ಧಾರವಾಡ (ನವೆಂಬರ್. 25): ಎಲ್ಲೆಡೆ ಸಾರ್ವಜನಿಕರು ಮಾಸ್ಕ್ ಧರಿಸದೇ, ಸಾಮಾಜಿಕ ಅಂತರ ಪಾಲನೆ ಮಾಡದೇ ಸಂಚರಿಸುತ್ತಿದ್ದು, ಕೋವಿಡ್-19 ಇಲ್ಲವೆ ಇಲ್ಲ ಎಂಬಂತೆ ವರ್ತನೆ ಮಾಡುತ್ತಿದ್ದಾರೆ. ಆದರೆ, ಕೊರೋನಾದ ಎರಡನೇ ಅಲೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಮುಖಕ್ಕೆ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಯಬೇಕು ಇವಾದಲ್ಲಿ ದಂಡ ಕಟ್ಟ ಬೇಕು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಎಚ್ಚರಿಕೆ ನೀಡಿದ್ದಾರೆ. ಧಾರವಾಡ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಕೊರೋನಾ ಹೋಗಿದೆ ಎಂದು ಭಾವಿಸಿ ಜನರು ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಪಾಲನೆ ಮಾಡದೆ ಗುಂಪು ಗೂಡುವುದು, ಸಂಚರಿಸುವುದು ಸಾಮಾನ್ಯವಾಗುತ್ತಿದೆ. ಈ ರೀತಿಯ ಭಾವನೆ ಹಾಗೂ ವರ್ತನೆಗಳಿಂದ ನಾವು ಕೊರೋನಾದ ಎರಡನೇ ಅಲೆಗೆ ತುತ್ತಾಗುವ ಸಾಧ್ಯತೆ ಇದೆ ಎಂದರು. ಪ್ರತಿದಿನ ಒಂದಲ್ಲಒಂದು ರೀತಿಯಲ್ಲಿ ಸಾರ್ವಜನಿಕರಿಗೆ ಕೊರೋನಾ ಜಾಗೃತಿ, ತಿಳುವಳಿಕೆ ನೀಡಿದರೂ ಕೆಲವರ ಮನೋಭಾವ ಬದಲಾಗದೆ ಉದಾಸೀನತೆ ತೋರುತ್ತಿದ್ದಾರೆ. ಆದ್ದರಿಂದ ಕೊರೋನಾ ಜಾಗೃತಿ ಹಾಗೂ ಮಾಸ್ಕ್ ಅಭಿಯಾನಕ್ಕಾಗಿ ರಚಿಸಿರುವ ಅಧಿಕಾರಿಗಳ ತಂಡ ಇನ್ನಷ್ಟು ಕ್ರಿಯಾಶೀಲವಾಗಿ ತೊಡಗಿಸಿಕೊಂಡು ಪರಿಣಾಮಕಾರಿಯಾಗಿ ಅಭಿಯಾನ ಜಾರಿಗೊಳಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಮಾಸ್ಕ್ ಧರಿಸದೆ ಸಂಚರಿಸುವವರಿಗೆ ಸ್ಥಳದಲ್ಲಿಯೇ 250 ರೂಪಾಯಿ ದಂಡ ವಿಧಿಸಬೇಕು. ದಂಡ ಕಟ್ಟಿದ ವ್ಯಕ್ತಿ ಮಾಸ್ಕ್ ಧರಿಸದೇ ತಪ್ಪನ್ನು ಪುನರಾವರ್ತಿಸಿದರೆ ಮತ್ತೇ ಅದೇ ರೀತಿ ದಂಡ ವಿಧಿಸಬೇಕು. ಈ ಮೂಲಕ ಜನರಿಗೆ ಮಾಸ್ಕ್ ಧರಿಸಿ, ಇಲ್ಲಾ ದಂಡ ಕಟ್ಟಿ ಎಂಬ ಕಠಿಣ ಸಂದೇಶವನ್ನು ತಲುಪಿಸಬೇಕೆಂದು ಜಿಲ್ಲಾಧಿಕಾರಿಗಳು ಖಡಕ್ ವಾರ್ನಿಂಗ್ ಮಾಡಿದ್ದಾರೆ.
ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಪಾಲಿಕೆ ಆಯುಕ್ತರ ಹಾಗೂ ಅಪರಾಧ ಮತ್ತು ಸಂಚಾರ ವಿಭಾಗದ ಉಪ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಮಾಸ್ಕ್ ಕಾರ್ಯಾಚರಣೆ ಕೈಗೊಳ್ಳಬೇಕು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ನಗರ, ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಸ್ಥಳೀಯ ನಗರ ಸಂಸ್ಥೆ ಮತ್ತು ಪೊಲೀಸ್ ಸಿಬ್ಬಂದಿ ಸಹಯೋಗದಲ್ಲಿ ಮಾಸ್ಕ್ ಅಭಿಯಾನವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕೆಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
ಇದನ್ನೂ ಓದಿ : ಅಹ್ಮದ್ ಪಟೇಲ್ ಕಾಂಗ್ರೆಸ್ ಗೆ ಕರೆ ತಂದಿದ್ದರಿಂದ ಸಿಎಂ ಆದೆ ; ಭಾವುಕರಾದ ಸಿದ್ಧರಾಮಯ್ಯ
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ಕೃಷ್ಣಕಾಂತ್ ಮಾತನಾಡಿ, ಮಹಾನಗರದ ಗಡಿ ಭಾಗದಲ್ಲಿ ಹಾಗೂ ಹೆಚ್ಚು ಜನಸಂಖ್ಯೆ ಇರುವ ಗ್ರಾಮ, ನಗರಗಳಲ್ಲಿ ಕೊರೋನಾ ಜಾಗೃತಿ ಮತ್ತು ಮಾಸ್ಕ್ ಅಭಿಯಾನವನ್ನು ಚುರುಕುಗೊಳಿಸಲಾಗುವುದು. ಮಾಸ್ಕ್ ಧರಿಸದೇ, ಸಾಮಾಜಿಕ ಅಂತರ ಪಾಲನೆ ಮಾಡದವರಿಗೆ ತಿಳುವಳಿಕೆ ಮತ್ತು ಎಚ್ಚರಿಕೆ ನೀಡಿ, ದಂಡ ವಿಧಿಸಲಾಗುವುದು. ವಾಹನಗಳಿಗೆ ಧ್ವನಿವರ್ಧಕ ಬಳಸಿ ಆಯಾ ಪೊಲೀಸ್ ಠಾಣೆಗಳ ಸರಹದ್ದಿನಲ್ಲಿ ಕೋವಿಡ್-19 ಜಾಗೃತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ