ಬಿಎಸ್ ಯಡಿಯೂರಪ್ಪಗೆ ಆಪ್ತರಾಗಿದ್ದ ಯತ್ನಾಳ ಈಗ ಸಿಎಂ ವಿರುದ್ಧ ಸಿಟ್ಟಾಗಲು ಕಾರಣವೇನು ಗೊತ್ತಾ?

ಈಗ ಯತ್ನಾಳ ಮತ್ತೊಮ್ಮೆ ತಮಗನಿಸಿದ್ದನ್ನು ನೇರವಾಗಿ ಹೇಳುತ್ತಿದ್ದು, ಇದು ಅವರಿಗೆ ವರವಾಗಲಿದೆಯಾ ಅಥವಾ ಇನ್ಯಾರಿಗಾದರೂ ಲಾಭವಾಗಲಿದೆ ಇಲ್ಲವೇ ಯತ್ನಾಳ ಅವರಿಗೆ ಸಮಸ್ಯೆ ತರಲಿದೆಯಾ ಎಂಬುದನ್ನು ಕಾದು ನೋಡಬೇಕಿದೆ.

news18-kannada
Updated:May 30, 2020, 2:28 PM IST
ಬಿಎಸ್ ಯಡಿಯೂರಪ್ಪಗೆ ಆಪ್ತರಾಗಿದ್ದ ಯತ್ನಾಳ ಈಗ ಸಿಎಂ ವಿರುದ್ಧ ಸಿಟ್ಟಾಗಲು ಕಾರಣವೇನು ಗೊತ್ತಾ?
ಬಸನಗೌಡ ಪಾಟೀಲ ಯತ್ನಾಳ ಮತ್ತು ಸಿಎಂ ಬಿಎಸ್​ವೈ
  • Share this:
ವಿಜಯಪುರ (ಮೇ 29): ಒಂದು ಕಾಲದಲ್ಲಿ ಬಿಜೆಪಿ ಅಭ್ಯರ್ಥಿಗಳ ಟಿಕೆಟ್ ಹಂಚಿಕೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ರಾ. ಪಾಟೀಲ ಯತ್ನಾಳ ಈಗ ರಾಜ್ಯ ರಾಜಕೀಯದಲ್ಲಿ ತಮ್ಮ ಮಾತಿನ ಚಾಟಿ ಏಟಿನ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ. ವಿಜಯಪುರ ಅದರಲ್ಲೂ ಉತ್ತರ ಕರ್ನಾಟಕದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದವರಲ್ಲಿ ಒಬ್ಬರಾಗಿರುವ ಯತ್ನಾಳ ತಮ್ಮ ನೇರ ಮಾತುಗಳ ಮೂಲಕವೇ ಎಲ್ಲವನ್ನೂ ಪಡೆದುಕೊಂಡಿದ್ದರೂ ಹಲವಾರು ಬಾರಿ ಸಾಕಷ್ಟು ಕಳೆದುಕೊಂಡು ಮತ್ತೆ ಮತ್ತೆ ಮುಂಚೂಣಿಗೆ ಬರುತ್ತಿದ್ದಾರೆ. ಈಗ ಆಗಿದ್ದು ಅದೇ. ಈ ಹಿಂದೆ ವಾಜಪೇಯಿ ಸರಕಾರದಲ್ಲಿ ಮೊದಲು ಕೇಂದ್ರ ಜವಳಿ ಮತ್ತು ನಂತರ ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ಯತ್ನಾಳ 2008ರಲ್ಲಿ ನಡೆದ ವಿಧಾನ ಸಭೆ ಚುನಾವಣೆಯಲ್ಲಿ ದೇವರ ಹಿಪ್ಪರಗಿಯಿಂದ ಸ್ಪರ್ಧಿಸಿ ಸೋತಿದ್ದರು. ನಂತರ ತಮ್ಮ ಮಾತಿಗೆ ಮನ್ನಣೆ ನೀಡಲಾಗುತ್ತಿಲ್ಲ ಎಂದು ಬಿ. ಎಸ್. ಯಡಿಯೂರಪ್ಪ ಮತ್ತು ಶೋಭಾ ಕರಂದ್ಲಾಜೆ ವಿರುದ್ಧ ವಾಗ್ದಾಳಿ ನಡೆಸಿದ್ದರಿಂದ ಇವರನ್ನು ಬಿಜೆಪಿಯಿಂದ ಉಚ್ಛಾಟಿಸಲಾಗಿತ್ತು. ನಂತರ 2013ರ ಚುನಾವಣೆಯಲ್ಲಿ ವಿಜಯಪುರ ನಗರ ಮತಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಯತ್ನಾಳ ಈ ಚುನಾವಣೆಯಲ್ಲಿಯೂ ಸೋಲುಂಡಿದ್ದರು. ಅಲ್ಲದೇ, ವಿಜಯಪುರ ಜಿಲ್ಲೆಯಲ್ಲಿ ಬಹುತೇಕ ಕಡೆ ಬಿಜೆಪಿ ಸೋಲಿಗೆ ಕಾರಣರಾಗಿದ್ದರು. ಆದರೆ, 2014ರಲ್ಲಿ ಲೋಕಸಭೆ ಚುನಾವಣೆಗೂ ಮುನ್ನ ಅನಿವಾರ್ಯವಾಗಿದ್ದರಿಂದ ಬಿಜೆಪಿ ಇವರನ್ನು ಮತ್ತೆ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿತ್ತು.

2015 ರಲ್ಲಿ ವಿಜಯಪುರ ಮತ್ತು ಬಾಗಲಕೋಟೆ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಗೆ ನಡೆದ ಚುನಾವಣೆಗೆ ಟಿಕೆಟ್ ಆಕಾಂಕ್ಷಿಯಾಗಿದ್ದ ಯತ್ನಾಳ ಅವರಿಗೆ ಬಿಜೆಪಿ ಟಿಕೆಟ್ ನೀಡಿರಲಿಲ್ಲ. ತಮ್ಮ ಬದಲಾಗಿ ಹಾಲಿ ಸದಸ್ಯ ಜಿ.ಎಸ್. ನ್ಯಾಮಗೌಡ ಅವರಿಗೆ ಟಿಕೆಟ್ ನೀಡಿದ್ದರಿಂದ ಕೆಂಡಾಮಂಡಲರಾಗಿದ್ದ ಯತ್ನಾಳ, ಅಂದು ತಮಗೆ ಟಿಕೆಟ್ ಕೈ ತಪ್ಪಲು ಹುಬ್ಬಳ್ಳಿಯ ನಾಯಕರಾದ ಜಗದೀಶ ಶೆಟ್ಟರ್, ಪ್ರಹ್ಲಾದ ಜೋಶಿ, ವಿಜಯಪುರ ಜಿಲ್ಲೆಯ ಬಿಜೆಪಿ ಮುಖಂಡರಾದ ಸಂಸದ ರಮೇಶ ಜಿಗಜಿಣಗಿ, ಹಾಲಿ ಡಿಸಿಎಂ ಗೋವಿಂದ ಕಾರಜೋಳ ಹಾಗೂ ತಮ್ಮ ಒಂದು ಕಾಲದ ಶಿಷ್ಯ ಮತ್ತು ಪ್ರಬಲ ವಿರೋಧಿ ಅಪ್ಪು ಪಟ್ಟಣಶೆಟ್ಟಿ ಕಾರಣ ಎಂದು ವಾಗ್ದಾಳಿ ನಡೆಸಿದ್ದರು.

ಬಿಜೆಪಿಗೆ ಸೆಡ್ಡು ಹೊಡೆದು ಪಕ್ಷೇತರರಾಗಿ ಕಣಕ್ಕಿಳಿದಿದ್ದರು. ಆಗ ಬಿಜೆಪಿ ಇವರನ್ನು ಎರಡನೇ ಬಾರಿ ಮತ್ತೆ ಉಚ್ಛಾಟನೆ ಮಾಡಿತ್ತು. ಆದರೂ ಪಟ್ಟು ಬಿಡದ ಯತ್ನಾಳ ಸ್ವಯಂ ಪ್ರಕಾಶಿತ ನಕ್ಷತ್ರದಂತೆ ಪಕ್ಷೇತರರಾಗಿ ಸ್ಪರ್ಧಿಸಿ ಗೆಲುವು ಸಾಧಿಸಿ ತಮ್ಮ ಸಾಮರ್ಥ್ಯದ ಜೊತೆಗೆ ಪ್ರಾಬಲ್ಯ ತೋರಿದ್ದರು. ಇವರು ವಿಧಾನ ಪರಿಷತ ಸದಸ್ಯರಾಗಿದ್ದ ಸಂದರ್ಭದಲ್ಲಿ ವಿಧಾನ ಪರಿಷತ್ ನಲ್ಲಿ ಸಭಾಪತಿಯಾಗಿದ್ದ ಡಿ.ಎಚ್. ಶಂಕರಮೂರ್ತಿ ಅವರನ್ನು ಪದಚ್ಯುತಿ ಮಾಡಲು ಕಾಂಗ್ರೆಸ್ ಮುಂದಾಗಿತ್ತು. ಆಗ, ಪಕ್ಷೇತರ ಸದಸ್ಯರಾಗಿದ್ದ ಯತ್ನಾಳ ಅವರ ಒಂದು ಮತ ಡಿ.ಎಚ್. ಶಂಕರಮೂುರ್ತಿ ಅವರನ್ನು ಸಭಾಪತಿ ಸ್ಥಾನದಿಂದ ಪದಚ್ಯುತಿಗೊಳಿಸುವುದನ್ನು ತಡೆದಿತ್ತು. ಅಲ್ಲದೇ, ಅಂದೇ ಯತ್ನಾಳ ಅವರಿಗೆ 2018ರ ವಿಧಾನಸಭೆ ಚುನಾವಣೆಯಲ್ಲಿ ವಿಜಯಪುರ ನಗರದ ಬಿಜೆಪಿ ಟಿಕೆಟ್ ಫಿಕ್ಸ್ ಆಗಿತ್ತು.  ನಂತರ 2018ರಲ್ಲಿ ನಡೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಇವರನ್ನು ಮತ್ತೆ ಬಿಜೆಪಿಗೆ ಸೇರಿಸಿಕೊಂಡು ಬಿಜೆಪಿ ಟಿಕೆಟ್ ನೀಡಿತ್ತು. ಈ ಚುನಾವಣೆ ಸಂದರ್ಭದಲ್ಲಿ ವಿಜಯಪುರ ನಗರಕ್ಕೆ ಪ್ರಚಾರಕ್ಕೆ ಬಂದಿದ್ದ ಬಿ.ಎಸ್. ಯಡಿಯೂರಪ್ಪ ಅವರು ಯತ್ನಾಳ ಅವರನ್ನು ಗೆಲ್ಲಿಸಿದರೆ ಸೂಕ್ತ ಸ್ಥಾನಮಾನ ನೀಡುವುದಾಗಿ ವಿಜಯಪುರ ನಗರದ ಮತದಾರರಿಗೆ ಭರವಸೆ ನೀಡಿದ್ದರು.

ಚುನಾವಣೆ ಮತ ಎಣಿಕೆ ಬಳಿಕ ರಾಜ್ಯದಲ್ಲಿ ಬಿಜೆಪಿಗೆ ಬಹುಮತ ಸಿಕ್ಕಿರಲಿಲ್ಲ. ವಿಜಯಪುರ ನಗರದ ಫಲಿತಾಂಶ ಸಂಜೆ ಪ್ರಕಟವಾಗಿ ತಾವು ಗೆಲ್ಲುತ್ತಿದ್ದಂತೆ ಮಾತನಾಡಿದ್ದ ಯತ್ನಾಳ, ಯಡಿಯೂರಪ್ಪ ಹೇಗಾದರೂ ಮಾಡಿ ಸರಕಾರ ರಚಿಸಲಿ. ನನ್ನ ಬದಲು ಬೇರೆ ಯಾರಿಗಾದರೂ ಸಚಿವ ಸ್ಥಾನ ನೀಡಲಿ. ಒಟ್ಟಾರೆ ಪಕ್ಷ ಅಧಿಕಾರಕ್ಕೆ ಬಂದರೆ ಸಾಕು, ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾದರೆ ಸಾಕು ಎಂದು ಬಿಎಸ್​ವೈ ಬೆಂಬಲವಾಗಿ ನಿಂತಿದ್ದರು. ಕಳೆದ ವರ್ಷ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದಾಗ ಉತ್ತರ ಕರ್ನಾಟಕದಲ್ಲಿ ಭೀಕರ ಪ್ರವಾಹ ಉಂಟಾಗಿತ್ತು. ಈ ಸಂದರ್ಭದಲ್ಲಿ ಕೇಂದ್ರ ಸರಕಾರ ರಾಜ್ಯಕ್ಕೆ ಪರಿಹಾರ ಬಿಡುಗಡೆ ಮಾಡದ ಹಿನ್ನೆಲೆಯಲ್ಲಿ ಯತ್ನಾಳ ಪ್ರಧಾನಿ, ಕೇಂದ್ರ ಗೃಹ ಸಚಿವರು ಮತ್ತು ರಾಜ್ಯದ ಸಂಸದರ ವಿರುದ್ಧ ಜೋರಾಗಿಯೇ ಧ್ವನಿ ಎತ್ತಿದ್ದರು. ಸಿಎಂ ಯಡಿಯೂರಪ್ಪ ಪರ ಭರ್ಜರಿ ಬ್ಯಾಟಿಂಗ್ ಮಾಡಿದ್ದರು. ಲಿಂಗಾಯಿತ ಸಿಎಂ ಯಡಿಯೂರಪ್ಪ ಅವರನ್ನು ಏಳಿಗೆಯನ್ನು ಕೆಲವು ನಾಯಕರು ಸಹಿಸುತ್ತಿಲ್ಲ. ತಾವು ಮಾತನಾಡದಿದ್ದರೆ ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಪದಚ್ಯುತಿಗೊಳಿಸಲಾಗುತ್ತಿತ್ತು ಎಂದು ಹೇಳಿಕೆಯನ್ನೂ ನೀಡಿದ್ದರು. ಆಗ ಬಿಜೆಪಿ ಕೇಂದ್ರ ನಾಯಕರ ಬಗ್ಗೆ ಪ್ರಶ್ನಿಸಿದ್ದ ಯತ್ನಾಳಗೆ ಬಿಜೆಪಿ ಹೈಕಮಾಂಡ್ ಕಾರಣ ಕೇಳಿ ನೋಟೀಸ್ ಜಾರಿ ಮಾಡಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಯತ್ನಾಳ, ನಾನು ನೋಟೀಸಿಗೆ ಉತ್ತರ ಕೊಡುವುದಿಲ್ಲ. ನಾನೇನೂ ತಪ್ಪು ಮಾಡಿಲ್ಲ ಎಂದು ಎಂದು ಪಟ್ಟು ಹಿಡಿದಿದ್ದರು. ಆಗ ಇದೇ ಯಡಿಯೂರಪ್ಪ ಯತ್ನಾಳ ಅವರನ್ನು ಕರೆಯಿಸಿ ಮನವೊಲಿಸಿ ಹೈಕಮಾಂಡ್ ನೀಡಿದ್ದ ನೋಟಿಸಿಗೆ ಉತ್ತರ ಕೊಡಿಸಿದ್ದರು. ಅಷ್ಟೇ ಅಲ್ಲ, ತಮ್ಮನ್ನು ಕಷ್ಟಕಾಲದಲ್ಲಿ ಸಂಕಷ್ಟದಿಂದ ಪಾರು ಮಾಡಿದ ಯತ್ನಾಳ ಹೇಳುವ ಎಲ್ಲ ಕೆಲಸಗಳಿಗೆ ಸಿಎಂ ಯಡಿಯೂರಪ್ಪ ಹಿಂದೆಮುಂದೆ ಯೋಚಿಸದೇ ಸೈ ಎನ್ನುತ್ತ ಸಹಿ ಹಾಕುತ್ತಿದ್ದರು.

ಇದನ್ನು ಓದಿ: ಲಾಕ್​ಡೌನ್​ ಮುಗಿದ ನಂತರ ಭಾರತೀಯರು ಏನು ಮಾಡುತ್ತಾರೆ?; ನೆಟ್​ವರ್ಕ್ 18 ಸಮೀಕ್ಷೆ

ಯಡಿಯೂರಪ್ಪ ನಂತರ ತಮ್ಮದು ಸಿಎಂ ಆಗುವ ಸಮಯ ಬರುತ್ತದೆ ಎಂದು ಯತ್ನಾಳ ಈ ಹಿಂದೆ ಹೇಳಿಕೆಯನ್ನೂ ನೀಡಿದ್ದರು. ಹರಿಹರ ಲಿಂಗಾಯಿತ ಪಂಚಮಸಾಲಿ ಸ್ವಾಮೀಜಿ ಶಾಸಕ ಮುರುಗೇಶ ನಿರಾಣಿ ಪರ ಇಡೀ ಪಂಚಮಸಾಲಿ ಸಮಾಜವಿದೆ. ನಿರಾಣಿ ಅವರಿಗೆ ಸಚಿವ ಸ್ಥಾನ ನೀಡದಿದ್ದರೆ ಸರಕಾರಕ್ಕೆ ತೊಂದರೆಯಾಗಲಿದೆ ಎಂದು ಎಚ್ಚರಿಕೆ ನೀಡಿದಾಗ ಇದೇ ಯತ್ನಾಳ ಸಿಎಂ ಪರ ನಿಂತಿದ್ದರು. ಹರಿಹರ ಲಿಂಗಾಯತ ಪಂಚಮಸಾಲಿ ಸ್ವಾಮೀಜಿ ಮತ್ತು ಮುರುಗೇಶ ನಿರಾಣಿಯನ್ನು ತರಾಟೆಗೆ ತೆಗೆದುಕೊಂಡಿದ್ದರು. ಆಗ ನಿರಾಣಿ ಸಹೋದರರು ಮತ್ತು ಯತ್ನಾಳ ಪರಸ್ಪರ ವಾಗ್ದಾಳಿಯನ್ನೂ ನಡೆಸಿದ್ದರು. ನಂತರದ ದಿನಗಳಲ್ಲಿ ಯಾವಾಗ ಯತ್ನಾಳ ಅವರ ಗಮನಕ್ಕೆ ತರದೆ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ವರ್ಗಾವಣೆ ಮಾಡಲಾಯಿತೋ ಅಂದಿನಿಂದ ಯತ್ನಾಳ ಮತ್ತೆ ಸಿಟ್ಟಾಗತೊಡಗಿದರು. ಅಷ್ಟೇ ಅಲ್ಲ, ಕಷ್ಟ ಕಾಲದಲ್ಲಿ ಜೊತೆಗೆ ನಿಂತರೂ ಯಡಿಯೂರಪ್ಪ ತಮ್ಮ ಪುತ್ರ ವಿಜಯೇಂದ್ರರರನ್ನು ಉತ್ತರಾಧಿಕಾರಿಯನ್ನಾಗಿ ಬೆಳೆಸತೊಡಗಿದರು.  ಇದರಿಂದ ತಮ್ಮ ಕನಸುಗಳಿಗೆ ತೊಂದರೆಯಾಗುತ್ತದೆ ಎಂದುಕೊಂಡ ಯತ್ನಾಳ ತೊಳಲಾಟದಲ್ಲಿದ್ದರು. ತಮ್ಮ ಪರವಾಗಿ ನಿಂತರೂ ಸ್ಪಂದಿಸದ ಯಡಿಯೂರಪ್ಪ ವಿರುದ್ಧ ಅಂದಿನಿಂದ ಯತ್ನಾಳ ಒಳಗೊಳಗೆ ಸಿಟ್ಟಾಗ ತೊಡಗಿದ್ದರು. ಮೇಲಾಗಿ ಒಂದು ಕಾಲದಲ್ಲಿ ರಾಜ್ಯ ಬಿಜೆಪಿಯಲ್ಲಿ ಪ್ರಭಾವಿ ನಾಯಕರಾಗಿದ್ದ ತಮ್ಮನ್ನು ಸಚಿವರನ್ನಾಗಿ ಮಾಡದಿರುವ ಬಗ್ಗೆಯೂ ಯತ್ನಾಳ ಸಿಟ್ಟು ನುಂಗಿಕೊಂಡಿದ್ದರು. ಸಮಯ ಬಂದಾಗ ಮತ್ತೆ ಮಾತನಾಡಿದರಾಯಿತು ಎಂದುಕೊಂಡು ಮೌನ ವಹಿಸಿದ್ದರು.

ಈಗ ಮತ್ತೆ ಸಚಿವ ಸಂಪುಟ ವಿಸ್ತರಣೆ ಚರ್ಚೆ ನಡೆಯುತ್ತಿದೆ. ಮೇಲಾಗಿ ಸಿಎಂ ತಮ್ಮ ಕೆಲಸಗಳನ್ನು ಮಾಡುತ್ತಿಲ್ಲ. ವಿಜಯಪುರ ಜಿಲ್ಲೆಯಲ್ಲಿ ತಮ್ಮ ವಿರೋಧಿಗಳ ಮಾತಿಗೆ ಮನ್ನಣೆ ಸಿಗುತ್ತಿದೆ ಎಂದು ಸಿಟ್ಟಾಗಿರುವ ಯತ್ನಾಳ ಎರಡೆರಡು ಬಾರಿ ಕರೆದರೂ ಸಿಎಂ ಅವರನ್ನು ಭೇಟಿಯಾಗಿಲ್ಲ. ಈಗ ನಿನ್ನೆ ಬೆಂಗಳೂರಿನಲ್ಲಿ ಉಮೇಶ ಕತ್ತಿ ಅವರು ಆಯೋಜಿಸಿದ್ದ ಭೋಜನ ಕೂಟದಲ್ಲಿ ಪಾಲ್ಗೊಂಡಿದ್ದಾರೆ. ಒಂದು ಕಾಲದಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾದರೆ ಸಾಕು ಎನ್ನುತ್ತಿದ್ದ ಯತ್ನಾಳ, ಈಗ ಯಡಿಯೂರಪ್ಪ ನಮ್ಮ ಮುಖ್ಯಮಂತ್ರಿ ಮಾತ್ರ. ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ನಮ್ಮ ನಾಯಕರು. ಹೈಕಮಾಂಡ್ ಹೇಗೆ ಹೇಳುತ್ತೋ ಹಾಗೆ ನಡೆದುಕೊಳ್ಳುತ್ತೇನೆ ಎಂದು ಯಡಿಯೂರಪ್ಪ ಅವರಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.ಈಗ ಯತ್ನಾಳ ಮತ್ತೊಮ್ಮೆ ತಮಗನಿಸಿದ್ದನ್ನು ನೇರವಾಗಿ ಹೇಳುತ್ತಿದ್ದು, ಇದು ಅವರಿಗೆ ವರವಾಗಲಿದೆಯಾ ಅಥವಾ ಇನ್ಯಾರಿಗಾದರೂ ಲಾಭವಾಗಲಿದೆ ಇಲ್ಲವೇ ಯತ್ನಾಳ ಅವರಿಗೆ ಸಮಸ್ಯೆ ತರಲಿದೆಯಾ ಎಂಬುದನ್ನು ಕಾದು ನೋಡಬೇಕಿದೆ.
First published: May 29, 2020, 6:18 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading