ಅಧಿವೇಶನದಲ್ಲಿ ನಮ್ಮ ಸಂಕಷ್ಟ ಬಗ್ಗೆ ಚರ್ಚೆಯಾಗಲಿ: ನೇಕಾರ ಸಮುದಾಯ ಒತ್ತಾಯ

ಕೋವಿಡ್, ಪ್ರವಾಹದಿಂದ ತತ್ತರಿಸಿರುವ ರಾಜ್ಯದ ನೇಕಾರ ವೃತ್ತಿಯ ಸಮುದಾಯದವರು ಈ ಬಾರಿ ಮುಂಗಾರು ಅಧಿವೇಶನದಲ್ಲಿ ತಮ್ಮ ಸಮಸ್ಯೆಗಳ ಬಗ್ಗೆ ಚರ್ಚೆಯಾಗಿ ಒಂದು ಪರಿಹಾರ ಸಿಗುವ ನಿರೀಕ್ಷೆಯಲ್ಲಿದ್ದಾರೆ.

ಉರಿಕಾರ ಉದ್ಯಮ

ಉರಿಕಾರ ಉದ್ಯಮ

  • Share this:
ಬಾಗಲಕೋಟೆ (ಸೆಪ್ಟೆಂಬರ್ 21): ನೆರೆ, ಕೋವಿಡ್​ನಿಂದ ತತ್ತರಿಸಿರುವ ನೇಕಾರರ ನೆರವಿಗೆ ರಾಜ್ಯ ಸರ್ಕಾರ ಬರಬೇಕೆಂದು ನೇಕಾರರ ಕೂಗು ಮತ್ತೆ ಹೆಚ್ಚಾಗಿದೆ. ಇಂದು ಪ್ರಾರಂಭವಾಗಲಿರುವ ಮುಂಗಾರು ಅಧಿವೇಶನದಲ್ಲಿ ನೇಕಾರರ ಸಮಸ್ಯೆಗಳ ಬಗ್ಗೆ ಚರ್ಚೆಯಾಗಬೇಕು. ನೇಕಾರರ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು ಎಂದು ನೇಕಾರ ಸಮುದಾಯ ಒತ್ತಾಯಿಸಿದೆ.

ಕಳೆದ ವರ್ಷದ ನೆರೆಗೆ ತತ್ತರಿಸಿದ ಬಾಗಲಕೋಟೆ ಜಿಲ್ಲೆಯ ನೇಕಾರರ ಬದುಕು ಅಕ್ಷರಶಃ ಮೂರಾಬಟ್ಟೆಯಾಗಿತ್ತು. ನೇಕಾರರು ನೆರೆ ಹೊಡೆತಕ್ಕೆ ಚೇತರಿಸಿಕೊಳ್ಳುವ ಹೊತ್ತಿಗೆ ಕೊರೊನಾ ಮಹಾಮಾರಿಯಿಂದಾಗಿ ನೇಕಾರರ ಬಟ್ಟೆ ವಹಿವಾಟಿಗೆ ಕತ್ತರಿಬಿತ್ತು. ಸಾಲಸೋಲ ಮಾಡಿ ನೇಯ್ದಿದ್ದ ಬಟ್ಟೆಗಳು ಮನೆಯಲ್ಲೇ ಉಳಿದವು. ರಾಜ್ಯದಲ್ಲಿ ಅತೀ ಹೆಚ್ಚು ನೇಕಾರಿಕೆ ಹೊಂದಿರುವ ರಬಕವಿ -ಬನಹಟ್ಟಿ ಪಟ್ಟಣ ಸೇರಿದಂತೆ ಇಳಕಲ್, ಸೂಳೆಭಾವಿ, ಗುಳೇದಗುಡ್ಡ, ಕೆರೂರು, ಅಮೀನಗಡ, ಕಮತಗಿಯಲ್ಲಿ ಮಲಪ್ರಭಾ, ಕೃಷ್ಣಾ, ಘಟಪ್ರಭಾ ನದಿ ಪ್ರವಾಹ, ಮಳೆ ಹೊಡೆತಕ್ಕೆ ಮಗ್ಗಗಳು ಹಾನಿಯಾಗಿದ್ದವು. ರಾಜ್ಯ ಸರ್ಕಾರ ಮಗ್ಗ ಹಾನಿಗೆ 25ಸಾವಿರ ಘೋಷಣೆ ಮಾಡಿತ್ತು. ಆದರೆ ನೇಕಾರರಿಗೆ ಪರಿಹಾರ ಸಮರ್ಪಕವಾಗಿ ತಲುಪಿಲ್ಲ ಎನ್ನುವ ಆರೋಪಗಳಿವೆ.

ಇದನ್ನೂ ಓದಿ: ಪರೀಕ್ಷೆಗೆ ಒಂದು ದಿನ ಮುಂಚೆ ಎಂಕಾಮ್ ವಿದ್ಯಾರ್ಥಿನಿ ಆತ್ಮಹತ್ಯೆ; ವಿಜಯಪುರ ಮಹಿಳಾ ವಿವಿಯಲ್ಲಿ ದುರಂತ

ಸಮ್ಮಾನ್ ಯೋಜನೆ ಮೊತ್ತ ಏರಿಕೆ; ನೇಕಾರರ ಸಮಸ್ಯೆ ಬಗ್ಗೆ ಅಧಿವೇಶನದಲ್ಲಿ ಚರ್ಚೆಯಾಗಲಿ: 

ಇಂದು ಅಧಿವೇಶನ ಆರಂಭವಾಗಲಿದ್ದು, ಮುಖ್ಯಮಂತ್ರಿಗಳು,ಹಾಗೂ ವಿರೋಧ ಪಕ್ಷದವರು ನೇಕಾರರ ಸಮಸ್ಯೆ ಬಗ್ಗೆ ಚರ್ಚೆ ಮಾಡಬೇಕು. ನೇಕಾರ ಸಮ್ಮಾನ ಯೋಜನೆ ವೃತ್ತಿಪರ ಎಲ್ಲ ನೇಕಾರರಿಗೆ ಅನ್ವಯವಾಗಬೇಕು. ಸಮ್ಮಾನ್ ಯೋಜನೆ ವಾರ್ಷಿಕ ಮೊತ್ತ 10ಸಾವಿರಕ್ಕೆ ಏರಿಕೆಯಾಗಬೇಕು. ರಾಜ್ಯದಲ್ಲಿ ಸಾಲಬಾಧೆಯಿಂದ 11 ಜನ ನೇಕಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ನೇಕಾರರರ ಕುಟುಂಬಗಳಿಗೆ ತಲಾ 10 ಲಕ್ಷ ರೂ ಪರಿಹಾರ ನೀಡಬೇಕು. ಅಧಿವೇಶನದಲ್ಲಿ ವೃತ್ತಿಪರ ನೇಕಾರ ಕಾರ್ಮಿಕರ ಕುರಿತು ಚರ್ಚೆಗೆ ಆಗ್ರಹಿಸಿ ಇಂದಿನಿಂದ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ಪಟ್ಟಣದ  ತಾಲ್ಲೂಕಾ ದಂಡಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆಗೆ ನಿರ್ಧರಿಸಲಾಗಿದೆ. ಕೋವಿಡ್, ನೆರೆ ಹಾನಿ ಸೇರಿದಂತೆ ಎಲ್ಲ ತರಹದ ಕಷ್ಟಗಳಿಗೆ ನೇಕಾರ ತುತ್ತಾಗಿದ್ದಾರೆ. ನೇಕಾರನ ಬದುಕಿನ ಬಗ್ಗೆ ಅಧಿವೇಶನದಲ್ಲಿ ಚರ್ಚೆ ಆಗಬೇಕಿದೆ ಎಂದು ರಾಜ್ಯ ನೇಕಾರರ ಸೇವಾ ಸಂಘದ ರಾಜ್ಯಾಧ್ಯಕ್ಷ ಶಿವಲಿಂಗ ಟಿರಕಿ ಆಗ್ರಹಿಸಿದ್ದಾರೆ.

ಇದನ್ನೂ ಓದಿ: Udupi Rain: ಉಡುಪಿಯಲ್ಲಿ ಜಲಪ್ರಳಯ: ಮನೆಗಳಿಗೆ ನುಗ್ಗಿದ ನೀರು; ಸ್ಥಳೀಯರ ಪರದಾಟ

ರೈತರು, ನೇಕಾರರು ಸರ್ಕಾರದ ಎರಡು ಕಣ್ಣುಗಳೆಂದು ಹೇಳುತ್ತಾ ಬಂದಿರುವ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸರ್ಕಾರ, ಪದೇ ಪದೇ ಸಂಕಷ್ಟ ಅನುಭವಿಸುತ್ತಿರುವ ರೈತರು, ನೇಕಾರರ ನೆರವಿನ ಬಗ್ಗೆ ಅಧಿವೇಶನದಲ್ಲಿ ಚರ್ಚಿಸಿ ಆಸರೆಯಾಗಬೇಕಿದೆ.

ವರದಿ: ರಾಚಪ್ಪ ಬನ್ನಿದಿನ್ನಿ
Published by:Vijayasarthy SN
First published: