Elephant Attack: ತಮಿಳುನಾಡಿನ ಬಸ್ಸು ಅಡ್ಡಗಟ್ಟಿ ಗಾಜು ಒಡೆದು ಹಾಕಿದ ಒಂಟಿ ಸಲಗ; ಆನೆ ರೌದ್ರಾವತಾರಕ್ಕೆ ಬೆಚ್ಚಿಬಿದ್ದ ಪ್ರಯಾಣಿಕರು!

ಅಂದ ಹಾಗೆ ಉದಕಮಂಡಲಕ್ಕೆ ಹೊಂದಿಕೊಂಡಂತಿರುವ ಕಾಡಿನಲ್ಲಿ ಕಾಡಾನೆಗಳು ಅಧಿಕ ಸಂಖ್ಯೆಯಲ್ಲಿ ವಾಸ ಮಾಡುತ್ತಿವೆ. ಕೆಲವೊಮ್ಮೆ ರಸ್ತೆ ದಾಟುವ ವೇಳೆ ಗುಂಪು ಆನೆಗಳು ಕಾಣ ಸಿಗುತ್ತವೆ. ಅಪರೂಪಕ್ಕೆ ಒಂಟಿ ಆನೆಗಳು ವಾಹನ ಸವಾರರ ಮೇಲೆ ದಾಳಿಗೆ ಯತ್ನಿಸುತ್ತವೆ ಎನ್ನಲಾಗಿದೆ.

ತಮಿಳುನಾಡಿನ ಬಸ್ ಅಡ್ಡಗಟ್ಟಿರುವ ಒಂಟಿ ಸಲಗ

ತಮಿಳುನಾಡಿನ ಬಸ್ ಅಡ್ಡಗಟ್ಟಿರುವ ಒಂಟಿ ಸಲಗ

  • Share this:
ಆನೇಕಲ್: ಅದು ಐರಾವತದಂತಹ ಒಂಟಿ ಸಲಗ (Single Elephant). ಮಾರುದ್ದ ಇರುವ ದಂತಗಳು, ದೈತ್ಯಾಕಾರದ ದೇಹ. ಎಂತಹವರು ಒಂದು ಕ್ಷಣ ನಿಂತು ನೋಡಬೇಕು ಎನ್ನುವ ಗಾಂಭೀರ್ಯ. ಒಂಟಿ ಆನೆ ಏನು ಮಾಡುತ್ತೆ ಎಂದುಕೊಂಡಿದ್ದ ಬಸ್ ಚಾಲಕನಿಗೆ ಕಾದಿತ್ತು ಶಾಕ್. ಅರ್ಧ ತಾಸು ಕಳೆದರೂ ಮುಂದಕ್ಕೆ ಅಲುಗಾಡಲು ಬಿಡದ ಒಂಟಿ ಸಲಗ, ಆನೆಯ ಪುಂಡಾಟಕ್ಕೆ ಬಸ್ಸಿನಲ್ಲಿದ್ದ ಪ್ರಯಾಣಿಕರು ಬೆಚ್ಚಿಬಿದ್ದ ಅಪರೂಪದ ಘಟನೆ ಕೊಯಮತ್ತೂರು ಬಳಿ ನಡೆದಿದೆ. ಬಸ್ ಅನ್ನು ತಡೆದು ನಿಲ್ಲಿಸಿದ ಆನೆ ಸುಮಾರು ಅರ್ಧ ಗಂಟೆಗಳ ಕಾಲ ಮುಂದಕ್ಕೆ ಚಲಿಸದಂತೆ ತಡೆದು, ಬಸ್ಸಿನ ಮುಂಭಾಗದ ಗಾಜನ್ನು ಪುಡಿ ಪುಡಿ ಮಾಡಿದೆ. ಆನೆ ಬಸ್ ತಡೆಗಟ್ಟಿದ್ದ ಘಟನೆ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹೌದು, ಅಜಾನುಬಾಹು ಕಾಡಾನೆ ಒಂದು ತಮಿಳುನಾಡು ಸಾರಿಗೆ ಬಸ್ಸ ಅನ್ನು ಅಡ್ಡಗಟ್ಟಿ ದಾಳಿಗೆ ಯತ್ನಿಸಿದೆ. ತಮಿಳುನಾಡಿನ ಕೊಯಮುತ್ತೂರು ಬಳಿ ನಿನ್ನೆ ತಮಿಳುನಾಡು ರಾಜ್ಯ ಸಾರಿಗೆ ಸಂಸ್ಥೆ ಬಸ್ಸಿನ ಮೇಲೆ  ಒಂಟಿ ಸಲಗ ದಾಳಿ ನಡೆಸಿ ಬಸ್ಸಿನ ಗಾಜನ್ನು ಪುಡಿ ಮಾಡಿದೆ. ನಿನ್ನೆ ಕೊಯಮುತ್ತೂರಿನಿಂದ ಉದಕಮಂಡಲ ಮಾರ್ಗವಾಗಿ ತಮಿಳುನಾಡು ರಾಜ್ಯ ಸಾರಿಗೆ ಸಂಸ್ಥೆ ಬಸ್ಸು ಊಟಿಗೆ ಹೊರಟಿತ್ತು. ಮಾರ್ಗ ಮಧ್ಯೆ ಉದಕಮಂಡಲ ಬಳಿ ರಸ್ತೆ ಬದಿಯಲ್ಲಿ ಐರಾವತದಂತಹ ಒಂಟಿ ಸಲಗ ಕಾಣಿಸಿಕೊಂಡಿದೆ. ಬಸ್ಸಿನ ಚಾಲಕ ಸಮೀಪ ಹೋದರೆ ಅದರ ಪಾಡಿಗೆ ಅದು ಕಾಡಿನೊಳಗೆ ಹೊರಟು ಹೋಗುತ್ತದೆ ಎಂದು ಸಲಗದ ಸಮೀಪ ಬಸ್ಸನ್ನು ಕೊಂಡೊಯ್ದಿದ್ದಾನೆ. ಬಸ್ಸು ಸಮೀಪಿಸುತ್ತಿದ್ದಂತೆ ರಸ್ತೆ ಬದಿಯಲ್ಲಿ ನಿಂತಿದ್ದ ಸಲಗ ನಡು ರಸ್ತೆಗೆ ಬಂದು ನಿಂತಿದೆ. ಭಯಗೊಂಡ ಚಾಲಕ ಬಸ್ಸನ್ನು ಹಿಂದಕ್ಕೆ ಚಲಾಯಿಸಿದ್ದಾನೆ. ಈ ವೇಳೆ ಬಸ್ಸ ಅನ್ನೆ ಹಿಂಬಾಲಿಸಿ ಬಂದ ಸಲಗ ದಂತದಿಂದ ಗಾಜು ಹೊಡೆದು ಪುಡಿ ಪುಡಿ ಮಾಡಿದೆ.

ಆನೆಯ ರೌದ್ರಾವತಾರಕ್ಕೆ ಬೆಚ್ಚಿ ಬಿದ್ದ ಪ್ರಯಾಣಿಕರು

ಇನ್ನೂ ಸಲಗದ ಪುಂಡಾಟಕ್ಕೆ ಹೆದರಿದ ಚಾಲಕ ಬಸ್ಸನ್ನು ನಿಲ್ಲಿಸಿದ್ದಾನೆ. ಆದರೂ ಸಲಗ ಮಾತ್ರ ತನ್ನ ಪುಂಡಾಟ ನಿಲ್ಲಿಸಲಿಲ್ಲ. ಜೊತೆಗೆ ಬಸ್ಸು ಮುಂದಕ್ಕೆ ಚಲಿಸಲು ಅವಕಾಶ ನೀಡಲಿಲ್ಲ. ಸಲಗದ ರೌದ್ರಾವತಾರ ಕಂಡ ವಾಹನ ಸವಾರರು ದೂರದಲ್ಲಿಯೇ ವಾಹನಗಳನ್ನು ನಿಲ್ಲಿಸಿದ್ದರಿಂದ ಕಿ.ಮೀ. ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ಕೊನೆಗೆ ಅರ್ಧ ತಾಸಿನ ಬಳಿಕ ಒಂಟಿ ಸಲಗ ಕಾಡಿನತ್ತ ಹೊರಟು ಹೋಗಿದೆ. ಇತ್ತ ಆನೆ ಕಾಡಿನತ್ತ ಹೋಗುತ್ತಿದ್ದಂತೆ ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ. ಒಂಟಿ ಸಲಗದ ಪುಂಡಾಟ ಪ್ರಯಾಣಿಕರ ಮೊಬೈಲ್ ಗಳಲ್ಲಿ ಸೆರೆಯಾಗಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.

ಬಸ್ ಗಾಜು ಒಡೆದು ಹಾಕಿರುವ ಆನೆ


ಅಂದ ಹಾಗೆ ಉದಕಮಂಡಲಕ್ಕೆ ಹೊಂದಿಕೊಂಡಂತಿರುವ ಕಾಡಿನಲ್ಲಿ ಕಾಡಾನೆಗಳು ಅಧಿಕ ಸಂಖ್ಯೆಯಲ್ಲಿ ವಾಸ ಮಾಡುತ್ತಿವೆ. ಕೆಲವೊಮ್ಮೆ ರಸ್ತೆ ದಾಟುವ ವೇಳೆ ಗುಂಪು ಆನೆಗಳು ಕಾಣ ಸಿಗುತ್ತವೆ. ಅಪರೂಪಕ್ಕೆ ಒಂಟಿ ಆನೆಗಳು ವಾಹನ ಸವಾರರ ಮೇಲೆ ದಾಳಿಗೆ ಯತ್ನಿಸುತ್ತವೆ ಎನ್ನಲಾಗಿದೆ.

ಇದನ್ನು ಓದಿ: Western Ghats: ಪಶ್ಚಿಮಘಟ್ಟ ಸಾಲಿನ ಶೋಲಾ ಅರಣ್ಯಕ್ಕೂ ಸಂಚಕಾರ; ವರ್ಷಪೂರ್ತಿನೀರು ಹರಿಸುವ ಕಾನನಕ್ಕೂ ಕೊಡಲಿ ಏಟು!

ಕಾಡಿನ ನಡುವೆ ಹಾದು ಹೋಗುವ ರಸ್ತೆಗಳಲ್ಲಿ ಕಾಡಾನೆಗಳು ಎದುರಾಗುವುದು ಸಹಜ. ಬಹುತೇಕ ಸಂದರ್ಭಗಳಲ್ಲಿ ವಾಹನಗಳನ್ನು ಕಂಡೊಡನೆ ತಮ್ಮ ಪಾಡಿಗೆ ಕಾಡಾನೆಗಳು ಹೊರಟು ಹೋಗುತ್ತವೆ. ಆದ್ರೆ ಕಾಡಾನೆಗಳಿಗೆ ಮದವೇರಿದಾಗ ಹೀಗೆ ಪುಂಡಾಟ ನಡೆಸುತ್ತವೆ ಎನ್ನಲಾಗಿದೆ. ಒಟ್ಟಿನಲ್ಲಿ ಒಂಟಿ ಸಲಗ ಮಾತ್ರ ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ತಮ್ಮ ಜೀವ ಬಾಯಿಗೆ ಬಂದಂತೆ ಮಾಡಿದ್ದ ಮಾತ್ರ ಸುಳ್ಳಲ್ಲ.

ವರದಿ: ಆದೂರು ಚಂದ್ರು
Published by:HR Ramesh
First published: