ಮಾನವೀಯತೆ ಮರೆತು ಮಾನಸಿಕ ಅಸ್ವಸ್ಥನ ಮೇಲೆ ಪೊಲೀಸರ ಹಲ್ಲೆ : ಖಾಕಿ ಕ್ರೌರ್ಯಕ್ಕೆ ಅಮಾಯಕ ಬಲಿ!

ನಾವು ಹಲ್ಲೆ ನಡೆದಿದ್ದೇವೆ ಎಂದು ದೂರು ನೀಡಿದರೆ ನಿಮಗೆ ತೊಂದರೆಯಾಗುತ್ತದೆ ಎಂದು ಮಾನಸಿಕ ಅಸ್ವಸ್ಥ ವ್ಯಕ್ತಿಯ ತಾಯಿಗೆ ಪೊಲೀಸರು ಹೆದರಿಸಿದ್ದಾರಂತೆ.

ಮೃತ ರಾಯ್​​ ಡಿಸೋಜಾ

ಮೃತ ರಾಯ್​​ ಡಿಸೋಜಾ

  • Share this:
ಕೊಡಗು : ಮಾನಸಿಕ ಅಸ್ವಸ್ಥನನ್ನು ಪೊಲೀಸರು ಮನಸ್ಸೋ ಇಚ್ಛೆ ಥಳಿಸಿದ ಪರಿಣಾಮ ವ್ಯಕ್ತಿ ಸಾವನ್ನಪ್ಪಿರುವ ಆರೋಪ ಕೇಳಿ ಬಂದಿದೆ. ವಿರಾಜಪೇಟೆ ಪಟ್ಟಣದ ಚಿಕ್ಕಪೇಟೆಯ ನಿವಾಸಿ ರಾಯ್ ಡಿಸೋಜಾ ಎಂಬ ಮಾನಸಿಕ ಅಸ್ವಸ್ಥ ಹಲ್ಲೆಗೆ ಮುಂದಾದ ಎಂದು ಪೊಲೀಸರು ಮನಸ್ಸೋ ಇಚ್ಛೆ ಥಳಿಸಿರುವ ಆರೋಪ ಕೇಳಿ ಬಂದಿದೆ. ಮೆಟ್ಟಿಲ್ಡಾ ಡಿಸೋಜಾ ಅವರ ಮಗ ರಾಯ್ ಡಿಸೋಜಾ ಪೊಲೀಸರ ಹಲ್ಲೆಯಿಂದ ಮೃತಪಟ್ಟಿದ್ದಾರೆ. ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ರಾಯ್ ಡಿಸೋಜಾ ಜೂ.9ರಂದು  ತಡರಾತ್ರಿ ಮನೆಯಿಂದ ಹೊರಗೆ ಹೋಗಿ ಓಡಾಡುತ್ತಿದ್ದರಂತೆ. ಈ ವೇಳೆ ಯಾವ ಕಾರಣಕ್ಕೆ ರಾಯ್ ಡಿಸೋಜಾನನ್ನು ಪೊಲೀಸರು ಠಾಣೆಗೆ ಕರೆದೊಯ್ದು ಮೃಗೀಯವಾಗಿ ವರ್ತಿಸಿ ಮನಸ್ಸೋ ಇಚ್ಛೆ ಥಳಿಸಿದ್ದರೋ ಗೊತ್ತಿಲ್ಲ.

ಆತನನ್ನು ಥಳಿಸಿದ್ದ ಪೊಲೀಸರು ಅರೆಪ್ರಜ್ಞಾ ಸ್ಥಿತಿಯಲ್ಲಿದ್ದ ರಾಯ್ ಡಿಸೋಜಾನನ್ನು ಠಾಣೆಯ ಕಾಂಪೌಂಡ್ ಒಳಗೆ ಎಸೆದಿದ್ದರು ಎಂದು ಮೃತನ ತಾಯಿ ಮೆಟ್ಟಿಲ್ಡಾ ಡಿಸೋಜಾ ಗದ್ಗದಿತರಾಗಿ ವಿವರಿಸಿದ್ದಾರೆ. ಮಧ್ಯರಾತ್ರಿ ಎಚ್ಚರವಾದಾಗ ನನ್ನ ಮಗ ಮನೆಯಲ್ಲಿರಲಿಲ್ಲ, ನಾನು ಹುಡುಕಾಡುತಿದ್ದೆ. ಬೆಳಗ್ಗಿನ ಜಾವ ಪೊಲೀಸರು ಮನೆ ಬಳಿಗೆ ಬಂದು ಸ್ಟೇಷನ್ ಗೆ ಬರುವಂತೆ ಹೇಳಿದರು. ಹೋಗಿ ನೋಡಿದಾಗ ನನ್ನ ಮಗನ ಮೈ ಮೂಳೆ ಮುರಿಯುವಂತೆ ಹೊಡೆದು ಸ್ಟೇಷನ್ ಕಾಂಪೌಂಡ್ ಒಳಗೆ ಹಾಕಿದ್ದರು. ತಕ್ಷಣವೇ ಅಲ್ಲಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದೆ. ಆದರೆ ಡಾಕ್ಟರ್ ಮಗನ ಸ್ಥಿತಿ ಗಂಭೀರವಾಗಿದ್ದು ಜಿಲ್ಲಾಸ್ಪತ್ರೆಗೆ ಕರೆದೊಯ್ಯುವಂತೆ ಹೇಳಿದರು. ಬಳಿಕ ಮಡಿಕೇರಿಗೆ ಬಂದು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದೆವು. ಕಿಡ್ನಿ ಡ್ಯಾಮೇಜ್​​ ಆಗಿದ್ದರಿಂದ ನನ್ನ ಮಗ ಬದುಕುಳಿಯಲಿಲ್ಲ ಎಂದು ತಾಯಿ ಕಣ್ಣೀರು ಹಾಕಿದ್ದಾರೆ.

ಮಡಿಕೇರಿ ಆಸ್ಪತ್ರೆಗೆ ಕರೆದೊಯ್ಯುವುದಕ್ಕೂ ಮುನ್ನವೇ ವಿರಾಜಪೇಟೆ ಪೊಲೀಸರು ತಾಯಿಗೆ ತಾವು ಹೊಡೆದಿದ್ದು ಎಂದು ಹೇಳಿದರೆ ಅಥವಾ ಕಂಪ್ಲೈಂಟ್ ಮಾಡಿದರೆ ನಿನಗೆ ತೊಂದರೆಯಾಗುತ್ತದೆ ಎಂದು ಹೆದರಿಸಿದ್ದರಂತೆ. ಬದಲಿಗೆ ನಾವೇ ಆತನನ್ನು ಮಂಗಳೂರು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸುವುದಾಗಿಯೂ ಹೇಳಿದ್ದರಂತೆ. ರಾಯ್ ಡಿಸೋಜಾ ಮಡಿಕೇರಿಯ ಆಸ್ಪತ್ರೆಯಲ್ಲಿದ್ದಾಗ ಜೂ.10ರಂದು ಕರ್ತವ್ಯದಲ್ಲಿದ್ದ ಸಂಗಮೇಶ್ ಎಂಬ ಪೊಲೀಸ್ ಪೇದೆ ಮೇಲೆ ಹಲ್ಲೆ ಮಾಡಿದ್ದಾನೆ ಅಂತ ಕಂಪ್ಲೈಂಟ್ ಮಾಡಿಕೊಂಡಿದ್ದಾರೆ. ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಾಯ್ ಡಿಸೋಜಾ ಶನಿವಾರ ಬೆಳಿಗ್ಗೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: ಲಸಿಕೆ ಹಾಕಿಸಿಕೊಂಡ ಸ್ಥಳದಲ್ಲಿ ಬಲ್ಬ್ ಬೆಳಗಿದ ಪ್ರಕರಣಕ್ಕೆ ಟ್ವಿಸ್ಟ್: ಬಯಲಾಯ್ತು ಅಸಲಿ ಸತ್ಯ..!

ರಾಯ್ ಡಿಸೋಜಾ ಸಾವನ್ನಪ್ಪುತ್ತಿದ್ದಂತೆ ಕ್ರಿಶ್ಚಿಯನ್ ಸಮುದಾಯದ ಮುಖಂಡರು ವಿರಾಜಪೇಟೆಯಲ್ಲಿ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಠಾಣೆ ಬಳಿಗೆ ಹೋಗುತಿದ್ದ ನೂರಾರು ಜನರನ್ನು ಮಾರ್ಗ ಮಧ್ಯದಲ್ಲಿಯೇ ಪೊಲೀಸರು ತಡೆದಿದ್ದಾರೆ. ಪ್ರತಿಭಟನೆಗೆ ತೆರಳಿದ್ದ ನೂರಾರು ಜನರು ಅಲ್ಲಿಯೇ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸರು ಪ್ರತಿಭಟನೆಗೆ ಅವಕಾಶ ನೀಡದೆ ಅಲ್ಲಿಂದ ವಾಪಸ್ ಕಳುಹಿಸಿದ್ದಾರೆ. ಇತ್ತ ಮಡಿಕೇರಿಯಲ್ಲಿ ಮೃತ ರಾಯ್ ಡಿಸೋಜಾ ಅವರ ತಾಯಿ ಮೆಟ್ಟಿಲ್ಡಾ ಡಿಸೋಜಾ ವಿರಾಜಪೇಟೆ ಪೊಲೀಸರ ವಿರುದ್ಧ ಎಸ್ ಪಿ ಕ್ಷಮಾ ಮಿಶ್ರಾ ಅವರ ಬಳಿ ದೂರು ನೀಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಎಸ್ ಪಿ ಕ್ಷಮಾ ಮಿಶ್ರಾ ಈ ಕುರಿತು ವಿಚಾರಣೆ ಮಾಡಲಾಗುವುದು. ಒಂದು ವೇಳೆ ಯಾರೇ ತಪ್ಪು ಮಾಡಿದ್ದರು ಕಾನೂನಿನ ರೀತಿ ಕ್ರಮಕೈಗೊಳ್ಳಲಾಗುವುದು ಎಂದಿದ್ದಾರೆ.ಈ ಕುರಿತು ಪ್ರತಿಕ್ರಿಯಿಸಿರುವ ವಿರಾಜಪೇಟೆ ಶಾಸಕ ಕೆ ಜಿ ಬೋಪಯ್ಯ ಆತ ಮಾನಸಿಕ ಅಸ್ವಸ್ಥ ಅಂತ ಪೊಲೀಸರೇ ಹೇಳಿದ್ದಾರೆ. ಮಾನಸಿಕ ಅಸ್ವಸ್ಥ ಎಂದ ಮೇಲೆ ಆತ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದರೂ, ಆತನಿಗೆ ಈ ರೀತಿ ಥಳಿಸಿದ್ದು ಸರಿಯಲ್ಲ. ಯಾರೇ ತಪ್ಪು ಮಾಡಿದರು ಅವರ ವಿರುದ್ಧ ಕಾನೂನು ಕ್ರಮ ಆಗಲಿದೆ ಎಂದಿದ್ದಾರೆ. ಒಟ್ಟಿನಲ್ಲಿ ಪೊಲೀಸರು ಮನುಷ್ಯತ್ವವನ್ನು ಮರೆತು ಮಾನಸಿಕ ಅಸ್ವಸ್ಥನನ್ನು ಹೀಗೆ ಹೊಡೆದು ಸಾವಿಗೆ ಕಾರಣವಾಗಿರುವುದಕ್ಕೆ ಜಿಲ್ಲೆಯ ಜನರು ಪೊಲೀಸರಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.
Published by:Kavya V
First published: