ಬೆಳಗಾವಿ (ಜು.16); ದೇಶದಲ್ಲಿ ಕೊರೋನಾ ವೈರಸ್ ಮಹಾಮಾರಿಯ ಅಬ್ಬರ ಜೋರಾಗಿದೆ. ಸೋಂಕು ದೃಢವಾಗಿದ್ದರೆ ಸಾಕು ಯಾರೊಬ್ಬರು ಸಮೀಪಕ್ಕೆ ಬರುತ್ತಿಲ್ಲ. ಈ ನಡುವೆ ಬೆಳಗಾವಿಯಲ್ಲಿ ಸೋಂಕಿನಿಂದ ಗುಣಮುಖನಾಗಿ ಗ್ರಾಮಕ್ಕೆ ರೈತನೊಬ್ಬರು ಮರಳಿದ್ದಾರೆ. ಹೀಗೆ ಮರಳಿದ ರೈತರಿಗೆ ಗ್ರಾಮಸ್ಥರು ಅದ್ಧೂರಿ ಮೆರವಣಿಗೆ ನಡೆಸಿ ಸಂಭ್ರಮಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮೂಗಬಸವ ಗ್ರಾಮದ ರೈತರೊಬ್ಬನಿಗೆ ಕೊರೋನಾ ಸೋಂಕು ತಗಲಿತ್ತು. ಕೆಲ ದಿನಗಳ ಹಿಂದೆ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ರೈತನಿಗೆ ಹಾವು ಕಚ್ಚಿತ್ತು. ಇದರಿಂದ ನೋವು ಅನುಭವಿಸಿದ್ದ ರೈತನನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಕೊಡಿಸಲಾಗಿತ್ತು. ನಂತರ ಮತ್ತೆ ಅದೇ ಜಾಗದಲ್ಲಿ ನೋವು ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದಿದ್ದರು. ಎರಡನೇ ಸಲ ಆಸ್ಪತ್ರೆಯಿಂದ ವಾಪಸ್ ಆಗಿದ್ದ ರೈತನಿಗೆ ಕೊರೋನಾ ಸೋಂಕು ಇರೋದು ದೃಢವಾಗಿತ್ತು. ಇದು ಗ್ರಾಮದ ಜನರ ಆತಂಕಕ್ಕೆ ಕಾರಣವಾಗಿತ್ತು. ರೈತನ ಸಂಪರ್ಕದಲ್ಲಿ ಇದ್ದ 8 ಜನರಿಗೆ ಕ್ವಾರಂಟೈನ್ ಮಾಡಲಾಗಿತ್ತು. ಜತೆಗೆ ಗ್ರಾಮದಲ್ಲಿ ರೈತನ ಮನೆ ಸುತ್ತಮುತ್ತ ಲಾಕ್ ಡೌನ್ ಮಾಡಿ ಆದೇಶ ಹೊರಡಿಸಲಾಗಿದೆ.
ಜುಲೈ 9ರಂದು ರೈತನಿಗೆ ಸೋಂಕು ದೃಢಪಟ್ಟ ನಂತರ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಇಂದು ರೈತ ಸೋಂಕಿನಿಂದ ಸಂಪೂರ್ಣವಾಗಿ ಗುಣಮುಖನಾಗಿದ್ದು, ಗ್ರಾಮಕ್ಕೆ ವಾಪಸ್ ಮರಳಿದ್ದಾನೆ. ಹೀಗೆ ಗ್ರಾಮಕ್ಕೆ ಬಂದ ರೈತನಿಗೆ ಜನ ಅದ್ಧೂರಿ ಮೆರವಣಿಗೆ ಮಾಡಿ ಸಂಭ್ರಮಿಸಿದ್ದಾರೆ. ರೈತನಿಗೆ ಎತ್ತಿನ ಗಾಡಿಯಲ್ಲಿ ಮೆರವಣಿಗೆ ಮಾಡಿದ ಗ್ರಾಮದ ಜನ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಇಡೀ ಊರು ತುಂಬಾ ರೈತನನ್ನು ಮೆರವಣಿಗೆ ಮಾಡಿಸಲಾಯಿತು.
ಇದನ್ನು ಓದಿ: ಬೆಂಗಳೂರಿನಲ್ಲಿ ಇದುವರೆಗೂ 720 ಪೊಲೀಸರಿಗೆ ಕೊರೋನಾ: ಶಿವಾಜಿನಗರ ಸೇರಿದಂತೆ ಹಲವು ಠಾಣೆಗಳು ಸೀಲ್ಡೌನ್
ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಜಿಲ್ಲಿಯ ಅಥಣಿ ತಾಲೂಕಿನಲ್ಲಿ ಅತಿಹೆಚ್ಚು ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಅಥಣಿ ತಾಲೂಕಿನಿಂದ ಗೋಕಾಕ್ ತಾಲೂಕಿನ ಪಾಮಲದಿನ್ನಿ ಗ್ರಾಮಕ್ಕೆ ಬಂದ ತುಂಬು ಗರ್ಭಿಣಿಗೆ ಕೊರೋನಾ ಸೋಂಕನ್ನು ಜತೆಗೆ ತಂದಿದ್ದಾರೆ. ತವರು ಮನೆಗೆ ಬಂದ ಗರ್ಭಿಣಿಗೆ ಸೋಂಕಿನ ಲಕ್ಷಣ ಕಾಣಿಸಿಕೊಂಡಿತ್ತು. ಗರ್ಭಿಣಿಯ ಗಂಟಲು ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಇಂದು ಸೋಂಕು ಇರೋದು ದೃಢವಾಗಿದೆ. ಇದು ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣ ಮಾಡಿದೆ. ಇನ್ನೂ ಮಹಿಳೆಯನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ