ನಮ್ಮ ಕಡೆ ಕೋಣ ಕಡಿಯುವ ಸಂಪ್ರದಾಯ ಇದೆ, ಅವಕಾಶ ಕೊಡುತ್ತೀರಾ? ಅರಗ ಜ್ಞಾನೇಂದ್ರಗೆ ಉಗ್ರಪ್ಪ ವ್ಯಂಗ್ಯ
ಗುಂಡು ಹಾರಿಸುವುದು ನಮ್ಮ ಸಂಪ್ರದಾಯ ಎನ್ನುತ್ತೀರಿ. ಆರ್ಮ್ಸ್ ಆ್ಯಕ್ಟ್ ಓದಿದ್ದೀರಾ? ಕೋಣ ಕಡಿಯುವ ಸಂಪ್ರದಾಯವೂ ನಮ್ಮ ಕಡೆ ಇದೆ. ನೀವು ಅದಕ್ಕೆ ಅವಕಾಶ ಕೊಡುತ್ತೀರಾ? ಎಂದು ಗೃಹ ಸಚಿವ ಅರಗ ಜ್ಞಾನೇಂದ್ರರನ್ನು ವಿ ಎಸ್ ಉಗ್ರಪ್ಪ ಪ್ರಶ್ನೆ ಮಾಡಿದ್ದಾರೆ.
ಚಿತ್ರದುರ್ಗ: ರಾಜ್ಯದ ರಕ್ಷಣೆ ಮಾಡಬೇಕಾದ ಗೃಹ ಸಚಿವರು ಸಂತೋಷ ಆದಾಗ ನಮ್ಮ ಕಡೆ ಗುಂಡು ಹಾರಿಸುತ್ತಾರೆ ಎಂದು ಹೇಳಿದ್ದಾರೆ. ಅರಗ ಜ್ಞಾನೇಂದ್ರ ಅವರು ಜ್ಞಾನದ ಇಂದ್ರ, ಜ್ಞಾನದ ಪ್ರತೀಕ. ಅವರ ಬಗ್ಗೆ ಕಾಮೆಂಟ್ ಮಾಡುವುದಿಲ್ಲ ಎಂದ ಉಗ್ರಪ್ಪ, “ಮಿಸ್ಟರ್ ಜ್ಞಾನೇಂದ್ರ ಆರ್ಮ್ಸ್ ಆಕ್ಟ್ ಅನ್ನು ನೀವು ಅಭ್ಯಾಸ ಮಾಡಿದ್ದೀರಾ? ಬಂದೂಕನ್ನು ಯಾವ ರೀತಿ ಬಳಸಬೇಕು, ಅದರ ಲೈಸನ್ಸ್ ಕೊಡುವಾಗ ಯಾವ ಸಂದರ್ಭದಲ್ಲಿ ಕೊಡುತ್ತಾರೆ ಎಂಬ ಅರಿವಿದೆಯಾ?” ಎಂದು ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಸಚಿವ ವಿ ಎಸ್ ಉಗ್ರಪ್ಪ ಅವರು ಪ್ರಶ್ನಿಸಿದರು. "ಇತ್ತೀಚೆಗೆ ಕೇಂದ್ರ ಸರ್ಕಾರದ ಮಂತ್ರಿಗಳು ಕಲಬುರ್ಗಿ, ಯಾದಗಿರಿಯಲ್ಲಿ ಪ್ರವಾಸ ಮಾಡುವಾಗ ಅಧಿಕಾರದ ಅಹಂ ನೆತ್ತಿಗೇರಿ, ಬಿಜೆಪಿ ಕಾರ್ಯಕರ್ತರು ಬಂದೂಕಿನಲ್ಲಿ ಗುಂಡು ಹಾರಿಸಿ ಸ್ವಾಗತಿಸಿದ್ದಾರೆ. ಅದು ನಮ್ಮ ಸಂಪ್ರದಾಯ ಎಂದು ಕೇಂದ್ರದ ಸಚಿವರುಗಳು ಹೇಳಿದ್ದಾರೆ. ಅವರು ಏನಾದರೂ ಹೇಳಲಿ. ರಾಜ್ಯದ ರಕ್ಷಣೆ ಮಾಡಬೇಕಾದ ಗೃಹ ಸಚಿವರು ಸಂತೋಷ ಆದಾಗ ನಮ್ಮ ಕಡೆ ಗುಂಡು ಹಾರಿಸುತ್ತಾರೆ ಎಂದು ಹೇಳಿರುವುದು ತಪ್ಪು" ಎಂದು ಗೃಹ ಸಚಿವರನ್ನ ಉಗ್ರಪ್ಪ ತರಾಟೆಗೆ ತೆಗೆದುಕೊಂಡರು.
“ಗುಂಡು ಹಾರಿಸುವುದು ನಮ್ಮ ಸಂಪ್ರದಾಯ ಎನ್ನುವ ಜ್ಞಾನೇಂದ್ರ ಅವರೆ, ನಮ್ಮ ಕಡೆ ಕೋಣ ಕಡಿಯುುವ ಸಂಪ್ರದಾಯವಿದೆ. ನೀವೂ ಕೋಣ ಕಡಿಸುತ್ತೀರಾ? ಕೆಲವು ಸಮಾಜಗಳಲ್ಲಿ ಒಂದು ಹಂತದಲ್ಲಿ ಬಹು ಪತ್ನಿತ್ವ ಇತ್ತು, ಸಂಪ್ರದಾಯ ಅಂತ ಎಷ್ಟು ಜನರನ್ನ ಬೇಕಾದ್ರು ಮದುವೆ ಮಾಡಿಕೊಳ್ಳಲು ಆಗುತ್ತದಾ?” ಎಂದು ಮಾಜಿ ಸಂಸದ ಹಾಗೂ ಕಾಂಗ್ರೆಸ್ ಮುಖಂಡ ವಿ ಎಸ್ ಉಗ್ರಪ್ಪ ಅವರು ಚಿತ್ರದುರ್ಗದಲ್ಲಿ ಮಾತನಾಡುತ್ತಾ ಗೃಹ ಸಚಿವ ಅರಗ ಜ್ಞಾನೇಂದ್ರ ಅವರನ್ನ ಪ್ರಶ್ನಿಸಿ ಸವಾಲ್ ಹಾಕಿದರು.
ಚಿತ್ರದುರ್ಗ ಕಾಂಗ್ರೇಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ವಿ ಎಸ್ ಉಗ್ರಪ್ಪ, “ಕೊರೋನಾ ಸಂಕಷ್ಟದ ಸಂದರ್ಭವನ್ನ ನಿಭಾಯಿಸುವಲ್ಲಿ ಬಿಜೆಪಿ ಸರ್ಕಾರ ವಿಫಲವಾಗಿದೆ. ಆದ್ದರಿಂದ ಜನರ ಆಕ್ರೋಶವಿದೆ. ಹೀಗಿರುವಾಗ ಬಿಜೆಪಿಯವರು ಜನಾಶಿರ್ವಾದ ಯಾತ್ರೆ ಬದಲಿಗೆ ಜನರ ಬಳಿ ಕ್ಷಮೆ ಯಾಚಿಸುವ ಯಾತ್ರೆಗಳನ್ನ ಮಾಡಬೇಕಾಗಿತ್ತು. ಯಾಕಂದ್ರೆ ಇವರು ಇಲ್ಲಿವರೆಗೆ ಹೇಳಿದ ಯಾವುದೇ ವಾಗ್ದಾನಗಳನ್ನ ಈಡೇರಿಸಿಲ್ಲ. 2ಕೋಟಿ ಉದ್ಯೋಗ ಸೃಷ್ಠಿ ಮಾಡಲಿಲ್ಲ, ಬೆಲೆ ಏರಿಕೆ ಕಡಿಮೆ ಮಾಡಲಿಲ್ಲ, ಕಪ್ಪು ಹಣ ತಂದು ಜನರಿಗೆ 15 ಲಕ್ಷ ಕೊಡಲಿಲ್ಲ. ಇಂಥವರಿಗೆ ಯಾಕೆ ಜನರು ಆಶೀರ್ವಾದ ಮಾಡಬೇಕು” ಎಂದು ಪ್ರಶ್ನೆ ಮಾಡಿದರು.
ಇನ್ನು ದೇಶದ ಸಾಮರಸ್ಯ ಉಳಿಯಬೇಕು, ಆರ್ಥಿಕ ಪ್ರಗತಿ ಆಗಬೇಕು, ದುಡಿಯುವ ಕೈಗಳಿಗೆ ಕೆಲಸ ಸಿಗಬೇಕು ಅಂದ್ರೆ ಜನವಿರೋಧಿ ಪ್ರವೃತ್ತಿ ಹೊಂದಿರುವ ಬಿಜೆಪಿಯನ್ನ ಕಿತ್ತೊಗೆಯಲು ಜನ ಜಾಗೃತಿ ಮಾಡಲು ನಮ್ಮ ಪಕ್ಷ ರಾಜ್ಯ ರಾಷ್ಟ್ರ ವ್ಯಾಪಿ ಮಾಡುತ್ತಿದೆ ಎಂದು ಹೇಳಿದ್ರು.
(ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)
ವರದಿ: ವಿನಾಯಕ ತೊಡರನಾಳ್
Published by:Vijayasarthy SN
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ