• Home
  • »
  • News
  • »
  • district
  • »
  • ಹುಡುಗಿಯರ ಕಾಟ ತಪ್ಪಿಸಿಕೊಳ್ಳಲು 5 ದಿನ ರಜೆ ಕೇಳಿದ ಕಾಲೇಜು ವಿದ್ಯಾರ್ಥಿ; ಲೆಟರ್ ವೈರಲ್

ಹುಡುಗಿಯರ ಕಾಟ ತಪ್ಪಿಸಿಕೊಳ್ಳಲು 5 ದಿನ ರಜೆ ಕೇಳಿದ ಕಾಲೇಜು ವಿದ್ಯಾರ್ಥಿ; ಲೆಟರ್ ವೈರಲ್

ವೇಲೆಂಟೈನ್ ಡೇಗೆ ರಜೆ ಕೋರಿ ಪತ್ರ ಬರೆದಿದ್ದನೆನ್ನಲಾದ ವಿದ್ಯಾರ್ಥಿ

ವೇಲೆಂಟೈನ್ ಡೇಗೆ ರಜೆ ಕೋರಿ ಪತ್ರ ಬರೆದಿದ್ದನೆನ್ನಲಾದ ವಿದ್ಯಾರ್ಥಿ

ಪ್ರೇಮಿಗಳ ದಿನದಂದು ಹುಡುಗಿಯರ ಕಾಟದಿಂದ ತಪ್ಪಿಸಿಕೊಳ್ಳಲು 5 ದಿನ ರಜೆ ಕೋರಿ ಕೊಳ್ಳೇಗಾಲದ ವಿದ್ಯಾರ್ಥಿಯೊಬ್ಬ ಬರೆದ ಲೀವ್ ಲೆಟರ್ ಈಗ ವೈರಲ್ ಆಗಿದೆ. ಆದರೆ, ತಾನು ಇದನ್ನ ಬರೆದಿಲ್ಲ ಎಂದು ಆ ಹುಡುಗ ಹೇಳುತ್ತಿದ್ದಾನೆ.

  • Share this:

ಚಾಮರಾಜನಗರ(ಫೆ.11)  ಈ ಯುವಕನಿಗೆ ವ್ಯಾಲೆಂಟೈನ್ಸ್ ದಿನ ಹುಡುಗಿಯರ ಕಾಟವಂತೆ. ಹುಡುಗಿಯರ ಕಾಟ ತಪ್ಪಿಸಿಕೊಳ್ಳಲು ಈತ ಏನ್ ಮಾಡಿದ್ದಾನೆ ಗೊತ್ತಾ?!  ಐದು ದಿನ ರಜೆ ಬೇಕೆಂದು ಕಾಲೇಜಿನ ಪ್ರಾಂಶುಪಾಲರಿಗೆ  ರಜೆ ಅರ್ಜಿ ಗುಜರಾಯಿಸಿದ್ದಾನೆ. ಇಂತಹ ಒಂದು ವಿಚಿತ್ರ ಪ್ರಸಂಗ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲದ ಶ್ರೀ ಮಹದೇಶ್ವರ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ನಡೆದಿದೆ. ಈ ಕಾಲೇಜಿನಲ್ಲಿ ದ್ವಿತೀಯ ಬಿಕಾಂ ವ್ಯಾಸಂಗ ಮಾಡುತ್ತಿರುವ ಎಸ್. ಶಿವರಾಜ್ ವಿಕ್ಟರ್ ಎಂಬ ವಿದ್ಯಾರ್ಥಿಯೇ ಹೀಗೆ ರಜೆಗಾಗಿ ಅರ್ಜಿ ಹಾಕಿರುವ ಮಹಾನುಭಾವ.


ಹುಡುಗಿಯರ ಕಾಟ ತಾಳಲಾರದೆ ಫೆಬ್ರುವರಿ 14 ರವರೆಗೆ ಐದು ದಿನಗಳ ಕಾಲ ರಜೆ ಬೇಕೆಂದು ಈ ವಿದ್ಯಾರ್ಥಿ ಕೇಳಿರುವ ರಜಾ ಅರ್ಜಿ ಸಾಮಾಜಿಕ  ಜಾಲ ತಾಣಗಳಲ್ಲಿ ವೈರಲ್ ಆಗಿದೆ. ಇನ್ನೊಂದು ವಿಶೇಷ ಎಂದರೆ ಈ ರಜಾ ಅರ್ಜಿ ಮೇಲೆ ಪ್ರಾಂಶುಪಾಲರ ಸೀಲು ಹಾಗು ಸಹಿಯೂ ಇದ್ದು ಮತ್ತಷ್ಟು ಅಚ್ಚರಿಗೆ ಕಾರಣವಾಗಿದೆ.


ರಜಾ ಅರ್ಜಿಯಲ್ಲಿ ಏನಿದೆ?:


ಕಾಲೇಜಿನ ಪ್ರಾಂಶುಪಾಲರಿಗೆ ಬರೆದಿರುವ ಈ ಪತ್ರದಲ್ಲಿ Valentine`s day (Lovers day) ಪ್ರಯುಕ್ತ 5 ದಿನಗಳ ಕಾಲ ರಜೆಯನ್ನು ಕೋರಿ ಎಂದು ವಿಷಯ ನಮೂದಿಸಲಾಗಿದ್ದು, “ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ   ದೇಶದಾದ್ಯಂತ ಆಚರಿಸುತ್ತಿರುವ Valentine`s day ಯಲ್ಲಿ ಹುಡುಗಿಯರ ಕಾಟವನ್ನು ತಡೆಯಲಾರದೆ 5 ದಿನಗಳ ವರೆಗೆ (14.02.21) ರಜೆ ಕೊಡಬೇಕೆಂದು ಪ್ರಾಂಶುಪಾಲರಲ್ಲಿ ಕೇಳುತ್ತಿದ್ದೇನೆ” ಎಂದು ಬರೆಯಲಾಗಿದೆ.


ಇದನ್ನೂ ಓದಿ: Bangalore Crime: ಹೆಂಡತಿ, ಮಕ್ಕಳ ಬಿಟ್ಟು ಅತ್ತೆ ಮಗಳ ಜೊತೆ ಓಡಿಹೋಗಲು ಎಟಿಎಂ ಹಣ ಕಳ್ಳತನ


ಈ ರಜಾ ಅರ್ಜಿಯನ್ನು ಫೆಬ್ರುವರಿ 9 ರಂದು ಬರೆಯಲಾಗಿದೆ. ಅರ್ಜಿಯ ಕೆಳಗಡೆ Signature of Head of the Institute ಎಂಬಲ್ಲಿ ಪ್ರಾಂಶುಪಾಲರ ಸೀಲು ಹಾಕಿ ಹಸಿರು ಶಾಯಿಯಲ್ಲಿ ಸಹಿ ಮಾಡಲಾಗಿದೆ. ಆದರೆ, ಈ ಪತ್ರಕ್ಕೂ ತನಗೂ ಯಾವುದೇ ಸಂಬಂಧ ಇಲ್ಲ ಎಂದು ವಿದ್ಯಾರ್ಥಿ ಶಿವರಾಜ್ ವಿಕ್ಟರ್ ಸ್ಪಷ್ಟಪಡಿಸಿದ್ದಾನೆ.


“ಯಾರೋ ನನ್ನನ್ನ ಹೀಯಾಳಿಸಲು, ಹಾಸ್ಯ ಮಾಡಲು ಈ ರೀತಿ ಪತ್ರ ಸೃಷ್ಟಿ ಮಾಡಿದ್ದಾರೆ. ಈ ಪತ್ರ ಈಗ ಎಲ್ಲೆಡೆ ವೈರಲ್ ಆಗುತ್ತಿದೆ. ನನಗೆ ಮಾನಸಿಕವಾಗಿ ನೋವಾಗಿದೆ. ನಮ್ಮ ಕಾಲೇಜಿನ ಪ್ರಾಂಶುಪಾಲರು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದು ಈ ವಿದ್ಯಾರ್ಥಿ ಕೋರಿಕೊಂಡಿದ್ದಾನೆ.


ಈ ವಿಚಿತ್ರ ರಜಾ ಅರ್ಜಿಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಹದೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಸೀಗನಾಯಕ, ವಿದ್ಯಾರ್ಥಿ ಈ ರೀತಿ ಪತ್ರ ಬರೆದಿಲ್ಲ ಎನ್ನುತ್ತಿದ್ದಾನೆ. ಇಂದೇ ಸಭೆ ನಡೆಸಿ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಅಧ್ಯಾಪಕರ ಜೊತೆ ಚರ್ಚೆ ನಡೆಸಿ ಕಾಲೇಜು ಶಿಸ್ತು ಸಮಿತಿ ಮುಂದಿಡುತ್ತೇವೆ. ವಿದ್ಯಾರ್ಥಿಯ ಹಿತ ದೃಷ್ಟಿಯಿಂದ ಸತ್ಯಾಂಶ ತಿಳಿದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.


ಇದನ್ನೂ ಓದಿ: AIIMS: ಕಲಬುರ್ಗಿ ಕೈತಪ್ಪಿದ ಏಮ್ಸ್, ದಪ್ಪ ಚರ್ಮದ ಬಿಜೆಪಿಯಿಂದ ಬೇರೇನು ಸಾಧ್ಯವಿಲ್ಲ; ಪ್ರಿಯಾಂಕ್ ಖರ್ಗೆ ಕಿಡಿ


ಮೂಲಗಳ ಪ್ರಕಾರ ಈ ರಜಾ ಅರ್ಜಿ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಪ್ರಾಂಶುಪಾಲ ಸೀಗನಾಯಕ ಅವರು ವಿದ್ಯಾರ್ಥಿ ಹಾಗು ಪೋಷಕರನ್ನು ಕರೆಸಿ ಎಚ್ಚರಿಕೆ ನೀಡಿ ಕಳುಹಿಸಿದ್ದರೆನ್ನಲಾಗಿದೆ.


ಇತ್ತೀಚೆಗೆ ವಿದ್ಯಾರ್ಥಿನಿಯರಿಗೆ ಬಾಯ್ ಫ್ರೆಂಡ್ ಕಡ್ಡಾಯ ಎಂದು ತಮಿಳುನಾಡಿನ ಚೆನ್ನೈ ಸಮೀಪದ ಕಾಲೇಜೊಂದರ ಹೆಸರಿನಲ್ಲಿ  ಹೊರಡಿಸಿದ್ದ ಸುತ್ತೋಲೆ ಭಾರಿ ಸದ್ದು ಮಾಡಿತ್ತು. ಭದ್ರತಾ ಕಾರಣಗಳಿಂದ ಈ ಕ್ರಮ ಕೈಗೊಳ್ಳಲಾಗಿದ್ದು, ಬಾಯ್ ಫ್ರೆಂಡ್ ಇಲ್ಲದ ವಿದ್ಯಾರ್ಥಿನಿಯರನ್ನು ಕಾಲೇಜಿನ ಆವರಣದೊಳಗೆ ಬರಲು ಅವಕಾಶ ನೀಡುವುದಿಲ್ಲ. ಕಾಲೇಜಿಗೆ ಪ್ರವೇಶಿಸುವಾಗ ಅವರು ತಮ್ಮ ಬಾಯ್ ಫ್ರೆಂಡ್ ಜೊತೆಗೆ ಇರುವ ಇತ್ತೀಚಿನ ಫೋಟೋವನ್ನು ತೋರಿಸುವುದು ಕಡ್ಡಾಯ ಎಂಬ ಉಲ್ಲೇಖವುಳ್ಳ ಆ ಸುತ್ತೋಲೆ ಸಖತ್ ವೈರಲ್ ಆಗಿತ್ತು. ನಂತರ ಆ ಸುತ್ತೋಲೆ ನಕಲಿ ಎಂದು ಕಾಲೇಜು ಆಡಳಿತ ಮಂಡಳಿ ಸ್ಪಷ್ಟಪಡಿಸಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಆದರೆ ಕೊಳ್ಳೇಗಾಲದ ಈ ವಿದ್ಯಾರ್ಥಿ ಬರೆದ ರಜಾ ಅರ್ಜಿಯಂತು ಅಸಲಿಯಾಗಿದೆ. ಪ್ರಾಂಶುಪಾಲರ ಸಹಿ ನಕಲಿಯೋ ಅಲ್ಲವೋ ಎಂಬುದು ಮಾತ್ರ ತಿಳಿದುಬಂದಿಲ್ಲ.


ವರದಿ: ಎಸ್ಎಂ.ನಂದೀಶ್

Published by:Vijayasarthy SN
First published: