ಮಂಡ್ಯ: (Mandya) ಸಂಸದೆ ಸುಮಲಾತ ಅಂಬರೀಶ್ (MP Sumalatha Ambareesh) ಕೊಟ್ಟ ಮಾತಿನಂತೆ ಮಂಡ್ಯದಲ್ಲಿ ಸ್ವಂತ ಮನೆ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಮಂಡ್ಯ- ಮದ್ದೂರು (Mandya Madduru) ನಡುವಿನ ಹನಕೆರೆ ಗ್ರಾಮದ ಬಳಿ ಬುಧವಾರ ಪುತ್ರ ಅಭಿಷೇಕ್ (Abhishek Ambareesh) ಜೊತೆ ನೂತನ ಮನೆ ನಿರ್ಮಾಣಕ್ಕೆ ಪೂಜೆ ನೆರವೇರಿಸಿದ್ದಾರೆ. ಮನೆ ನಿರ್ಮಾಣದ ಹಿಂದೆ ರಾಜಕೀಯ ಮಾಸ್ಟರ್ ಪ್ಲಾನ್ (Master Plan) ಅಡಗಿದೆ ಎಂಬ ಚರ್ಚೆಯೂ ಈಗ ಜಿಲ್ಲೆಯಲ್ಲಿ ಶುರುವಾಗಿದೆ.
ಹೌದು, ಕಳೆದ ಲೋಕಸಭಾ ಚುನಾವಣೆಯಲ್ಲಿ ಹೈ ವೋಲ್ಟೇಜ್ ಕ್ಷೇತ್ರವಾಗಿದ್ದ ಮಂಡ್ಯ ಕ್ಷೇತ್ರದಲ್ಲಿ ಸ್ವಂತ ಮನೆ ನಿರ್ಮಾಣ ವಿಚಾರವೂ ಸದ್ದು ಮಾಡಿತ್ತು. ಕಾಂಗ್ರೆಸ್- ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿದ್ದ ನಿಖಿಲ್ ಕುಮಾರಸ್ವಾಮಿ ಹಾಗೂ ಸ್ವಾಭಿಮಾನದ ಹೆಸರಲ್ಲಿ ಪಕ್ಷೇತರವಾಗಿ ಅಖಾಡಕ್ಕೆ ಧುಮುಕಿದ್ದ ಸುಮಲತಾ ಅಂಬರೀಶ್ ತಾವು ಗೆಲ್ಲಲಿ, ಸೋಲಲಿ ಮಂಡ್ಯದಲ್ಲಿ ಸ್ವಂತ ಮನೆ ನಿರ್ಮಾಣ ಮಾಡಿ ಜನರ ಸೇವೆ ಮಾಡ್ತೀನಿ ಅಂತ ಮಾತು ಕೊಟ್ಟಿದ್ದರು.
ಮನೆ ನಿರ್ಮಾಣದ ಹಿಂದೆ ರಾಜಕೀಯ ಮಾಸ್ಟರ್ ಪ್ಲಾನ್..!
ಚುನಾವಣೆ ಮುಗಿದು ಎರಡೂವರೆ ವರ್ಷ ಕಳೆಯುತ್ತಿರುವ ಸಂದರ್ಭದಲ್ಲಿ ಸುಮಲತಾ ಅವರು ಕೊಟ್ಟ ಮಾತು ಉಳಿಸಿಕೊಳ್ಳಲು ಮುಂದಾಗಿದ್ದು, ಮಂಡ್ಯ ತಾಲ್ಲೂಕಿನ ಹನಕೆರೆ ಗ್ರಾಮದ ಬೆಂಗಳೂರು- ಮೈಸೂರು ಹೆದ್ದಾರಿಗೆ ಹೊಂದಿಕೊಂಡಿರುವ ಜಮೀನಿನಲ್ಲಿ ಮನೆ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಇಂದು ಪುತ್ರ ಅಭಿಷೇಕ್ ಜೊತೆ ಸೇರಿ ಪೂಜೆಯನ್ನೂ ನೆರವೇರಿಸಿದ್ದಾರೆ.
ಮದ್ದೂರಿನಿಂದ ಅಭಿಷೇಕ್ ಸ್ಪರ್ಧೆಗೆ ಪ್ಲಾನ್.!
ಮನೆ ನಿರ್ಮಾಣದ ಹಿಂದೆ ರಾಜಕೀಯವಾಗಿ ಭದ್ರ ನೆಲೆ ಕಂಡುಕೊಳ್ಳುವ ತಂತ್ರಗಾರಿಕೆ ಅಡಗಿದೆ ಎನ್ನುವ ಚರ್ಚೆ ಆರಂಭವಾಗಿದೆ. ಮದ್ದೂರು ಕ್ಷೇತ್ರದಿಂದ ಪುತ್ರ ಅಭಿಷೇಕ್ ಅವರನ್ನ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕಿಳಿಸಲು ಪ್ಲಾನ್ ಮಾಡಿಕೊಂಡಿದ್ದು, ಅದಕ್ಕಾಗಿ ಮದ್ದೂರು ಹಾಗೂ ಮಂಡ್ಯ ಎರಡಕ್ಕೂ ಹತ್ತಿರವಾಗುವಂತೆ ಹನಕೆರೆಯಲ್ಲಿ ಮನೆ ನಿರ್ಮಾಣ ಮಾಡ್ತಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಸುಮಲತಾ ಅವರು, ಮಾತು ಕೊಟ್ಟಂತೆ ಸ್ವಂತ ಮನೆ ಕಟ್ಟುತ್ತಿದ್ದೇನೆ. ಸಮಯ, ಸಂದರ್ಭ ಯಾವ ರೀತಿ ಇರುತ್ತೋ ನೋಡೋಣ. ಯಾವುದೂ ನಮ್ಮ ಕೈಲಿ ಇರೋದಿಲ್ಲ. ನಾನು ರಾಜಕೀಯಕ್ಕೆ ಬರ್ತೀನಿ, ಎಂಪಿ ಆಗ್ತೀನಿ ಅಂತ ಕನಸಿನಲ್ಲೂ ನೆನಸಿರಲಿಲ್ಲ ಎನ್ನುವ ಮೂಲಕ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಹೇಳಿದ್ದಾರೆ.
ಇನು ಅಭಿಷೇಕ್ ಅಂಬರೀಶ್ ಮಾತನಾಡಿ, ಅಭಿಮಾನಿಗಳು ಬೆಳೆಯಬೇಕು ಎಂಬ ಆಸೆಯಿಂದ ಮಾತಾಡ್ತಾರೆ. ಇಲ್ಲಿಯವರೆಗು ಬೆಳೆಸಿದ್ದಾರೆ. ಮುಂದಕ್ಕು ಬೆಳಸ್ತಾರೆ ಎನ್ನುವ ಮೂಲಕ ಸ್ಪರ್ಧೆಗೆ ಸಿದ್ಧವಾಗುತ್ತಿರೋದನ್ನ ಪರೋಕ್ಷವಾಗಿ ಹೇಳಿದ್ದಾರೆ.
ಇದನ್ನು ಓದಿ: Sumalatha Ambareesh; ಕುಮಾರಸ್ವಾಮಿ ಹೃದಯವಂತರು, ಅವರು ಒಳ್ಳೆಯ ರೀತಿ ಹಾರೈಸಿದ್ದರೆ ಖುಷಿ ಪಡುತ್ತೇನೆ; ಸಂಸದೆ ಸುಮಲತಾ
ಮನೆ ನಿರ್ಮಾಣದ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ..!
ಇನ್ನು ಮೈಸೂರಿನಲ್ಲಿ ಮಾತನಾಡಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು, ಮನೆ ಮಾಡೋದು ಮುಖ್ಯವಲ್ಲ, ಜನರನ್ನು ಭೇಟಿ ಮಾಡಿ ಸಮಸ್ಯೆ ಕೇಳೋದು ಮುಖ್ಯ ಎಂದು ವ್ಯಂಗ್ಯವಾಡಿದ್ದಾರೆ. ಕುಮಾರಸ್ವಾಮಿ ಅವರ ಹೇಳಿಕೆಗೆ ಸಂಸದೆ ಸುಮಲತಾ ತಮ್ಮದೇ ಶೈಲಿಯಲ್ಲಿ ಕುಟುಕಿದ್ದಾರೆ. ಕುಮಾರಸ್ವಾಮಿ ಹೃದಯವಂತರು. ಅವರು ಯಾವ ಅರ್ಥದಲ್ಲಿ ಹೇಳಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಒಳ್ಳೆಯ ಮನಸ್ಸಿನಿಂದ ಶುಭ ಹಾರೈಸಿದ್ದರೆ ನಾನು ಖುಷಿ ಪಡುತ್ತೇವೆ ಎಂದು ಸಂಸದೆ ಸುಮಲತಾ ಅವರು ಹೇಳಿದ್ದಾರೆ.
ಒಟ್ಟಾರೆ ಅಕ್ರಮ ಕಲ್ಲು ಗಣಿಗಾರಿಕೆ, ಕೆಆರ್ ಎಸ್ ಡ್ಯಾಂ ವಿಚಾರವಾಗಿ ದಳಪತಿಗಳಿಗೆ ಟಕ್ಕರ್ ಕೊಡ್ತಿದ್ದ ರೆಬಲ್ ಲೇಡಿ, ಈಗ ಮನೆ ನಿರ್ಮಾಣಕ್ಕೆ ಮುಂದಾಗುವ ಮೂಲಕ ದಳಕೋಟೆಯಲ್ಲಿ ಮತ್ತಷ್ಟು ಪ್ರಭುತ್ವ ಪಡೆಯಲು ಸಿದ್ಧತೆ ಆರಂಭಿಸಿದ್ದಾರೆ.
ವರದಿ - ಸುನೀಲ್ ಗೌಡ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ