ಸರ್ಕಾರದ ಅನುದಾನವಿಲ್ಲದೇ ಸಹಕಾರ ತತ್ವದಡಿ ಕೆರೆ ಅಭಿವೃದ್ಧಿ ಮಾಡಿದ ಗ್ರಾಮಸ್ಥರು

ಗ್ರಾಮ ಸಮಿತಿ ಸದಸ್ಯರು ಸಂಪೂರ್ಣವಾಗಿ ಹೂಳು ತುಂಬಿಕೊಂಡಿದ್ದ  ಕೆರೆಯನ್ನು ಸ್ವಚ್ಛಗೊಳಿಸಿ, ಇದೀಗ ಜೀವ ಕಳೆ ನೀಡಿದ್ದಾರೆ.

ಕೇಶವಪುರ ಗುಮ್ಮನಮಟ್ಟಿ ಕೆರೆ

ಕೇಶವಪುರ ಗುಮ್ಮನಮಟ್ಟಿ ಕೆರೆ

  • Share this:
ಶಿವಮೊಗ್ಗ(ಜೂ.26): ಈ ಕೆರೆ ಅಭಿವೃದ್ಧಿಯಲ್ಲಿ ಗ್ರಾಮಸ್ಥರ ಜೊತೆಗೆ ಪೊಲೀಸರು ಕೈ ಜೋಡಿಸಿದರು. ಗ್ರಾಮದಲ್ಲಿ ಸುಂದರವಾದ ಕೆರೆ ಪುನರ್ ನಿರ್ಮಾಣ ಮಾಡಿದರು. ಸ್ವಗ್ರಾಮ ಸಮಿತಿಯ ಸದಸ್ಯರು, ಒತ್ತುವಾರಿಯಾಗಿದ್ದ ಇಡೀ ಕೆರೆಯನ್ನು ಬಿಡಿಸಿಕೊಂಡು, ತುಂಬಿದ್ದ ಹೂಳು ತೆಗೆದು ಕೆರೆಗೆ ಮರು ಜೀವ ನೀಡಿದ್ದಾರೆ.  ಕೇವಲ 80 ಲಕ್ಷ ಲೀ. ನೀರು ಸಂಗ್ರಹ ಸಮರ್ಥ್ಯವಿದ್ದ ಕೆರೆಯಲ್ಲಿ ಈಗ 5.5 ಕೋಟಿ ಲೀ ನೀರು ಶೇಖರಣೆಗೊಳ್ಳಲಿದೆ.

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹರಿದ್ರಾವತಿ ಗ್ರಾ.ಪಂ. ವ್ಯಾಪ್ತಿಯ ಬಾಣಿಗ ಗ್ರಾಮದ ಕೇಶವಪುರ ಗುಮ್ಮನಮಟ್ಟಿ ಕೆರೆ ಅಭಿವೃದ್ದಿ ಮಾಡಲಾಗಿದೆ. ಈ ಕೆರೆಯ ಅಭಿವೃದ್ಧಿಗೆ ಪ್ರಮುಖವಾಗಿ ಸಾಥ್ ನೀಡಿದ್ದು ಪೊಲೀಸರು. ಈ ಮೊದಲು ಕೇವಲ 80 ಲೀ. ನೀರು ಮಾತ್ರ ಸಂಗ್ರಹವಾಗುತ್ತಿತ್ತು. ಕೆರೆ ಒತ್ತುವಾರಿಯಾಗಿ, ಕೆರೆಯೇ ಇಲ್ಲವೇನೋ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಗ್ರಾಮ ಸಮಿತಿ ಸದಸ್ಯರು ಸಂಪೂರ್ಣವಾಗಿ ಹೂಳು ತುಂಬಿಕೊಂಡಿದ್ದ  ಕೆರೆಯನ್ನು ಸ್ವಚ್ಛಗೊಳಿಸಿ, ಇದೀಗ ಜೀವ ಕಳೆ ನೀಡಿದ್ದಾರೆ.

ಕೇಶವಪುರ ಸರ್ವೆ ನಂ. 38 ರಲ್ಲಿ ಇಡೀ ಕೆರೆಯನ್ನು ಪುನರ್ ನಿರ್ಮಾಣ ಮಾಡಿದ್ದು, ಅರ್ಧ ಎಕರೆ ಮಾತ್ರ ಇದ್ದ ಕೆರೆ ಈಗ  2 ಎಕರೆ 3 ಗುಂಟೆಯಾಗಿದೆ. ಸರಿಸುಮಾರು 5.5 ಕೋಟಿ ಲೀ. ಸಂಗ್ರಹ ಸಾಮರ್ಥ್ಯದಲ್ಲಿ ಪುನರ್ ನಿರ್ಮಾಣಗೊಂಡಿದೆ. ಈ ಕೆರೆ ಅಭಿವೃದ್ಧಿಗೆ ಅಂದಾಜೂ ಸರ್ಕಾರದ ಎಸ್.ಆರ್. ದರದ ಅನ್ವಯ, 24 ಲಕ್ಷ ರೂ. ಮೊತ್ತವಾಗುತ್ತದೆ. ಆದರೆ, ಸ್ಥಳಿಯ ಗ್ರಾಮಸ್ಥರು, ದಾನಿಗಳ ಸಹಕಾರದಲ್ಲಿ, ಈ ಕೆರೆ ಪುನರ್ ನಿರ್ಮಾಣಕ್ಕೆ ಕೇವಲ 4.82 ಲಕ್ಷ ರೂ. ವೆಚ್ಚವಾಗಿದೆ.



ಈ ಕೆರೆಯ ಪುನರ್ ನಿರ್ಮಾಣದ ಸಂಪೂರ್ಣ ಜವಾಬ್ದಾರಿ ಹೊತ್ತಿದ್ದು, ಹೊಸನಗರ ಪೊಲೀಸ್ ಠಾಣೆಯ ಪೊಲೀಸರು. ಕೊರೋನಾ ವಾರಿಯರ್ಸ್ ಗಳು ತಮ್ಮ ಸಂಕಷ್ಟದ ಸಮಯದಲ್ಲೂ ಗ್ರಾಮದ ಜನರ ಒಳಿತಿಗಾಗಿ, ಈ ಕೆರೆ ಪುನರ್ ನಿರ್ಮಾಣಕ್ಕೆ ಕೈ ಜೋಡಿಸಿದರು. ಇವರ ಸಹಭಾಗಿತ್ವದಲ್ಲಿ ಕೆರೆ ಅಭಿವೃದ್ಧಿಗೊಂಡಿದೆ.

ಸರ್ಕಾರದಿಂದ ಯಾವುದೇ ಧನ ಸಹಾಯ ಪಡೆಯದೇ ಕೆರೆ ಅಭಿವೃದ್ಧಿ ಮಾಡಿರುವುದು ನಿಜಕ್ಕೂ  ಹೆಮ್ಮೆಯ ವಿಚಾರವಾಗಿದೆ. ಈ ಕೆರೆಯಿಂದ ಸುಮಾರು 100 ಎಕರೆ ಕೃಷಿ ಭೂಮಿ, 40 ತೆರೆದ ಬಾವಿ 20 ಕ್ಕಿಂತ ಹೆಚ್ಚಿನ ಕೊಳವೆ ಬಾವಿ ಹಾಗೂ ಸ್ಥಳೀಯ ಅಂತರ್ಜಲ ಹೆಚ್ಚಳಕ್ಕೆ ಮಹತ್ವದ ಕೊಡುಗೆ ನೀಡಿದಂತಾಗಿದೆ. ಕೆರೆಗೆ ಹೊಂದಿಕೊಂಡಿರುವ ದೇವರ ಕಾಡಿನಲ್ಲಿರುವ ಪ್ರಾಣಿ ಪಕ್ಷಿಗಳಿಗೆ ಇದೀಗ ಕುಡಿಯುವ ನೀರಿನ ಮೂಲವಾಗಿದೆ ಈ ಕೆರೆ. ಈ ಕೆರೆಯನ್ನು ನೀರಿನ ಸಂಗ್ರಹದ ಜೊತೆಗೆ, ಸ್ಥಳೀಯ ಕೆರೆ ಸಮಿತಿ ಮೂಲಕ ಆರ್ಥಿಕ ಅಭಿವೃದ್ಧಿಗೂ ಅನುಕೂಲವಾಗುವಂತೆ, ನಿರ್ಮಾಣ ಮಾಡಲಾಗಿದೆ.

ಇದನ್ನೂ ಓದಿ : ಬೇರೆ ನಗರಗಳಿಗೆ ಹೋಲಿಸಿದರೆ ಬೆಂಗಳೂರಲ್ಲಿ ಕೊರೋನಾ ನಿಯಂತ್ರಣದಲ್ಲಿದೆ ; ಸಚಿವ ಆರ್.ಅಶೋಕ್

ಮೀನು ಸಾಕಾಣಿಕೆ, ಸ್ಥಳೀಯ ಮಕ್ಕಳೂ ಸೇರಿದಂತೆ, ಈಜು ಕಲಿಕೆಗೆ ಅಗತ್ಯವಾದ ವ್ಯವಸ್ಥೆ ಮಾಡಲಾಗಿದೆ. ಕೃಷಿ ಭೂಮಿಗಳಿಗೆ ಅನುಕೂಲವಾಗಲು, ಸಾವಿರ ಮೀಟರ್ ಉದ್ದದ ನಾಲೆ ನಿರ್ಮಾಣದ ಕಾರ್ಯ ಸಹ ಮಾಡಲಾಗುತ್ತಿದೆ.

ಇದರ ಜೊತೆಗೆ ಮನರಂಜನೆಗಾಗಿ ಈ ಕೆರೆ ಬಳಸಿಕೊಳ್ಳಲು ಚಿಂತನೆ ನಡೆದಿದ್ದು, ಸ್ಥಳೀಯ ಸಂಘ ಸಂಸ್ಥೆ, ಉದ್ಯಮಿಗಳ ಸಹಕಾರದಲ್ಲಿ ಕೆರೆಯ ಮಧ್ಯೆ ರಂಗ ವೇದಿಕೆ ನಿರ್ಮಾಣ ಮಾಡಲು ಚಿಂತನೆ ನಡೆದಿದೆ. ಒಂದು ಕೆರೆ ಹೇಗಿರಬೇಕು ಎಂದು ಯೋಚಿಸುವವರಿಗೆ, ಹೊಸನಗರದ ಈ ಕೆರೆ ಮಾದರಿಯಾಗಿದೆ.
First published: