ಮಂಡ್ಯ: ಜಿಲ್ಲೆಯ ಹಾಲು ಒಕ್ಕೂಟದಲ್ಲಿ ನಡೆದಿದೆ ಎನ್ನಲಾದ ಬೃಹತ್ ಹಾಲಿನ ಕಲಬೆರಕೆ ಹಗರಣ ಇದೀಗ ರಾಜಕೀಯಕ್ಕೆ ತಿರುಗಿಕೊಂಡಿದೆ. ಈ ಪ್ರಕರಣದಲ್ಲಿ ಪ್ರಮುಖ ಆರೋಪಿಗಳು ಜೆಡಿಎಸ್ ಪಕ್ಷದ ಬೆಂಬಲಿಗರು ಎಂದು ಕಾಂಗ್ರೆಸ್ ಪಕ್ಷ ಆರೋಪಿಸಿದರೆ, ಜೆಡಿಎಸ್ ಪಕ್ಷದವರು ಇದು ಪಕ್ಷದ ನಾಯಕರಿಗೆ ಮಸಿ ಬಳಿಯುವ ಕೆಲಸ ಅಂತ ಜಿಲ್ಲೆಯ ಕೈ ನಾಯಕರ ವಿರುದ್ದ ಕಿಡಿ ಕಾರಿದ್ದಾರೆ.
ಮಂಡ್ಯ ಜಿಲ್ಲೆಯ ಮನ್ಮುಲ್ನಲ್ಲಿ ಇತ್ತೀಚೆಗೆ ಬೆಳಕಿಗೆ ಬಂದ ಬೃಹತ್ ಹಾಲಿನ ಕಲಬೆರಕೆ ದಂಧೆ ಪ್ರಕರಣ ಇದೀಗ ರಾಜಕೀಯದತ್ತ ತಿರುಗಿದೆ. ಈ ಬೃಹತ್ ದಂಧೆ ಪ್ರಕರಣದಲ್ಲಿ ಭಾಗಿಯಾಗಿರೋರು ಜೆಡಿಎಸ್ ಪಕ್ಷದ ಬೆಂಬಲಿಗರು ಎಂದು ಜಿಲ್ಲಾ ಕಾಂಗ್ರೆಸ್ ನಾಯಕರು ಪ್ರಕರಣದಲ್ಲಿ ಭಾಗಿಯಾಗಿರೋ ಆರೋಪಿಗಳಾದ ಟ್ಯಾಂಕರ್ ಗಳ ಗುತ್ತಿಗೆದಾರರಾಗಿರೋ ರಘು ಮತ್ತು ರಾಜು ಎಂಬುವವರು ಮಾಜಿ ಸಿ.ಎಂ.ಕುಮಾರಸ್ವಾಮಿ ಹಾಗೂ ನಿಖಿಲ್ ಜೊತೆಗಿರುವ ಭಾವಚಿತ್ರಗಳನ್ನು ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಬಿಡುಗಡೆ ಮಾಡಿದ್ದಾರೆ. ಅಲ್ಲದೇ ಈ ಇಬ್ಬರು ಆರೋಪಿಗಳು ಮಾಜಿ ಸಿ.ಎಂ.ಕುಮಾರಸ್ವಾಮಿ ಅವರ ಸಂಬಂಧಿಕರು ಮತ್ತು ಅವರ ಬೆಂಬಲಿಗರು. ಹೀಗಾಗಿ ಪ್ರಕರಣ ಹಳ್ಳ ಹಿಡಿಯುವ ಸಾಧ್ಯತೆ ಇದೆ ಎಂದು ಆರೋಪಿಸಿದ್ದು, ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಒತ್ತಾಯಿಸಿದ್ದಾರೆ.
ಪ್ರಕರಣದಲ್ಲಿ ಹೆಚ್‌ಡಿಕೆ ಹೆಸರು ಬಳಕೆಗೆ ಮನ್ಮುಲ್ ನಿರ್ದೇಶಕರು ಗರಂ
ಇನ್ನು ಪ್ರಕರಣದಲ್ಲಿ ತಮ್ಮ ಪಕ್ಷದ ನಾಯಕ ಮಾಜಿ ಸಿ.ಎಂ. ಕುಮಾರಸ್ವಾಮಿ ಹೆಸರನ್ನು ಎಳೆದು ತಂದಿರುವುದಕ್ಕೆ ಜಿಲ್ಲೆಯ ಮನ್ಮುಲ್ ಆಡಳಿತ ಮಂಡಳಿಯ ನಿರ್ದೇಶಕರು ಗರಂ ಆಗಿದ್ದಾರೆ. ಪ್ರಕರಣದಲ್ಲಿ ನಿರ್ದೇಶಕರೆಲ್ಲ ಒಗ್ಗಟ್ಟಾಗಿ ಪ್ರಕರಣ ಪತ್ತೆ ಹಚ್ಚಿ ಈ ಪ್ರಕರಣವನ್ನು ಪೊಲೀಸರ ಮೂಲಕ ತನಿಖೆ ಮಾಡಿಸುತ್ತಿದ್ದಾರೆ. ಈ ಪ್ರಕರಣದ ಆರೋಪಿ ಪತ್ತೆ ಹಚ್ಚಿ ಶಿಕ್ಷೆ ಕೊಡಿಸುವ ಯತ್ನ ದಲ್ಲಿದ್ದೇವೆ. ಆದರೆ ಇದನ್ನು ರಾಜಕೀಯ ದುರುದ್ದೇಶಕ್ಕೆ ಬಳಸಿಕೊಂಡಿರುವ ಜಿಲ್ಲೆಯ ಕಾಂಗ್ರೆಸ್ ನಾಯಕರು ಇದರಲ್ಲಿ ನಮ್ಮ ಪಕ್ಷದ ನಾಯಕರಾಗಿರುವ ಕುಮಾರಸ್ವಾಮಿ ಹೆಸರನ್ನು ಎಳೆದು ತಂದು ಮಸಿ ಬಳೆಯುವ ಕೆಲಸಕ್ಕೆ ಮುಂದಾಗಿದ್ದಾರೆ. ಈ ಪ್ರಕರಣದಲ್ಲಿ ಗುತ್ತಿಗೆದಾರನ ಸಂಬಂಧ ಪಕ್ಷದೊಳಗಿಲ್ಲ. ಆದರೂ ಕಾಂಗ್ರೆಸ್ ನಾಯಕರು ನಮ್ಮ ನಾಯಕರಿಗೆ ಅವಮಾನ ಮಾಡಿದ್ದಾರೆ ಎಂದು ಆಕ್ರೋಶ ಹೊರ ಹಾಕಿದ್ದಾರೆ. ಈಗಾಗಲೇ ಇವರು ಆರೋಪಿಸಿರುವ ವ್ಯಕ್ತಿಗಳು ಇವರ ವಿರುದ್ದ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ ಎಂದು ತಿಳಿಸಿ ಈ ಪ್ರಕರಣದಲ್ಲಿ ಪಕ್ಷಾತೀತವಾಗಿ ಹೋರಾಟ ಮಾಡ್ತಿರೋದಾಗಿ ತಿಳಿಸಿದ್ದಾರೆ.
ಇದನ್ನು ಓದಿ: ದಾಂಡೇಲಿಯಲ್ಲಿ ಭಾರೀ ಖೋಟಾ ನೋಟು ದಂಧೆ; 72 ಲಕ್ಷ ನಕಲಿ ನೋಟು ವಶಕ್ಕೆ ಪಡೆದ ಪೊಲೀಸರು!
ಮಂಡ್ಯ ಹಾಲು ಒಕ್ಕೂಟದಲ್ಲಿ ನಡೆದಿದೆ ಎನ್ನಲಾದ ಈ ಬೃಹತ್ ಹಾಲು ಕಲಬೆರಕೆ ಹಗರಣ ಇದೀಗ ರಾಜಕೀಯ ಜಿದ್ದಾಜಿದ್ದಿಗೆ ತಿರುಗಿಕೊಂಡಿದೆ. ಅಲ್ಲದೇ ಹಲವು ರಾಜಕೀಯ ನಾಯಕರ ಕೊರಳಗೆ ಈ ಪ್ರಕರಣ ಉರುಳಾಗಿದೆ ಎಂಬ ಮಾತು ಕೇಳಿ ಬರುತ್ತಿದೆ. ಮುಂದೆ ಏನಾಗಲಿದೆ ಎಂದು ಕಾದು ನೋಡಬೇಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ