ಶಿವಮೊಗ್ಗದಲ್ಲಿ ಕಾಡಾನೆಗಳ ದಾಳಿಗೆ ಬಲಿಷ್ಠ ಸಾಕಾನೆ ರಂಗ ಬಲಿ; ಸಾವಿಗೆ ಕಾರಣವಾಯ್ತಾ ಸರಪಳಿ?
ಕಾಡಾನೆಗಳ ದಂತದ ಏಟಿಗೆ ರಂಗ ಆನೆಗೆ ಗಂಭೀರ ಗಾಯಗಳಾಗಿದ್ದು, ಕಾಡಿನ ಮಧ್ಯ ಸಾವು ಕಂಡಿದೆ. ಕಾಲು, ಎದೆ, ದೇಹದ ಹಿಂಭಾಗಕ್ಕೆ ದಂತದ ಬಲವಾದ ಪೆಟ್ಟುಗಳು ಬಿದ್ದಿವೆ. ಇದರ ಜೊತೆಗೆ 80 ಅಡಿ ಎತ್ತರದಿಂದ ಬಿದ್ದ ಕಾರಣ ಆನೆ ಸಾವನ್ನಪ್ಪಿದೆ.
ಶಿವಮೊಗ್ಗ: ಸಕ್ರೆಬೈಲು ಆನೆ ಬಿಡಾರದ ರಂಗ ಆನೆ ಮೃತಪಟ್ಟಿದೆ. ಶೆಟ್ಟಿಹಳ್ಳಿ ಅಭಯಾರಣ್ಯದಲ್ಲಿ ಕಾಡಾನೆಗಳ ಜೊತೆ ನಡೆದ ಕಾದಾಟದಲ್ಲಿ ರಂಗ ಸಾವು ಕಂಡಿದೆ. ಬಿಡಾರದ ಆನೆ ರಂಗನ ಕಾಲಿಗೆ ಸರಪಳಿ ಹಾಕಿದ್ದ ಕಾರಣ, ಆತ ಹೆಚ್ಚಿನ ಹೋರಾಟ ನಡೆಸಲು ಸಾಧ್ಯವಾಗಿಲ್ಲ. ರಂಗ ಗಂಡಾನೆ ಆಗಿದ್ದರಿಂದ ಕಾಡಾನೆಗಳು ಆಟ್ಯಾಕ್ ಮಾಡಿವೆ. ಅದೇ ಹೆಣ್ಣಾನೆಯಾಗಿದ್ದರೆ, ಕಾಡಾನೆಗಳು ಕಾದಾಟಕ್ಕೆ ಇಳಿಯುತ್ತಿರಲಿಲ್ಲ. ಕಾಡಾನೆಗಳ ದಂತ ರಂಗನ ಹೊಟ್ಟೆ ಸೇರಿದಂತೆ ಅನೇಕ ಭಾಗಗಳಿಗೆ ಚುಚ್ಚಿ ಗಾಯಗೊಂಡು ಮೃತಪಟ್ಟಿದೆ.
ಶಿವಮೊಗ್ಗ ತಾಲೂಕಿನ ಸಕ್ರೇಬೈಲ್ ಆನೆ ಬಿಡಾರದ ಬಲಿಷ್ಠ ಆನೆ ಎನಿಸಿದ್ದ ರಂಗನಿಗೆ 35 ವರ್ಷ ವರ್ಷ ವಯಸ್ಸಾಗಿತ್ತು. ಗೀತಾ ಆನೆಗೆ ಜನಿನಿಸಿದ್ದ ರಂಗ ಆನೆ ಸಕ್ರೆಬೈಲ್ನ ಆನೆ ಬಿಡಾರದಲ್ಲಿರುವ ಆನೆಗಳ ಪೈಕಿ ಅತ್ಯಂತ ಬಲಿಷ್ಠ ಆನೆ ಎಂಬ ಹೆಗ್ಗಳಿಕೆ ಹೊಂದಿತ್ತು. ಅದೀಗ ಕಾಡಾನೆಗಳ ದಾಳಿಗೆ ಸಿಕ್ಕು ದುರಂತ ಸಾವನ್ನಪ್ಪಿದೆ. ಕಾಡಾನೆಗಳ ದಂತದ ತಿವಿತದಿಂದ ಗಂಭೀರ ಗಾಯಗೊಂಡಿದ್ದೂ ಅಲ್ಲದೆ 80 ಅಡಿ ಎತ್ತರದ ಗುಡ್ಡದಿಂದ ಕೆಳಗೆ ಕಣಿವೆಗೆ ಬಿದ್ದು ಸಾವನ್ನಪ್ಪಿರುವ ಶಂಕೆ ಇದೆ. ತುಂಬ ರಕ್ತ ಸ್ರಾವವಾಗಿ ಆನೆ ಕೊನೆ ಉಸಿರೆಳೆದಿದೆ.
ರಂಗ ಆನೆ ಸಾಕಾನೆಯಾಗಿದ್ದು, ಅದರ ಕಾಲುಗಳಿಗೆ ಸರಪಳಿ ಹಾಕಲಾಗಿತ್ತು. ಹೀಗಾಗಿ ಕಾಡಾನೆಗಳ ಮೇಲೆ ಪ್ರತಿದಾಳಿ ನಡೆಸಿ ಕಾದಾಟ ಮಾಡಲು ರಂಗನಿಗೆ ಸಾಧ್ಯವಾಗಿಲ್ಲ ಎಂಬ ಅನುಮಾನವನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.
ಶೆಟ್ಟಿಹಳ್ಳಿ ಅಭಯಾರಣ್ಯ ವ್ಯಾಪ್ತಿಯಲ್ಲಿ ಮೂರು ಬಲಿಷ್ಠ ಕಾಡಾನೆಗಳಿವೆ. ಆಗಾಗೇ ಅವು ಈ ಭಾಗದಲ್ಲಿ ಹೆಚ್ಚು ಓಡಾಟ ನಡೆಸುತ್ತವೆ. ಹೆಣ್ಣಾನೆಗಳು ಇದ್ದ ಸಮಯದಲ್ಲಿ ಕಾಡಾನೆಗಳು ಏನು ಮಾಡೋಲ್ಲ. ಅದರೆ ಬಿಡಾರದ ಗಂಡಾನೆಗಳು ಎದುರಿಗೆ ಸಿಕ್ಕ ಸಮಯದಲ್ಲಿ ಈ ರೀತಿ ಕಾಡಾನೆಗಳು ದಾಳಿ ನಡೆಸುವ ಸಾಧ್ಯತೆ ಹೆಚ್ಚು ಎಂದು ಅಧಿಕಾರಗಳು ಮಾಹಿತಿ ನೀಡಿದ್ದಾರೆ.
ಕಾಡಾನೆಗಳ ದಂತದ ಏಟಿಗೆ ರಂಗ ಆನೆಗೆ ಗಂಭೀರ ಗಾಯಗಳಾಗಿದ್ದು, ಕಾಡಿನ ಮಧ್ಯ ಸಾವು ಕಂಡಿದೆ. ಕಾಲು, ಎದೆ, ದೇಹದ ಹಿಂಭಾಗಕ್ಕೆ ದಂತದ ಬಲವಾದ ಪೆಟ್ಟುಗಳು ಬಿದ್ದಿವೆ. ಇದರ ಜೊತೆಗೆ 80 ಅಡಿ ಎತ್ತರದಿಂದ ಬಿದ್ದ ಕಾರಣ ಆನೆ ಸಾವನ್ನಪ್ಪಿದೆ. ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಮತ್ತು ವೈದ್ಯರ ತಂಡ ಭೇಟಿ ನೀಡಿದೆ, ಪರಿಶೀಲನೆ ನಡೆಸಿದ್ದಾರೆ.
ರಾಜ್ಯದ 2ನೇ ಅತಿದೊಡ್ಡ ಆನೆ ಬಿಡಾರ ಎಂದು ಖ್ಯಾತಿ ಪಡೆದಿರುವ ಆನೆ ಬಿಡಾರದಲ್ಲಿ ಈಗ ಮೌನ ಆವರಿಸಿದೆ. ಬಿಡಾರದಲ್ಲಿ 24 ಆನೆಗಳು ಇದ್ದು, ಈಗ ರಂಗನ ಸಾವಿನಿಂದ ಬಿಡಾರದ ಆನೆಗಳ ಸಂಖ್ಯೆ 23 ಕ್ಕೆ ಇಳಿದಿದೆ. ಇದರಲ್ಲಿ 19 ಗಂಡಾನೆಗಳು, 6 ಹೆಣ್ಣಾನೆಗಳು ಇವೆ. ವೈದ್ಯರು ಪರೀಕ್ಷೆ ಮತ್ತು ಪರಿಶೀಲನೆ ನಂತರ ಆನೆಯ ಅಂತ್ಯಕ್ರಿಯೆ ನಡೆಸಲಾಯಿತು.
ವರದಿ: ಹೆಚ್ ಆರ್ ನಾಗರಾಜ
Published by:Vijayasarthy SN
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ