ದಕ್ಷಿಣಕನ್ನಡ ಜಿಲ್ಲೆಯ ಹಲವೆಡೆ ಹೆಚ್ಚಿದ ಡೆಂಘಿ, ಸಾಂಕ್ರಾಮಿಕ ಜ್ವರ; ಕೋವಿಡ್ ಭಯಕ್ಕೆ ಕ್ಲಿನಿಕ್‍ ಗಳ ಮೊರೆ ಹೋಗುತ್ತಿರುವ ಜನ

ಸರಕಾರಿ ಆರೋಗ್ಯ ಕೇಂದ್ರಗಳಲ್ಲಿ ಕೊರೋನಾ ಪರೀಕ್ಷೆ ಮಾಡಿಸಿಕೊಳ್ಳಬೇಕು ಹಾಗೂ ಅಲ್ಲಿ ಕೊವೀಡ್ ಪ್ರಕರಣದಿಂದ ದಾಖಲಾದವರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ ಎಂಬ ಕಾರಣಕ್ಕಾಗಿ ಹೆಚ್ಚಿನವರು ಜ್ವರ ಲಕ್ಷಣ ಕಾಣಿಸಿಕೊಂಡ ಕೂಡಲೇ ಪರಿಚಿತ ವೈದ್ಯರನ್ನು, ಸಮೀಪದ ಕ್ಲಿನಿಕ್ ಅನ್ನು ಸಂಪರ್ಕಿಸಿ ಔಷಧ ಪಡೆದುಕೊಳ್ಳುತ್ತಿದ್ದಾರೆ. 

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದೆಡೆ ಕೊರೋನಾ ಪಾಸಿಟಿವ್ ಪ್ರಕರಣಗಳು ಏರಿಕೆಯಾಗುತ್ತಿದ್ದರೆ, ಇನ್ನು ಗ್ರಾಮೀಣ ಪ್ರದೇಶಗಳಲ್ಲಿ ಡೆಂಘಿ ಹಾಗೂ ಕೆಲವು ಸಾಂಕ್ರಾಮಿಕ ಜ್ವರಗಳ ಸಂಖ್ಯೆಯೂ ಏರಿಕೆಯಾಗುತ್ತಿದೆ. ಕೊರೋನಾ ಪ್ರಕರಣಗಳು ಹೆಚ್ಚಾಗಿ ಜಿಲ್ಲೆಯ ನಗರ ಪ್ರದೇಶಗಳಲ್ಲೇ ಕಾಣಿಸಿಕೊಂಡಿದ್ದರೂ, ಗ್ರಾಮೀಣ ಭಾಗದಲ್ಲೂ ಹಲವರಲ್ಲಿ ಜ್ವರದ ಲಕ್ಷಣಗಳು ಕಂಡು ಬರುತ್ತಿದೆ. ಬೆಳ್ತಂಗಡಿ, ಸುಳ್ಯ ಮತ್ತು ಪುತ್ತೂರುತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ವಾತಾವರಣದ ಏರಿಳಿತದಿಂದ ಡೆಂಘಿ ಸೇರಿದಂತೆ ವೈರಲ್ ಜ್ವರ ಬಾಧಿತರ ಸಂಖ್ಯೆಯು ದಿನೇ-ದಿನೇ ಏರಿಕೆ ಕಂಡಿದೆ.

ಪುತ್ತೂರು, ಸುಳ್ಯದಲ್ಲಿ ಡೆಂಗ್ಯೂ, ವೈರಲ್ ಫೀವರ್ ಬಾಧಿತರ ಪ್ರಮಾಣ ಕೊರೋನಾ ಕಾರಣದಿಂದ ಬೆಳಕಿಗೆ ಬರುತ್ತಿಲ್ಲವಾದರೂ, ದಿನಂಪ್ರತಿ ತಪಾಸಣೆಗೆ ಒಳಗಾಗುತ್ತಿರುವ ಜ್ವರಪೀಡಿತರ ಸಂಖ್ಯೆ ಹೆಚ್ಚಳಗೊಳ್ಳುತ್ತಿದೆ. ಮೋಡ, ಬಿಸಿಲಿನ ನಡುವೆ ಅಕಾಲಿಕವಾಗಿ ಮಳೆ ಸುರಿಯುತ್ತಿರುವ ಕಾರಣ ವಾತಾವರಣದಲ್ಲಿ ವ್ಯತ್ಯಾಸ ಕಂಡು ವೈರಲ್ ಜ್ವರ ಹರಡುತ್ತಿದೆ. ಲಕ್ಷಣ ಕಾಣಿಸಿಕೊಂಡ ಕೂಡಲೇ ಫೀವರ್ ಕ್ಲಿನಿಕ್‍ಗೆ ತೆರಳಿ ಸೂಕ್ತ ಔಷಧ ಪಡೆದುಕೊಳ್ಳಬೇಕು. ಆದರೆ ಕೋವಿಡ್ ಲಕ್ಷಣಗಳು ಸಾಮಾನ್ಯ ಜ್ವರದ ಲಕ್ಷಣಗಳು ಒಂದೇ ತೆರೆನಾಗಿರುವ ಕಾರಣಕ್ಕೆ ಜನರ ಭಯಗೊಂಡಿದ್ದಾರೆ. ಈ ಬಗ್ಗೆ ಜಾಗೃತಿ, ಎಚ್ಚರಿಕೆಯ ಅಗತ್ಯವಿದೆ. ಸಾಮಾನ್ಯ ಜ್ವರವು ವೈರಲ್ ಫಿವರ್ ಆಗಿರುವುದರಿಂದ ಒಬ್ಬರಿಂದ ಇನ್ನೊಬ್ಬರಿಗೆ ಸುಲಭವಾಗಿ ಹರಡುತ್ತದೆ. ಜ್ವರ ಮತ್ತು ಶೀತ ಬಾಧಿತ ವ್ಯಕ್ತಿಗಳನ್ನು ಮುಟ್ಟಬಾರದು, ಕೈ ಕುಲುಕಬಾರದು. ಕೆಮ್ಮುವಾಗ, ಸೀನುವಾಗ ಕರವಸ್ತ್ರವನ್ನು ಮುಚ್ಚಿಕೊಳ್ಳಬೇಕು. ಈ ಬಗ್ಗೆ ಆತಂಕ ಅನಗತ್ಯ. ಆದರೆ ನಿರ್ಲಕ್ಷ್ಯ ಸಲ್ಲದು ಎನ್ನುತ್ತಾರೆ ವೈದ್ಯರು.

ಕೋವಿಡ್ ನಡುವೆಯೇ ಡೆಂಘಿ ಕೂಡ ತನ್ನ ಪ್ರಭಾವ ತೋರಿದೆ. ಸುಳ್ಯ, ಪುತ್ತೂರಿನ ಗ್ರಾಮೀಣ ಭಾಗದಲ್ಲೇ ಡೆಂಘಿ ಪ್ರಕರಣಗಳು ಅಧಿಕವಾಗಿದೆ. ಈ ಹಿಂದೆ ಐದಾರು ವರ್ಷಗಳ ಕಾಲ ಚಿಕುನ್ ಗುನ್ಯಾ, ಡೆಂಘಿ ಜ್ವರ ಉಭಯ ತಾಲೂಕುಗಳ ಜನಜೀವನವನ್ನೇ ತತ್ತರಿಸುವಂತೆ ಮಾಡಿತ್ತು. ಸೊಳ್ಳೆಯಿಂದ ಹರಡುವ ಈ ಎರಡು ಕಾಯಿಲೆಗಳ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ತನ್ನ ಪರಿಮಿತಿಯಲ್ಲಿ ಪ್ರಯತ್ನಿಸಿದ್ದರೂ ಕೃಷಿ ಆಧಾರಿತ ಪರಿಸರದಲ್ಲಿ ಸೊಳ್ಳೆ ನಿಯಂತ್ರಣ ಸಾಧ್ಯವಾಗದ ಕಾರಣ, ಜ್ವರ ಬಾಧೆಯಿಂದ ಜನರಿಗೆ ಮುಕ್ತಿ ಸಿಗಲಿಲ್ಲ. ಈ ವರ್ಷವು ಮುಂಗಾರು ಮಳೆ ಆರಂಭಕ್ಕೆ ಮೂರು ತಿಂಗಳು ಮೊದಲೇ ಡೆಂಘಿ ಜ್ವರ ಬಾಧೆ ಕಾಡಿದ್ದು ಈಗ ಏರಿಕೆ ಕಾಣುತ್ತಿದೆ. ಅಕಾಲಿಕ ಮಳೆ ಪರಿಣಾಮ ಅಡಿಕೆ, ರಬ್ಬರ್ ತೋಟಗಳಲ್ಲಿ ಸೊಳ್ಳೆ ವಿಪರೀತ ಪ್ರಮಾಣದಲ್ಲಿ ಕಾಣಿಸಿಕೊಂಡಿದೆ. ಮನೆ ಪರಿಸರದಲ್ಲಿ ರಾತ್ರಿ ವೇಳೆ ಸೊಳ್ಳೆ ಕಾಟ ಹೆಚ್ಚಾಗಿದೆ. ದೀರ್ಘ ಬಿಸಿಲು ಅಥವಾ ನಿರಂತರ ಮಳೆ ಬಂದು ಹೊಂಡದಿಂದ ನೀರು ಆವಿಯಾಗಿ ಅಥವಾ ಹರಿದು ಹೋದಲ್ಲಿ ಮಾತ್ರ ಸೊಳ್ಳೆ ಉತ್ಪಾದನೆಗೆ ಕಡಿವಾಣ ಬಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಬರಲಿದೆ ಎನ್ನುತ್ತದೆ ಆರೋಗ್ಯ ಇಲಾಖೆ.

ಇದನ್ನು ಓದಿ: Coronavirus India Updates: ದೇಶದಲ್ಲಿ ಮತ್ತೆ ಮೂರೂವರೆ ಲಕ್ಷದಷ್ಟು ಕೊರೋನಾ ಪ್ರಕರಣಗಳು ಪತ್ತೆ!

ಖುಷಿಯ ವಿಚಾರ ಅಂದರೆ ಕಳೆದ ಬಾರಿಯಂತೆ ಈ ಬಾರಿ ಡೆಂಘಿ ರೋಗಕ್ಕೆ ತುತ್ತಾಗಿ ಸಾವಿಗೀಡಾದವರ ಸಂಖ್ಯೆ ಕಡಿಮೆಯಿದೆ. ಆದರೆ, ಕೊರೋನಾಗೆ ಹೆದರಿ ಜ್ವರವಿದ್ದರೂ, ಸರಿಯಾದ ಚಿಕಿತ್ಸೆ ಪಡೆಯದೇ ಇದ್ದಲ್ಲಿ ಡೆಂಘಿ ಕೂಡ ಅಪಾಯಕಾರಿಯಾಗಲಿದೆ.
ಈ ಹಿಂದೆ ಸಾಂಕ್ರಾಮಿಕ ಜ್ವರಬಾಧೆಗೆ ಒಳಗಾದಾಗ ಪ್ರಾಥಮಿಕ ಆರೋಗ್ಯ ಕೇಂದ್ರ, ತಾಲೂಕು ಆಸ್ಪತ್ರೆಗಳಿಗೆ ತೆರಳುತ್ತಿದ್ದವರೂ ಈಗ ಕ್ಲಿನಿಕ್‍ಗಳತ್ತ ಮುಖ ಮಾಡಿದ್ದಾರೆ. ಸರಕಾರಿ ಆರೋಗ್ಯ ಕೇಂದ್ರಗಳಲ್ಲಿ ಕೊರೋನಾ ಪರೀಕ್ಷೆ ಮಾಡಿಸಿಕೊಳ್ಳಬೇಕು ಹಾಗೂ ಅಲ್ಲಿ ಕೊವೀಡ್ ಪ್ರಕರಣದಿಂದ ದಾಖಲಾದವರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ ಎಂಬ ಕಾರಣಕ್ಕಾಗಿ ಹೆಚ್ಚಿನವರು ಜ್ವರ ಲಕ್ಷಣ ಕಾಣಿಸಿಕೊಂಡ ಕೂಡಲೇ ಪರಿಚಿತ ವೈದ್ಯರನ್ನು, ಸಮೀಪದ ಕ್ಲಿನಿಕ್ ಅನ್ನು ಸಂಪರ್ಕಿಸಿ ಔಷಧ ಪಡೆದುಕೊಳ್ಳುತ್ತಿದ್ದಾರೆ. ರೋಗ ಉಲ್ಭಣಗೊಂಡಲ್ಲಿ ತಾಲೂಕು, ಹೊರ ತಾಲೂಕಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಳೆದ ಎರಡು ತಿಂಗಳಿನಿಂದ ಪುತ್ತೂರು, ಸುಳ್ಯ ತಾಲೂಕಿನ ಖಾಸಗಿ ಆಸ್ಪತ್ರೆ, ಕ್ಲಿನಿಕ್‍ಗಳಲ್ಲಿ ವೈರಲ್, ಡೆಂಘಿ ಜ್ವರಕ್ಕೆ ತುತ್ತಾಗಿ ಚಿಕಿತ್ಸೆ ಪಡೆಯುವವರ ಸಂಖ್ಯೆ ಗಣನೀಯವಾಗಿ ಏರಿಕೆ ಕಂಡಿದೆ.
Published by:HR Ramesh
First published: