ಬಿಟಿಡಿಎಗೆ ಸಭಾಪತಿ ನೇಮಕ ಯಾವಾಗ? ಆಡಳಿತ ಮಂಡಳಿ ನೇಮಕಕ್ಕೆ ಆಸಕ್ತಿ ತೋರದ ಡಿಸಿಎಂ ಕಾರಜೋಳ, ಶಾಸಕ ಚರಂತಿಮಠ

ನೇಮಕ ವಿಳಂಬವಾದಂತೆ ಪಕ್ಷದ ಕಾರ್ಯಕರ್ತರ ಅಸಮಾಧಾನವನ್ನು ಆಡಳಿತಾರೂಢ ಪಕ್ಷದ ಮುಖಂಡರು ಎದುರಿಸಬೇಕಾಗಿ ಬರುತ್ತದೆ ಎನ್ನುವುದಕ್ಕಿಂತ ಆಡಳಿತ ನಿರ್ವಹಣೆಯಲ್ಲಿ ಅಧಿಕಾರಿಗಳ ಪಾರುಪತ್ಯವೇ ಹೆಚ್ಚಾಗಲಿದೆ. ಜಿಲ್ಲಾ ಉಸ್ತುವಾರಿ ಸಚಿವರು ರಾಜ್ಯಾಡಳಿತ ಭಾರದ ಮಧ್ಯೆಯೇ ಜಿಲ್ಲಾಡಳಿತದ ಬಗೆಗೂ ಗಮನ ಹರಿಸುತ್ತಾರಾ ಎಂದು ಕಾಯ್ದು ನೋಡಬೇಕಿದೆ.

ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ

ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ

  • Share this:
ಬಾಗಲಕೋಟೆ: ಬಾಗಲಕೋಟೆ ಮುಳುಗಡೆ ಸಂತ್ರಸ್ತರ ಕಷ್ಟ, ನೋವಿಗೆ ಸ್ಪಂದಿಸಬೇಕಾಗಿದ್ದ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಭಾಪತಿ ಎನ್ನುವ ಸೂತ್ರಧಾರ ಇಲ್ಲದಂತಾಗಿದೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ  ಬಂದು ವರ್ಷದತ್ತ ದಾಪುಗಾಲಿಟ್ಟರೂ ಬಿಟಿಡಿಎ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಂದಿಲ್ಲ‌. ಹೀಗಾಗಿ ಬಿಟಿಡಿಎಯಲ್ಲಿ ಕೆಲಸ ಕಾರ್ಯಗಳು ಕುಂಟುತ್ತಾ ಸಾಗುತ್ತಿವೆ. ಜೊತೆಗೆ ಬಿಟಿಡಿಎಯಲ್ಲಿ ಅಧಿಕಾರಿಗಳು, ಮಧ್ಯವರ್ತಿಗಳ ಆಟಾಟೋಪ ಹೆಚ್ಚಾಗಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಆಲಮಟ್ಟಿ ಅಣೆಕಟ್ಟೆಯ ಹಿನ್ನೀರು ಬಾಧಿತ ಬಾಗಲಕೋಟೆ ಪಟ್ಟಣದ ಸಂತ್ರಸ್ತರಿಗೆ ಪರಿಹಾರ ನೀಡಿಕೆ, ಸ್ಥಳಾಂತರ, ಪುನರ್ ವಸತಿ ಹಾಗೂ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸುವಂತಹ ಗುರುತರ ಜವಾಬ್ದಾರಿ ಬಿಟಿಡಿಎ ಮೇಲಿದೆ. ಆಲಮಟ್ಟಿ ಅಣೆಕಟ್ಟೆ ಎತ್ತರವನ್ನು 519.60 ಮೀಟರ್​ನಿಂದ 524.254 ಮೀಟರ್‌ಗೆ ಹೆಚ್ಚಿಸಬೇಕಿರುವ ಹಿನ್ನೆಲೆಯಲ್ಲಿ ಬಿಟಿಡಿಎ ಬಾಗಲಕೋಟೆಯ ಬಾಧಿತ ಪ್ರದೇಶಗಳ ಮುಳುಗಡೆ ಸಂತ್ರಸ್ತರಿಗಾಗಿ ಮೂರನೇ ಹಂತದ ಯೋಜನೆ ಅನುಷ್ಠಾನಗೊಳಿಸಬೇಕಿದೆ. ಜತೆಗೆ ನಾನಾ ಕಾರಣಗಳಿಗಾಗಿ ಈಗಾಗಲೇ ಮುಳುಗಡೆ ಸಂತ್ರಸ್ತರಿಗಾಗಿ ನಿರ್ಮಿಸಲಾಗಿರುವ ಎರಡು ಹಂತಗಳ ಪುನರ್ವಸತಿ ಕೇಂದ್ರಗಳ ಸಮರ್ಪಕ ನಿರ್ವಹಣೆ, ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸುವ ಕೆಲಸ ಮಾಡಬೇಕಿದೆ.

ನವನಗರ ಯುನಿಟ್-1 ಮತ್ತು 2 ಇನ್ನೂ ಬಿಟಿಡಿಎ ಸುಪರ್ದಿಯಲ್ಲೇ ಇದ್ದು, ಇವುಗಳು ನಗರಸಭೆಗೆ ಹಸ್ತಾಂತರಗೊಂಡಿಲ್ಲ. ಇಷ್ಟೆಲ್ಲ ಮಹತ್ವದ ಕಾರ್ಯ ನಿರ್ವಹಣೆ ಮಾಡಬೇಕಿರುವ ಬಿಟಿಡಿಎಗೆ ಇದುವರೆಗೂ ಆಡಳಿತ ಮಂಡಳಿ ನೇಮಕ ಆಗಿಲ್ಲ. ಜತೆಗೆ ಜಿಲ್ಲೆಯ ಇತರ ನಗರ ಯೋಜನಾ ಪ್ರಾಧಿಕಾರಿಗಳಿಗೂ ಆಡಳಿತ ಮಂಡಳಿ ನೇಮಕ ಆಗಬೇಕಿದೆ. ಅದೇಕೋ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಡಿಸಿಎಂ ಗೋವಿಂದ ಕಾರಜೋಳ, ಸ್ಥಳೀಯ ಶಾಸಕ ವೀರಣ್ಣ ಚರಂತಿಮಠ  ಈ ಬಗ್ಗೆ ಸೂಕ್ತ ಗಮನ ಹರಿಸಲು ಪುರುಸೋತ್ತು ಸಿಕ್ಕಂತೆ ಕಾಣಿಸುತ್ತಿಲ್ಲ. ಇಷ್ಟು ಹೊತ್ತಿಗೆ ಸಂಬಂಧಪಟ್ಟ ಕ್ಷೇತ್ರಗಳ ಶಾಸಕರು ಹಾಗೂ ಮುಖಂಡರ ಅಭಿಪ್ರಾಯ ಪಡೆದು ಆಡಳಿತ ಮಂಡಳಿ ನೇಮಕ ಮಾಡಿ, ಸುಗಮ ಆಡಳಿತಕ್ಕೆ ಅವಕಾಶ ಮಾಡಿಕೊಡಬೇಕಿತ್ತು. ಬಿಟಿಡಿಎ ಸಭಾಪತಿ ಸ್ಥಾನ ಸೇರಿದಂತೆ ಜಿಲ್ಲೆಯ ಇತರ ಕಡೆಗಳಲ್ಲಿನ ನಗರ ಯೋಜನಾ ಪ್ರಾಧಿಕಾರಿಗಳ ಹುದ್ದೆಗಳಿಗೆ ಬಿಜೆಪಿ ಮುಖಂಡರಲ್ಲಿ ಸಾಕಷ್ಟು ಪೈಪೋಟಿ ಇದ್ದರೂ ಯಾರೂ ಗಮನ ಹರಿಸುವವರೇ ಇಲ್ಲದಂತಾಗಿದೆ.

ಆಡಳಿತ ಮಂಡಳಿ ನೇಮಕ ವಿಳಂಬದಿಂದಾಗಿ ಬಾಗಲಕೋಟೆ ಮುಳುಗಡೆ ಸಂತ್ರಸ್ತರ ಪುನರ್ವಸತಿ ಕೇಂದ್ರಗಳ ಸಮರ್ಪಕ ನಿರ್ವಹಣೆ ಅಸಾಧ್ಯವಾಗಿದೆ. ಹಾಗೆಯೇ ನಗರ ಯೋಜನಾ ಪ್ರಾಧಿಕಾರಗಳೂ ಹೊಸ ಪ್ರದೇಶಗಳ ನಿರ್ಮಾಣ, ಈಗಾಗಲೇ ಅಭಿವೃದ್ದಿ ಪಡಿಸಲಾಗಿರುವ ಪ್ರದೇಶಗಳಿಗೆ ಅನುಮತಿ ನೀಡುವುದಕ್ಕೆ ವಿಳಂಬವಾಗುತ್ತಿದೆ. ಸರ್ಕಾರ ಈಗಾಗಲೇ ಅನೇಕ ಪ್ರಮುಖ ನಿಗಮ, ಮಂಡಳಿಗಳಿಗೆ ಅಧ್ಯಕ್ಷರು ಹಾಗೂ ನಿರ್ದೇಶಕರನ್ನು ನೇಮಕ ಮಾಡಿದ್ದು, ಜಿಲ್ಲೆಯ ಪ್ರಮುಖ ಹುದ್ದೆಗಳ ಅಧ್ಯಕ್ಷರು ಹಾಗೂ ಸದಸ್ಯರ ನೇಮಕ ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಮುತುವರ್ಜಿ ವಹಿಸಬೇಕಿದೆ.

ನೇಮಕ ವಿಳಂಬವಾದಂತೆ ಪಕ್ಷದ ಕಾರ್ಯಕರ್ತರ ಅಸಮಾಧಾನವನ್ನು ಆಡಳಿತಾರೂಢ ಪಕ್ಷದ ಮುಖಂಡರು ಎದುರಿಸಬೇಕಾಗಿ ಬರುತ್ತದೆ ಎನ್ನುವುದಕ್ಕಿಂತ ಆಡಳಿತ ನಿರ್ವಹಣೆಯಲ್ಲಿ ಅಧಿಕಾರಿಗಳ ಪಾರುಪತ್ಯವೇ ಹೆಚ್ಚಾಗಲಿದೆ. ಜಿಲ್ಲಾ ಉಸ್ತುವಾರಿ ಸಚಿವರು ರಾಜ್ಯಾಡಳಿತ ಭಾರದ ಮಧ್ಯೆಯೇ ಜಿಲ್ಲಾಡಳಿತದ ಬಗೆಗೂ ಗಮನ ಹರಿಸುತ್ತಾರಾ ಎಂದು ಕಾಯ್ದು ನೋಡಬೇಕಿದೆ.

ಇದನ್ನು ಓದಿ: ಬೆಂಗಳೂರಿನಲ್ಲಿ ಕೋವಿಡ್​​-19 ಸೋಂಕಿಗೆ ಮೊದಲ ಪೊಲೀಸ್​​​ ಸಾವು - ಆತಂಕದಲ್ಲಿ ಖಾಕಿ ಪಡೆ

ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರಕ್ಕೆ ಆಡಳಿತ ಮಂಡಳಿ ನೇಮಕ ವಿಳಂಬದಿಂದಾಗಿ ಮಧ್ಯವರ್ತಿ ಹಾಗೂ ಅಧಿಕಾರಿಗಳಿಂದ ಭ್ರಷ್ಟಾಚಾರ ಹೆಚ್ಚಾಗಿದೆ ಎಂದು ಕರವೇ ಕಾರ್ಯಕರ್ತರು ಆರೋಪಿಸಿದ್ದಾರೆ. ಮುಳುಗಡೆ ಸಂತ್ರಸ್ತರಿಗೆ ಮೂಲ ಸೌಕರ್ಯ ಒದಗಿಸುವಲ್ಲಿ ಬಿಟಿಡಿಎ ಅಧಿಕಾರಿಗಳ ಕೈಬಿಸಿ ಮಾಡಬೇಕು. ಅಷ್ಟಾದರೂ ಸಮರ್ಪಕ ಕೆಲಸವಾಗುತ್ತಿಲ್ಲವೆಂದು ಕರವೇ ಕಾರ್ಯಕರ್ತರು ಬಿಟಿಡಿಎ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲು ಮುಂದಾಗಿದ್ದರು. ಈ ವೇಳೆ ಪೊಲೀಸರು ಕರವೇ ಕಾರ್ಯಕರ್ತರನ್ನು  ಕಚೇರಿಯ ಮುಖ್ಯ ಗೇಟ್ ಬಳಿ ತಡೆದರು. ಬಿಟಿಡಿಎ ಸಭಾಪತಿ, ಹಾಗೂ ಆಡಳಿತ ಮಂಡಳಿ ಶೀಘ್ರ ವೇ ನೇಮಿಸಬೇಕು, ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಕರವೇ ಕಾರ್ಯಕರ್ತರು ಆಗ್ರಹಿಸಿದರು.
First published: