HOME » NEWS » District » VIRAJPET YOUNG MAN CREATING AWARENESS IN PEOPLE THROUGH BICYCLE RIDING RSK KVD

ಸೈಕಲ್ ಏರಿ ಸೋಂಕಿನ ವಿರುದ್ಧ ಸವಾರಿ.. ಕೊರೋನಾ ವಿರುದ್ಧ ವಿರಾಜಪೇಟೆ ವೀರನ ಸಮರ!

ಸಾಮಾಜಿಕ ಅಂತರ ಕಾಪಾಡಿಕೊಳ್ಳಿ, ವಸ್ತುಗಳನ್ನು ಖರೀದಿಸಿದ ಬಳಿಕ ಕಾಲಹರಣ ಮಾಡದೆ ಬೇಗ ಮನೆಗೆ ಸೇರಿಕೊಳ್ಳಿ ಎಂದು ಎಚ್ಚರಿಸುವ ಕೆಲಸವನ್ನೂ ಮಂಜುನಾಥ್ ಮಾಡುತ್ತಿದ್ದಾರೆ.

news18-kannada
Updated:May 8, 2021, 6:22 PM IST
ಸೈಕಲ್ ಏರಿ ಸೋಂಕಿನ ವಿರುದ್ಧ ಸವಾರಿ.. ಕೊರೋನಾ ವಿರುದ್ಧ ವಿರಾಜಪೇಟೆ ವೀರನ ಸಮರ!
ಜಾಗೃತಿ ಮೂಡಿಸುತ್ತಿರುವ ಮಂಜುನಾಥ್​
  • Share this:
ಕೊಡಗು : ಜಿಲ್ಲೆಯಲ್ಲಿ ಕೋವಿಡ್ ಸೋಂಕು ಅಂದಾಜನ್ನು ಮೀರಿ ಹರಡುತ್ತಿದೆ. ವೈರಸನ್ನು ತಡೆಯಲು ಜನರು ಯಾರು ಹೊರ ಬಾರದಂತೆ ಜಿಲ್ಲಾಡಳಿತ ಈಗಾಗಲೇ ವಾರದ ಐದು ದಿನ ಲಾಕ್ ಡೌನ್ ಘೋಷಿಸಿದೆ. ಆದರೂ ಜನ ಮಾತ್ರ ಎಚ್ಚೆತ್ತುಕೊಂಡಂತೆ ಕಾಣುತ್ತಿಲ್ಲ. ಹೀಗೆ ಹೊರಗೆ ಬರುವ ಬೇಜವಾಬ್ದಾರಿ ಜನರಿಗೆ ಇಲ್ಲೊಬ್ಬ ವಿಶೇಷಚೇತನ ಯುವಕ ತನ್ನ ಸೈಕಲ್ ಗೆ ಮೈಕು ಕಟ್ಟಿಕೊಂಡು ಊರುಗಳನ್ನು ಸುತ್ತಿ ಜನರು ಹೊರಗೆ ಬರದಂತೆ ಮನವಿ ಮಾಡುತ್ತಾ  ಅರಿವು ಮೂಡಿಸುತ್ತಿದ್ದಾನೆ. ವಿರಾಜಪೇಟೆ ತಾಲ್ಲೂಕಿನ ಕರಡಿಗೋಡು ಗ್ರಾಮದ ಮಂಜುನಾಥ ಇಂತಹ ಸಮಾಜಮುಖಿ ಕೆಲಸದ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.

ಪಾಲಿಬೆಟ್ಟದ ‘ಚೆಶೈರ್ ಹೋಮ್’ ವಿಶೇಷ ಚೇತನರ ಶಾಲೆಯ ವಿದ್ಯಾರ್ಥಿಯಾಗಿರುವ ಮಂಜುನಾಥ್ ರಾಜ್ಯದಲ್ಲಿ ಜನತಾ ಕಫ್ರ್ಯೂ ಜಾರಿಯಾದಗಿನಿಂದಲೂ ತಮ್ಮ ಮನೆಯಲ್ಲಿದ್ದರು. ಕೊಡಗು ಲಾಕ್ ಡೌನ್ ಆದರೂ ಜನರು ವಿನಾಕಾರಣ ಹೊರಗೆ ಬರುತ್ತಿರುವುದನ್ನು ಮನಗಂಡು ಸೈಕಲ್ ಹೇರಿ ಮೈಕ್ ಮೂಲಕ ಅನೌನ್ಸ್ ಮಾಡುತ್ತಾ ಜನರು ಮನೆಯಿಂದ ಹೊರಗೆ ಬಾರದಂತೆ ಜಾಗೃತಿ ಮೂಡಿಸುತ್ತಿದ್ದಾನೆ. ಜೊತೆಗೆ ಮಾಸ್ಕ್ ಹಾಕದೆ ಹೊರಗೆ ಬರುವವರಿಗೂ ಮಾಸ್ಕ್ ಹಾಕಿ, ಸಾಮಾಜಿಕ ಅಂತರ ಕಾಪಾಡಿ ಎಂದು ತಿಳುವಳಿಕೆ ನೀಡುತ್ತಿದ್ದಾನೆ. ವಿರಾಜಪೇಟೆ ತಾಲ್ಲೂಕಿನ ಸಿದ್ಧಾಪುರ, ಗುಹ್ಯ, ಬರಡಿ ಮತ್ತು ನೆಲ್ಯಹುದಿಕೇರಿ ಸೇರಿದಂತೆ ಸುತ್ತಮುತ್ತಲ ವಿವಿಧ ಗ್ರಾಮಗಳಲ್ಲಿ ಜನರಿಗೆ ಜಾಗೃತಿ ಮೂಡಿಸುತ್ತಿದ್ದಾರೆ.

ಇನ್ನು ವಾರದಲ್ಲಿ ಎರಡು ದಿನ ಅಗತ್ಯ ವಸ್ತುಗಳನ್ನು ಕೊಳ್ಳಲು ಅವಕಾಶ ನೀಡಲಾಗಿದೆ. ಈ ದಿನಗಳಲ್ಲೂ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ, ವಸ್ತುಗಳನ್ನು ಖರೀದಿಸಿದ ಬಳಿಕ ಕಾಲಹರಣ ಮಾಡದೆ ಬೇಗ ಮನೆಗೆ ಸೇರಿಕೊಳ್ಳಿ ಎಂದು ಎಚ್ಚರಿಸುವ ಕೆಲಸವನ್ನೂ ಮಾಡುತ್ತಿದ್ದಾರೆ. ಎಲ್ಲಾ ರೀತಿಯ ತಿಳುವಳಿಕೆ ಇರುವ ಜನರು ಲಾಕ್‍ಡೌನ್ ನಿಯಮಗಳನ್ನು ಉಲ್ಲಂಘಿಸುತ್ತಿದ್ದರೆ, ಈ ಮಂಜುನಾಥ್ ಮಾತ್ರ ಎಲ್ಲರಿಗೂ ಹರಿವು ಮೂಡಿಸುತ್ತಿರುವುದಕ್ಕೆ ಜನರು ಭಾರೀ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಮಂಜುನಾಥನ ಈ ಕೆಲಸವನ್ನು ನಾವೆಲ್ಲರೂ ಎಷ್ಟು ಹೊಗಳಿದರೂ ಕಡಿಮೆಯೇ ಎನ್ನೋದು ಸಿದ್ದಾಪುರ ಗ್ರಾಮದ ಪ್ರವೀಣ್ ಎಂಬುವರ ಮಾತು. ಮಂಜುನಾಥನ ಈ ಕೆಲಸಕ್ಕೆ ಸಿದ್ದಾಪುರ ಪೊಲೀಸರು ಕೂಡ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು, ಸಹಕಾರ ನೀಡುತ್ತಿದ್ದಾರೆ. ಆದರೆ ಊರು ಊರು ಸುತ್ತುವ ಮಂಜುನಾಥನ ಸೈಕಲ್ ಸಾಕಷ್ಟು ರಿಪೇರಿ ಆಗಬೇಕಾಗಿರುವುದರಿಂದ ಇದನ್ನು ಸರಿಮಾಡಿಸಿಕೊಳ್ಳುವುದಕ್ಕೆ ಯಾರಾದರೂ ಸಹಾಯ ಮಾಡಬೇಕು ಎಂದು ಮಂಜುನಾಥ್​ ಕೇಳಿಕೊಂಡಿದ್ದಾರೆ.
Youtube Video

ಇನ್ನು ಈ ಸೈಕಲ್ ಕೂಡ ಅವರದಲ್ಲ, ಶಾಲಾ ಮಕ್ಕಳಿಗೆ ಉಚಿತವಾಗಿ ಕೊಟ್ಟಿದ್ದ ಸೈಕಲ್ ಅನ್ನೇ ಯಾರೋ ಮಂಜುನಾಥನಿಗೆ ಅನುಕೂಲವಾಗಲೆಂದು ಉಚಿತವಾಗಿ ನೀಡಿದ್ದಾರೆ. ಮಂಜುನಾಥ್ ಇದಕ್ಕೂ ಮೊದಲು ಸಿದ್ಧಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ವಚ್ಚತೆಗೆ ಸಂಬಂಧಿಸಿದಂತೆ ಎಲ್ಲೆಂದರಲ್ಲಿ ಕಸ ಎಸೆಯದಂತೆ ಅರಿವು ಮೂಡಿಸುವ ಕೆಲಸ ಮಾಡಿದ್ದ. ಜನರು ಮಂಜುನಾಥನ ಮನವಿಯನ್ನಾದರೂ ಅರಿತು ಲಾಕ್ ಡೌನ್ ಸಂದರ್ಭದಲ್ಲಿ ಮನೆಯಿಂದ ಹೊರಗೆ ಬಾರದಂತೆ ಎಚ್ಚರವಹಿಸಬೇಕಾಗಿದೆ.  ಕೊರೋನಾ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುತ್ತಿರುವ ಮಂಜುನಾಥ್​ಗೆ ಸಲಾಂ ಹೇಳಲೇಬೇಕು.
Published by: Kavya V
First published: May 8, 2021, 6:20 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories