ್ರತ್ಯಕ್ಷವಾಗಿದ್ದು ಸಾರ್ವಜನಿಕರು ಆತಂಕಗೊಂಡಿದ್ದಾರೆ. ಇದೇ ವೇಳೆ ಸೀಮೆ ಕರುವಿನ ಮೇಲೆ ದಾಳಿ ನಡೆಸಿ ಆನೆ ಪರಾರಿಯಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದರೂ ಯಾವುದೇ ಪ್ರಯೋಜನವಾಗಲಿಲ್ಲ. ಈ ವರೆಗೆ ಗ್ರಾಮಾಂತರ ಪ್ರದೇಶದಲ್ಲಿ ಕಾಣಿಸಿಕೊಳ್ಳುತ್ತಿದ್ದ ಅನೆಗಳು, ಈಗ ನಗರದಲ್ಲಿಯೂ ಕಾಣಿಸಿಕೊಂಡು ಆತಂಕ ಸೃಷ್ಟಿಸಿವೆ.‌ ಕನಕಪುರ ಪಟ್ಟಣದ ಕೋಟೆ ಬೀದಿಯಲ್ಲಿನ ಅರ್ಕಾವತಿ ನದಿ ದಡದಲ್ಲೇ 2 ಆನೆಗಳು ಪ್ರತ್ಯಕ್ಷವಾಗಿದ್ದವು. ಕ್ಯಾಮರಾ ಕಣ್ಣಿಗೆ ಸದ್ಯಕ್ಕೆ ಒಂದು ಆನೆ ಮಾತ್ರ ಬಿದ್ದಿದೆ. ಕನಕಪುರದ ಅಂಚಿನಲ್ಲಿರುವ ಬಿಳಿಕಲ್ಲು ಬೆಟ್ಟದಿಂದ ಈ ಆನೆಗಳು ಅರ್ಕಾವತಿ ನದಿ ಪಾತ್ರಕ್ಕೆ ಎಂಟ್ರಿಯಾಗಿವೆ. ‌ಕಾಡಲ್ಲಿ ಸೂಕ್ತ ಆಹಾರ, ನೀರಿಲ್ಲದ ಕಾರಣ ನಾಡಿಗೆ ದಾಂಗುಡಿ ಇಟ್ಟಿವೆ. ನದಿ ದಾಟಿ ಕರುವಿನ ಮೇಲೆ ದಾಳಿ ನಡೆಸಿದ ಕಾಡಾನೆ ನಂತರ ರೈತರ ಜಮೀನುಗಳ ಮೂಲಕ ಪರಾರಿಯಾಗಿದೆ.

ಪರಿಹಾರವೂ ಇಲ್ಲ, ಕಾಡಾನೆಗಳ ದಾಳಿಗೆ ತಡೆಯೂ ಇಲ್ಲ:

ರಾಮನಗರ ಜಿಲ್ಲೆ ಚನ್ನಪಟ್ಟಣ - ಕನಕಪುರ ಗಡಿ ಗ್ರಾಮಗಳು ಹಾಗೂ ರಾಮನಗರ - ಚನ್ನಪಟ್ಟಣ ಗಡಿ ಗ್ರಾಮಗಳಲ್ಲಿ ಸರಿಸುಮಾರು 30 ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ದಾಳಿ ನಡೆಸಿ ರೈತರ ಬೆಳೆಗಳನ್ನ ಸಂಪೂರ್ಣ ನಾಶಪಡಿಸುತ್ತಲೇ ಇವೆ. ಈ ಗಡಿಭಾಗದ ಸರಿಸುಮಾರು 60 ಕ್ಕೂ ಹೆಚ್ಚು ಗ್ರಾಮಗಳಲ್ಲಿ ತಡರಾತ್ರಿಯ ವೇಳೆ ಕಾಡಾನೆಗಳು ದಾಳಿ ನಡೆಸುತ್ತವೆ. ಪ್ರಮುಖವಾಗಿ ತೆಂಗಿನಕಲ್ಲು ಅರಣ್ಯ ಪ್ರದೇಶ, ಮುತ್ತತ್ತಿ ಅರಣ್ಯ ಪ್ರದೇಶ, ಕಬ್ಬಾಳು ಅರಣ್ಯ ಪ್ರದೇಶ, ಕಾವೇರಿ ವನ್ಯಜೀವಿ ಧಾಮದಿಂದಲೂ ಸಹ ಬಂದಿರುವ ಕಾಡಾನೆಗಳ ಹಿಂಡು ರೈತರ ಬೆಳೆಗಳನ್ನ ಸಂಪೂರ್ಣ ನಾಶಪಡಿಸುತ್ತಿವೆ. ಇನ್ನೇನು ಕಟಾವು ಮಾಡಬೇಕಿದ್ದ ಟೊಮ್ಯಾಟೊ ಬೆಳೆ, ಬಾಳೆ, ತೆಂಗು, ರಾಗಿ, ಭತ್ತ ಸೇರಿದಂತೆ ಹಲವು ಕೃಷಿ ಬೆಳೆಗಳನ್ನ ಕಳೆದುಕೊಂಡ ರೈತರ ಕುಟುಂಬದವರು ಸರ್ಕಾರಕ್ಕೆ ಹಿಡಿಶಾಪ ಹಾಕಿದ್ದಾರೆ.

ಇನ್ನು ಕಾಡಾನೆಗಳ ದಾಳಿಯಿಂದ ಲಕ್ಷಾಂತರ ರೂ ಹಣ ನಷ್ಟವಾಗಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ. ಕಳೆದ ಸುಮಾರು ವರ್ಷಗಳಿಂದ ಈ ಭಾಗದಲ್ಲಿ ನಿರಂತರವಾಗಿ ಕಾಡಾನೆಗಳ ದಾಳಿ ನಡೆಯುತ್ತಿದ್ದರೂ ಸಂಬಂಧಿಸಿದ ಅರಣ್ಯಾಧಿಕಾರಿಗಳು, ಸರ್ಕಾರ ಸಹ ಯಾವುದೇ ಕ್ರಮವಹಿಸುತ್ತಿಲ್ಲ ಎಂದು ನೊಂದ ರೈತರು ಆಕ್ರೋಶವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Bangalore Crime: ಬೆಂಗಳೂರಿನ ಚಿಟ್​ಫಂಡ್ ಕಂಪನಿಯಿಂದ ಕೋಟಿ ಕೋಟಿ ಲೂಟಿ; ಮೂವರು ಅಣ್ಣ-ತಮ್ಮಂದಿರ ಬಂಧನ

ಅಂದಹಾಗೆ ರೇಷ್ಮೆನಗರಿ ರಾಮನಗರ ಜಿಲ್ಲೆಯಲ್ಲಿ ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗುತ್ತಿವೆ. ಒಂದಲ್ಲ ಒಂದು ಗ್ರಾಮದಲ್ಲಿ ಕಾಡನೆಗಳ ಹಿಂಡು ರೈತರ ಬೆಳೆಗಳನ್ನ ನಾಶಪಡಿಸುತ್ತಲೇ ಇವೆ. ವರ್ಷಗಳಿಂದ ಕಾಪಾಡಿಕೊಂಡು ಬಂದ ಮಾವಿನ ಗಿಡಗಳು, ತೆಂಗಿನ ಮರಗಳು ನಾಶವಾಗುತ್ತಿವೆ. ಅರಣ್ಯ ಇಲಾಖೆ ಅಧಿಕಾರಿಗಳು ಕಾಡಾನೆಗಳ ಹಿಂಡು ಅರಣ್ಯದಿಂದ ಹೊರ ಬರದಂತೆ ಟ್ರೆಂಚ್‌ಗಳನ್ನ ನಿರ್ಮಾಣಮಾಡಬೇಕು ಅಂತಾ ರೈತರು ಆಗ್ರಹಪಡಿಸುತ್ತಿದ್ದಾರೆ. ಅಲ್ಲದೆ ಅರಣ್ಯ ಇಲಾಖೆ, ಸರ್ಕಾರ ಬೆಳೆಗಳನ್ನ ಕಳೆದುಕೊಂಡ ರೈತರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸುತ್ತಿದ್ದಾರೆ.

ಪರಿಹಾರದ ಭರವಸೆಗೆ ಬೆಲೆಯೇ ಇಲ್ಲ:ಕಾಡಾನೆಗಳ ದಾಳಿಯಿಂದ ಬೆಳೆ ಕಳೆದುಕೊಂಡ ರೈತರ ಪಾಡು ಆ ದೇವರಿಗೆ ಪ್ರೀತಿ. ಘಟನೆ ನಡೆದಾಗ ಸ್ಥಳಕ್ಕೆ ಬರುವ ಅರಣ್ಯಾಧಿಕಾರಿಗಳು ರೈತರಿಗೆ ಸಮಾಧಾನದ ಮಾತನಾಡಿ ಪರಿಹಾರದ ಭರವಸೆ ನೀಡುತ್ತಾರೆ. ಆದರೆ ಹತ್ತಾರು ವರ್ಷಗಳಿಂದ ಯಾವುದೇ ಪರಿಹಾರ ಸಿಗದೆ ನೊಂದ ರೈತರು ಹಿಡಿಶಾಪ ಹಾಕುತ್ತಿದ್ದಾರೆ. ಆ ಕ್ಷಣಕ್ಕೆ ಬಂದು ಸಮಾಧಾನಪಡಿಸುವ ಅಧಿಕಾರಿಗಳು ನಂತರ ಯಾವುದೇ ಕ್ರಮವಹಿಸಲ್ಲ. ಜೊತೆಗೆ ರೈತರಿಗೆ ಕೊಡಬೇಕಾದ ಪರಿಹಾರವನ್ನ ಸರ್ಕಾರವೂ ಕೊಡುತ್ತಿಲ್ಲ ಎಂಬುದು ನಿಜಕ್ಕೂ ನಾಚಿಕೆಗೇಡು.

ವರದಿ: ಎ.ಟಿ‌. ವೆಂಕಟೇಶ್
Published by: Vijayasarthy SN
First published: March 22, 2021, 9:17 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories