ಕುಸಿಯುವ ಆತಂಕದಲ್ಲಿ ಬಿರುಕು ಬಿಟ್ಟಿದ್ದ ವಿರಾಜಪೇಟೆಯ ಮಲೆತಿರಿಕೆ, ನೆಹರು ನಗರ ಬೆಟ್ಟಗಳು

ಮಳೆಗಾಲ ಬಂದಾಗ ಮಾತ್ರ ನಮ್ಮನ್ನು ನಿರಾಶ್ರಿತರ ಶಿಬಿರಕ್ಕೆ ಕಳುಹಿಸುತ್ತಾರೆ. ಮಳೆ ಮುಗಿಯುತ್ತಿದ್ದಂತೆ, ನಮ್ಮ ಪರಿಸ್ಥಿತಿಯನ್ನು ಯಾರು ಕೇಳುವುದಿಲ್ಲ ಎನ್ನೋದು ಮನೆ ಬಿರುಕುಬಿಟ್ಟು ಆತಂಕದಲ್ಲಿ ಬದುಕುತ್ತಿರುವ ಮತ್ತೊಬ್ಬ ನಿವಾಸಿ ಪಾರ್ವತಿ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ವಿರಾಜಪೇಟೆ ಪಟ್ಟಣದ ಅಯ್ಯಪ್ಪ ಸ್ವಾಮಿಯ ಮಲೆತಿರಿಕೆ ಬೆಟ್ಟ.

ವಿರಾಜಪೇಟೆ ಪಟ್ಟಣದ ಅಯ್ಯಪ್ಪ ಸ್ವಾಮಿಯ ಮಲೆತಿರಿಕೆ ಬೆಟ್ಟ.

  • Share this:
ಕೊಡಗು : ಕಳೆದ ಮೂರು ವರ್ಷಗಳಿಂದ ಕೊಡಗು ಜಿಲ್ಲೆಯಲ್ಲಿ ನಿರಂತರ ಭೂಕುಸಿತ ಸಂಭವಿಸುತ್ತಿರುವುದು ಗೊತ್ತೇ ಇದೆ. ಅದೇ ರೀತಿಯಲ್ಲೇ ವಿರಾಜಪೇಟೆ ಪಟ್ಟಣದ ಅಯ್ಯಪ್ಪ ಸ್ವಾಮಿಯ ಮಲೆತಿರಿಕೆ ಬೆಟ್ಟ ಮತ್ತು ನೆಹರು ನಗರದಲ್ಲಿ ಬೆಟ್ಟಗಳು ಬಾಯ್ದೆರೆದಿದ್ದು, ಈ ಬೆಟ್ಟಗಳು ಕುಸಿಯುವ ಸಾಧ್ಯತೆ ಹೆಚ್ಚಿದೆ ಎಂದು ಭೂ ಗರ್ಭ ವಿಜ್ಞಾನಿಗಳ ತಂಡ ಹೇಳಿದೆಯಂತೆ. ಇದು ಇಲ್ಲಿನ ನಿವಾಸಿಗಳು ಆತಂಕದಲ್ಲಿ ಬದುಕು ದೂಡುವಂತೆ ಮಾಡಿದೆ.

ಕಳೆದ ವರ್ಷದ ಮಳೆಗಾಲದಲ್ಲೇ ಮಲೆತಿರಿಕೆ ಬೆಟ್ಟ ಮತ್ತು ನೆಹರು ನಗರಗಳ ಬೆಟ್ಟಗಳಲ್ಲಿ ಭಾರೀ ಬಿರುಕು ಕಾಣಿಸಿಕೊಂಡಿತ್ತು. ತಕ್ಷಣವೇ ಎಚ್ಚೆತ್ತುಕೊಂಡಿದ್ದ ಅಧಿಕಾರಿಗಳು ಆ ಬೆಟ್ಟಗಳಲ್ಲಿ ವಾಸಿಸುವ 60 ಕ್ಕೂ ಹೆಚ್ಚು ಕುಟುಂಬಗಳನ್ನು ನಿರಾಶ್ರಿತರ ಶಿಬಿರಕ್ಕೆ ಸ್ಥಳಾಂತರಿಸಿದ್ದರು. ಮಳೆಗಾಲ ಮುಗಿದ ಬಳಿಕ ಮತ್ತೆ ಆ ಕುಟುಂಬಗಳು ತಮ್ಮ ಮನೆಗಳಿಗೆ ತೆರಳಿ ಎಂದಿನಂತೆ ಜೀವನ ನಡೆಸುತ್ತಿದ್ದರು. ಆದರೀಗ ಮಳೆಗಾಲ ಆರಂಭವಾಗುತ್ತಿದ್ದು ಜನರಲ್ಲಿ ಮತ್ತೆ ಆತಂಕ ಶುರುವಾಗಿದೆ. ಕಳೆದ ವರ್ಷ ಬೆಟ್ಟದಲ್ಲಿ ಬಿರುಕು ಬಿಡುತ್ತಿದ್ದಂತೆ ಕೂಡಲೇ ಎಚ್ಚೆತ್ತುಕೊಂಡಿದ್ದ ಅಧಿಕಾರಿಗಳು ಬೆಟ್ಟದ ಬಿರುಕುಗಳಿಗೆ ಕಾಂಕ್ರಿಟ್ ತುಂಬಿ ಅದರೊಳಗೆ ನೀರು ಹೋಗದಂತೆ ನೋಡಿಕೊಂಡಿದ್ದರು. ಆದರೀಗ ಬೆಟ್ಟದ ಮೇಲಿರುವ 60 ಕ್ಕೂ ಹೆಚ್ಚು ಕುಟುಂಬಗಳ ಬಹುತೇಕ ಮನೆಗಳಲ್ಲಿ ಬಿರುಕುಗಳು ಕಾಣಿಸಿಕೊಂಡಿರುವುದು ಜನರ ಎದೆಯಲ್ಲಿ ನಡುಕ ಹುಟ್ಟಿಸಿದೆ.

ಮಳೆಗಾಲ ಮುಗಿದ ಬಳಿಕ ಮಲೆತಿರಿಕೆ ಬೆಟ್ಟ ಮತ್ತು ನೆಹರು ನಗರ ಬೆಟ್ಟಗಳಲ್ಲಿ ಅಧ್ಯಯನ ನಡೆಸಿದ್ದ ಭೂ ಗರ್ಭ ಶಾಸ್ತ್ರಜ್ಞರು, ಮನೆಗಳು ಹಾನಿಗೀಡಾಗುವ ಮತ್ತು ಬೆಟ್ಟ ಕುಸಿಯುವ ಸಾಧ್ಯತೆ ಹೆಚ್ಚಿರುವ ಬಗ್ಗೆ ವರದಿ ನೀಡಿದ್ದಾರೆ. ಇದು ಈ ಬೆಟ್ಟಗಳ ನಿವಾಸಿಗಳನ್ನು ಕಂಗೆಡಿಸಿದೆ. ತೀರಾ ಅಪಾಯದಲ್ಲಿರುವ ಒಟ್ಟು 69 ಕುಟುಂಬಗಳನ್ನು ಶಾಶ್ವತವಾಗಿ ಸ್ಥಳಾಂತರ ಮಾಡಲು ಕೊಡಗು ಉಸ್ತುವಾರಿ ಸಚಿವ ವಿ.ಸೋಮಣ್ಣ ನೇತೃತ್ವದಲ್ಲಿ ನಿರ್ಧರಿಸಲಾಗಿತ್ತು. ಹೀಗಾಗಿಯೇ ವಿರಾಜಪೇಟೆ ಸಮೀಪದ ಬಿಟ್ಟಂಗಾಲದಲ್ಲಿ ಶಾಶ್ವತ ಸೂರು ಒದಗಿಸಲು ನಿರ್ಧರಿಸಲಾಗಿತ್ತು. ಈ ನಿರ್ಧಾರವಾಗಿ ಒಂದು ವರ್ಷವೇ ಕಳೆಯುತ್ತಿದ್ದರೂ, ಇಂದಿಗೂ ಪರ್ಯಾಯ ಮನೆಗಳನ್ನು ನಿರ್ಮಿಸಲು ಮುಂದಾಗಿಲ್ಲ.

ಇದನ್ನು ಓದಿ: ಎಚ್‍ಎಮ್‍ಟಿ ಥಿಯೇಟರ್​ನಲ್ಲಿ ಕಪಲ್ ಸೀಟ್ಸ್! ಫ್ಯಾಮಿಲಿ ಆಡಿಯನ್ಸ್​ಗೆ ವಿಶೇಷ ಆಸನ ವ್ಯವಸ್ಥೆ..!

ಮನೆಗಳನ್ನು ನಿರ್ಮಿಸುವ ಮಾತಿರಲಿ, ಇಂದಿಗೂ ಭೂಮಿಯನ್ನು ಖರೀದಿಸುವ ಸಂಬಂಧ ಪ್ರಕ್ರಿಯೆಗಳು ನಡೆಯುತ್ತಿವೆ ಎಂದು ಅಧಿಕಾರಿಗಳೇ ಮಾಹಿತಿ ನೀಡಿದ್ದಾರೆ. ಹೀಗಾಗಿ ಈ ಮಳೆಗಾಲಕ್ಕೂ ಮಲೆತಿರಿಕೆ ಬೆಟ್ಟದ ನಿವಾಸಿಗಳು ಅಲ್ಲಿಯೇ ಆತಂಕದಲ್ಲೇ ಬದುಕು ದೂಡುವ ದುಃಸ್ಥಿತಿ ಎದುರಾಗಿದೆ. ಇನ್ನೇನು ಮಳೆಗಾಲ ಆರಂಭವಾಗುತ್ತಿರುವುದರಿಂದ ಈ ಬಾರಿ ಮನೆಗಳ ನಿರ್ಮಾಣದ ಕೆಲಸ ಸಾಧ್ಯವಿಲ್ಲ. ಬದಲಾಗಿ ಮಳೆಗಾಲದ ಎರಡು ತಿಂಗಳು ನಿರಾಶ್ರಿತ ಶಿಬಿರ ತೆರೆಯುತ್ತೇವೆ. ಬಯಸಿದರೆ ಎರಡು ತಿಂಗಳು ಬಾಡಿಗೆ ಹಣವನ್ನು ಕೊಡಲು ನಿರ್ಧರಿಸಲಾಗಿದ್ದು, ಜನರು ಬಾಡಿಗೆ ಮನೆಗಳಿಗೆ ತೆರಳಬಹುದು ಎಂದು ವಿರಾಾಜಪೇಟೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶ್ರೀಧರ್ ಹೇಳಿದ್ದಾರೆ. ಆದರೆ ಈ ಬಾರಿ ನಾವು ಇಲ್ಲಿಯೇ ಸತ್ತರೂ ಇಲ್ಲಿಂದ ಹೋಗುವುದಿಲ್ಲ ಅಂತ ನಿವಾಸಿ ಸರೋಜಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಳೆಗಾಲ ಬಂದಾಗ ಮಾತ್ರ ನಮ್ಮನ್ನು ನಿರಾಶ್ರಿತರ ಶಿಬಿರಕ್ಕೆ ಕಳುಹಿಸುತ್ತಾರೆ. ಮಳೆ ಮುಗಿಯುತ್ತಿದ್ದಂತೆ, ನಮ್ಮ ಪರಿಸ್ಥಿತಿಯನ್ನು ಯಾರೂ ಕೇಳುವುದಿಲ್ಲ ಎನ್ನೋದು ಮನೆ ಬಿರುಕುಬಿಟ್ಟು ಆತಂಕದಲ್ಲಿ ಬದುಕುತ್ತಿರುವ ಮತ್ತೊಬ್ಬ ನಿವಾಸಿ ಪಾರ್ವತಿ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Published by:HR Ramesh
First published: