ನಿಂಬೆರಸ ಆಯ್ತು, ಕಷಾಯ ಆಯ್ತು... ಈಗ ಪಾರಿಜಾತ ಎಲೆಯಿಂದ ಕೊರೊನಾ ಮುಕ್ತಿ.. ನಂಬಬೇಕಾ ಬೇಡ್ವಾ?

ಗೌರಿಗದ್ದೆ ಆಶ್ರಮದ ಅವಧೂತ ವಿನಯ್ ಗುರೂಜಿ ಪಾರಿಜಾತ ಕಷಾಯದಿಂದ ಕೊರೊನಾ ಗುಣಮುಖವಾಗುತ್ತದೆ ಎಂದಿದ್ದಾರೆ. ಕಷಾಯ ಮಾಡುವ ಬಗೆಯನ್ನೂ ಅವರು ವಿವರಿಸಿದ್ದು ಅದರ ಆಡಿಯೋ ಎಲ್ಲೆಡೆ ಹರಿದಾಡುತ್ತಿದೆ. ದಿನಕ್ಕೊಂದು ಹೊಸಾ ಔಷಧಗಳು, ಕೊರೊನಾ ಟಿಪ್ಸ್​ಗಳು ಜನರ ಎದುರಿಗಿದ್ದು ಯಾವುದನ್ನು ನಂಬಬೇಕು, ಯಾವುದನ್ನು ಬಿಡಬೇಕು ಎನ್ನುವ ಗೊಂದಲ ಹೆಚ್ಚಾಗಿದೆ.

ಪಾರಿಜಾತ

ಪಾರಿಜಾತ

  • Share this:
ಚಿಕ್ಕಮಗಳೂರು: ಕೊರೊನಾ ಆರ್ಭಟದಿಂದ ಜಗವೆಲ್ಲಾ ತತ್ತರಿಸಿದೆ. ಎಲ್ಲೆಡೆ ಔಷಧ, ಆಕ್ಸಿಜನ್, ಲಸಿಕೆ ಹೀಗೆ ಪ್ರತಿಯೊಂದಕ್ಕೂ ಜನ ಪರದಾಡುತ್ತಲೇ ಇದ್ದಾರೆ. ಆದ್ರೆ ಇದರ ನಡುವೆ ಆಗಾಗ ಕೊರೊನಾಗೆ ಕೆಲವು ಮನೆಮದ್ದುಗಳೂ (Home Remedy) ತಲೆಯೆತ್ತುತ್ತಿವೆ. ಮೊದಮೊದಲು ದೇಹದ ರೋಗನಿರೋಧಕ ಶಕ್ತಿ ಹೆಚ್ಚಿಸುವ ಆಹಾರಗಳ ಭರಾಟೆ ಜೋರಾಗಿತ್ತು. ಎಲ್ಲರೂ ಮನೆಗಳಲ್ಲಿ ಕಷಾಯ ಕುಡಿಯೋದು ಅಭ್ಯಾಸ ಮಾಡಿಕೊಂಡರು. ನಂತರ ಹಸಿರು ತರಕಾರಿ, ಹಣ್ಣುಗಳ ಸೇವನೆ ಹೆಚ್ಚಾಯ್ತು. ಬರೀ ಇಷ್ಟೇ ಆದ್ರೆ ಏನೂ ಸಮಸ್ಯೆಯಿಲ್ಲ, ಆರೋಗ್ಯ ಚೆನ್ನಾಗಿರುತ್ತೆ ಎಂದರು ವೈದ್ಯರು. ಆದರೆ ನಂತರ ಹಾಗೆ ಮಾಡಿದ್ರೆ ಒಳ್ಳೆದು, ಹೀಗೆ ಮಾಡಿದ್ರೆ ಕೊರೊನಾ ಬರೋದಿಲ್ಲ ಎನ್ನುವಂಥಾ ನಾನಾ ಮನೆಮದ್ದುಗಳು ಆರಂಭವಾದವು. ಇದನ್ನು ಕೆಲವರು ಒಪ್ಪಿದರೆ ಹಲವರು ವೈಜ್ಞಾನಿಕ ಆಧಾರವಿಲ್ಲ ಎಂದು ನಿರಾಕರಿಸಿದರು. ನಿಂಬೆರಸದ ಔಷಧದ ವಿಚಾರ ಈಗ ನಿಧಾನಕ್ಕೆ ಮರೆಯಾಗುವಷ್ಟರಲ್ಲಿ ಪಾರಿಜಾತದ ಕಷಾಯ ಸದ್ದು ಮಾಡಲು ಆರಂಭಿಸಿದೆ.

ಅಂದ್ಹಾಗೆ ಪಾರಿಜಾತದ ಕಷಾಯದ ಬಗ್ಗೆ ಜನರಿಗೆ ತಿಳಿಸುತ್ತಿರುವುದು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಗೌರಿಗದ್ದೆ ಆಶ್ರಮದ ಅವಧೂತ ವಿನಯ್ ಗುರೂಜಿ. ಮಹಾಮಾರಿ ಕೊರೊನಾಗೆ ಪಾರಿಜಾತದ ಎಲೆ ಸರಿಯಾದ ಔಷಧ ಎಂದು ವಿವರಣೆ ನೀಡಿರುವ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಇದನ್ನೂ ಓದಿ: TV Serial: ಹೈದರಾಬಾದ್​ಗೆ ತೆರಳಿದ ಕನ್ನಡ ಧಾರಾವಾಹಿಗಳು, Lockdown ಮುಗಿಯೋತನಕ ಬರಲ್ವಂತೆ !

ಎಲ್ಲರೂ ಪಾರಿಜಾತದ ಎಲೆಯ ಕಷಾಯ ಕುಡಿಯಲು ಆರಂಭಿಸಿದರೆ ಕೊರೊನಾ ಇದ್ದವರಿಗೂ ಗುಣವಾಗುತ್ತದೆ ಎಂದಿದ್ದಾರೆ ಅವಧೂತ ವಿನಯ್ ಗುರೂಜಿ. 5 ಪಾರಿಜಾತ ಎಲೆ, ಕಾಳು ಮೆಣಸು, ಶುಂಠಿ ಹಾಕಿಯನ್ನು ನಿರ್ದಿಷ್ಟ ರೀತಿಯಲ್ಲಿ ಬೆರೆಸಿ ಕಷಾಯ ಮಾಡಲು ತಿಳಿಸಿರುವ ಆಡಿಯೋ ಹರಿದಾಡುತ್ತಿದ್ದು ಭಕ್ತರು ಚರ್ಚೆ ನಡೆಸುತ್ತಿದ್ದಾರೆ.

ಆದರೆ ಪಾರಿಜಾತದ ಎಲೆಯಿಂದ ಕೊರೊನಾ ಗುಣಮುಖವಾಗುವ ಬಗ್ಗೆ ಯಾವುದೇ ವೈಜ್ಞಾನಿಕ ಸಂಶೋಧನೆ ದೃಢಪಡಿಸಿಲ್ಲ ಎಂದು ವೈದ್ಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನೊಂದೆಡೆ ಸ್ವಾಮೀಜಿ ಹೇಳಿದ್ದಾರೆ, ಹಾಗಾಗಿ ಇದನ್ನು ಪಾಲನೆ ಮಾಡುವುದಾ. ಅಥವಾ ವೈದ್ಯರ ಬಳಿಯೂ ಒಂದು ಸಲ ವಿಚಾರಿಸಿ ನೋಡುವುದಾ ಎಂದು ಭಕ್ತರು ಗೊಂದಲದಲ್ಲಿದ್ದಾರೆ.
Published by:Soumya KN
First published: