• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • ವೀಕೆಂಡ್ ಹಿನ್ನೆಲೆ ಮುಳ್ಳಯ್ಯನಗಿರಿಗೆ ಹರಿದುಬಂತು ಪ್ರವಾಸಿಗರ ದಂಡು: ಟ್ರಾಫಿಕ್​ ಜಾಮ್​, ಜನರ ಪರದಾಟ

ವೀಕೆಂಡ್ ಹಿನ್ನೆಲೆ ಮುಳ್ಳಯ್ಯನಗಿರಿಗೆ ಹರಿದುಬಂತು ಪ್ರವಾಸಿಗರ ದಂಡು: ಟ್ರಾಫಿಕ್​ ಜಾಮ್​, ಜನರ ಪರದಾಟ

ಮಾಸ್ಕ್​ ಧರಿಸದೆ ಓಡಾಡುತ್ತಿರುವ ಪ್ರವಾಸಿಗರು

ಮಾಸ್ಕ್​ ಧರಿಸದೆ ಓಡಾಡುತ್ತಿರುವ ಪ್ರವಾಸಿಗರು

ವೀಕೆಂಡ್ ಹಿನ್ನೆಲೆ ಮುಳ್ಳಯ್ಯನಗಿರಿಗೆ ಪ್ರವಾಸಿಗರ ದಂಡು ಹರಿದುಬಂದಿದ್ದು, ಸಹಸ್ರಾರು ಸಂಖ್ಯೆಯಲ್ಲಿ ಟೂರಿಸ್ಟ್ ಹಾಟ್ ಸ್ಪಾಟ್ ಮುಳ್ಳಯ್ಯನಗಿರಿಗೆ  ಪ್ರವಾಸಿಗರು ಆಗಮಿಸಿದ ಪರಿಣಾಮ ಗಂಟೆಗಟ್ಟಲೇ ಟ್ರಾಫಿಕ್ ಜಾಮ್ ಉಂಟಾದ ಕಾರಣ ಬೆಟ್ಟದ ಮೇಲೆ ಜನರು ಪರದಾಡುವಂತಾಯಿತು. ಅಲ್ಲದೇ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು  ಆಗಮಿಸಿದ ಕಾರಣದಿಂದ ಮತ್ತೆ ಕಾಫಿನಾಡಿನ ಜನರು ಆತಂಕಗೊಂಡಿದ್ದಾರೆ.

ಮುಂದೆ ಓದಿ ...
  • Share this:

    ಚಿಕ್ಕಮಗಳೂರು : ವಾರಾಂತ್ಯ  ಆಗಿರುವ ಕಾರಣ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ   ಚಿಕ್ಕಮಗಳೂರಿನ ತಾಲೂಕಿನ ಮುಳ್ಳಯ್ಯನಗಿರಿ ಭಾಗಕ್ಕೆ ಸಾವಿರಾರು ಪ್ರವಾಸಿಗರು ಭೇಟಿ ನೀಡಿ ತಮ್ಮ ಆಯಾಸವನ್ನು ಮರೆಯುವುದು ವಾಡಿಕೆ. ಆದರೆ, ಪ್ರವಾಸಿ ಸ್ಥಳಕ್ಕೆ ಬಂದಂತಹ ಪ್ರವಾಸಿಗರಲ್ಲಿ ಬಹುತೇಕರು ಮುಖಕ್ಕೆ ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಪಾಡದೆ ಬೇಕಾಬಿಟ್ಟಿ ವರ್ತಿಸುತ್ತಿದ್ದುದ್ದು ಕಂಡುಬಂತು.


    ಇಂದು ಸುಮಾರು 900 ವಾಹನಗಳು, ಏಳೆಂಟು ಸಾವಿರ ಜನ ಕೇವಲ ಮುಳ್ಳಯ್ಯನಗಿರಿ ಒಂದಕ್ಕೆ ಭೇಟಿ ನೀಡಿದ್ದಾರೆ. ಮಳೆ ಇಲ್ಲದೆ ಗಿರಿ ಸೌಂದರ್ಯ ಇಮ್ಮಡಿಗೊಂಡಿದೆ. ಈ ಸೌಂದರ್ಯವನ್ನ ಸವಿಯೋದಕ್ಕೆ ಸಾಗರೋಪಾದಿಯಲ್ಲಿ ಪ್ರವಾಸಿಗರು ಬರುತ್ತಿದ್ದಾರೆ. ಆದರೆ, ಸರ್ಕಾರದ ಕೊರೋನಾ ನಿಯಮಗಳನ್ನು ಸಂಪೂರ್ಣವಾಗಿ ಗಾಳಿ ತೂರಿದ್ದಾರೆ. ಕೆಲ ಪ್ರವಾಸಿಗರು ನ್ಯೂಸ್ 18 ಕನ್ನಡ ಕ್ಯಾಮರಾ ಕಂಡೊಡನೆ ಮುಖಕ್ಕೆ ಮಾಸ್ಕ್ ಹಾಕಿಕೊಂಡರು.


    ಕೆಲವರು ನ್ಯೂಸ್ 18 ಕನ್ನಡ ದವರು ಬಂದಿದ್ದಾರೆ, ಮಾಸ್ಕ್ ಹಾಕಿಕೊಳ್ಳಿ ಎಂದು ಎಲ್ಲಾ ಪ್ರವಾಸಿಗರಿಗೂ ಜೋರಾಗಿ ಕೂಗಿ ಹೇಳಿದರು. ಆದರೆ, ಕೆಲ ಪ್ರವಾಸಿಗರು  ಬೆಟ್ಟ ಹತ್ತಲು ಸುಸ್ತಾಗುತ್ತೆ, ಫೋಟೋ ತೆಗೆಯಲು ಆಗಲ್ಲ. ಫೋಟೋ ಚೆನ್ನಾಗಿ ಬರಲ್ಲ ಎಂದು ನಾನಾ ಕಾರಣಗಳನ್ನ ನೀಡಿ ಮಾಸ್ಕ್ ಇಲ್ಲದೆ ಬೇಕಾಬಿಟ್ಟಿ ಓಡಾಡುತ್ತಾ ಇದ್ದುದು ಕಂಡು ಬಂತು. ಗಿರಿಯಲ್ಲಿ ಪೊಲೀಸರು ಇದ್ದರೂ ಕೂಡ ಪೊಲೀಸರನ್ನ ಕಂಡಾಗಲೂ ಮಾಸ್ಕ್ ಹಾಕಿಕೊಂಡಂತೆ ಮಾಡಿ ಮತ್ತೆ ಬೇಕಾಬಿಟ್ಟಿಯಾಗಿ ಪ್ರವಾಸಿಗರು ವರ್ತಿಸಿದ್ದಾರೆ.


    ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ದತ್ತಪೀಠ, ಮಾಣಿಕ್ಯಾಧಾರ, ಗಾಳಿಕೆರೆ, ದೇವರಮನೆ ಗುಡ್ಡ ಭಾಗ ಸೇರಿದಂತೆ ಜಿಲ್ಲೆಯ ಧಾರ್ಮಿಕ ಕ್ಷೇತ್ರಗಳಾದ ಹೊರನಾಡು ಅನ್ನಪೂರ್ಣೇಶ್ವರಿ, ಶೃಂಗೇರಿ ಶಾರದಾಂಬೆ ಹಾಗೂ ಕಳಸ ಕಳಸೇಶ್ವರ ಸ್ವಾಮಿ ದೇಗುಲಕ್ಕೂ ಪ್ರವಾಸಿಗರು ಹಾಗೂ ಭಕ್ತರು ದಾಂಗುಡಿ ಇಡುತ್ತಿದ್ದಾರೆ. ಜಿಲ್ಲೆಗೆ ಈ ರೀತಿ ಭಾರೀ ಪ್ರಮಾಣದಲ್ಲಿ ಪ್ರವಾಸಿಗರು ಆಗಮಿಸುತ್ತಿರುವುದು ಜಿಲ್ಲೆಯ ಜನರನ್ನ ಆತಂಕಕ್ಕೆ ದೂಡಿದೆ. ವೀಕೆಂಡ್ ಹಿನ್ನೆಲೆ ವಾರದಿಂದಲೂ ಜಿಲ್ಲೆಗೆ ಭಾರೀ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಇನ್ನು ವೀಕ್ ಎಂಡ್ ಆಗಿರೋದ್ರಿಂದ ಜಿಲ್ಲೆಯ ಗಿರಿ ಭಾಗದ ಬಹುತೇಕ ಹೋಂ ಸ್ಟೇ, ರೆಸಾರ್ಟ್​ಗಳು ಸಂಪೂರ್ಣ ಬುಕ್ ಆಗಿವೆ. ಪ್ರವಾಸಿಗರು ರೂಂಗಾಗಿ ಹೋಂ ಸ್ಟೇ, ರೆಸಾರ್ಟ್ ಮಾಲೀಕರಿಗೆ ಮೇಲಿಂದ ಮೇಲೆ ಫೋನ್ ಮಾಡುತ್ತಿದ್ದಾರೆ. ಹೀಗೆ ಎಗ್ಗಿಲ್ಲದೆ ಬರುತ್ತಿರುವ ಪ್ರವಾಸಿಗರನ್ನ ಕಂಡು ಜಿಲ್ಲೆಯ ಜನ ಕೊರೋನಾ ಮತ್ತೆ ಹೆಚ್ಚಾಗುತ್ತಾ ಎಂಬ ಆತಂಕದಲ್ಲಿ ಬದುಕುತ್ತಿದ್ದಾರೆ.


    ಸಂಚಾರ ದಟ್ಟಣೆ ಉಂಟಾಗಿರುವುದು


    ಕೈಮರ ಚೆಕ್ ಪೋಸ್ಟ್ ಬಳಿ ಕಾಂಗ್ರೆಸ್ ಕಾರ್ಯಕರರ್ತರ ಪ್ರತಿಭಟನೆ


    ಈಗಾಗಲೇ 3ನೇ ಅಲೆಯ ಭೀತಿ ಜನಸಾಮಾನ್ಯರನ್ನ ಕಾಡುತ್ತಿದೆ. ಈ ಮಧ್ಯೆ ಪ್ರವಾಸಿತಾಣಗಳತ್ತ ಸಹಸ್ರಾರು ಸಂಖ್ಯೆಯಲ್ಲಿ ಜನರು ಲಗ್ಗೆಯಿಡುತ್ತಿದ್ದಾರೆ. ಇಂದು ಮುಂಜಾನೆಯಿಂದಲೇ ಪ್ರವಾಸಿಗರ ಹಾಟ್ ಸ್ಪಾಟ್ ಅಂತಾನೆ ಕರೆಯಿಸಿಕೊಳ್ಳುವ ರಾಜ್ಯದ ಅತ್ಯಂತ ಎತ್ತರದ ಪ್ರದೇಶ ಚಿಕ್ಕಮಗಳೂರು ಜಿಲ್ಲೆಯ ಮುಳ್ಳಯ್ಯನಗಿರಿಗೆ ಪ್ರವಾಸಿಗರು ಮುಖ ಮಾಡುತ್ತಿದ್ದಾರೆ. ಹೀಗೆ ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ದತ್ತಪೀಠದ ಕಡೆ ಹೊರಟಿದ್ದ ಪ್ರವಾಸಿಗರಿಗೆ ಚಿಕ್ಕಮಗಳೂರು ತಾಲೂಕಿನ ಕೈಮರ ಚೆಕ್ ಪೋಸ್ಟ್ ಬಳಿ ಶಾಕ್ ಕಾದಿತ್ತು. ಚೆಕ್ ಪೋಸ್ಟ್ ಬಳಿ ಧರಣಿ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು ಪ್ರವಾಸಿಗರು ಮುಳ್ಳಯ್ಯನಗಿರಿ ಮಾರ್ಗದ ಕಡೆ ಹೋಗದಂತೆ ತಡೆದರು. ಜಿಲ್ಲಾಡಳಿತ ಕೇರಳ, ಮಹಾರಾಷ್ಟ್ರ ಸೇರಿದಂತೆ ಹೊರರಾಜ್ಯಗಳ ಪ್ರವಾಸಿಗರಿಗೆ 72 ಗಂಟೆಯೊಳಗಿನ ಕೊರೊನಾ ನೆಗೆಟಿವ್ ರಿಪೋರ್ಟ್ ಇಟ್ಟುಕೊಂಡು ಬರುವಂತೆ ಸೂಚಿಸಿದೆ. ಆದರೆ ಹೊರರಾಜ್ಯದ ಪ್ರವಾಸಿಗರನ್ನ ಹೊರತುಪಡಿಸಿ ಸಹಸ್ರಾರು ಸಂಖ್ಯೆಯಲ್ಲಿ ಪ್ರವಾಸಿಗರು ಮುಳ್ಳಯ್ಯನಗಿರಿ ಕಡೆ ಮುಖ ಮಾಡುತ್ತಿದ್ದಾರೆ.


    ನಮ್ಮ ರಾಜ್ಯದ ಇತರ ಜಿಲ್ಲೆಗಳ ಪ್ರವಾಸಿಗರಿಗೂ 72 ಗಂಟೆಯೊಳಗಿನ ಕೊವಿಡ್ ನೆಗೆಟಿವ್ ರಿಫೋರ್ಟ್ ಕಡ್ಡಾಯ ಮಾಡಬೇಕು ಅಂತಾ ಪಟ್ಟು ಹಿಡಿದು ಕಾಂಗ್ರೆಸ್ ಕಾರ್ಯಕರ್ತರು ಕೈ ಮರ ಚೆಕ್ ಪೋಸ್ಟ್ ಬಳಿ ಪ್ರತಿಭಟನೆ ನಡೆಸಿದರು.


    ಪ್ರವಾಸಿಗರು ನಮ್ಮನ್ನ ಹೋಗಲು ಬಿಡಿ ಅಂತಾ ಎಷ್ಟೇ ಮನವಿ ಮಾಡಿಕೊಂಡರೂ ಕೂಡ ಕೈ ಕಾರ್ಯಕರ್ತರು ತಮ್ಮ ಪಟ್ಟನ್ನ ಸಡಿಲಿಸಲಿಲ್ಲ. ಪರಿಣಾಮ ಕೈಮರ ಚೆಕ್ ಪೋಸ್ಟ್ ಬಳಿಯಿಂದ ಚಿಕ್ಕಮಗಳೂರು ಮಾರ್ಗದ ಕಡೆ ಸುಮಾರು 2 ಕೀಲೋ ಮೀಟರ್ ದೂರ ಟ್ರಾಫಿಕ್ ಜಾಮ್ ಉಂಟಾಗಿತ್ತು. ನೂರಾರು ಕಾರುಗಳಲಿದ್ದ ಸಹಸ್ರಾರು ಪ್ರವಾಸಿಗರು ಸಂಚಾರ ದಟ್ಟಣೆಯಲ್ಲಿ ಸಿಲುಕಿ ಬೆಳ್ಳಂಬೆಳ್ಳಂಗೆಯೇ ಪರದಾಟ ನಡೆಸುವಂತಾಗಿತ್ತು. ಬೆಳಗಿನ ವೇಳೆ ಮುಳ್ಳಯ್ಯನಗಿರಿಗೆ ಹೋಗಿ ವೀಕೆಂಡ್ ಜಾಲಿ ಮಾಡಬೇಕು ಅಂದುಕೊಂಡಿದ್ದ ಪ್ರವಾಸಿಗರು ವಿಧಿಯಿಲ್ಲದೇ ರಸ್ತೆ ಮಧ್ಯೆ ಕಾದು ಕಾದು ಸುಸ್ತಾದರು. ಚೆಕ್ ಪೋಸ್ಟ್ ಸಿಬ್ಬಂದಿಗಳು ಎಷ್ಟೇ ಮನವಿ ಮಾಡಿಕೊಂಡರೂ ಕೈ ಕಾರ್ಯಕರ್ತರು ಪ್ರತಿಭಟನೆ ಕೈ ಬಿಡಲೇ ಇಲ್ಲ.


    ಇದನ್ನೂ ಓದಿ: ಅಫಘಾನಿಸ್ತಾನದ ಮೂವರು ಉಗ್ರರನ್ನು ಹೊಡೆದುರುಳಿಸಿದ ಪಾಕಿಸ್ತಾನ ಭದ್ರತಾ ಪಡೆ


    ಯಾವಾಗ ಸಂಚಾರ ದಟ್ಟಣೆ ಹೆಚ್ಚಾಯಿತೋ ಚಿಕ್ಕಮಗಳೂರು ನಗರದಿಂದ ಪೊಲೀಸರು ಕೈಮರ ಚೆಕ್ ಪೋಸ್ಟ್ ನತ್ತ ಧಾವಿಸಿದರು. ಜಿಲ್ಲಾಡಳಿತದ ಆದೇಶ ಏನಿದ್ಯೋ ಅದನ್ನ ನಾವು ಪಾಲಿಸುತ್ತಿದ್ದೇವೆ, ರಸ್ತೆ ತಡೆ ನಡೆಸಬೇಡಿ ಅಂತಾ ಕೈ ಕಾರ್ಯಕರ್ತರ ಬಳಿ ಮನವಿ ಮಾಡಿಕೊಂಡರು. ಆದರೆ ಪೊಲೀಸರ ಮಾತಿಗೂ ಪ್ರತಿಭಟನಾ ನಿರತರು ಸೊಪ್ಪು ಹಾಕದಿದ್ದಾಗ, ಪೊಲೀಸರು ಬಲವಂತದಿಂದಲೇ ಪ್ರತಿಭಟನೆಯನ್ನ ಹತ್ತಿಕ್ಕಿದ್ದರು. ಈ ವೇಳೆ ದೊಡ್ಡ ಹೈಡ್ರಾಮಾವೇ ಕೈಮರ ಚೆಕ್ ಪೋಸ್ಟ್ ಬಳಿ ನಡೆಯಿತು. ಕಾಂಗ್ರೆಸ್ ಮುಖಂಡ ರಸೂಲ್ ಖಾನ್​ ಅವರನ್ನ ಪೊಲೀಸ್ ವಾಹನಕ್ಕೆ ತುಂಬಲು ಗ್ರಾಮಾಂತರ ಸರ್ಕಲ್ ಸ್ವರ್ಣ ಸೇರಿದಂತೆ ಮೂರ್ನಾಲ್ಕು ಮಂದಿ ಪೊಲೀಸರು ಹರಸಾಹಸ ನಡೆಸಿದರು. ಈ ವೇಳೆ ತಳ್ಳಾಟ, ನೂಕಾಟ ಏರ್ಪಟ್ಟಿತ್ತು. ನಂತರ ಪ್ರವಾಸಿಗರಿಗೆ ಅನುಮತಿ ನೀಡಲಾಯಿತು.


     ವರದಿ: ವೀರೇಶ್ ಹೆಚ್ ಜಿ



    ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.

    Published by:HR Ramesh
    First published: