ಭರವಸೆಯಂತೆ ಕಾಂಗ್ರೆಸ್​ನಿಂದ ಬಂದವರನ್ನು ಸಚಿವರನ್ನಾಗಿ ಮಾಡಿದ್ದೇವೆ; ಸಚಿವ ಈಶ್ವರಪ್ಪ ಹೇಳಿಕೆ

ಎಲ್ಲಾ ಚುನಾವಣೆಗಳಲ್ಲಿ ಬಿಜೆಪಿ ಗೆಲುವು ಸಾಧಿಸುತ್ತಿದ್ದು, ಕಾಂಗ್ರೆಸ್ ರಾಜ್ಯದಲ್ಲಿ ಪೂರ್ಣ ಮರೆಯಾಗಿ ಹೋಗುವುದು ಬೇಡ. ಸಣ್ಣದಾಗಿಯಾದರೂ ಕಾಂಗ್ರೆಸ್ ಉಳಿಯಲಿ ಎಂದು ಆಶಿಸುತ್ತೇನೆ ಎಂದು ಸಚಿವ ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.

ಸಚಿವ ಕೆ.ಎಸ್‌. ಈಶ್ವರಪ್ಪ.

ಸಚಿವ ಕೆ.ಎಸ್‌. ಈಶ್ವರಪ್ಪ.

  • Share this:
ಕೊಡಗು: ಎರಡು ಚುನಾವಣೆಗಳಲ್ಲಿಯೂ ರಾಜ್ಯದ ಜನರು ನಮಗೆ ಆಶೀರ್ವದಿಸಿದರೂ ಬಹುಮತ ಇಲ್ಲದಂತಾಯಿತು. ಆ ನಂತರ ಕಾಂಗ್ರೆಸ್ ಗೆ ರಾಜಿನಾಮೆ ನೀಡಿ ಬಿಜೆಪಿಗೆ ಬೆಂಬಲ ನೀಡಿದವರಿಗೆ ಆಗಲೇ ಸಚಿವ ಸ್ಥಾನ ನೀಡುವುದಾಗಿ ಭರವಸೆ ನೀಡಲಾಗಿತ್ತು. ಅದರಂತೆ ಬಹುತೇಕರಿಗೆ ಸಚಿವ ಸ್ಥಾನ ನೀಡಿದ್ದೇವೆ. ಇನ್ನುಳಿದ ಸ್ಥಾನಗಳಲ್ಲಿ ಪಕ್ಷದ ಶಾಸಕರಿಗೆ ಸಚಿವ ಸ್ಥಾನ ನೀಡಬೇಕಾಗಿದೆ. ಹೀಗಾಗಿ ಅಡ್ಜೆಸ್ಟ್ ಮಾಡಿಕೊಳ್ಳಬೇಕಾಗಿದೆ ಎಂದು ಸಚಿವ ಈಶ್ವರಪ್ಪ ಮಡಿಕೇರಿಯಲ್ಲಿ ಹೇಳಿದ್ದಾರೆ. ಬಿಜೆಪಿಯಿಂದ ನಡೆಯುತ್ತಿರುವ ಜನಸೇವಕ್ ಸಮಾಮೇಶಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಮಾತನಾಡಿರುವ ಅವರು, " ಕೊಡಗು ಜಿಲ್ಲೆಗೆ ಸಚಿವ ಸ್ಥಾನ ಸಿಗಬೇಕು ಎನ್ನೋದು ನಮ್ಮ ಹಂಬಲವಾಗಿತ್ತು. ಆದರೆ ಅದು ಸಾಧ್ಯವಾಗಿಲ್ಲ. ಮುಂದಿನ ದಿನಗಳಲ್ಲಿ ಸಚಿವಸ್ಥಾನ ಸಿಗುವ ಸಾಧ್ಯತೆ ಇದೆ. ಇನ್ನೂ ಸಚಿವ ಸಂಪುಟ ವಿಸ್ತರಣೆಯೋ ಅಥವಾ ಪುನರ್ ರಚನೆಯೋ ಎನ್ನೋದನ್ನ ಆಡಳಿತಾತ್ಮಕ ದೃಷ್ಟಿಯಿಂದ ಹೈಕಮಾಂಡ್ ಮತ್ತು ಸಿಎಂ ಯಡಿಯೂರಪ್ಪ ಅವರು ಕುಳಿತು ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಶಾಸಕ ಎನ್ ಮಹೇಶ್ ಅವರು ಸಚಿವ ಸ್ಥಾನ ಸಿಕ್ಕರೆ ಬಿಜೆಪಿಗೆ ಸೇರುವುದಾಗಿ ಹೇಳಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಈಶ್ವರಪ್ಪ, "ನಮ್ಮ ಪಕ್ಷದ ಶಾಸಕರಿಗೆ ಸಚಿವ ಸ್ಥಾನ ಕೊಡಲು ಸಾಧ್ಯವಾಗುತ್ತಿಲ್ಲ. ಹೀಗಿರುವಾಗ ಎನ್. ಮಹೇಶ್ ಅವರಿಗೆ ಸಚಿವ ಸ್ಥಾನ ಎಲ್ಲಿಂದ ಕೊಡಲು ಸಾಧ್ಯ. ಸರ್ಕಾರ ಈಗ ಬಹುಮತದಿಂದ ಅಧಿಕಾರ ನಡೆಸುತ್ತಿದೆ. ಅವರು ಬೇಕಾದರೆ ಬಾಹ್ಯ ಬೆಂಬಲ ನೀಡಿದರೆ ನಮಗೆ ಯಾವುದೇ ಅಭ್ಯಂತರವಿಲ್ಲ" ಎಂದಿದ್ದಾರೆ.

ರಾಜ್ಯದ ಹಲವೆಡೆ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಮಾಡುತ್ತಿದೆ ಎನ್ನೋ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವ ಈಶ್ವರಪ್ಪ, "ಕಾಂಗ್ರೆಸ್ ನವರು ಬಿಜೆಪಿಯನ್ನು ನೋಡಿ ಇದ್ದಕ್ಕಿದ್ದಂತೆ ಸಮಾವೇಶ ಮಾಡಲು ಮುಂದಾಗಿದ್ದಾರೆ. ಬಿಜೆಪಿಯ ದಿಕ್ಕಿನಲ್ಲಿ ಹೋಗಬೇಕೆಂದು ಪ್ರಯತ್ನಿಸುತ್ತಿದ್ದಾರೆ. ಆ ಪ್ರಯತ್ನದಲ್ಲಿ ಐದು ಪರ್ಸೆಂಟ್ ಆದ್ರು ಅವರು ಯಶಸ್ವಿಯಾಗಲಿ ಎಂದು ಆಶಿಸುತ್ತೇನೆ ಎಂದು ಕಾಂಗ್ರೆಸ್ ಬಗ್ಗೆ ವ್ಯಂಗ್ಯವಾಡಿದರು. ಅಲ್ಲದೆ, ರಾಜ್ಯದಲ್ಲಿ ಜನ ಕಾಂಗ್ರೆಸ್ ಅನ್ನು ಮರೆಯುತಿದ್ದಾರೆ. ಎಂಪಿ ಚುನಾವಣೆಯಲ್ಲಿ ಒಂದೇ ಒಂದು ಸ್ಥಾನ ಗೆದ್ದುಕೊಂಡರು. ಎಂಎಲ್ಎ ಚುನಾವಣೆಯಲ್ಲೂ ಸೋತರು.

ಇನ್ನು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಂತೂ ಲೆಕ್ಕಕ್ಕೆ ಇಲ್ಲದಂತೆ ಆಗಿದ್ದಾರೆ. ಎಲ್ಲಾ ಚುನಾವಣೆಗಳಲ್ಲಿ ಬಿಜೆಪಿ ಗೆಲುವು ಸಾಧಿಸುತ್ತಿದ್ದು, ಕಾಂಗ್ರೆಸ್ ರಾಜ್ಯದಲ್ಲಿ ಪೂರ್ಣ ಮರೆಯಾಗಿ ಹೋಗುವುದು ಬೇಡ. ಸಣ್ಣದಾಗಿಯಾದರೂ ಕಾಂಗ್ರೆಸ್ ಉಳಿಯಲಿ ಎಂದು ಆಶಿಸುತ್ತೇನೆ" ಎಂದು ವ್ಯಂಗ್ಯವಾಡಿದ್ದಾರೆ.

ಇದನ್ನೂ ಓದಿ: ರಾಜ್ಯಾದ್ಯಂತ ಪೈಲಟ್ ಕಾರ್ಯಕ್ರಮ ವಿಸ್ತರಣೆಗೆ ಕ್ರಮ, ಸರ್ಕಾರಿ ಸವಲತ್ತುಗಳು ಮನೆ ಬಾಗಿಲಿಗೆ; ಸಚಿವ ಆರ್. ಅಶೋಕ್

ಅಲ್ಲದೆ, "2023 ಕ್ಕೆ ಕುಮಾರಸ್ವಾಮಿ ನಾನು ಸಿಎಂ ಆಗುತ್ತೇನೆ ಎಂದು ಹೇಳಿಕೊಂಡಿದ್ದಾರೆ. ಇನ್ನು ಸಿದ್ಧರಾಮಯ್ಯ ಅವರಂತೂ ನಾನೇ ಸಿಎಂ ಅಂತ ಸ್ವಯಂ ಘೋಷಣೆ ಮಾಡಿಕೊಂಡಿದ್ದಾರೆ. ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಇಬ್ಬರು ಹಗಲುಗನಸು ಕಾಣುತ್ತಿದ್ದಾರೆ. ಈ ಇಬ್ಬರು ಮುಖ್ಯಮಂತ್ರಿ ಆಗಿದ್ದವರು. ಆ ಸ್ಥಾನವೇ ಹಗಲು ರಾತ್ರಿ ಅವರ ಕನಸ್ಸಿನಲ್ಲಿ ಬರುತ್ತಿದೆ.

ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಎಲ್ಲಿವೆ. ಕಾಂಗ್ರೆಸ್ ನಲ್ಲಿ ಶಿವಕುಮಾರ್ ಅವರದು ಒಂದು ಬಣವಾದರೆ, ಸಿದ್ದರಾಮಯ್ಯನವರದು ಒಂದು ಬಣವಾಗಿದೆ. ಇಬ್ಬರ ಗುಂಪುಗಳು ಹೊಡೆದಾಡಿ, ಬಡಿದಾಡಿಕೊಳ್ಳುತ್ತಿವೆ. ಇನ್ನು ಜೆಡಿಎಸ್ ನವರು ಎಲ್ಲರೂ ಪಕ್ಷ ಬಿಟ್ಟು ಹೋಗುತ್ತಿದ್ದಾರೆ. ಹೀಗಿರುವಾಗ ಸಿಎಂ ಸ್ಥಾನಕ್ಕಾಗಿ ಕನಸು ಕಾಣುತ್ತಿದ್ದಾರೆ" ಎಂದು ಜರಿದಿದ್ದಾರೆ.
Published by:MAshok Kumar
First published: