ಕೊಡಗು : ಬೀದಿ ನಾಯಿಗಳು ಮನೆಗೆ ನುಗ್ಗಿ ಕದ್ದು ತಿನ್ನೋದು ಗ್ರಾಮೀಣ ಪ್ರದೇಶದಲ್ಲಿ ಹೊಸದೇನು ಅಲ್ಲ. ಇನ್ನು ಆಹಾರ ಅರಸಿ ಬಂದ ಚಿರತೆಗಳು ಆಕಸ್ಮಿಕವಾಗಿ ಮನೆಗೆ ನುಗ್ಗಿ ಸಿಲುಕಿಕೊಂಡ ಘಟನೆಗಳನ್ನು ನೀವು ಕೇಳಿರುತ್ತೀರ, ನೋಡಿರುತ್ತೀರ. ಆದರೆ ಆಹಾರ ಅರಸಿ ಬಂದು ಕಾಡಾನೆಗಳು (Wild Elephants) ಮನೆಗೆ ನುಗ್ಗೋದನ್ನ ನೀವು ನೋಡಿರುತ್ತೀರಾ..!? ಹೌದು ಆಹಾರ ಅರಸಿ ಬಂದ ಕಾಡಾನೆಗಳು ಮನೆಗೆ ನುಗ್ಗಲು ಯತ್ನಿಸಿರುವ ಘಟನೆ ಕೊಡಗು (Madikeri) ಜಿಲ್ಲೆ ಪೊನ್ನಂಪೇಟೆ ತಾಲ್ಲೂಕಿನ ಮಂಚಳ್ಳಿ ಗ್ರಾಮದಲ್ಲಿ ನಡೆದಿದೆ. ಅಚ್ಚರಿ ಎನಿಸಿದರೂ ಇದು ಸತ್ಯ. ಕಾಡಿನಿಂದ ರಾತ್ರಿ ಆಹಾರ ಹುಡುಕಿ ಬಂದ ಎರಡು ಕಾಡಾನೆಗಳ ಪೈಕಿ ಒಂದು ಆನೆ ಮನೆಗೆ ನುಗ್ಗಲು (Breaking Doors) ಎರಡೆರಡು ಬಾರಿ ಪ್ರಯತ್ನಿಸಿದೆ. ಮಂಚಳ್ಳಿ ಗ್ರಾಮಕ್ಕೆ ನುಗ್ಗಿರುವ ಎರಡು ಕಾಡಾನೆಗಳು (2 elephants) ಅಲ್ಲಿನ ಸೋಮಯ್ಯ ಎಂಬುವರ ಮನೆ ಹಿಂಬದಿಗೆ ಬಂದಿವೆ. ಮೊದಲಿಗೆ ಮನೆ ಹಿಂದಿಯಲ್ಲಿ ಇರಿದ್ದ ಹಲಸಿನ ಹಣ್ಣನ್ನು ತಿಂದಿರುವ ಆನೆಗಳು ಸ್ವಲ್ಪ ಸಮಯ ಅಲ್ಲಿಯೇ ಹೊಂಚುಹಾಕಿವೆ.
ಅದರಲ್ಲಿ ಒಂದು ಆನೆ ಮನೆಗೇ ನುಗ್ಗಲು ಯತ್ನಿಸಿದೆ. ಅದಕ್ಕಾಗಿ ಹಿಂಬದಿಯ ಬಾಗಿಲನ್ನು ಸೊಂಡಿಲಿನಿಂದ ಮೆಲ್ಲನೆ ನೂಕಿದೆ. ಮನೆ ಬಾಗಿಲು ಗಟ್ಟಿಮುಟ್ಟಾಗಿ ಇದ್ದಿದ್ದರಿಂದ ಬಾಗಿಲು ಓಪನ್ ಆಗಿಲ್ಲ. ಹೀಗಾಗಿ ಕಾಡಾನೆ ಅಲ್ಲಿಂದ ಸ್ವಲ್ಪ ದೂರ ಮುಂದೆ ಹೋಗಿದೆ. ಆದರೆ ಮನೆಗೆ ನುಗ್ಗಬೇಕೆಂಬ ಅದರ ಆಸೆ ಮಾತ್ರ ತೀರಿದಂತೆ ಕಾಣಿಸಿಲ್ಲ. ಹೀಗಾಗಿ ಮುಂದೆ ಹೋಗುತ್ತಿದ್ದ
ಕಾಡಾನೆ ತಿರುಗಿ ಬಂದು ಸೋಮಯ್ಯ ಅವರ ಮನೆಯ ಹಿಂಬದಿ ಬಾಗಿಲನ್ನು ಮತ್ತೆ ನೂಕಲು ಯತ್ನಿಸಿದೆ. ಅದೃಷ್ಟವಶಾತ್ ಆಗಲೂ ಮನೆ ಬಾಗಿಲು ಏನೂ ಆಗಿಲ್ಲ. ಕಾಡಾನೆಗಳು ಮನೆಯ ಹಿಂಬದಿಗೆ ಬಂದಾಗ ಸದ್ದು ಕೇಳಿದ ಮನೆಯವರು ಎದ್ದು ಸಿಸಿಟಿವಿಗಳನ್ನು ಪರಿಶೀಲೀಸಿದ್ದಾರೆ. ಆಗ ಸಿಸಿಟಿವಿಯಲ್ಲಿ ಕಂಡ ದೃಶ್ಯ ಇದು:
ಆಗ
ಕಾಡಾನೆಗಳು ಮನೆಯ ಹಿಂಬದಿ ಇರುವುದು ಗಮನಕ್ಕೆ ಬಂದಿದೆ. ಬಂದಿರುವ ಆನೆಗಳು ಹೋಗಬಹುದೇನೋ ಎನ್ನುವಷ್ಟರಲ್ಲಿ ಅದರಲ್ಲಿ ಒಂದು
ಆನೆ ಮನೆ ಬಾಗಿಲನ್ನು ಹಿಡಿದು ನೂಕಲು ಆರಂಭಿಸಿದಾಗ ಮನೆಯವರಿಗೆ ಆತಂಕ ಶುರುವಾಗಿದೆ. ಆದರೆ ಬಾಗಿಲು ತೆರೆಯಲು ಅಥವಾ ಒಡೆಯಲು ಸಾಧ್ಯವಾಗದೇ ಇದ್ದಾಗ ಮನೆಯವರು ನಿಟ್ಟುಸಿರು ಬಿಟ್ಟಿದ್ದಾರೆ. ಅತ್ತ ಕಾಡಾನೆಯೂ ಅಲ್ಲಿಂದ ಬಂದ ದಾರಿಗೆ ಸುಂಕವಿಲ್ಲ ಎಂದು ವಾಪಸ್ ಕಾಲ್ಕಿತ್ತಿದೆ. ಈ ಎಲ್ಲಾ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.
ಕಾಡಾನೆಗಳು ಮನೆಗೆ ನುಗ್ಗೋದು ತೀರ ಅಪರೂಪ. ಆದರೆ ಅವುಗಳು ಉಪ್ಪು ಬೆಲ್ಲದಂತ ವಸ್ತುಗಳ ರುಚಿ ನೋಡಿದ್ದಾಗ ಮಾತ್ರ ಈ ರೀತಿ ಮನೆಗೆ ನುಗ್ಗಲು ಯತ್ನಿಸುತ್ತವೆ. ಹೀಗಾಗಿ ಈ ಆನೆಗಳು ನಾಗರಹೊಳೆ ಅರಣ್ಯದ ಅಂಚಿನಲ್ಲಿ ಇರುವ ಯಾವುದೋ ಮನೆಗಳಿಗೆ ಹಿಂದೆ ನುಗ್ಗಿರಬಹುದಾದ ಸಾಧ್ಯತೆಗಳಿವೆ. ಆದ್ದರಿಂದಲೇ ಈಗಲೂ ಮಂಚಳ್ಳಿಯಲ್ಲಿ ಸೋಮಯ್ಯ ಅವರ ಮನೆಗೆ ನುಗ್ಗಲು ಯತ್ನಿಸಿವೆ ಎನ್ನಲಾಗುತ್ತಿದೆ. ಒಟ್ಟಿನಲ್ಲಿ ಕೊಡಗಿನಲ್ಲಿ ಇದುವರೆಗೆ ಕೇವಲ ತೋಟ, ಗ್ರಾಮಗಳಿಗೆ ನುಗ್ಗುತ್ತಿದ್ದ ಕಾಡಾನೆಗಳು ಇದೀಗ ಮನೆಗಳಿಗೆ ನುಗ್ಗಲು ಯತ್ನಿಸುತ್ತಿರುವ ದೃಶ್ಯ ಬಯಲಾಗಿರೋದು ಜನರನ್ನು ದಂಗು ಬಡಿಸಿರೋದಂತು ಸತ್ಯ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ