HOME » NEWS » District » WATER TANK IN COLLAPSING CONDITION AT KADABA RHHSN AKP

ಕುಸಿದು ಬೀಳುವ ಸ್ಥಿತಿಯಲ್ಲಿ ಓಬಿರಾಯನ ಕಾಲದ ನೀರಿನ ಟ್ಯಾಂಕ್; ಆತಂಕದಲ್ಲಿರುವ ಸ್ಥಳೀಯ ಜನತೆ

ಕೂಡಲೇ ಈ ನೀರಿನ ಟ್ಯಾಂಕ್ ದುರಸ್ತಿ ಅಥವಾ ತೆರವು ಮಾಡಬೇಕು. ಇದರೊಂದಿಗೆ ಮುಂದೆ ಉಂಟಾಗಬಹುದಾದ ಅನಾಹುತಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ಕ್ರಮ ಕೈಗೊಳ್ಳಬೇಕಾಗಿದೆ ಎನ್ನುವ ಒತ್ತಾಯವೂ ಕೇಳಿ ಬರಲಾರಂಭಿಸಿದೆ.

news18-kannada
Updated:March 31, 2021, 4:53 PM IST
ಕುಸಿದು ಬೀಳುವ ಸ್ಥಿತಿಯಲ್ಲಿ ಓಬಿರಾಯನ ಕಾಲದ ನೀರಿನ ಟ್ಯಾಂಕ್; ಆತಂಕದಲ್ಲಿರುವ ಸ್ಥಳೀಯ ಜನತೆ
ಕುಸಿದು ಬೀಳುವ ಸ್ಥಿತಿಯಲ್ಲಿರುವ ನೀರಿನ ಟ್ಯಾಂಕ್
  • Share this:
ಪುತ್ತೂರು: ಸರಿಸುಮಾರು ನಾಲ್ಕು ದಶಕಗಳ ಕಾಲದ ಹಳೆಯ ನೀರಿನ ತೊಟ್ಟಿ ಅವಸಾನದ ಅಂಚಿನಲ್ಲಿದ್ದು, ಯಾವಾಗ ಬೇಕಾದರೂ ಕುಸಿದು ಬೀಳುವ ಆತಂಕ ಎದುರಾಗಿದೆ. ಒಂದು ವೇಳೆ ಈ ಟ್ಯಾಂಕ್ ಕುಸಿದು ಬಿದ್ದರೆ ಅಪಾರ ಪ್ರಮಾಣದ ಆಸ್ತಿ-ಪಾಸ್ತಿ ಹಾಗೂ ಜೀವಕ್ಕೆ ಹಾನಿಯಾಗುವ ಸಾಧ್ಯತೆಗಳೂ ಹೆಚ್ಚಾಗಿದೆ. ಇದು‌ ದಕ್ಷಿಣಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕಡಬ ಪಟ್ಟಣ ಪಂಚಾಯತ್ ನ ಕಚೇರಿಯ ಪಕ್ಕದಲ್ಲೇ ಇರುವ ಕುಡಿಯುವ ನೀರಿನ ಟ್ಯಾಂಕಿನ ಸದ್ಯದ ಪರಿಸ್ಥಿತಿಯಾಗಿದೆ.

1977-78 ನೇ ಇಸವಿಯಲ್ಲಿ ಈ ಟ್ಯಾಂಕ್ ನಿರ್ಮಿಸಲಾಗಿದೆ ಎನ್ನುವ ಮಾಹಿತಿಯಿದೆ. ಇದರ ಕಾಮಗಾರಿ ಮುಗಿದು 1979 ರಲ್ಲಿ ಉದ್ಘಾಟನೆಗೊಂಡ  ಈ ಬೃಹತ್ ನೀರಿನ ಟ್ಯಾಂಕನ್ನು ಸಾರ್ವಜನಿಕರ ಉಪಯೋಗಕ್ಕಾಗಿ ಬಳಸಲಾಗಿತ್ತು. ಆದರೆ ಸಮರ್ಪಕವಾದ ನಿರ್ವಹಣೆಯಿಲ್ಲದ ಕಾರಣ ಟ್ಯಾಂಕ್ ಇದೀಗ ಅಪಾಯದ ಕೇಂದ್ರಬಿಂದುವಾಗಿ ಬದಲಾಗಿದೆ.  ಟ್ಯಾಂಕ್ ನಲ್ಲಿ ಬಹುತೇಕ ಅರ್ಧದಷ್ಟು ಭಾಗ ಕೆಸರು, ಗಲೀಜು ತುಂಬಿಕೊಂಡಿದೆ ಎಂಬ ಆರೋಪ ಕೇಳಿಬಂದಿದೆ. ಇದೇ ನೀರನ್ನು ಇಡೀ ಕಡಬ ಪೇಟೆಗೆ ನೀಡಲಾಗುತ್ತಿದೆ. ಯಾವುದೇ ಸ್ವಚ್ಚತೆಗೆ ಆದ್ಯತೆ ನೀಡಲಾಗುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಈ ಬೃಹತ್ ಗಾತ್ರದ ಟ್ಯಾಂಕ್ ನ ನಾಲ್ಕೂ ಆಧಾರಸ್ತಂಭಗಳಲ್ಲಿ ಬಿರುಕು ಬಿದ್ದಿವೆ. ಅಲ್ಲದೆ ನೀರು ಸಂಗ್ರಹವಾಗುವ ಟ್ಯಾಂಕ್ ನ ಅಡಿಭಾಗದಲ್ಲೂ ಬಿರುಕು ಕಾಣಿಸಿಕೊಂಡಿದೆ.

ಸುಮಾರು 50 ಸಾವಿರ ಲೀಟರ್ ಗೂ ಹೆಚ್ಚು ನೀರಿನ ಸಂಗ್ರಹ ಸಾಮರ್ಥ್ಯವಿದೆ. ಟ್ಯಾಂಕ್​ನ ಬಿರುಕುಗಳನ್ನು ಸರಿಪಡಿಸದೇ ಹೋದಲ್ಲಿ ಸರಕಾರಿ ಆಸ್ತಿಪಾಸ್ತಿ ಹಾಗು ಪ್ರಾಣಹಾನಿಯೂ ಸಂಭವಿಸುವ ಸಾಧ್ಯತೆಗಳು ಹೆಚ್ಚಾಗಿವೆ. ತಮ್ಮ ಅಗತ್ಯ ಕಾರ್ಯಗಳಿಗಾಗಿ ದಿನಂಪ್ರತಿ ನೂರಾರು ಸಂಖ್ಯೆಯ ಜನ ಕಡಬ ಪಟ್ಟಣ ಪಂಚಾಯತ್ ಗೆ ಭೇಟಿ ನೀಡುತ್ತಿದ್ದಾರೆ. ಇಂದೋ ನಾಳೆಯೋ ಕುಸಿದು ಬೀಳುವ ಆತಂಕದಲ್ಲಿರುವ ಈ ನೀರಿನ ಟ್ಯಾಂಕ್ ಕಚೇರಿ ಅವಧಿಯಲ್ಲಿ ಕುಸಿದು ಬಿದ್ದದ್ದೇ ಆದರೆ ಭಾರೀ ಅನಾಹುತಕ್ಕೂ ಇದು ಎಡಿಮಾಡಿಕೊಡುವ ಲಕ್ಷಣಗಳಿವೆ. ಬಿರುಕು ಕಂಡ ತಕ್ಷಣವೇ ಅವುಗಳನ್ನು ಸರಿಪಡಿಸುವ ಕೆಲಸ ನಡೆಯುತ್ತಿದ್ದಲ್ಲಿ ಈ ರೀತಿಯ ಭಯದ ವಾತಾವರಣ ನಿರ್ಮಾಣಗೊಳ್ಳುತ್ತಿರಲಿಲ್ಲ ಎನ್ನುವ ಆರೋಪ ಸ್ಥಳೀಯರಿಂದ ಕೇಳಿ ಬರುತ್ತಿದೆ.

ಇದನ್ನು ಓದಿ: ಸಿಎಂ ವಿರುದ್ಧ ಸಿಡಿದೆದ್ದ ಸಚಿವ ಈಶ್ವರಪ್ಪ; ತಮ್ಮ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆಂದು ರಾಜ್ಯಪಾಲರಿಗೆ ದೂರು

ಆಕಸ್ಮಿಕವಾಗಿ ಏನಾದರೂ ದುರಂತಗಳು ಸಂಭವಿಸಿದರೆ ಸಮೀಪದಲ್ಲೇ ಗ್ರಾಮ ಕರಣಿಕರ ಕಚೇರಿ, ಪಟ್ಟಣ ಪಂಚಾಯತ್ ಕಚೇರಿ, ಸೇರಿದಂತೆ ವಾಣಿಜ್ಯ ಕಟ್ಟಡಗಳು ಇದ್ದು, ಎಲ್ಲದಕ್ಕೂ ಸಮಸ್ಯೆಯಾಗುವ ಲಕ್ಷಣ ಗೋಚರಿಸುತ್ತಿದೆ. ಕೂಡಲೇ ಈ ನೀರಿನ ಟ್ಯಾಂಕ್ ದುರಸ್ತಿ ಅಥವಾ ತೆರವು ಮಾಡಬೇಕು. ಇದರೊಂದಿಗೆ ಮುಂದೆ ಉಂಟಾಗಬಹುದಾದ ಅನಾಹುತಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ಕ್ರಮ ಕೈಗೊಳ್ಳಬೇಕಾಗಿದೆ ಎನ್ನುವ ಒತ್ತಾಯವೂ ಕೇಳಿ ಬರಲಾರಂಭಿಸಿದೆ.
Youtube Video

ದಕ್ಷಿಣಕನ್ನಡ ಜಿಲ್ಲೆಯ ಹಲವೆಡೆ ನೀರಿನ ಸಮಸ್ಯೆ ಈಗಾಗಲೇ ಹೆಚ್ಚಾಗಲಾರಂಭಿಸಿದ್ದು, ಸರಕಾರದ ನೀರಿನ ವ್ಯವಸ್ಥೆಯನ್ನೇ ಬಳಸಬೇಕಾದ ಅನಿವಾರ್ಯತೆಯೂ ಇದೆ.  ಆದರೆ ನೀರು ಪೂರೈಸುವ ಇಂಥ ವ್ಯವಸ್ಥೆಗಳೇ ಈ ರೀತಿಯಾಗಿ ಹಾಳಾಗುತ್ತಿರುವುದು ವಿಪರ್ಯಾಸವಾಗಿದೆ. ಗಣಿ‌ ಮತ್ತು ಭೂವಿಜ್ಞಾನ ಇಲಾಖೆಯ ಮಾಹಿತಿ ಪ್ರಕಾರ ದಕ್ಷಿಣಕನ್ನಡ ಜಿಲ್ಲೆಯ ಕಡಬ ತಾಲೂಕಿನಲ್ಲಿ ಅಂತರ್ಜಲ ಮಟ್ಟ ಈ ವರ್ಷ ಕುಸಿದಿದ್ದು, ಈ ಕಾರಣಕ್ಕಾಗಿ ಕೃಷಿ ತೋಟಗಳಿಗೆ ನೀರಿನ ಅಭಾವವೂ ಹೆಚ್ಚಾಗಲಿದ್ದು, ಪಟ್ಟಣ ಪ್ರದೇಶಗಳಲ್ಲಿ ನೀರಿನ ಸಮಸ್ಯೆಯೂ ಈ ಬಾರಿ ಹೆಚ್ಚಾಗಲಿದೆ. ಹೀಗಿರುವಾಗ ಇತರ ಮೂಲಗಳಿಂದ ನೀರನ್ನು ಸಂಗ್ರಹಿಸಿಡುವ ಇಂಥ ಟ್ಯಾಂಕ್ ಗಳ ನಿರ್ವಹಣೆಯತ್ತ ಸರಕಾರ‌ ಗಮನಹರಿಸಬೇಕಿದೆ.
Published by: HR Ramesh
First published: March 31, 2021, 4:53 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories