JDS Offer: ಜೆಡಿಎಸ್​ಗೆ ಮೇಯರ್ ಸ್ಥಾನ ಬಿಟ್ಟುಕೊಡುತ್ತಾರೋ ಅವರಿಗೆ ಬೆಂಬಲ; ಕಾಂಗ್ರೆಸ್, ಬಿಜೆಪಿಗೆ ಕಲಬುರಗಿ ಪಾಲಿಕೆ ಸದಸ್ಯರ ಆಫರ್!

ಕಲಬುರ್ಗಿ ಮಹಾನಗರ ಪಾಲಿಕೆಯಲ್ಲಿ 55 ವಾರ್ಡ್​ಗಳಿವೆ. ಮೊನ್ನೆ ಪ್ರಕಟವಾದ ಫಲಿತಾಂಶದಲ್ಲಿ ಕಾಂಗ್ರೆಸ್ 27, ಬಿಜೆಪಿ 23, ಜೆಡಿಎಸ್ 4 ಕ್ಷೇತ್ರಗಳಲ್ಲಿ ಗೆದ್ದಿವೆ. ಒಬ್ಬ ಪಕ್ಷೇತರ ಸದಸ್ಯರಿದ್ದಾರೆ.

ದೇವೇಗೌಡರನ್ನು ಭೇಟಿಯಾಗಿ ಚರ್ಚೆ ನಡೆಸಿದ ಕಲಬುರಗಿ ಪಾಲಿಕೆ ಸದಸ್ಯರು.

ದೇವೇಗೌಡರನ್ನು ಭೇಟಿಯಾಗಿ ಚರ್ಚೆ ನಡೆಸಿದ ಕಲಬುರಗಿ ಪಾಲಿಕೆ ಸದಸ್ಯರು.

  • Share this:
    ಬೆಂಗಳೂರು: ಯಾರು ನಮಗೆ ಮೇಯರ್ ಸ್ಥಾನ ಕೊಡುತ್ತಾರೋ ಅವರಿಗೆ ನಮ್ಮ ಬೆಂಬಲ. ಬಿಜೆಪಿ ಅಥವಾ ಕಾಂಗ್ರೆಸ್ ಯಾರೇ ಮುಂದೆ ಬಂದು ಜೆಡಿಎಸ್​ಗೆ ಕಲ್ಬುಗಿ ಮಹಾನಗರ ಪಾಲಿಕೆ ಮೇಯರ್ ಸ್ಥಾನ ಕೊಡುತ್ತಾರೋ ಅವರಿಗೆ ನಮ್ಮ ಬೆಂಬಲ ನೀಡುತ್ತೇವೆ ಎಂದು ಕಲಬುರಗಿ ಮಹಾನಗರ ಪಾಲಿಕೆ ಸದಸ್ಯರು ಹೇಳಿದರು. ಪಾಲಿಕೆ ಬೆಂಬಲ ವಿಚಾರವಾಗಿ ಕಲ್ಬುರ್ಗಿ ಪಾಲಿಕೆ ಜೆಡಿಎಸ್ ಸದಸ್ಯರು ಇಂದು ಬೆಳಗ್ಗೆ ಎಚ್.ಡಿ. ಕುಮಾರಸ್ವಾಮಿ ಹಾಗೂ ಎಚ್.ಡಿ. ದೇವೇಗೌಡ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದರು.

    ಪಕ್ಷದ ವರಿಷ್ಠ ಎಚ್.ಡಿ. ದೇವೇಗೌಡರ ಭೇಟಿಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪಾಲಿಕೆ ಸದಸ್ಯರು, ನಮ್ದು ಏನಿಲ್ಲ, ಇನ್ನೂ ಏನಿದ್ದರೂ ಕಾಂಗ್ರೆಸ್, ಬಿಜೆಪಿ ನಾಯಕರು ತೀರ್ಮಾನ ಮಾಡಬೇಕು ಅಷ್ಟೇ. ಇವತ್ತು ನಮ್ಮ ಕಲ್ಬುರ್ಗಿಯ ನಾಲ್ವರು ಸದಸ್ಯರ ಜತೆ ಮಾಜಿ ಸಿಎಂ ಕುಮಾರಸ್ವಾಮಿ ಮತ್ತು ಮಾಜಿ ಪ್ರಧಾನಿಗಳ ಭೇಟಿ ಮಾಡಿ ಚರ್ಚಿಸಿದ್ದೇವೆ. ಮೈತ್ರಿಗೆ ಜೆಡಿಎಸ್ ಒಪ್ಪಿದೆ. ಮೊದಲ ಅವಧಿಗೆ ನಮಗೆ ಮೇಯರ್ ಸ್ಥಾನ ಕೇಳಲು ನಿರ್ಧರಿಸಿದ್ದೇವೆ. ನಮ್ಮ ಬೇಡಿಕೆಯನ್ನು ನಾವು ಈಗಾಗಲೇ ಮಂಡಿಸಿದ್ದೇವೆ. ಈ ಬೇಡಿಕೆ ಈಡೇರಿಸಲು ಯಾರು ಒಪ್ತಾರೋ ಅವರಿಗೆ ನಮ್ಮ ಬೆಂಬಲ ಎಂದು ಜೆಡಿಎಸ್ ಕಲಬುರ್ಗಿ ಮುಖಂಡ ನಾಸೀರ್ ಹುಸೇನ್ ಹೇಳಿದರು.

    ಬಿಜೆಪಿಗೆ ಹೋಗೋದ್ರಿಂದ ಮುಸ್ಲಿಂ ಸಮುದಾಯಕ್ಕೆ ಆದ್ಯತೆ ಸಿಗುತ್ತಾ ಎಂಬ ಪ್ರಶ್ನೆಗೆ ವಾರ್ಡ್ ನಂಬರ್ 42 ಪಾಲಿಕೆ ಸದಸ್ಯ ಅಲ್ಲಾವುದ್ದೀನ್ ಪ್ರತಿಕ್ರಿಯಿಸಿದರು. ಈ ಬಗ್ಗೆ ನಾವು ಯಾವುದೇ ಚರ್ಚೆ ಮಾಡಿಲ್ಲ. ವರಿಷ್ಠರು ಸೂಚನೆ ಮೇರೆಗೆ ನಾವು ತೀರ್ಮಾನ ಮಾಡಿದ್ದೇವೆ. ಯಾರು ಮೇಯರ್ ಸ್ಥಾನ ಕೊಡ್ತಾರೆ ಅವರ ಜೊತೆ ನಾವು ಹೋಗುತ್ತೇವೆ. ಯಾರು ಬೇಗ ಬರ್ತಾರೆ ಅವರ ಜೊತೆ ನಾವು ಹೋಗಲು ಸಿದ್ದ ಎಂದು ಹೇಳಿದರು.

    ಯಾರಿಗೇ ಆದರೂ ಜೆಡಿಎಸ್ ಬೆಂಬಲ ಅಗತ್ಯ!

    ಕಲಬುರ್ಗಿ ಮಹಾನಗರ ಪಾಲಿಕೆಯಲ್ಲಿ 55 ವಾರ್ಡ್​ಗಳಿವೆ. ಮೊನ್ನೆ ಪ್ರಕಟವಾದ ಫಲಿತಾಂಶದಲ್ಲಿ ಕಾಂಗ್ರೆಸ್ 27, ಬಿಜೆಪಿ 23, ಜೆಡಿಎಸ್ 4 ಕ್ಷೇತ್ರಗಳಲ್ಲಿ ಗೆದ್ದಿವೆ. ಒಬ್ಬ ಪಕ್ಷೇತರ ಸದಸ್ಯರಿದ್ದಾರೆ. ಪಾಲಿಕೆ ಅಧ್ಯಕ್ಷರ ಅಥವಾ ಮೇಯರ್ ಚುನಾವಣೆಯಲ್ಲಿ ಕಲಬುರ್ಗಿ ಲೋಕಸಭಾ ಕ್ಷೇತ್ರದ ಸಂಸದ, ಶಾಸಕ ಹಾಗೂ ವಿಧಾನಸಭಾ ಸದಸ್ಯರಿಗೆ ಮತ ಹಾಕುವ ಹಕ್ಕು ಇದೆ. ಇವರೆಲ್ಲರನ್ನೂ ಸೇರಿ ಪಾಲಿಕೆಯಲ್ಲಿ ಬಹುಮತಕ್ಕೆ 32 ನಂಬರ್ ಅಗತ್ಯ ಇದೆ. ಬಿಜೆಪಿಯಲ್ಲಿ ಪಾಲಿಕೆ ಸದಸ್ಯರ ಸಂಖ್ಯೆ 23, ಒಬ್ಬ ಸಂಸದ, ಇಬ್ಬರು ಶಾಸಕರು ಹಾಗೂ ವಿಧಾನಪರಿಷತ್ ಸದಸ್ಯರೊಂದಿಗೆ ಬಿಜೆಪಿಯ ಬಲ 30 ಆಗುತ್ತದೆ. ಮ್ಯಾಜಿಕ್ ನಂಬರ್ ಆದ 32ಕ್ಕೆ ಇನ್ನೂ ಇಬ್ಬರು ಸದಸ್ಯರ ಬೆಂಬಲ ಅಗತ್ಯ ಇದೆ. ಜೆಡಿಎಸ್​ನ ನಾಲ್ವರು ಸದಸ್ಯರಲ್ಲಿ ಇಬ್ಬರ ಬೆಂಬಲ ಸಿಕ್ಕರೂ ಬಿಜೆಪಿ ಅಧಿಕಾರದ ಗದ್ದುಗೆಗೆ ಏರಬಲ್ಲುದು.

    ಇದನ್ನು ಓದಿ: Murugesh Nirani: ನವೆಂಬರ್‌ನಲ್ಲಿ ಮತ್ತೆ ಜಾಗತಿಕ ಹೂಡಿಕೆ ಸಮಾವೇಶ, ಶೀಘ್ರ ದಿನಾಂಕ ನಿಗದಿ; ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ

    ಅತ್ತ, ಕಾಂಗ್ರೆಸ್ ಪಕ್ಷ ಕಲಬುರ್ಗಿ ಪಾಲಿಕೆಯಲ್ಲಿ 27 ಸದಸ್ಯರನ್ನ ಹೊಂದಿದೆ. ಒಬ್ಬ ಶಾಸಕ ಹಾಗೂ ಒಬ್ಬ ರಾಜ್ಯಸಭಾ ಸದಸ್ಯರನ್ನ ಸೇರಿಸಿದರೆ ಅದರ ಸಂಖ್ಯಾಬಲ 29ಕ್ಕೆ ಏರುತ್ತದೆ. ಮ್ಯಾಜಿಕ್ ನಂಬರ್​ಗೆ ಇನ್ನೂ 3 ಸದಸ್ಯರ ಬೆಂಬಲ ಅಗತ್ಯ ಇದೆ. ಅಧಿಕಾರ ಹಿಡಿಯಲು ಕಾಂಗ್ರೆಸ್ ಪಕ್ಷಕ್ಕೆ ಜೆಡಿಎಸ್ ಸದಸ್ಯರ ಬೆಂಬಲ ಅತಿ ಮುಖ್ಯ. ಕಾಂಗ್ರೆಸ್ ಪಕ್ಷ ಈ ವಿಚಾರದಲ್ಲಿ ಮುಕ್ತ ಮನಸ್ಸಿನಿಂದ ಇದೆ. ಮೊನ್ನೆ ನ್ಯೂಸ್18 ಕನ್ನಡ ಜೊತೆ ಮಾತನಾಡಿದ ಪ್ರಿಯಾಂಕ್ ಖರ್ಗೆ, ಜೆಡಿಎಸ್ ಪಕ್ಷ ಜಾತ್ಯತೀತ ನಿಲುವು ಇರುವುದರಿಂದ ಅದರೊಂದಿಗೆ ಅಧಿಕಾರ ಹಂಚಿಕೊಳ್ಳಲು ಸಮಸ್ಯೆ ಇಲ್ಲ ಎಂದಿದ್ದರು. ಆದರೆ, ಅಂತಿಮವಾಗಿ ಪಕ್ಷದ ನಾಯಕರು ಮತ್ತು ವರಿಷ್ಠರು ತೀರ್ಮಾನ ಮಾಡುತ್ತಾರೆ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.
    Published by:HR Ramesh
    First published: