ಬೆಂಗಳೂರು(ಸೆ.17): ಕರ್ನಾಟಕದಲ್ಲಿ ಸಾಂಕ್ರಾಮಿಕ ಕೊರೋನಾ(Corona Pandemic) ನಡುವೆಯೇ ಮತ್ತೊಂದು ರೋಗದ ಭೀತಿ ಎದುರಾಗಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ನಿಗೂಢ ಜ್ವರ ಮಕ್ಕಳನ್ನು ಕಾಡುತ್ತಿದ್ದು, ಪೋಷಕರಲ್ಲಿ ಆತಂಕ ಮೂಡಿಸಿದೆ. ಯಾವ ಜಿಲ್ಲೆಗಳಲ್ಲಿ ಎಷ್ಟು ಮಕ್ಕಳಿಗೆ ವೈರಲ್ ಫೀವರ್(Viral Fever) ತಗುಲಿದೆ ಎಂಬುದರ ಬಗ್ಗೆ ಆಯಾ ಜಿಲ್ಲೆಗಳ ವೈದ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಜ್ವರ ಕೊರೋನಾ ಜೊತೆಗೆ ಎದುರಿಸಬೇಕಾದ ಮತ್ತೊಂದು ಸವಾಲಾಗಿದೆ. ಇದು ಕೊರೋನಾ ಮೂರನೇ ಅಲೆಯಾ(Corona 3rd wave) ಎಂಬ ಆತಂಕವೂ ಎದುರಾಗಿದೆ. ಆದರೆ ತಜ್ಞರು ಹವಾಮಾನ ವೈಪರೀತ್ಯದಿಂದ ಈ ರೀತಿ ಮಕ್ಕಳಲ್ಲಿ ಆರೋಗ್ಯ ಸಮಸ್ಯೆ ಉಂಟಾಗುತ್ತದೆ ಎಂದು ಹೇಳುತ್ತಿದ್ದಾರೆ.
ವಿಜಯಪುರದಲ್ಲಿ 300 ಮಕ್ಕಳಿಗೆ ಫೀವರ್
ವಿಜಯಪುರ ಜಿಲ್ಲೆಯಲ್ಲಿ ಕಳೆದ 15 ದಿನಗಳಿಂದ ಸಾಂಕ್ರಾಮಿಕ ರೋಗದ ಭೀತಿ ಮಕ್ಕಳನ್ನು ಕಾಡುತ್ತಿದೆ. ಜ್ವರ, ಕೆಮ್ಮು, ನೆಗಡಿ, ಉಸಿರಾಟದ ತೊಂದರೆ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಯಿಂದ ಮಕ್ಕಳು ಬಳಲುತ್ತಿದ್ದಾರೆ. ಜಿಲ್ಲೆಯಾದ್ಯಂತ ಕಳೆದ 15 ದಿನಗಳಲ್ಲಿ 300ಕ್ಕೂ ಅಧಿಕ ಮಕ್ಕಳಲ್ಲಿ ಆರೋಗ್ಯ ಸಮಸ್ಯೆ ಎದುರಾಗಿದೆ. ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ 30ಕ್ಕೂ ಹೆಚ್ಚು ಮಕ್ಕಳು ದಾಖಲಾಗಿದ್ದಾರೆ. ಜಿಲ್ಲೆಯ ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ 270 ಕ್ಕಿಂತ ಅಧಿಕ ಮಕ್ಕಳು ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಜಿಲ್ಲೆಯಲ್ಲಿ ಕಳೆದ 15 ದಿನಗಳ ಅವಧಿಯಲ್ಲಿ ಒಟ್ಟು 162 ಸ್ಯಾಂಪಲ್ ಟೆಸ್ಟ್ ಮಾಡಲಾಗಿದ್ದು, 34 ಮಕ್ಕಳಲ್ಲಿ ಡೆಂಗ್ಯೂ ಲಕ್ಷಣ ಕಾಣಿಸಿಕೊಂಡಿವೆ. ಕೆಲವರು ಚೇತರಿಸಿಕೊಂಡಿದ್ದಾರೆ. ಇದರೊಂದಿಗೆ ಕಳೆದ 15 ದಿನಗಳ ಅವಧಿಯಲ್ಲಿ 61 ಸ್ಯಾಂಪಲ್ ಟೆಸ್ಟ್ ಮಾಡಲಾಗಿದ್ದು, 10 ಚಿಕನ್ ಗುನ್ಯಾ ಪಾಸಿಟಿವ್ ಬಂದಿವೆ. ಜಿಲ್ಲೆಯಲ್ಲಿ ಈವರೆಗೆ 26 ಸಾವಿರ ಮಲೇರಿಯಾ ಸ್ಯಾಂಪಲ್ ಟೆಸ್ಟ್ ಮಾಡಲಾಗಿದ್ದು, ಯಾವುದೇ ಪ್ರಕರಣ ಕಂಡು ಬಂದಿಲ್ಲ.
ಜಿಲ್ಲೆಯಲ್ಲಿ ಮಕ್ಕಳಿಗಾಗಿ ಖಾಸಗಿ ಆಸ್ಪತ್ರೆಗಳಲ್ಲಿ 400ಕ್ಕೂ ಅಧಿಕ ಬೆಡ್ ವ್ಯವಸ್ಥೆ ಇದೆ. ಜಿಲ್ಲಾಸ್ಪತ್ರೆಯಲ್ಲಿ 50 ಬೆಡ್ ವ್ಯವಸ್ಥೆ ಮಾಡಲಾಗಿದೆ. ಹೆಚ್ಚುವರಿಯಾಗಿ ವೆಂಟಿಲೇಟರ್ ಸೇರಿದಂತೆ ಹೆಚ್ಚಿನ ಸೌಲಭ್ಯ ಹೊಂದಿರುವ 10 ಬೆಡ್ ಗಳ ವ್ಯವಸ್ಥೆ ಮಾಡಲಾಗುತ್ತಿದೆ. ಸದ್ಯ ಜಿಲ್ಲೆಯ ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ 100 ಕ್ಕೂ ಅಧಿಕ ಬೆಡ್ ಖಾಲಿಯಿದ್ದು, ರೋಗಿಗಳ ಸಂಖ್ಯೆಗೆ ಅನುಗುಣವಾಗಿ ಬೆಡ್ ಸಂಖ್ಯೆ ಹೆಚ್ಚಿಗೆ ಮಾಡಲು ಆಸ್ಪತ್ರೆಗಳು ಮುಂದಾಗಿವೆ.
ಕೊಪ್ಪಳದಲ್ಲಿ ಆಸ್ಪತ್ರೆಗಳು ಭರ್ತಿ
ಕೊಪ್ಪಳದಲ್ಲೂ ವೈರಲ್ ಫೀವರ್ ಮಕ್ಕಳನ್ನು ಬಿಟ್ಟೂ ಬಿಡದೆ ಕಾಡುತ್ತಿದೆ. ಜಿಲ್ಲೆಯ ಬಹುತೇಕ ಆಸ್ಪತ್ರೆಗಳ ಬೆಡ್ಗಳು ಭರ್ತಿಯಾಗಿವೆ. ಮಕ್ಕಳು ನೆಗಡಿ, ಕೆಮ್ಮು, ಜ್ವರದಿಂದ ಬಳಲುತ್ತಿದ್ದು, ಕಳೆದ ಒಂದೂವರೆ ತಿಂಗಳಿನಿಂದ ಮಕ್ಕಳಲ್ಲಿ ಕಾಯಿಲೆ ಕಾಣಿಸಿಕೊಂಡಿದೆ. ನಿನ್ನೆ ಒಂದೇ ದಿನ 83 ಮಕ್ಕಳು ಆಸ್ಪತ್ರೆಗೆ ದಾಖಲಾಗಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ಈಗ 62 ಮಕ್ಕಳಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ಮಕ್ಕಳ ವಾರ್ಡ್ನಲ್ಲಿ 40 ಮಕ್ಕಳಿಗೆ ಮಾತ್ರ ಅವಕಾಶವಿದೆ. 22 ಮಕ್ಕಳನ್ನು ಬೇರೆ ವಾರ್ಡಿನಲ್ಲಿ ದಾಖಲು ಮಾಡಲಾಗಿದೆ. ಖಾಸಗಿ ಆಸ್ಪತ್ರೆಯಲ್ಲಿಯೂ ಬೆಡ್ ಫುಲ್ ಆಗಿದೆ. ಬೆಡ್ ಫುಲ್ ಎಂಬ ಬೋರ್ಡ್ ನೇತಾಡುತ್ತಿವೆ. ಅಧಿಕ ಮಳೆ, ಹವಾಮಾನ ವೈಪರೀತ್ಯದಿಂದ ಈ ಕಾಯಿಲೆ ಕಾಣಿಸಿಕೊಂಡಿದೆ ಎನ್ನಲಾಗುತ್ತಿದೆ. ಯಾವ ಮಕ್ಕಳಲ್ಲಿಯೂ ಇಲ್ಲಿಯವರೆಗೆ ಕೊವಿಡ್ ಸೋಂಕು ಕಾಣಿಸಿಕೊಂಡಿಲ್ಲದಿರುವುದು ಸಮಾಧಾನಕರ ವಿಷಯವಾಗಿದೆ. ಜಿಲ್ಲೆಯಲ್ಲಿ ಶಾಲೆ ಆರಂಭಕ್ಕೂ ಮುನ್ನ 3.50 ಲಕ್ಷ ಮಕ್ಕಳ ಆರೋಗ್ಯ ತಪಾಸಣೆ ಮಾಡಲಾಗಿತ್ತು. ನಿತ್ಯ 2000- 2500 ಜನರ ಸ್ವಾಬ್ ಟೆಸ್ಟ್ ಮಾಡಲಾಗುತ್ತಿದೆ. ಅವರಲ್ಲಿ ಶೇ 0.02 ರಷ್ಟು ಜನರಿಗೆ ಮಾತ್ರ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:Gold Price Today: ಚಿನ್ನದ ರೇಟ್ ಇದಕ್ಕಿಂತ ಕಮ್ಮಿ ಆಗೋಕೆ ಸಾಧ್ಯನೇ ಇಲ್ಲ, ಕೊಳ್ಳುವ ಪ್ಲಾನ್ ಇದ್ರೆ ಇದೇ ಸರಿಯಾದ ಸಮಯ
ಮಂಗಳೂರಿನಲ್ಲಿ 4 ಮಕ್ಕಳಿಗೆ ಡೆಂಗ್ಯೂ
ಮಂಗಳೂರಿನಲ್ಲಿ ಕೆಮ್ಮು , ಶೀತ, ನೆಗಡಿ, ಜ್ವರದಿಂದ ಒಟ್ಟು 47 ಮಂದಿ ಮಕ್ಕಳು ಆಸ್ಪತ್ರೆಗೆ ದಾಖಲಾಗಿದ್ದಾರೆ. ಯಾವುದೇ ಮಕ್ಕಳಿಗೂ ಗಂಭೀರ ಪರಿಸ್ಥಿತಿ ಇಲ್ಲ. ಮುಂಗಾರು ಬಳಿಕ ಜಿಲ್ಲೆಯಲ್ಲಿ ಪ್ರತಿವರ್ಷ ಇದೇ ರೀತಿ ವೈರಲ್ ಫ್ಲೂ ಇರುತ್ತದೆ. ಜಿಲ್ಲಾ ಆಸ್ಪತ್ರೆಯಲ್ಲಿ ಮಕ್ಕಳಿಗಾಗಿ 200ಬೆಡ್ ಖಾಲಿ ಇದೆ. ಈವರೆಗೆ 4 ಮಕ್ಕಳಲ್ಲಿ ಡೆಂಗ್ಯೂ ಕಾಣಿಸಿಕೊಂಡಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕಿಶೋರ್ ಕುಮಾರ್ ಹೇಳಿದ್ದಾರೆ.
ಯಾದಗಿರಿಯಲ್ಲಿ 750 ಮಕ್ಕಳಿಗೆ ವೈರಲ್ ಫೀವರ್
ಯಾದಗಿರಿಯಲ್ಲಿ ಮಕ್ಕಳಿಗೆ ಜ್ವರ, ಕೆಮ್ಮು,ನೆಗಡಿ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಬಗ್ಗೆ ನ್ಯೂಸ್ 18 ಕನ್ನಡಕ್ಕೆ ಡಿಎಚ್ ಓ ಡಾ.ಇಂದುಮತಿ ಕಾಮಶೆಟ್ಟಿ ಮಾಹಿತಿ ನೀಡಿ, ನಿನ್ನೆ ಒಂದೇ ದಿನ 750 ಮಕ್ಕಳಿಗೆ ಜ್ವರ, ಕೆಮ್ಮು,ನೆಗಡಿ ಕಾಣಿಸಿಕೊಂಡಿದೆ. ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ಮಕ್ಕಳಿಗೆ ಅಗತ್ಯ ಚಿಕಿತ್ಸೆ ನೀಡಲಾಗುತ್ತಿದೆ. ಸರಕಾರಿ ಆಸ್ಪತ್ರೆಯಲ್ಲಿ ನಿನ್ನೆ 250 ಮಕ್ಕಳಿಗೆ ಅಗತ್ಯ ಚಿಕಿತ್ಸೆ ನೀಡಲಾಗುತ್ತಿದೆ. ಖಾಸಗಿ ಆಸ್ಪತ್ರೆಯಲ್ಲಿ 500 ಮಕ್ಕಳಿಗೆ ಚಿಕಿತ್ಸೆ ಕೊಡಲಾಗುತ್ತಿದೆ. ಇದುವರೆಗೆ ಸರಕಾರಿ ಹಾಗೂ ಖಾಸಗಿ ಆಸ್ಪತ್ರೆ ಸೇರಿ 44 ಡೇ ಕೇರ್ ನಲ್ಲಿ ಮಾತ್ರ ಮಕ್ಕಳು ದಾಖಲಾಗಿ ಅಗತ್ಯ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದುವರಗೆ ಆಗಸ್ಟ್ ಹಾಗೂ ಸೆಪ್ಟೆಂಬರ್ ತಿಂಗಳಲ್ಲಿ 10 ಮಕ್ಕಳಿಗೆ ಡೆಂಗ್ಯೂ ಕಾಣಿಸಿಕೊಂಡಿದೆ. ಮಕ್ಕಳಿಗಾಗಿ ಸರಕಾರಿ ಆಸ್ಪತ್ರೆಯಲ್ಲಿ 300 ಹಾಗೂ ಖಾಸಗಿ ಆಸ್ಪತ್ರೆಯಲ್ಲಿ 100 ಬೆಡ್ ಗಳ ಸೌಲಭ್ಯ ಮಾಡಲಾಗಿದೆ. ಸದ್ಯಕ್ಕೆ ಎಲ್ಲಾ ಬೆಡ್ ಗಳು ಖಾಲಿ ಇವೆ.
ಬಳ್ಳಾರಿಯಲ್ಲಿ 37 ಮಕ್ಕಳಿಗೆ ಡೆಂಗ್ಯೂ
ಗಣಿನಾಡು ಬಳ್ಳಾರಿ ಜಿಲ್ಲೆಯ ಮಕ್ಕಳಲ್ಲಿ ವೈರಲ್ ಫೀವರ್ ಬಿಡದೆ ಕಾಡುತ್ತಿದೆ. ಜ್ವರ, ಕೆಮ್ಮು, ನೆಗಡಿ, ಉಸಿರಾಟದ ತೊಂದರೆಗೆ ಮಕ್ಕಳು ತುತ್ತಾಗುತ್ತಿದ್ದಾರೆ. ಅವಿಭಜಿತ ಜಿಲ್ಲೆಯ ಮಕ್ಕಳಲ್ಲಿ ನ್ಯುಮೋನಿಯಾ ಮತ್ತು ಡೆಂಗ್ಯೂ ಹೆಚ್ಚಾಗಿ ಕಂಡು ಬರುತ್ತಿವೆ. 350 ಕ್ಕೂ ಹೆಚ್ಚು ಡೆಂಗ್ಯೂ ಶಂಕಿತ ಮಕ್ಕಳು ದಾಖಲಾಗಿದ್ದಾರೆ. ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುವ ಮಕ್ಕಳ ಸಂಖ್ಯೆ 60. ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುವ ಮಕ್ಕಳ ಸಂಖ್ಯೆ 230. ಜಿಲ್ಲೆಯಲ್ಲಿ ಒಟ್ಟು ಡೆಂಗ್ಯೂ ಶಂಕಿತ ಪ್ರಕರಣಗಳು 350. ವಿಮ್ಸ್ ಆಸ್ಪತ್ರೆಯಲ್ಲಿ ಸುಮಾರು 270 ಬೆಡ್ ವ್ಯವಸ್ಥೆ ಮಾಡಲಾಗಿದೆ. ಇದರಲ್ಲಿ 230 ಬೆಡ್ಗಳು ಭರ್ತಿ ಆಗಿವೆ. ಜಿಲ್ಲಾ ಆಸ್ಪತ್ರೆಯಲ್ಲಿ ಸುಮಾರು 60 ಬೆಡ್ ವ್ಯವಸ್ಥೆ ಇದೆ, ಈಗಾಗಲೇ 60 ಮಕ್ಕಳು ದಾಖಲಾಗಿದ್ದಾರೆ. ಹೊಸದಾಗಿ 10 ಬೆಡ್ ವ್ಯವಸ್ಥೆ ಮಾಡುವುದಾಗಿ ಮತ್ತು ವಿಮ್ಸ್ ನ ಡೆಂಟಲ್ ಕಾಲೇಜಿಗೆ ರೇಪರ್ ಮಾಡುವುದಾಗಿ ಡಿ.ಎಸ್.ಓ ಮಾಹಿತಿ ನೀಡಿದ್ದಾರೆ. ಜನವರಿಯಿಂದ ಸೆಪ್ಟೆಂಬರ್ ವರೆಗೆ ಸುಮಾರು 123 ಮಕ್ಕಳಲ್ಲಿ ಡೆಂಗ್ಯೂ ಪತ್ತೆ ಆಗಿದೆ. ಬಹುತೇಕ ಮಕ್ಕಳು ಗುಣಮುಖರಾಗಿದ್ದಾರೆ. ಪ್ರಸ್ತುತ ಸುಮಾರು 37 ಮಕ್ಕಳಲ್ಲಿ ಡೆಂಗ್ಯೂ ಸಕ್ರಿಯ ಇದೆ.
ಇದನ್ನೂ ಓದಿ:Karnataka Weather Today: ಕರ್ನಾಟಕದಲ್ಲಿ ಇನ್ನೂ 3 ದಿನ ಭಾರೀ ಮಳೆ; ಕರಾವಳಿ ಜಿಲ್ಲೆಗಳಲ್ಲಿ ಹೈ ಅಲರ್ಟ್
ಜ್ವರ, ನೆಗಡಿ,ಕೆಮ್ಮಿಗೆ ಸಂಬಂಧಿಸಿದ ಕಾಯಿಲೆ ಬಗ್ಗೆ ದಾಖಲಾದ ಮಕ್ಕಳ ಸಂಖ್ಯೆ ಡೇಟಾ ಇಲ್ಲ, ಕಲೆಕ್ಟ್ ಮಾಡ ಬೇಕು. ಜಿಲ್ಲೆಯಾದ್ಯಂತ ಮಕ್ಕಳು ಸಾಮಾನ್ಯವಾಗಿ ನೆಗಡಿ, ಕೆಮ್ಮು, ಜ್ವರ ಅಂತಾ ಚಿಕಿತ್ಸೆಗೆ ಬರುತ್ತಿವೆ. ರೈನೀ ಸೀಜನ್ ಇರುವುದರಿಂದ ಮಕ್ಕಳಲ್ಲಿ ವೈರಲ್ ಫೀವರ್ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ.. ಯಾವುದೇ ತರಹದ ಪ್ರಾಣಾಪಾಯ ಇಲ್ಲ. ಮಕ್ಕಳು ಬೇಗ ಗುಣಮುಖರಾಗುತ್ತಿದ್ದಾರೆ.. ಸದ್ಯಕ್ಕೆ ಬೆಡ್ಗಳ ಕೊರತೆ ಇಲ್ಲ, ಹೊಸದಾಗಿ ನ್ಯೂ ಡೆಂಟಲ್ ಕಾಲೇಜು ನಲ್ಲಿ 150 ಬೆಡ್ ವ್ಯವಸ್ಥೆ ಮಾಡಲಾಗಿದೆ ಎಂದು ಡಿ.ಎಚ್.ಓ ಜನಾರ್ಧನ್ ಮಾಹಿತಿ ನೀಡಿದ್ದಾರೆ.
ಚಿತ್ರದುರ್ಗ ಜಿಲ್ಲೆಯಲ್ಲಿ 215 ಮಕ್ಕಳಲ್ಲಿ ಸೋಂಕು
ಚಿತ್ರದುರ್ಗ ಜಿಲ್ಲೆಯಲ್ಲಿ ಕಳೆದ ಒಂದೂವರೆ ತಿಂಗಳಲ್ಲಿ 215 ಮಕ್ಕಳಲ್ಲಿ ಕೆಮ್ಮು, ಜ್ವರ, ನೆಗಡಿ ಕಾಣಿಸಿಕೊಂಡಿದೆ. ಹಲವು ರೀತಿಯ ರೋಗ ಲಕ್ಷಣಗಳಿಂದ ಪೋಷಕರಲ್ಲಿ ಆತಂಕ ಎದುರಾಗಿದೆ. ಸದ್ಯ ಜಿಲ್ಲೆಯಲ್ಲಿ ಆಸ್ಪತ್ರೆಗೆ ಚಿಕಿತ್ಸೆ ದಾಖಲಾದ ಮಕ್ಕಳ ಸಂಖ್ಯೆ 60. ಮಕ್ಕಳಿಗೆ ಇರುವ ಬೆಡ್ಗಳ ಸಂಖ್ಯೆ 50. ಭರ್ತಿಯಾಗಿರುವ ಬೆಡ್ಗಳ ಸಂಖ್ಯೆ 60 (10) ವಾರ್ಡ್ ನ ಫ್ಲೋರ್ ಬೆಡ್. ಆಸ್ಪತ್ರೆಯಲ್ಲಿ ಖಾಲಿ ಇರುವ ಮಕ್ಕಳ ಬೆಡ್ಗಳು ಇಲ್ಲ. ಈವರೆಗೆ ಜಿಲ್ಲೆಯ ಮಕ್ಕಳಲ್ಲಿ ಕಾಣಿಸಿಕೊಂಡ ಡೆಂಗ್ಯೂ ಪ್ರಕರಣಗಳ ಸಂಖ್ಯೆ 07. ಕೆಮ್ಮು, ನೆಗಡಿ, ಜ್ವರ, ಉಸಿರಾಟ ಸಮಸ್ಯೆ ಪ್ರಕರಣಗಳ ಸ್ವಾಬ್ ಟೆಸ್ಟ್ ಲ್ಯಾಬ್ ಗೆ ರವಾನೆ ಮಾಡಲಾಗಿದೆ. ಬೆಂಗಳೂರಿನ NIV ಲ್ಯಾಬ್ ಪರೀಕ್ಷೆಗೆ ಚಿತ್ರದುರ್ಗ ಆರೋಗ್ಯ ಇಲಾಖೆ. ಕಳಿಸಿದೆ. ವರದಿ ಬಂದ ಕೂಡಲೇ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ರಂಗನಾಥ್ ಮಾಹಿತಿ ನೀಡಿದ್ದಾರೆ.
ಗದಗ ಜಿಲ್ಲೆಯಲ್ಲಿ 327 ಮಕ್ಕಳಿಗೆ ವೈರಲ್ ಫೀವರ್
ಗದಗ ಜಿಲ್ಲೆಯಲ್ಲಿ 327 ಕ್ಕೂ ಹೆಚ್ಚು ಮಕ್ಕಳಿಗೆ (ಜ್ವರ, ಕೆಮ್ಮು, ನೆಗಡಿ, ಉಸಿರಾಟ) ಆರೋಗ್ಯ ಸಮಸ್ಯೆ ಎದುರಾಗಿದೆ. ಇದುವರೆಗೂ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿರುವ ಮಕ್ಕಳ ಸಂಖ್ಯೆ 174. ಮಕ್ಕಳಿಗೆ ಸೂಕ್ತ ಬೆಡ್ ವ್ಯವಸ್ಥೆ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಕಲ್ಪಿಸಿದೆ. ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಯಲ್ಲಿ ಒಟ್ಟು ಸುಮಾರು 300 ಕ್ಕೂ ಹೆಚ್ಚು ಬೆಡ್ ವ್ಯವಸ್ಥೆ ಮಾಡಲಾಗಿದೆ. ಈ ಪೈಕಿ 174 ಭರ್ತಿಯಾಗಿವೆ. 126 ಖಾಲಿ ಬೆಡ್ ಇವೆ. ಇದುವರೆಗೆ ಕೇವಲ ಮಕ್ಕಳಲ್ಲಿ ಮಾತ್ರ ಧೃಡಪಟ್ಟಿರುವ ಡೆಂಗ್ಯೂ ಸಂಖ್ಯೆ 21.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 60 ಮಕ್ಕಳಿಗೆ ವೈರಲ್ ಫೀವರ್
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 60 ಕ್ಕೂ ಹೆಚ್ಚು ಮಕ್ಕಳಲ್ಲಿ ಜ್ವರ, ಕೆಮ್ಮು, ನೆಗಡಿ ಕಾಣಿಸಿಕೊಂಡಿದೆ. ಯಾವುದೇ ಮಕ್ಕಳಲ್ಲಿ ಡೆಂಗ್ಯೂ ವೈರಲ್ ಫೀವರ್ ಕಾಣಿಸಿಕೊಂಡಿಲ್ಲ. ಅನುಮಾನ ಇರುವ ಮಕ್ಕಳ ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳಿಸಲಾಗಿದೆ. ಜಿಲ್ಲೆಯಲ್ಲಿ ಬೆಡ್ ಗಳ ಕೊರತೆಯಿಲ್ಲ. ಚಿಕಿತ್ಸೆ ನೀಡಲು ಜಿಲ್ಲಾಡಳಿತ ಎಲ್ಲಾ ರೀತಿಯ ಸಿದ್ದತೆ ಮಾಡಿಕೊಂಡಿದೆ.
ಧಾರವಾಡ ಜಿಲ್ಲೆಯಲ್ಲಿ 200 ಮಕ್ಕಳಲ್ಲಿ ಆರೋಗ್ಯ ಸಮಸ್ಯೆ
ಧಾರವಾಡ ಜಿಲ್ಲೆಯಲ್ಲಿ ಪ್ರತಿ ತಿಂಗಳಿಗೆ 200 ಕ್ಕಿಂತ ಹೆಚ್ಚು ಮಕ್ಕಳಲ್ಲಿ (ಜ್ವರ, ಕೆಮ್ಮು, ನೆಗಡಿ, ಉಸಿರಾಟ) ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಇದುವರೆಗೂ ಸರಕಾರಿ ಆಸ್ಪತ್ರೆಗೆ ದಾಖಲಾಗಿರುವ ಮಕ್ಕಳ ಸಂಖ್ಯೆ 45. ಮಕ್ಕಳಿಗೆ ಒಟ್ಟು 45 ಬೆಡ್ ಇವೆ. ಇವುಗಳಲ್ಲಿ ಎಲ್ಲವು ಫುಲ್ ಆಗಿದ್ದು, ಹೊಸ ಬಿಲ್ಡಿಂಗ್ ನಲ್ಲಿ45 ಬೇಡ್ ವ್ಯವಸ್ಥೆ ಮಾಡಲಾಗುತ್ತಿದೆ. ಇದುವರೆಗೆ ಪ್ರತಿ ತಿಂಗಳಿಗೆ 4-5 ಮಕ್ಕಳಲ್ಲಿ ಮಾತ್ರ ಧೃಡಪಟ್ಟಿರುವ ಡೆಂಗ್ಯೂ ಕಾಣಿಸಿಕೊಂಡಿದೆ. ಈ ವರ್ಷ ಶೇ.20 ರಷ್ಟು ಡೆಂಗ್ಯೂ ಪ್ರಕರಣ ಹೆಚ್ಚಳವಾಗಿದೆ.
ಕೋಲಾರದಲ್ಲಿ 110 ಮಕ್ಕಳಿಗೆ ವೈರಲ್ ಫೀವರ್
ಕೋಲಾರದಲ್ಲಿ 110 ಮಕ್ಕಳಿಗೆ (ಜ್ವರ, ಕೆಮ್ಮು, ನೆಗಡಿ, ಉಸಿರಾಟ) ಆರೋಗ್ಯ ಸಮಸ್ಯೆ ಎದುರಾಗಿದೆ. ಇದುವರೆಗೂ 90 ಮಕ್ಕಳು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇವರಲ್ಲಿ 8 ಮಕ್ಕಳಿಗೆ ಸ್ವಲ್ಪ ಉಸಿರಾಟ ಸಮಸ್ಯೆಯಿದೆ. ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಬೆಡ್ ಸಮಸ್ಯೆ ಎದುರಾಗಿದೆ. ಜಿಲ್ಲಾಸ್ಪತ್ರೆಯಲ್ಲಿ 48 ಬೆಡ್ ಗಳಿವೆ, ಆದರೆ 60 ಮಂದಿ ಮಕ್ಕಳು ಈಗ ಚಿಕಿತ್ಸೆ ಪಡೆಯುತ್ತಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ 30 ಮಕ್ಕಳು ದಾಖಲಾಗಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ