• Home
  • »
  • News
  • »
  • district
  • »
  • ಚಾರ್ಮಾಡಿ ಘಾಟ್ ನಲ್ಲಿ ನಿಸರ್ಗ ಮಾತೆ ಸೊಬಗು ; ರಸ್ತೆಯುದ್ದಕ್ಕೂ ಹೊಸ ಲೋಕ ಸೃಷ್ಟಿಸಿದ ಜಲಪಾತಗಳು

ಚಾರ್ಮಾಡಿ ಘಾಟ್ ನಲ್ಲಿ ನಿಸರ್ಗ ಮಾತೆ ಸೊಬಗು ; ರಸ್ತೆಯುದ್ದಕ್ಕೂ ಹೊಸ ಲೋಕ ಸೃಷ್ಟಿಸಿದ ಜಲಪಾತಗಳು

ಚಾರ್ಮಾಡಿ ಘಾಟ್ ನಲ್ಲಿ ಕಂಡು ಬಂದ ಜಲಪಾತ

ಚಾರ್ಮಾಡಿ ಘಾಟ್ ನಲ್ಲಿ ಕಂಡು ಬಂದ ಜಲಪಾತ

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಬಳಿಯ ಚಾರ್ಮಾಡಿಯ ಸೌಂದರ್ಯವನ್ನ ವರ್ಣಿಸಲು ಪದಗಳೇ ಸಾಲದು. ನದಿಗಳು ಜೀವ ಕಳೆಯನ್ನ ಪಡೆದುಕೊಳ್ಳುತ್ತವೆ.

  • Share this:

ಚಿಕ್ಕಮಗಳೂರು(ಆಗಸ್ಟ್​. 23): ಇಳೆಗೆ ಹಸಿರು ಹೊದಿಕೆಯ ಸ್ವಾಗತ. ಹಾದಿಯುದ್ಧಕ್ಕೂ ದಟ್ಟ ಮಂಜಿನ ಆಟ. ಹಸಿರು ವನರಾಶಿ ನಡುವಿಂದ ಸಾಗುವ ಬೆಳ್ಮುಗಿಲ ಸಾಲು. ರಸ್ತೆಯುದ್ಧಕ್ಕೂ ಧುಮ್ಮಿಕ್ಕಿ ಹರಿಯುವ ಜಲಧಾರೆಯ ಸೊಬಗು. ಮಲೆನಾಡಲ್ಲೀಗ ದೃಶ್ಯ ಕಾವ್ಯವೇ ಮೇಳೈಸಿದೆ. ಪಶ್ಚಿಮ ಘಟ್ಟದ ಚಾರ್ಮಾಡಿ ಘಾಟಿಯಲ್ಲಂತೂ ನಿಸರ್ಗ ಮಾತೆಯ ನೈಜ ಸೊಬಗು ಅನಾವರಣಗೊಂಡಿದೆ. ಚಾರ್ಮಾಡಿ ಘಾಟ್​ನ ರಸ್ತೆಯುದ್ಧಕ್ಕೂ ಧುಮ್ಮಿಕ್ಕಿ ಹರಿಯುತ್ತಿರುವ ಜಲಪಾತಗಳು ಹೊಸದೊಂದು ಲೋಕವನ್ನೇ ಸೃಷ್ಠಿಸಿವೆ. 


ಕಾಫಿನಾಡು ಚಿಕ್ಕಮಗಳೂರು ಅಂದ್ರೆ ಸಾಕು. ಅಲ್ಲಿನ ಸೌಂದರ್ಯ ರಾಶಿ ಕಣ್ಮುಂದೆ ಬಂದು ನಿಲ್ಲುತ್ತೆ. ಮಳೆಗಾಲ ಬಂತೆಂದ್ರೆ ಸಾಕು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಬಳಿಯ ಚಾರ್ಮಾಡಿಯ ಸೌಂದರ್ಯವನ್ನ ವರ್ಣಿಸಲು ಪದಗಳೇ ಸಾಲದು. ನದಿಗಳು ಜೀವ ಕಳೆಯನ್ನ ಪಡೆದುಕೊಳ್ಳುತ್ತವೆ. ಬಂಡೆಗಳ ಮೇಲಿನಿಂದ ಜುಳು-ಜುಳು ನಿನಾದ ಗೈಯುತ್ತಾ ಧುಮ್ಮಿಕ್ಕುವ ಜಲಧಾರೆಗಳು ಕ್ಷೀರಧಾರೆಯಂತೆ ಭಾಸವಾಗುತ್ತೆ.


ನಿರಂತರ ಮಳೆಯ ಆಗಮನಕ್ಕೆ ಬೆಟ್ಟಗಳು ಸಾಲು ಹಸಿರನ್ನು ಹೊದ್ದು ಝೇಂಕರಿಸುತ್ತಿದ್ರೆ, ಮಂಜಿನ ಕಣ್ಣಾಮುಚ್ಚಾಲೆ ಆಟ ಪ್ರವಾಸಿಗರ ಪಾಲಿನ ಸ್ವರ್ಗವಾಗಿ ಮಾರ್ಪಟ್ಟಿದೆ. ಸತತ ಮಳೆಯಿಂದ ಚಾರ್ಮಾಡಿ ಘಾಟ್​ನ ರಸ್ತೆಯುದ್ಧಕ್ಕೂ ಹತ್ತಾರು ಜಲಪಾತಗಳು ಧುಮ್ಮಿಕ್ಕಿ ಹರಿಯುತ್ತಿದ್ದು, ಈ ಮಾರ್ಗದಲ್ಲಿ ಸಂಚರಿಸುವ ಪ್ರವಾಸಿಗರು ಚಾರ್ಮಾಡಿ ಒಡಲಿನಿಂದ ಹಾಲ್ನೊರೆಯಂತೆ ಸೂಸುವ ಫಾಲ್ಸ್​​ಗಳನ್ನ ಕಣ್ತುಂಬಿಸಿಕೊಂಡು ಎಂಜಾಯ್ ಮಾಡುತ್ತಿದ್ದಾರೆ. ಬಾನೆತ್ತರದ ಶಿಖರಗಳಿಂದ ರಭಸವಾಗಿ ಚಿಮ್ಮುವ ಜಲಪಾತಗಳು ರಮಣೀಯ ನೋಟವನ್ನ ಸೃಷ್ಠಿಸಿದ್ರೆ, ದಟ್ಟ ಕಾನನದ ನಡುವಿನ ಜುಳು-ಜುಳು ನಿನಾದೊಂದಿಗೆ ಹರಿಯುವ ಝರಿಗಳು ಮನಕ್ಕೆ ಮುದ ನೀಡುತ್ತವೆ.


ಇದನ್ನೂ ಓದಿ : ಜೈಲಿನಲ್ಲಿದ್ದು ಬಂದ ಡಿಕೆಶಿಗೆ ಇನ್ನೊಬ್ಬರ ನೈತಿಕತೆ ಬಗ್ಗೆ ಮಾತನಾಡುವ ಅಧಿಕಾರವಿಲ್ಲ ; ಸಚಿವ ಜಗದೀಶ್ ಶೆಟ್ಟರ್ ವಾಗ್ದಾಳಿ


ಅಲೇಖಾನ್ ಬಳಿಯಿಂದ ಶುರುವಾಗುವ ಜಲಪಾತಗಳ ಚಿತ್ತಾರ ಚಾರ್ಮಾಡಿವರೆಗೂ ದಾರಿಯುದ್ಧಕ್ಕೂ ಕಣ್ಣಿಗೆ ಹಬ್ಬ, ಮನಸಿಗೆ ಮುದ ನೀಡುತ್ತೆ. ಅದರಲ್ಲೂ ಬಂಡೆಗಳ ಮೇಲಿಂದ ನೂರಾರು ಅಡಿಗಳ ಎತ್ತರದಿಂದ ಧುಮ್ಮಿಕ್ಕುವ ಜಲಪಾತಗಳನ್ನ ನೋಡುವುದೇ ಪರಮಾನಂದ.


ಒಟ್ಟಾರೆ, ದಟ್ಟವಾದ ಮಂಜು, ಚುಮು-ಚುಮು ಚಳಿ, ಜಡಿ ಮಳೆ ಮಧ್ಯೆಯ ಚಾರ್ಮಾಡಿ ನಿಜಕ್ಕೂ ರೋಮಾಂಚನ. ಹಾವು ಬಳುಕಿನ ಮೈಕಟ್ಟಿನ ರಸ್ತೆಯಲ್ಲಿ ಯುವಕರ ಬೈಕ್ ಕ್ರೇಜ್ ಥ್ರಿಲ್ ನೀಡುತ್ತೆ. ಚಾರ್ಮಾಡಿ ನಿಜಕ್ಕೂ ಚಾರಣಿಗರ ಸ್ವರ್ಗ. ಹಸಿರ ಬೆಟ್ಟಗಳ ಸಾಲಿನಿಂದ ಧುಮ್ಮಿಕ್ಕುವ ಜಲಧಾರೆಯ ಕವಲು. ಪ್ರಕೃತಿ ಮಾತೆಯ ನಿಸರ್ಗದ ಚೆಲುವು. ಬಿಸಿಲು-ಮಳೆಯ ಲೀಲೆಗಳನ್ನ ಕಣ್ತುಂಬಿಕೊಳ್ಳಲು ನೀವು ಮಲೆನಾಡಿಗೆ ಬರಬೇಕು.

Published by:G Hareeshkumar
First published: