ಕೋಲಾರ: ಭೂಗರ್ಭದಿಂದ ಹೊರಕ್ಕೆ ಹೊಗೆ ಬರೋದನ್ನ ನಾವು ನೋಡಿದ್ದೇವೆ, ಆದರೆ ಭೂಮಿಯೊಳಗೆ ಇರುವ ತೊಟ್ಟಿಯಲ್ಲಿನ ನೀರು ಬಿಸಿಯಾಗುವ ಪ್ರಕರಣ ಇದುವರೆಗು ಬಹುಶಃ ಯಾರೂ ಕಂಡಿಲ್ಲ, ಹೌದು ಮನೆಯ ಸಂಪಿನಲ್ಲಿರೊ ತಣ್ಣೀರು ತನ್ನಷ್ಟಕ್ಕೆ ಅದೇ ಕಾದು ಬಿಸಿಯಾಗ್ತಿರುವ (Hot Water) ಅಪರೂಪದ ಘಟನೆ ಕೋಲಾರ ತಾಲೂಕಿನ ಅಣ್ಣೇನಹಳ್ಳಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ, ಗ್ರಾಮದ ಮನೆಯಲ್ಲಿ ಸೀತಮ್ಮ ಹಾಗು ಅವರ ಮಗ ಸತೀಶ್ ವಾಸಿವಿದ್ದಾರೆ, ಮನೆಯ ದಿನ ಬಳಕೆಗೆಂದು ಆವರಣದಲ್ಲಿ 12 ಅಡಿ ಆಳದ ಸಂಪ್ಅನ್ನು(Sump for water) ಕಳೆದ 6 ತಿಂಗಳ ಹಿಂದೆ ನಿರ್ಮಿಸಿದ್ದಾರೆ, ಆದರೆ ಕಳೆದ 20 ದಿನದಿಂದ ಕೇವಲ ಬಿಸಿನೀರು ಮಾತ್ರ ಇವರಿಗೆ ಸಿಗುತ್ತಿದೆ, ನಿತ್ಯ ಮೂರು ಹೊತ್ತು ಸ್ನಾನ ಮಾಡುವಷ್ಟರ ಮಟ್ಟಿಗೆ ನೀರು ಕಾಯುತ್ತಿದ್ದು ಅಚ್ಚರಿಯ ಮದ್ಯೆ ಮನೆಯವರಿಗೆ ಆತಂಕವೂ ಎದುರಾಗಿದೆ, ಹೀಗಾಗಿ ಸಂಪಿನಲ್ಲಿರೊ ನೀರನ್ನೆಲ್ಲಾ ಖಾಲಿ ಮಾಡಿ, ಟ್ಯಾಂಕರ್ (Water Tanker) ನೀರನ್ನ ತುಂಬಿಸಿದರು, ಕೆಲವೇ ಗಂಟೆಗಳಲ್ಲಿ ಮತ್ತೆ ನೀರು ಬಿಸಿಯಾಗುತ್ತಿದೆ, ಬೆಳಗ್ಗೆ ಮಧ್ಯಾಹ್ನ 30 ಡಿಗ್ರಿಯಷ್ಟು ಬಿಸಿಯಾಗ್ತಿರುವ ನೀರು, ಸಂಜೆಯಾದರೆ 40 ಡಿಗ್ರಿಗು ಹೆಚ್ಚು ಬಿಸಿಯಾಗ್ತಿದೆಯಂತೆ.
ಕಳೆದ 6 ತಿಂಗಳ ಹಿಂದೆ ಸಂಪ್ ಕೊರೆಸಿ, ಸಿಮೆಂಟ್ ಪ್ಲಾಸ್ಟರಿಂಗ್ ಸಹ ಮಾಡಲಾಗಿದೆ, ಆದರು
ನೀರು ತಾನಾಗಿಯೇ ಬಿಸಿಯಾಗಲಾರಂಭಿಸಿದೆ. ನೀರು ಮೇಲಕ್ಕೆತ್ತಲು ಸಬ್ ಮರ್ಸಿಬಲ್ ಪಂಪ್ಸೆಟ್ ತೊಟ್ಟಿಯಲ್ಲಿ ಅಳವಡಿಸಲಾಗಿತ್ತು ಆದರೆ ನಿರಂತರವಾಗಿ ನೀರು ಬಿಸಿಯಿದ್ದ ಕಾರಣ, ಪಂಪ್ಸೆಟ್ ಸಹ ಸುಟ್ಟು ಹೋಗಿದೆ, ಈಗ ನೀರನ್ನ ಮೇಲಕ್ಕೆ ಬಕೆಟ್ನಿಂದ ಸೇದಿಕೊಂಡು ಬಳಸಿಕೊಳ್ಳುತ್ತಿದ್ದಾರೆ ಮನೆಯವರು.
ಬಿಸಿನೀರು ನೋಡೋಕೆ ಜನವೋ ಜನ !
ಪಕ್ಕದ ಮನೆಯಲ್ಲಿ ಗಲಾಟೆಯಾದರೆ ತಲೆಕೆಡಿಸಿಕೊಳ್ಳುವ ಜನರು, ಇನ್ನು ಇದ್ದಕ್ಕಿದ್ದಂತೆ ಸಂಪ್ನಲ್ಲಿರೊ
ನೀರು ಬಿಸಿಯಾಗ್ತಿರುವ ಮಾಹಿತಿ ತಿಳಿದರೆ ಸುಮ್ಮನಿರೊ ಮಾತಿಲ್ಲ. ಅಣ್ಣೇನಹಳ್ಳಿ ಗ್ರಾಮದ ಸುತ್ತಮುತ್ತಲ ಗ್ರಾಮಗಳ ಜನರು ತಂಡೋಪತಂಡವಾಗಿ ಸ್ತಳಕ್ಕೆ ಬರುತ್ತಿದ್ದು, ಕುತೂಹಲದಿಂದ ಸಂಪ್ನತ್ತ ಕಣ್ಣಾಯಿಸಿ ನೀರು ಮುಟ್ಟಿ ನೋಡುತ್ತಿದ್ದಾರೆ, ಸೂರ್ಯನ ಶಾಖದಿಂದ ನೀರು ತಾನಾಗಿಯೇ ಕಾದಿದೆ ಎಂದು ವಾದ ಮಾಡೊರಿಗೆ, ಸಂಜೆ ಬರಲು ಹೇಳಿದ್ದ ಮನೆಯವರಾದ ಸತೀಶ್ ಮಾತುಕೇಳಿ, ಸ್ತಳಕ್ಕೆ ಬಂದಿದ್ದ ಜನರು ನೀರು ಬಿಸಿಯಿರೋದನ್ನ ಮುಟ್ಟಿನೋಡಿ ಆಶ್ಚರ್ಯಕ್ಕೆ ಗುರಿಯಾಗಿದ್ದಾರೆ.
ಅಣ್ಣೇನಹಳ್ಳಿ ಗ್ರಾಮದ ನೂರಕ್ಕು ಹೆಚ್ಚು ಮನೆಗಳಿಗೆ ಓವರ್ ಹೆಡ್ ಟ್ಯಾಂಕ್ನಿಂದ
ನೀರು ಸರಬರಾಜು ಆಗುತ್ತಿದೆ, ಎಲ್ಲರ ಮನೆಯಲ್ಲು ಸಂಪ್ಗಳಿದೆ, ಆದರೆ ಸತೀಶ್ ಮನೆಯ ಸಂಪ್ನಲ್ಲಿನ ನೀರು ಮಾತ್ರ ತಾನಾಗಿಯೇ ಬಿಸಿಯಾಗುತ್ತಿರುವುದು ಮನೆಯವರಲ್ಲಿ ಆತಂಕಕ್ಕೆ ಕಾರಣವಾಗಿದೆ, ಸಾಲಾ ಸೋಲ ಮಾಡಿ ಸಂಪ್ ನಿರ್ಮಿಸಿದ್ದರು, ಈಗ ನೀರನ್ನ ದಿನದ 24 ಗಂಟೆಗೂ ಬಳಸಲು ಆಗುತ್ತಿಲ್ಲ ಎಂದು ಮನೆಯವರು ಬೇಸರ ವ್ಯಕ್ತಪಡಿಸಿದ್ದಾರೆ, ಸ್ತಳಕ್ಕೆ ಹೊಳೂರು ಗ್ರಾಮ ಪಂಚಾಯ್ತಿ ಪಿಡಿಒ ಲಕ್ಷ್ಮೀಶ್ ಕಾಮತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಂತರ್ಜಲ ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಗೊಂದಲದಲ್ಲಿ ಕುಟುಂಬ
ಈ ಕುರಿತು ಮಾತನಾಡಿರುವ ಸತೀಶ್ ಅವರು, ಮನೆಯ ಪಕ್ಕದಲ್ಲೆ ಬೇರೆಯವರ ಮನೆಗಳಲ್ಲಿ ಸಂಪ್ಗಳಿದೆ ಆದರೆ, ನಮ್ಮ ಮನೆಯ
ನೀರು ಮಾತ್ರ ಬಿಸಿಯಾಗುತ್ತಿದೆ, ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಬೇರೆ ತೊಟ್ಟಿ ನಿರ್ಮಿಸುವುದಾಗಿ ತಿಳಿಸಿದ್ದಾರೆ, ಇನ್ನು ಈ ಬಗ್ಗೆ ಮಾತನಾಡಿರುವ ನೆರೆ ಹೊರೆಯ ಗ್ರಾಮಸ್ತರು ಇದು ದೈವ ಶಕ್ತಿ ಎಂತಿದ್ದಾರೆ.
ಆದರೆ ಈ ಬಗ್ಗೆ ಮಾಹಿತಿ ನೀಡಿರುವ ಅಂತರ್ಜಲ ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಇದುವರೆಗೂ ಇಂತಹ ಪ್ರಕರಣ ಜಿಲ್ಲೆಯಲ್ಲಿ ಗಮನಕ್ಕೆ ಬಂದಿಲ್ಲ ಎಂದಿದ್ದಾರೆ, ಇದಕ್ಕೆ ಸ್ಪಷ್ಟ ಕಾರಣ ತಿಳಿದಿಲ್ಲ ಎಂದಿರುವ ಅಧಿಕಾರಿಗಳು, ಭೂಗರ್ಭದಲ್ಲಿ ಖನಿಜಾಂಶಗಳು ಹೆಚ್ಚಾದಲ್ಲಿ ಮಣ್ಣಿನ ತಾಪಮಾನ ಹೆಚ್ಚುವ ಸಾಧ್ಯತೆಯಿದೆ ಎಂತಲೂ ತಿಳಿಸಿದ್ದಾರೆ, ಒಟ್ಟಿನಲ್ಲಿ ಸತೀಶ್ ಅವರ ಮನೆ ಆವರಣದಲ್ಲಿನ ಸಂಪ್ ಸದ್ಯ ಗ್ರಾಮದಲ್ಲಿ ಆಕರ್ಷಕ ಕೇಂದ್ರ ಬಿಂದುವಾಗಿದ್ದು, ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ, ಅಕ್ಕ ಪಕ್ಕದ ಮನೆಯವರಂತು ಸ್ನಾನಕ್ಕಾಗಿ ಬಕೆಟ್ ಹಿಡಿದುಕೊಂಡು ಇಲ್ಲಿ ಬಿಸಿ
ನೀರನ್ನು ತುಂಬಿಸಿಕೊಂಡು ಮನೆಗೆ ಹೋಗುತ್ತಿರುವ ದೃಶ್ಯಗಳು ಅಲ್ಲಿ ಸಾಮಾನ್ಯವಾಗಿ ಕಂಡುಬಂದ ದೃಶ್ಯವಾಗಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ